Editor m rajappa vyasagondanahalli
By shukradeshenews Kannada | online news portal |Kannada news online august 31
By shukradeshenews | published on September 5
ಭಾರತದ ಮೊದಲ ದಲಿತ ರಾಷ್ಟ್ರಪತಿ, ಬಡತನ ಅಸ್ಪೃಶ್ಯತೆ, ಅನುಭವಿಸಿ, ಕೆಲವರ ನೆರವಿನಿಂದ ಓದಿ, ದೇಶದ ಉನ್ನತ ಸ್ಥಾನಗಳನ್ನು ಅಲಂಕರಿಸಿ, ಕಡೆಗೆ ದೇಶದ ಮೊದಲನೆ ದಲಿತ ರಾಷ್ಟ್ರಪತಿಯಾದ,ಕೆ ಆರ್ ನಾರಯಣ್ ಅವರ ಚರಿತ್ರೆ
ತುಂಬಾ ವರ್ಷಗಳ ಹಿಂದೆ,,
ಒಬ್ಬ ಹುಡುಗ ಯಾವಾಗಲೂ ಕಣ್ಣೀರಲ್ಲೇ ಜೀವನ ಮಾಡುತ್ತಿದ್ದ. ಆತನ ಕಣ್ಣೀರಿಗೆ ಕಾರಣ ಕುಟುಂಬದ ಕಡುಬಡತನ. ಕಲಿಯೋಕೆ ಆತನಿಗೆ ತುಂಬಾ ಆಸೆ. ಆದರೆ ಪಾಠಪುಸ್ತಕ ಕೊಂಡುಕೊಳ್ಳಲು ಕಾಸಿಲ್ಲ.
ಗುಡಿಸಲಿನಲ್ಲಿ ವಾಸಿಸುತ್ತಿದ್ದ ಕುಟ್ಟನ್ ಎಂಬ ಹೆಸರಿನ ಆ ಹುಡುಗ ಒಮ್ಮೆ ತನ್ನ ಸಹಪಾಠಿ ಬಾಬು ಎಂಬವನ ಜೊತೆ ‘ನಾನು ಇಲ್ಲಿಯವರೆಗೆ ಟೆರಸ್ ಮನೆ ನೋಡಿಲ್ಲ, ನಿನ್ನ ಟೆರಸ್ ಮನೆ ನೋಡಬೇಕು’ ಅಂತ ಆಸೆ ವ್ಯಕ್ತಪಡಿಸಿದ್ದ. “ಈಗ ಮನೆಯಲ್ಲಿ ಅಪ್ಪ ಅಮ್ಮ ಇದ್ದಾರೆ, ನೀನು ದಲಿತ ದರಿದ್ರ.. ಕಪ್ಪು ಬಣ್ಣದ ನಿನ್ನನ್ನು ಕರ್ಕೊಂಡ್ ಹೋದ್ರೆ ಬೈತಾರೆ, ಭಾನುವಾರ ಅಪ್ಪ ಅಮ್ಮ ಮನೆಯಲ್ಲಿ ಇರಲ್ಲ, ಭಾನುವಾರ ಮನೆಗೆ ಬಾ” ಅಂತ ಬಾಬು ಹೇಳಿ ಹೋಗಿದ್ದ.
ಭಾನುವಾರ ಮಧ್ಯಾಹ್ನ ಬಾಬುವಿನ ಮನೆಗೆ ಹೋಗುವ ಆತುರದಲ್ಲಿದ್ದ ಕುಟ್ಟನ್ ಗುಡಿಸಲಿನಲ್ಲಿದ್ದ ಗಂಜಿ ಪಾತ್ರೆಗೆ ಕೈಹಾಕಿದಾಗ ಪಾತ್ರೆ ಖಾಲಿಯಾಗಿತ್ತು. ಖಾಲಿ ಹೊಟ್ಟೆಯಲ್ಲೇ ಬಾಬುವಿನ ಮನೆಗೆ ಹೋದ ಕುಟ್ಟನ್ ಅಲ್ಲಿದ್ದ ಮಾರ್ಬಲ್ ನೆಲ, ಸೋಫಾ ಸೆಟ್, ಕರ್ಟನ್, ಹೂಪಾತ್ರೆ, ಮನೆಯ ಅಲಂಕಾರ-ಆಡಂಬರ ನೋಡಿ ತನ್ನ ಕಣ್ಣನ್ನೇ ನಂಬಲಿಲ್ಲ. ಮನೆಯಿಂದ ಹೊರಬಂದಾಗ ಅಲ್ಲೊಂದು ನಾಯಿಗೂಡು. ಅದರೊಳಗೊಂದು ಬಿಳಿಬಣ್ಣದ ನಾಯಿಮರಿ. ಗೂಡಿನ ಒಳಗೆ ಪಾತ್ರೆಯಲ್ಲಿ ಮಟನ್, ಚಿಕನ್, ಬೀಫ್, ಫಿಶ್ ಫ್ರೈ… ಒಂದು ತುತ್ತು ಊಟ ಸಿಗದೇ ಖಾಲಿ ಹೊಟ್ಟೆಯಲ್ಲಿ ಬಂದಿದ್ದ ಕುಟ್ಟನ್ ನಾಯಿಮರಿಗೆ ಇಟ್ಟಿದ್ದ ಭೂರಿಬೋಜನವನ್ನು ಕಣ್ಣಲ್ಲೇ ಉಂಡಿದ್ದ.
ಮರುದಿವಸ ತರಗತಿಯಲ್ಲಿ ಟೀಚರ್ ಪಾಠ ಮಾಡುತ್ತಿರುವಾಗ ಪರಿಶೋಧನೆಗೆ ಬಂದ ಶಿಕ್ಷಣ ಇಲಾಖೆಯ ಅಧಿಕಾರಿ, “ನೀವು ಮುಂದೆ ಏನಾಗಲು ಬಯಸುತ್ತೀರಾ?” ಅಂತ ಮಕ್ಕಳನ್ನು ಪ್ರಶ್ನೆ ಮಾಡಿದ್ರು. ಡಾಕ್ಟರ್, ಇಂಜಿನಿಯರ್, ಆಫೀಸರ್, ಹಾಡುಗಾರ, ಆಟಗಾರ, ಬೇಟೆಗಾರ; ಒಬ್ಬೊಬ್ಬ ವಿದ್ಯಾರ್ಥಿಗೂ ಒಂದೊಂದು ಗುರಿ. ಕುಟ್ಟನ್ ಮಾತ್ರ “ನನಗೆ ಇದ್ಯಾವುದು ಅಗೋದು ಬೇಡ ಮೇಸ್ಟ್ರೆ, ನಾನು ಬಾಬು ಮನೆಯ ನಾಯಿಯಾದರೆ ಸಾಕು ಮೇಸ್ಟ್ರೆ.. ಒಂದೊತ್ತಿನ ಊಟ ಸಿಗುತ್ತಲ್ವ” ಎಂದು ಹೇಳಿದ್ದು ಶಾಲೆಯ ಶಿಕ್ಷಕರು, ಊರವರ ಕರುಳು ಹಿಂಡಿತ್ತು. ಅವರ ಮನಸ್ಸಿನ ಸಂಕಟ ಕರುಣೆಯಾಗಿ ಬದಲಾಯ್ತು. ಎಲ್ಲರು ಸೇರಿ ಪಾಠ ಪುಸ್ತಕ ಕೊಟ್ಟು ಕುಟ್ಟನ ವಿದ್ಯಾಭ್ಯಾಸಕ್ಕೆ ನೆರವಾದರು.
ಕುಟ್ಟನ್ ಕಲಿತನೇ ಹೋದ. ಸ್ಕಾಲರ್ ಶಿಪ್ ಸಹಾಯದಿಂದ BA(ಹಾನರ್ಸ್), MA(ಇಂಗ್ಲಿಷ್) ಪೂರ್ತಿ ಮಾಡಿದ ಕುಟ್ಟನ್ ಕೇರಳ ವಿವಿಯಲ್ಲಿ ಮೊದಲ ದರ್ಜೆಯಲ್ಲಿ ಪಾಸಾದ ಮೊದಲ ದಲಿತ ವಿದ್ಯಾರ್ಥಿ. ಬಳಿಕ ಒಂದು ವರ್ಷ ದೆಹಲಿಯಲ್ಲಿ ಪತ್ರಕರ್ತನಾಗಿ ಕೆಲಸ. ದೆಹಲಿಯಲ್ಲಿರುವಾಗ ಸ್ಕಾಲರ್ ಶಿಪ್ ಪಡೆದು ಲಂಡನ್ ಗೆ ತೆರಳಿ ಉನ್ನತ ವಿದ್ಯಾಭ್ಯಾಸ ಪಡೆದ.
ಲಂಡನ್ ಕಲಿಕೆ ಮುಗಿಸಿ ವಾಪಸಾಗುವಾಗ London School Of Economicsನ ಪ್ರಾಧ್ಯಾಪಕ ಹಾರೋಲ್ಡ್ ಲಸ್ಕಿ, ತನ್ನ ವಿದ್ಯಾರ್ಥಿಯಾಗಿದ್ದ ಕುಟ್ಟನ್ ಕೈಗೊಂದು ಪತ್ರ ಕೊಟ್ಟು “ಈ ಪತ್ರವನ್ನು ನಿನ್ನ ದೇಶದ ಪ್ರಧಾನ ಮಂತ್ರಿಗೆ ಕೊಡು” ಎಂದು ಹೇಳಿದ್ದರು. ನೆಹರೂ ಕೈಗೆ ಕುಟ್ಟನ್ ತಂದು ಕೊಟ್ಟ ಪತ್ರದಲ್ಲಿ “ಈತನನ್ನು ನಿಮ್ಮ ದೇಶದ ಯಾವುದೋ ಒಂದು ಕಾಲೇಜಿನಲ್ಲಿ ಅಧ್ಯಾಪಕ ಹುದ್ದೆಗೆ ಸೀಮಿತ ಮಾಡಬೇಡಿ, ಈತ ನಿಮ್ಮ ದೇಶಕ್ಕೆ ಕಲಿಸಿಕೊಡಬಲ್ಲ ತಾಕತ್ತು ಹೊಂದಿದ್ದಾನೆ” ಎಂಬ ಸಂದೇಶ ಇತ್ತು. ಆದರೆ ಊರಿಗೆ ಬಂದ ಕುಟ್ಟನ್ ಕಾಲೇಜು ಅಧ್ಯಾಪಕನಾಗಿ ಸೇರಿಕೊಂಡರು. ಒಂದು ವರ್ಷದ ಬಳಿಕ ಪ್ರಧಾನಿ ನೆಹರೂ ಕಡೆಯಿಂದ ಕರೆ.. “ನೀವು ಕಾಲೇಜಿನಲ್ಲಿ ಕಲಿಸಿದ್ದು ಸಾಕು, ಇನ್ಮುಂದೆ ಈ ದೇಶದ ಬಗ್ಗೆ ಕಲಿಸೋಕೆ ವಿದೇಶಗಳಿಗೆ ಹೋಗಬೇಕು” ಎಂದು ಕೇಳಿಕೊಂಡರು. ಪ್ರಧಾನಮಂತ್ರಿಗಳ ಮನವಿಯನ್ನು ಪುರಸ್ಕರಿಸಿದ ಕಾಲೇಜು ಅಧ್ಯಾಪಕ, ಬರ್ಮಾ, ಜಪಾನ್, ಇಂಗ್ಲೆಂಡ್, ಆಸ್ಟ್ರೇಲಿಯಾ, ವಿಯೆಟ್ನಂ, ಥೈಲಾಂಡ್, ಟರ್ಕಿ, ಚೀನಾದಲ್ಲಿ ಭಾರತದ ರಾಯಭಾರಿಯಾಗಿ ಸೇವೆ ಮಾಡಿದರು. 30 ವರ್ಷಗಳ ಕಾಲ ವಿದೇಶಗಳಲ್ಲಿ ದೇಶದ ಸೇವೆ ಮಾಡಿ ವಾಪಸ್ ಭಾರತಕ್ಕೆ ಬಂದ ಕುಟ್ಟನ್ ಅವರನ್ನು ಕಾಂಗ್ರೆಸ್ ಪಕ್ಷ ಕೈಬೀಸಿ ಕರೆಯಿತು. ಚುನಾವಣೆಯಲ್ಲಿ ಗೆದ್ದು ಲೋಕಸಭಾ ಸದಸ್ಯರಾದ ಕುಟ್ಟನ್ ನಂತರ ಕೇಂದ್ರದಲ್ಲಿ ಮಂತ್ರಿಯೂ ಆದರು.
90ರ ದಶಕ ಭಾರತಕ್ಕೆ ಕೆಟ್ಟ ಸಮಯ. ಕೋಮು ಸಂಘರ್ಷ, ರಾಜಕೀಯ ಬಿಕ್ಕಟ್ಟು ಭ್ರಷ್ಟಾಚಾರಗಳಿಂದ ನಲುಗಿದ್ದ ಸಮಯದಲ್ಲೇ ಆ ಒಂದು ದಿನ(25 ಜುಲೈ 1997) ಕೋಟಿ ಕೋಟಿ ಭಾರತೀಯರು, ವಿಶೇಷವಾಗಿ ಮಲಯಾಳಿಗಳು ತುಂಬಾ ಹೆಮ್ಮೆ ಪಟ್ಟ ದಿನ. ಬಾಬುವಿನ ಮನೆಯಲ್ಲಿ ನಾಯಿಮರಿಯಾಗಲು ಆಸೆ ಪಟ್ಟಿದ್ದ ಕುಟ್ಟನ್, ಜಗತ್ತಿನ ಅತೀ ದೊಡ್ಡ ಪ್ರಜಾಪ್ರಭುತ್ವ ದೇಶವಾದ ಭಾರತ ಎಂಬ ಮಹಾ ಸಾಮ್ರಾಜ್ಯದ ಮೊದಲ ದಲಿತ ರಾಷ್ಟ್ರಪತಿಯಾಗಿ ಪ್ರಮಾಣ ಮಾಡಿದರು. ಸಹಪಾಠಿಯ ಟೆರೆಸ್ ಮನೆ ನೋಡಿ ದಂಗಾಗಿದ್ದ ಗುಡಿಸಲು ವಾಸಿ ಕುಟ್ಟನ್, 320 ಎಕರೆ ಪ್ರದೇಶದಲ್ಲಿರುವ 340 ಕೋಣೆಗಳ ರಾಷ್ಟ್ರಪತಿ ಭವನಕ್ಕೆ ಅಧಿಪತಿಯಾದರು.
ಕೇರಳದ ಕೊಟ್ಟಾಯಂ ಜಿಲ್ಲೆಯ ಉಜ್ಹವೂರಿನ
#ಕೊಚೇರಿಲ್ #ರಾಮನ್ ಎಂಬವರ ಮಗ #ಕುಟ್ಟನ್ ಎಂಬ ಆ ವ್ಯಕ್ತಿಯನ್ನು ಜಗತ್ತು ಕರೆದಿದ್ದು #
*ಕೆಆರ್ # ನಾರಾಯಣನ್* ಎಂಬ ಹೆಸರಿನಲ್ಲಿ.
ಇಲ್ಲಿ ಜಾತಿ ಅನ್ನುವುದುಕಿಂತ್ತ, ಮಾನವಿಯತೆ ಮುಖ್ಯ.
ಸಮಾಜ ಅವರಲ್ಲಿರುವ, ಜ್ಞಾನವನ್ನು ಗುರ್ತಿಸಬೇಕೆ ವಿನಹ ಅವರ ಜಾತಿಯನ್ನಲ.
ಶ್ಯಾಮಸುಂದರ್
ಅಖಿಲ ಕರ್ನಾಟಕ ಬಹುಜನಸೇನೆ
ಮಹಿಳಾ ಸಬಲಿಕರಣ ವೇದಿಕೆ (ರಿ)