Editor m rajappa vyasagondanahalli

By shukradeshenews Kannada | online news portal |Kannada news online   

By shukradeshenews | published on ಜನವರಿ 18

.ಪಂಡಿತಾರಾಧ್ಯರು ಹಚ್ಚಿದ
ಅರಿವಿನ ದೀವಿಗೆ,
ಶಿವಸಂಚಾರ ನಾಟಕೋತ್ಸವ :

ಕನ್ನಡದ ನೆಲ ಕಲಾವಿದರ ತವರೂರು ಎಂಬುದೇ ಸರಿ. ಕವಿ, ಸಾಹಿತಿಗಳು ತಮ್ಮ ಸಾಹಿತ್ಯದ ಮೂಲಕ ಕನ್ನಡದ ಕೀರ್ತಿಯನ್ನು ದಿಗಂತಕ್ಕೆ ಹಬ್ಬಿಸಿದ್ದರೆ ರಂಗತಜ್ಞರು, ರಂಗಭೂಮಿಯ ಕಲಾವಿದರು ಕನ್ನಡದ ರಸ ಬಳ್ಳಿಯನ್ನು ಭುವಿಯ ತುಂಬಾ ಪಸರಿಸಿದ್ದಾರೆ. ಗುಬ್ಬಿ ವೀರಣ್ಣ, ಚಿಂದೋಡಿ ವೀರಪ್ಪ, ಚಿಂದೋಡಿ ಲೀಲಾ, ಡಾ. ರಾಜಕುಮಾರ್, ಮಾಸ್ಟರ್ ಹಿರಣ್ಣಯ್ಯ, ಏಳಗಿ ಬಾಳಪ್ಪ, ಮುದೇನೂರು ಸಂಗಣ್ಣ , ಆರ್ ನಾಗರತ್ನಮ್ಮ, ಸುಭದ್ರಮ್ಮ ಮನ್ಸೂರ್, ನಮ್ಮದೇ ನೆಲದ ಬಿದರಕೆರೆ ಓಬಳೇಶ್ ಮುಂತಾದವರನ್ನು ಮರೆಯಲು ಸಾಧ್ಯವೆ? ಕರುನಾಡಿನ ರಂಗ ಪರಂಪರೆಯನ್ನು ಕಾಪಿಟ್ಟು ಕೊಂಡು ಬಂದ ಮಹನೀಯರು ಅನೇಕರು. ಬಿವಿ ಕಾರಂತ, ಗಿರೀಶ್ ಕಾರ್ನಾಡ್, ನೀನಾಸಂ , ರಂಗಾಯಣ ದಂತಹ ವ್ಯಕ್ತಿ- ಶಕ್ತಿಗಳು ರಂಗ ಚಟುವಟಿಕೆಗಳಿಗೆ ಜೀವ ತುಂಬುವ ಕೆಲಸವನ್ನು ಮಾಡಿರುವುದು ನಿಜ.

ಇತ್ತೀಚಿನ ದಶಕಗಳಲ್ಲಿ ನಾಡಿನ ರಂಗ ಚಟುವಟಿಕೆಗಳಿಗೆ ರಂಗ ಚೇತನವನ್ನು ತುಂಬಿ ಹೊಸ ಸಂಚಲನ ಮೂಡಿಸಿದ ಮಹನೀಯರೆಂದರೆ ಸಾಣೆ ಹಳ್ಳಿಯ ತರಳಬಾಳು ಪರಂಪರೆಯ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು. ಪೂಜ್ಯರ ಪ್ರಖರ ವೈಚಾರಿಕ ಚಿಂತನೆ , ಗ್ರಾಮ ಪ್ರೇಮ, ವೈಚಾರಿಕ ಸಾಹಿತ್ಯ ಕೃಷಿ, ಸಭೆ ಸಮಾರಂಭಗಳ ಮೂಲಕ ಜನ ಮಾನಸವನ್ನು ಒಳಿತಿನೆಡೆಗೆ ತಿದ್ದುವ ಪರಿ ಪ್ರತಿಯೊಂದೂ ಮುತ್ತು ರತ್ನಗಳಂತಹವು. ಗುರುಗಳು ಇತ್ತೀಚಿನ ವರ್ಷಗಳಲ್ಲಿ ಕೈಗೊಂಡ ಮತ್ತೆ ಕಲ್ಯಾಣದೆಡೆಗೆ ಮತ್ತು ನೀನಲ್ಲದೆ ಮತ್ಯಾರು ಇಲ್ಲವಯ್ಯ ಎನ್ನುವ ವಿಚಾರ ಕ್ರಾಂತಿಯ ಕಾರ್ಯಕ್ರಮಗಳು ದೇಶದ ಎಲ್ಲೆಡೆ ಹೊಸ ಹುರುಪು, ಹುಮ್ಮಸ್ಸು, ಹೊಸ ಆಯಾಮ, ಅವಿಷ್ಕಾರಗಳನ್ನು ರೂಪಿಸಿದವಲ್ಲದೆ 12ನೆಯ ಶತಮಾನದ ಶರಣರ ಕಾರ್ಯಗಳನ್ನು ನಮಗೆ ಮತ್ತೆ ನೆನಪಿಗೆ ತಂದವು. ಈ ಎಲ್ಲಾ ಚಟುವಟಿಕೆಗಳಿಗೆ ಮುಕುಟ ಪ್ರಾಯವಾಗಿ ಸಾಣೆಹಳ್ಳಿ ದೇಶದ ಎಲ್ಲ ವರ್ಗದ ಜನರನ್ನು ತನ್ನೆಡೆಗೆ ಸೆಳೆದುಕೊಂಡ ಬಹುದೊಡ್ಡ ಆಯ ಸ್ಕಾಂತ ಗುಣವೆಂದರೆ ಶ್ರೀಗಳವರ ರಂಗ ಚಟುವಟಿಕೆಗಳು. ರಂಗ ಜಂಗಮರೆಂದೇ ಪ್ರಖ್ಯಾತಿ ಹೊಂದಿರುವ ಪಂಡಿತಾರಾಧ್ಯ ಸ್ವಾಮಿಗಳು ಸಾಣೆ ಹಳ್ಳಿಯಲ್ಲಿ ನಡೆಸಿದ ರಾಷ್ಟ್ರೀಯ , ಅಂತರಾಷ್ಟ್ರೀಯ ನಾಟಕೋತ್ಸವಗಳು ಧಾರ್ಮಿಕ ಕ್ಷೇತ್ರದ ಸ್ವಾಮಿಗಳೊಬ್ಬರು ಕೈಗೊಳ್ಳಬಹುದಾದ ಅತ್ಯುತ್ತಮ ವೈಚಾರಿಕ ಕ್ರಾಂತಿಯ ಮುಕುಟ ಮಣಿಗಳು . ದೇಶದ ರಂಗಭೂಮಿಯ ಇತಿಹಾಸದಲ್ಲಿ ಹೊಸ ಅಧ್ಯಾಯ ಮತ್ತು ದಾಖಲೆಗೆ ಅರ್ಹ ವಾದವುಗಳು . ರಂಗ ಕಲಾವಿದರಿಗೆ ಬೆಳ್ಳಿಯ ಬೆತ್ತ ನೀಡಿ ಗೌರವಿಸಿದ್ದು, ಬಸವಾದಿ ಶರಣರ ಬದುಕಿನ ಸುತ್ತ ಹೆಣೆದ ನಾಟಕಗಳನ್ನು ರಚಿಸಿ ಅವುಗಳನ್ನು ಕನ್ನಡ, ಹಿಂದಿ ಹೀಗೆ ವಿವಿಧ ಭಾಷೆಗಳಲ್ಲಿ ರಂಗಭೂಮಿಗೆ ಅಳವಡಿಸಿದ್ದು, ಕನ್ನಡದ ಅತಿರಥ ಮಹಾರಥ ನಿರ್ದೇಶಕರು, ಕಲಾವಿದರನ್ನು ಸಾಣೆ ಹಳ್ಳಿಗೆ ಕರೆಸಿ ಅವರ ಪ್ರತಿಭೆ ಅನಾವರಣಕ್ಕೆ ತಂಗು ದಾಣವಾಗಿಸಿದ್ದು, ಹೊಸ ಹೊಸ ರಂಗ ಪ್ರತಿಭೆಗಳನ್ನು ತಯಾರು ಮಾಡಿದ್ದು, ರಂಗಭೂಮಿಯ ಕಡೆಗೆ ಜನ ಪ್ರೀತಿಯನ್ನು ಉಂಟು ಮಾಡಿದ್ದು ಪ್ರತಿಯೊಂದು ಕೆಲಸವು ಪವಾಡ ಸದೃಶ ವಾದವುಗಳು .

” ನಾಡಿನ ಸಂಪತ್ತು ಎಂದರೆ ಜನಸಂಖ್ಯೆ ಅಲ್ಲ, ಕಟ್ಟಡಗಳಲ್ಲ ,ರಸ್ತೆಗಳಲ್ಲ, ವೈಜ್ಞಾನಿಕ ಪ್ರಗತಿಯಷ್ಟೇ ಅಲ್ಲ, ಸಾಹಿತ್ಯ, ಸಂಗೀತ, ನಾಟಕ ,ಕಲೆ, ಧರ್ಮ ಇವುಗಳ ಸರಿಯಾದ ಅರಿವನ್ನು ಜನರಿಗೆ ಮಾಡಿಕೊಟ್ಟರೆ ಅದುವೇ ನಿಜವಾದ ಸಂಪತ್ತು ” ಎಂದು ಪಂಡಿತಾರಾಧ್ಯರು ಒಂದೆಡೆ ಬಹಳ ಮಾರ್ಮಿಕವಾಗಿ ನುಡಿದಿರುವರು. ಅವರ ಚಿಂತನೆಗಳು ಕೇವಲ ಚಿಂತನೆಗಳಾಗಿರದೆ ಅವುಗಳನ್ನು ಕರಾರುವಕ್ಕಾಗಿ ಅನುಷ್ಠಾನ ಮಾಡುವುದರಲ್ಲಿ ಪಂಡಿತಾರಾಧ್ಯ ಸ್ವಾಮಿಗಳಿಗೆ ಸರಿಸಾಟಿಯಾಗ ಬಲ್ಲವರು ನಮಗೆ ಯಾರು ಕಾಣಿಸಿ ಗರು. ಅವರಿಗೆ ಅವರೇ ಸಾಟಿ. ಹಾಗಾಗಿ ಗುರುಗಳು ನಾಡಿನ ಎಲ್ಲ ಜನವರ್ಗದ ಸಂಪ್ರೀತಿಗೆ ಪಾತ್ರರಾದವರು

.ಅವರ ಮುಪ್ಪುರಿಗೊಂಡ ಚಿಂತನೆಗಳ ಫಲವಾಗಿ 27 ವರ್ಷಗಳ ಹಿಂದೆ ಸಾಣೆ ಹಳ್ಳಿಯಲ್ಲಿ ರಂಗ ಸಂಸ್ಕಾರಕ್ಕೆ ಸಾಕ್ಷಿಯಾಗಿ ಶ್ರೀ ಶಿವಕುಮಾರ ಕಲಾ ಸಂಘವನ್ನು ಶ್ರೀಗಳು ಪ್ರಾರಂಭಿಸಿದರು. ಶರಣರ ತತ್ವಗಳನ್ನು ನಾಟಕಗಳ ಮೂಲಕ ಪ್ರಸಾರಗೊಳಿಸಿ ಜನರಲ್ಲಿ ಅರಿವು ಮೂಡಿಸುವ ಈ ಕಾಯಕದ ಮೂಲ ಪ್ರೇರಕರು ಅವರ ಗುರುಗಳಾದ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳು. ಹಾಗಾಗಿಯೇ ಶ್ರೀ ಶಿವಕುಮಾರ ಕಲಾಸಂಘ, ಶಿವ ಸಂಚಾರ ಗಳು ಗುರುಗಳ ಹೆಸರಿನಲ್ಲಿಯೇ ಮೈದಾಳಿದವು. ಜೊತೆಗೆ ಪ್ರೊ. ಸಿಜಿಕೆಯವರ ಕನಸು, ಒಡನಾಟ ಸೇರಿಕೊಂಡು ಈ ಕಾರ್ಯಕ್ಕೆ ಮತ್ತಷ್ಟು ಹೊಳಪು ಮೂಡಿತು

. ಪ್ರತಿವರ್ಷ ಸಾಣೆಹಳ್ಳಿಯಲ್ಲಿ ರಾಷ್ಟ್ರೀಯ ನಾಟಕೋತ್ಸವಗಳನ್ನು ನಡೆಸುವ ಪಂಡಿತಾರಾಧ್ಯಸ್ವಾಮಿಗಳು ಅಷ್ಟಕ್ಕೇ ಸಂತೃಪ್ತಿ ಹೊಂದಿದವರಲ್ಲ. ಜನರ ಬಳಿಗೆ ತಮ್ಮ ಚಿಂತನೆಗಳು ಸಾಗಿ ನಡೆಯಬೇಕೆಂಬ ಸಂಕಲ್ಪದಿಂದ ಗುರುಗಳು ಶಿವ ಸಂಚಾರ ನಾಟಕೋತ್ಸವದ ಮೂಲಕ ನಾಡಿನ ಮೂಲೆ ಮೂಲೆಗಳನ್ನು ತಲುಪಿದವರು.ಕಳೆದ 26 ವರ್ಷಗಳಿಂದ ಅವರು ನೂರಾರು ಹೊಸ ಹೊಸ ನಾಟಕಗಳ ಮೂಲಕ ಸಾವಿರಾರು ಹಳ್ಳಿ ಪಟ್ಟಣಗಳನ್ನು ತಲುಪಿ ಲಕ್ಷಾಂತರ ಜನರಲ್ಲಿ ಅರಿವಿನ ದೀವಿಗೆಯನ್ನ ಹೊತ್ತಿಸಿದ್ದಾರೆ. ಯಾವುದೇ ತರತಮಗಳಿಗೆ ಆಸ್ಪದ ವಿಲ್ಲದೆ ತಮ್ಮ ಸತ್ಯ ಶುದ್ಧ ಕಾಯಕದ ಮೂಲಕ ನಾಡಿನಲ್ಲಿ ಮತ್ತೊಮ್ಮೆ ಕಲ್ಯಾಣ ಜ್ಯೋತಿಯನ್ನು ಬೆಳಗುವಂತಾಗಿದ್ದಾರೆ.

ಶಿವ ಸಂಚಾರ ನಾಟಕೋತ್ಸವ ತಂಡದಲ್ಲಿ ಇರುವ ಕಲಾವಿದರು ಎಲ್ಲರೂ ತಮ್ಮ ಅಪ್ರತಿಮ ಪ್ರತಿಭೆ , ಕಲಾ ಕೌಶಲ್ಯ, ಶರಣರ ಚಿಂತನೆಗಳ ಪ್ರಭಾವದಿಂದ ಪಾತ್ರಗಳನ್ನು ಮನೋಜ್ಞವಾಗಿ ಅಭಿನಯಿಸುತ್ತಾರೆ ಎನ್ನುವುದಕ್ಕಿಂತ ಅದರ ಪರಮ ಸುಖವನ್ನು ಅನುಭವಿಸುತ್ತಾರೆ ಎಂದೇ ಹೇಳಬಹುದು. ಹಾಗಾಗಿ ನಾಟಕಗಳಿಗೆ ಜೀವಕಳೆಯನ್ನು ತುಂಬುವ ಶಕ್ತಿ, ಸಾಮರ್ಥ್ಯ ಅವರೆಲ್ಲ ರಿಗಿದೆ .ಪಂಡಿತಾರಾಧ್ಯರ, ನಾಟಕ ರಚನೆಕಾರರ ,ನಿರ್ದೇಶಕರ ಆಶಯಗಳು ಏಕ ಪ್ರಕಾರವಾಗಿರುವ ಕಾರಣ ಸಾಹಿತ್ಯ, ಸಂಗೀತ, ಅಭಿನಯ ,ಮಾತು -ಮಂಥನ ಎಲ್ಲವೂ ಗಟ್ಟಿ ಚಿನ್ನದಂತೆ ಎರಕ ಹೊಯ್ದಿವೆ.

2024ರ ಶಿವ ಸಂಚಾರ ನಾಟಕೋತ್ಸವ ಪ್ರಮುಖವಾಗಿ ಮೂರು ನಾಟಕಗಳನ್ನು ಒಳಗೊಂಡಿದೆ .ಜಯಂತ್ ಕಾಯ್ಕಿಣಿಯವರ ಜೊತೆಗಿರುವನು ಚಂದಿರ ಕೆ .ಎಸ್ . ಸಾಳುಂಕೆ ವಿರಚಿತ ತಾಳಿಯ ತಕರಾರು ಡಾ.ನಟರಾಜ್ ಬೂದಾಳ್ ರಚನೆಯ ಕಲ್ಯಾಣದ ಬಾಗಿಲು ನಾಟಕಗಳು ಇವಾಗಿದ್ದು ಶ್ರೀ ಹುಲಿಗಪ್ಪ ಕಟ್ಟಿಮನಿ , ಮಾಲತೇಶ ಬಡಿಗೇರ ಮತ್ತು ಸಿ ಬಸವಲಿಂಗಪ್ಪನವರoತಹ ನುರಿತ ರಂಗ ತಜ್ಞರು ನಿರ್ದೇಶನ ಮಾಡುತ್ತಿದ್ದಾರೆ . ಪ್ರತಿ ಜಾಗದಲ್ಲಿ ಮೂರು ದಿನ ಸಂಜೆ ಪ್ರದರ್ಶನ ಗೊಳ್ಳುತ್ತಿದ್ದು ಎಲ್ಲ ವರ್ಗದ ಜನರ ಗಮನ ಸೆಳೆಯುತ್ತಿವೆ. ಶಿವ ಸಂಚಾರದ ತಂಡ ತಮ್ಮ ಊರು ಅಥವಾ ಹತ್ತಿರದ ಊರಿಗೆ ಬಂದಾಗ ನಾಟಕಗಳನ್ನು ನೋಡುವ ಅವಕಾಶವನ್ನು ತಪ್ಪಿಸಿಕೊಳ್ಳಬೇಡಿ. ಏಕೆಂದರೆ ಇವು ನಮ್ಮ ಅರಿವಿನ ಮಟ್ಟವನ್ನು ಎತ್ತರಿಸಬಲ್ಲವು ಎಂಬುದನ್ನು ಮಾತ್ರ ನಾನು ಹೇಳಬಲ್ಲೆ .

ಎನ್.ಟಿ. ಎರ್ರಿಸ್ವಾಮಿ ಹಿರಿಯ ಸಾಹಿತಿ ಹಾಗೂ
ನಿವೃತ್ತ ಕೆನರಾ ಬ್ಯಾಂಕ್ ಡಿ ಎಂ ಜಗಳೂರು , ದಾವಣಗೆರೆ ಜಿಲ್ಲೆ

Leave a Reply

Your email address will not be published. Required fields are marked *

You missed

error: Content is protected !!