Editor m rajappa vyasagondanahalli
By shukradeshenews Kannada | online news portal |Kannada news online
By shukradeshenews | published on Or ನವೆಂಬರ್ 24
ಭಾರತೀಯರು ನೆನಪಿಡುವ
ಸುದಿನ ನವಂಬರ್ ಇಪ್ಪತ್ತಾರರ ಸಂವಿಧಾನ ದಿನ :
ಭಾರತದ ಸಂವಿಧಾನ ರಚನೆಯ ಇತಿಹಾಸ ಬಹಳ ದೊಡ್ಡದಿದೆ. ಸ್ವಾತಂತ್ರ್ಯ ಹೋರಾಟಕ್ಕೆ ಎರಡು ಶತಮಾನಗಳ ಇತಿಹಾಸವಿದ್ದರೆ ಸಂವಿಧಾನದ ರಚನೆಯು ಸಾಧ್ಯವಾಗಿದ್ದು ಎರಡು ದಶಕಗಳ ಸುದೀರ್ಘ ಹೋರಾಟದ ನಂತರ. 1920 ರಲ್ಲಿ ಮೋತಿಲಾಲ್ ನೆಹರು ಮತ್ತಿತರ ಮುಖಂಡರು ಭಾರತಕ್ಕೆ ಒಂದು ಪ್ರತ್ಯೇಕ ಸಂವಿಧಾನ ಬೇಕು ಮತ್ತು ಅದನ್ನು ಭಾರತೀಯರೇ ರಚಿಸಬೇಕು ಎಂಬ ಬೇಡಿಕೆಯನ್ನು ಬ್ರಿಟಿಷರ ಮುಂದಿಟ್ಟರು. 1928ರಲ್ಲಿ ಮೋತಿಲಾಲ್ ನೆಹರು ಅವರ ನೇತೃತ್ವದಲ್ಲಿ ಭಾರತಕ್ಕೆ ಒಂದು ಪ್ರಾರಂಭಿಕ ಸಂವಿಧಾನವನ್ನು ಸಿದ್ಧಪಡಿಸಲಾಯಿತು. ಅದು ನೆಹರೂ ವರದಿ ಎಂದೇ ಪ್ರಸಿದ್ಧಿಯಾಯಿತು. ಆದರೆ ಬ್ರಿಟಿಷ್ ಸರ್ಕಾರ ಅವರ ವರದಿಯನ್ನು ತಿರಸ್ಕರಿಸಿತು. 1933 ರಲ್ಲಿ ಜವಾಹರಲಾಲ್ ನೆಹರು ಅವರು ಮತ್ತೆ ಸಂವಿಧಾನ ರಚನೆಯಾಗಬೇಕೆಂಬ ಬೇಡಿಕೆಯನ್ನು ಮಂಡಿಸಿದರು. ಇದಕ್ಕೆ ಪೂರಕವಾಗಿ 1934ರಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕಾರಿ ಸಮಿತಿಯು ಸಂವಿಧಾನ ಸಮಿತಿಯನ್ನು ಚುನಾಯಿಸುವಂತೆ ಒತ್ತಾಯಿಸಿ ಒಂದು ಗೊತ್ತುವಳಿಯನ್ನು ತೆಗೆದುಕೊಂಡಿತು. ಬ್ರಿಟಿಷ್ ಸರ್ಕಾರ ಈ ಬೇಡಿಕೆಯನ್ನು ತತ್ವಶಃ ಒಪ್ಪಿದರೂ ಎರಡನೇ ಮಹಾಯುದ್ಧದ ನೆಪ ಹೇಳಿ ಮುಂದೂಡಿತು. 1946ರಲ್ಲಿ ಬ್ರಿಟಿಷ್ ಪ್ರಧಾನ ಮಂತ್ರಿಗಳಾದ ಶ್ರೀ ಕ್ಲೆಮೆಂಟ್ ಆಟ್ಲಿ ಎಂಬುವವರು ಭಾರತಕ್ಕೆ ಸ್ವಾತಂತ್ರ್ಯ ಕೊಡುವ ಭರವಸೆಯನ್ನು ಮತ್ತು ಅದಕ್ಕೆ ಪೂರಕವಾಗಿ ಸಂವಿಧಾನ ಸಭೆಯನ್ನು ರಚಿಸಿ ಕೊಳ್ಳಲು ಅನುಮತಿಯನ್ನು ನೀಡಿದರು .ಅದರಂತೆ 1946ರ ಜುಲೈ ತಿಂಗಳಿನಲ್ಲಿ ಚುನಾವಣೆಯ ಮೂಲಕ 296 ಜನ ಸದಸ್ಯರನ್ನು ಸಂವಿಧಾನ ಸಭೆಗೆ ಆಯ್ಕೆ ಮಾಡಲಾಯಿತು. ಕೆಲವು ಭಿನ್ನ ಅಭಿಪ್ರಾಯಗಳಿಂದ ಮುಸ್ಲಿಂ ಲೀಗ್ ಸದಸ್ಯರು ಸಂವಿಧಾನದ ಸಭೆಗಳಲ್ಲಿ ಭಾಗವಹಿಸಲು ನಿರಾಕರಿಸಿದರು. ಆ ಸಮಿತಿಯಲ್ಲಿ ಉಳಿದವರು 272 ಜನ ಸದಸ್ಯರು. ಅವರಲ್ಲಿ ಪ್ರಮುಖ ರಾಜಕೀಯ ಮುಖಂಡರು, ಕಾಂಗ್ರೆಸ್ ಪಕ್ಷದವರು , ಕಮ್ಯುನಿಷ್ಟರು, ಸಮಾಜವಾದಿಗಳು, ಕೈಗಾರಿಕೋದ್ಯಮಿಗಳು, ಕಾರ್ಮಿಕ ಸಂಘದ ಪ್ರತಿನಿಧಿಗಳು, ವಿಭಿನ್ನ ಆರ್ಥಿಕ ಮತ್ತು ರಾಜಕೀಯ ಸಿದ್ದಾಂತದವರು, ಭಿನ್ನ ಪಂಥಗಳಿಗೆ ಸೇರಿದವರು, ಹಿಂದುಗಳು, ಮುಸಲ್ಮಾನರು. ಕ್ರಿಶ್ಚಿಯನ್ನರು, ಪಾರ್ಸಿಗಳು, ನಾಸ್ತಿಕರು, ವಿಭಿನ್ನ ಸಾಮಾಜಿಕ ವರ್ಗಗಳಿಗೆ ಸೇರಿದವರು, ಶ್ರೀಮಂತರು , ಮಧ್ಯಮ ವರ್ಗದವರು, ಹಿಂದುಳಿದ ವರ್ಗದವರು, ಅನುಸೂಚಿತ ಜಾತಿ, ಅನುಸೂಚಿತ ಬುಡಕಟ್ಟುಗಳಿಗೆ ಸೇರಿದವರು ಎಲ್ಲರೂ ಇದ್ದರು. ಸಂವಿಧಾನ ಸಭೆಯ ಸದಸ್ಯರು ಡಾಕ್ಟರ್ ಬಾಬು ರಾಜೇಂದ್ರ ಪ್ರಸಾದ್ ಅವರನ್ನು ಅಧ್ಯಕ್ಷರನ್ನಾಗಿ ಚುನಾಯಿಸಿದರು. ಡಾ.ಬಿ.ಆರ್. ಅಂಬೇಡ್ಕರ್ ಅವರನ್ನು ಕರಡು ರಚನಾ ಸಮಿತಿಯ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದರು.1946ರ ಡಿಸೆಂಬರ್ 6ರಂದು 272 ಜನ ಸದಸ್ಯರು ಮೊದಲನೇ ಸಭೆ ಸೇರಿ ಸಂವಿಧಾನ ರಚನೆ ಕೆಲಸವನ್ನು ಪ್ರಾರಂಭಿಸಿದರು. ಅಲ್ಲಿಂದ ಒಂದು ವರ್ಷ ಎರಡು ತಿಂಗಳ ಅವಧಿಯಲ್ಲಿ ಸಂವಿಧಾನದ ರೂಪರೇಷೆಗಳು ಸಿದ್ಧಗೊಳ್ಳತೊಡಗಿದವು ಹೀಗೆ ರೂಪಗೊಂಡ ಸಂವಿಧಾನದ ಮೊದಲ ಕರಡನ್ನು 1948ರ ಫೆಬ್ರವರಿ 21ರಂದು ಭಾರತದ ಜನತೆಯ ಮುಂದಿಟ್ಟು ಚರ್ಚೆಗೆ ಅವಕಾಶವನ್ನು ಕಲ್ಪಿಸಲಾಯಿತು .ಜನತೆ ಈ ಕರಡು ಸಂವಿಧಾನವನ್ನು ಚರ್ಚಿಸಿ 7635 ತಿದ್ದುಪಡಿಗಳನ್ನು ಸೂಚಿಸಿದರು.
ಸಂವಿಧಾನ ರಚನಾ ಸಭೆಯಲ್ಲಿ ಅನೇಕರಿದ್ದರೂ ಕೆಲವು ಸದಸ್ಯರು ಹೆಚ್ಚು ಕೊಡುಗೆಯನ್ನು ನೀಡಿದ್ದಾರೆ. ಅದರಲ್ಲೂ ಬಾಬಾ ಸಾಹೇಬ್ ಅಂಬೇಡ್ಕರ್ ರವರು ದಿನಕ್ಕೆ 18 ಗಂಟೆಗಳಿಗೂ ಹೆಚ್ಚು ಕೆಲಸ ನಿರ್ವಹಿಸಬೇಕಾಯಿತು. ಸ್ವಾತಂತ್ರ ನಂತರ ಭಾರತದ ಮೊದಲ ರಾಷ್ಟ್ರಪತಿಗಳಾದ ಡಾ. ರಾಜೇಂದ್ರ ಪ್ರಸಾದ್ ಅವರು ಭಾರತದ ಸಂವಿಧಾನ ರಚನೆಗೆ ಅಂಬೇಡ್ಕರ್ ಕೊಡುಗೆ ಬಗ್ಗೆ ಈ ರೀತಿ ಪ್ರಶಂಸೆಯ ಮಾತುಗಳನ್ನು ಆಡಿದ್ದಾರೆ .
” ಸಂವಿಧಾನ ಸಭೆಯ ಅಧ್ಯಕ್ಷನಾಗಿ ನಾನು ಪ್ರತಿದಿನದ ಚಟುವಟಿಕೆಗಳನ್ನು ಬಹಳ ಕೂಲಂಕುಷವಾಗಿ ಗಮನಿಸಿದ್ದೇನೆ. ಸಂವಿಧಾನ ಕರಡು ಸಮಿತಿ ಮತ್ತು ವಿಶೇಷವಾಗಿ ಅದರ ಅಧ್ಯಕ್ಷರಾದ ಡಾ. ಬಿ.ಆರ್. ಅಂಬೇಡ್ಕರ್ ಅವರು ಇಷ್ಟು ಶ್ರದ್ಧೆ ಮತ್ತು ಉತ್ಸುಕತೆಯಿಂದ ಈ ಕಾರ್ಯವನ್ನು ನಡೆಸಿದಕ್ಕೆ ಎಲ್ಲರಿಗಿಂತ ಹೆಚ್ಚು ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಅಂಬೇಡ್ಕರ್ ರವರನ್ನು ಕರಡು ಸಮಿತಿಗೆ ಸೇರಿಸಿದ್ದು ಮತ್ತು ಅದರ ಅಧ್ಯಕ್ಷನಾಗಿ ಮಾಡಿದ್ದು ನಾವು ಮಾಡಿದ ಅತ್ಯುತ್ತಮ ಕೆಲಸ “
ಹೀಗೆ ಎರಡು ವರ್ಷ 11 ತಿಂಗಳು 17 ದಿವಸಗಳ ಪರಿಶ್ರಮದ ಸಲುವಾಗಿ ಅಂತಿಮ ಕರಡನ್ನು 1949ರ ನವಂಬರ್ 26ರಂದು ಭಾರತ ಸರ್ಕಾರಕ್ಕೆ ಸಲ್ಲಿಸಲಾಯಿತು ಈ ಐತಿಹಾಸಿಕ ದಿನದ ನೆನಪಿಗಾಗಿ ಪ್ರತಿ ವರ್ಷ ನವೆಂಬರ್ ತಿಂಗಳ 26ನೇ ದಿನವನ್ನು ಕಾನೂನು ದಿನ ಎಂದು ಆಚರಿಸಿಕೊಂಡು ಬರಲಾಗುತ್ತಿತ್ತು ಸಂವಿಧಾನದ ಆಶಯ ಹಾಗೂ ಅದರ ಮಹತ್ವ ಹಿಂದಿಗಿಂತಲೂ ಇತ್ತೀಚಿನ ವರ್ಷಗಳಲ್ಲಿ ಬಹಳ ಪ್ರಮುಖ ಎಂಬುದನ್ನು ಮನಗಂಡು 2016 ರಿಂದ ನವಂಬರ್ 26ರ ದಿನವನ್ನು ಸಂವಿಧಾನದ ದಿನವೆಂದು ಆಚರಿಸಲಾಗುತ್ತದೆ
ನಾವೆಲ್ಲರೂ ಸಂವಿಧಾನದ ಪ್ರಸ್ತಾವನೆಯಲ್ಲಿ ಅಡಕವಾಗಿರುವ ಎಲ್ಲಾ ಅಂಶಗಳನ್ನು ಪರಿಪಾಲನೆ ಮಾಡಬೇಕು. ಇಡೀ ಸಂವಿಧಾನವನ್ನು ಓದಬೇಕು. ಅರ್ಥೈಸಬೇಕು. ಅದರಂತೆ ನಡೆದುಕೊಳ್ಳಬೇಕು ತಿಳಿಯದವರಿಗೆ ತಿಳಿಸಿ ಹೇಳಬೇಕು.
ಅದರ ಆಶಯಗಳು ಬದುಕಿನ ವಿಧಾನವಾಗಬೇಕು. ಪ್ರಪಂಚದಲ್ಲಿ ಸರಿಸಾಟಿ ಇಲ್ಲದ ನಮ್ಮ ಸಂವಿಧಾನವನ್ನು ಸಂರಕ್ಷಿಸಿಕೊಳ್ಳುವ ಹೊಣೆಗಾರಿಕೆ ಪ್ರತಿಯೊಬ್ಬರದೂ ಆಗಿದೆ ಎಂಬುದ ನಾವು ಮರೆಯಬಾರದು.
(ಮಾಹಿತಿ ಕೃಪೆ : ನ್ಯಾಯ ಮೂರ್ತಿ ಎಚ್. ಎನ್. ನಾಗಮೋಹನ ದಾಸ್ ರವರ ಸಂವಿಧಾನ ಓದು ಕೈಪಿಡಿ. ತಪ್ಪದೆ ಆ ಕೃತಿಯನ್ನು ಒಮ್ಮೆ ತಪ್ಪದೆ ಓದಿ )
ಎನ್. ಟಿ. ಎರ್ರಿಸ್ವಾಮಿ
ನಿವೃತ್ತ ಕೆನರಾ ಬ್ಯಾಂಕ್ ಡಿ.ಎಂ.
ಜಗಳೂರು