ಈ ಚಿತ್ರದಲ್ಲಿರೋ ಸಮಾಧಿಯಿದ್ಯಲ್ಲ…
ಇದು ಮಾರ್ಗರೇಟಳದ್ದು.
ಮಾರ್ಗರೇಟ್ ಅಂದ್ರೆ ನಾಗರಹಾವು ಸಿನಿಮಾದ ರಾಮಾಚಾರಿಯ ಮಾರ್ಗರೇಟ್ ಅಲ್ಲ.
ಈಕೆ ಇಂಗ್ಲೆಂಡಿನವಳು.
ಲಂಡನ್ನಿನಲ್ಲಿ ಹುಟ್ಟಿ ಬೆಳೆದ ಈಕೆ, ಸಸ್ಯಶಾಸ್ತ್ರದಲ್ಲಿ ಇನ್ನಿಲ್ಲದ ಆಸಕ್ತಿಯಿಂದಾಗಿ ತನ್ನಿಡೀ ಬದುಕನ್ನೇ ಹೂವಿನ ಗಿಡಗಳ ಅಧ್ಯಯನಕ್ಕಾಗಿ ಮೀಸಲಿಟ್ಟು, ಅಲ್ಲಿಯೇ ಸಸ್ಯಶಾಸ್ತ್ರಜ್ಞೆಯಾಗಿ ಕಾರ್ಯ ನಿರ್ವಹಿಸುತ್ತಿದ್ದಾಕೆ ಮಾರ್ಗರೇಟ್. ( Lady Joan Margaret Legge ).
ಆಗಷ್ಟೇ,
frank smythe ತಾನು ಅನ್ವೇಷಣೆ ಮಾಡಿದ್ದ “ವ್ಯಾಲಿ ಆಫ್ ಫ್ಲವರ್ ” ಅನ್ನೋ ಜಾಗವೊಂದರ ಕುರಿತಾಗಿ ಸ್ವತಃ ಬರೆದಿದ್ದ The valley of flowers ಪುಸ್ತಕ ಜಗತ್ತಿನಾದ್ಯಂತ ಸುದ್ದಿಯಾಗಿತ್ತು.
ಈ ಜಾಗವು ಔಷಧೀಯ ಸಸ್ಯಗಳಿಂದ ತುಂಬಿಹೋಗಿರೋ ವಿಚಾರ ತಿಳಿಯುತ್ತಿದ್ದಂತೆಯೇ, 1939ರಲ್ಲಿ ಸಂಶೋಧನೆಗಾಗಿ ವ್ಯಾಲಿ ಆಫ್ ಫ್ಲವರ್ರಿಗೆ ಓಡಿ ಬರೋ ಮಾರ್ಗರೇಟ್,
ಇಲ್ಲಿರೋ ಔಷಧೀಯ ಸಸ್ಯಗಳ ಅಧ್ಯಯನದಲ್ಲಿ ತೊಡಗಿಕೊಂಡಿದ್ದಾಗಲೇ ಅವಘಡವಾಗಿ ಈ ಕಣಿವೆಯಲ್ಲಿಯೇ ಸಾವನ್ನಪ್ಪುತ್ತಾಳೆ.
ಸಾಯೋ ಮೊದಲು ಆಕೆ ಹೇಳಿದ್ದ ಕೊನೆಯ ಮಾತು…ನನ್ನನ್ನು ಎಲ್ಲಿಗೂ ಕೊಂಡೊಯ್ಯಬೇಡಿ, ಇಲ್ಲಿಯೇ ನನ್ನನ್ನು ಇರೋಕೆ ಬಿಟ್ಟುಬಿಡಿ.
ಹಾಗಾಗಿ ಇದೇ ವ್ಯಾಲಿ ಆಫ್ ಫ್ಲವರ್ ಕಣಿವೆಯಲ್ಲಿಯೇ ಆಕೆಯನ್ನು ಮಣ್ಣು ಮಾಡಲಾಗುತ್ತದೆ.

ತನ್ನಿಡೀ ಬದುಕನ್ನೇ…
ಸಸ್ಯಗಳೊಂದಿಗೆ ಕಳೆದವಳು, 54ವರ್ಷವಾದರೂ
ಮದುವೆಯೂ ಆಗದೆ ತನ್ನ ಬದುಕನ್ನು ಸಸ್ಯಗಳ ಅಧ್ಯಯನಕ್ಕಾಗಿಯೇ ಮುಡಿಪಾಗಿಟ್ಟವಳು.
ಅದೆಲ್ಲೋ ಲಂಡನ್ನಲ್ಲಿ ತನ್ನ ಮುಕ್ಕಾಲು ಆಯಸ್ಸೇ ಕಳೆದವಳನ್ನು, ಭಾರತವೆಂದರೆ ಹೇಗಿದೆ ಅಂತಾನೂ ನೋಡದವಳನ್ನು, ಭಾರತದ ಮೂಲೆಯಲ್ಲಿರೋ, ಭಾರತೀಯರೇ ಇನ್ನೂ ನೋಡದ ಕೇಳದ ಕಣಿವೆಯೊಂದು ಸೆಳೆಯುತ್ತದೆ.
ಎದ್ದು ಹೊರಟವಳೇ ತನ್ನೆಲ್ಲವನ್ನೂ ಬಿಟ್ಟು ಇಲ್ಲಿಗೆ ಬಂದವಳು,
ಕರೆಕ್ಟಾಗಿ ಇದೇ ಜಾಗದಲ್ಲಿ ತನ್ನ ಬದುಕನ್ನೇ ಮುಗಿಸಿ ಇಲ್ಲಿಯೇ ಮಣ್ಣಾಗಿ ಹೋಗುತ್ತಾಳೆ ಅಂದ್ರೆ ಜಸ್ಟ್ ಇಮ್ಯಾಜಿನ್…

ಎಲ್ಲಿಯ ಲಂಡನ್…
ಎಲ್ಲಿಯ ಭಾರತ ಚೀನಾ ಗಡಿಯಲ್ಲಿ ವರ್ಷದ ಎಂಟು ತಿಂಗಳು ಸಂಪೂರ್ಣ ಹಿಮದಿಂದ ಮುಚ್ಚಿ ಹೋಗೋ, ಕೇವಲ ನಾಲ್ಕು ತಿಂಗಳು ಮಾತ್ರ ಜಗತ್ತಿಗೆ ಕಾಣಿಸಿಕೊಳ್ಳೋ ಅಜ್ಞಾತ ಕಣಿವೆ?
ಎಲ್ಲಿಯ ಮಾರ್ಗರೇಟ್ ಎಲ್ಲಿಯ ಮಹಾಭಾರತ.
ಎಲ್ಲಿಗೋ ಹೊರಟ ಆತ ದಾರಿ ತಪ್ಪಿ ಇನ್ನೆಲ್ಲೋ ತಲುಪಿ ಈ ಜಾಗವನ್ನು ಕಂಡು ಹಿಡಿಯೋದೇನು,
ಅದರ ಬಗ್ಗೆ ಪುಸ್ತಕ ಬರೆಯೋದೇನು,
ಅದನ್ನು ಓದಿದವಳೇ ಅಲ್ಲೆಲ್ಲೋ ಇದ್ದಾಕೆ ಸೀದಾ ಇಲ್ಲಿಗೆ ಹೊರಟು ಬರೋದೇನು?
ಅದೂ…
ಅಂದಿಗೆ ಸರಿಯಾಗಿ ಹತ್ತು ವರ್ಷ ಮೊದಲೂ ಕೂಡಾ,
ಇಡೀ ಜಗತ್ತಿಗೇ ಇಂತದ್ದೊಂದು ಜಾಗವಿದೆ ಅನ್ನೋದೇ ಗೊತ್ತಿರದ ಹೀಗೊಂದು ಜಾಗವೊಂದಕ್ಕೆ ಈಕೆ ಬಂದು, ತನ್ನ ಬದುಕನ್ನೇ ಮುಡಿಪಾಗಿಟ್ಟಿದ್ದ ತನ್ನಿಷ್ಟದ ಸಸ್ಯಶಾಸ್ತ್ರದ ಅಧ್ಯಯನದ ಕೆಲಸ ಮಾಡುತ್ತಲೇ ಮಣ್ಣಾಗುತ್ತಾಳೆ ಅಂದ್ರೆ…

ನಮ್ಮ ಬದುಕಿನ…
ಪ್ರತಿಯೊಂದೂ ಕ್ಷಣ‌ ಹಾಗೂ ಘಟನೆಗಳೂ ಅದ್ಯಾವ್ ರೇಂಜಿಗೆ ಪೂರ್ವ ನಿರ್ಧಾರಿತವಾಗಿರುತ್ತವೆ ಅನ್ನೋದಕ್ಕೆ ಇದಕ್ಕಿಂತಾ ಅದ್ಭುತ ಉದಾಹರಣೆ ಸಿಗೋಕ್ ಸಾಧ್ಯವೇ…

ಇನ್ನೊಂದ್ ವಿಚಾರ ಏನ್ ಗೊತ್ತಾ?…
ಇವತ್ತಿಗೆ ಸರಿಯಾಗಿ ಈಕೆ ಸತ್ತು ಎಂಬತ್ತೈದು ವರ್ಷ…
ಕರೆಕ್ಟಾಗಿ ಇವತ್ತಿನ ದಿನವೇ,
ಅಂದರೆ 1939ರ ಜುಲೈ ನಾಲ್ಕನೇ ತಾರೀಖಿನಂದೇ ಈಕೆ,
ಈ ಜಾಗದಲ್ಲಿಯೇ ತನ್ನ ಪ್ರಾಣ ಬಿಟ್ಟು ಈ ಪುಣ್ಯಭೂಮಿಯ ಮಣ್ಣಲ್ಲಿ ಮಣ್ಣಾಗಿ ಬೆರೆತು ಹೋಗಿದ್ಲು ಈ ಪುಣ್ಯಾತ್ಗಿತ್ತಿ…!!

Leave a Reply

Your email address will not be published. Required fields are marked *

You missed

error: Content is protected !!