ಪ್ರಕೃತಿ ವಿಕೋಪ ನಿರ್ವಹಣೆಗೆ ಮುಂಜಾಗ್ರತಾ ಕ್ರಮಕೈಗೊಳ್ಳಿ:ಶಾಸಕ.ಬಿ.ದೇವೇಂದ್ರಪ್ಪ ಅಧಿಕಾರಿಗಳಿಗೆ ಖಡಕ್ ಸೂಚನೆ.
ಜಗಳೂರು ಸುದ್ದಿ:’ತಾಲೂಕಿನಲ್ಲಿ ಅತಿವೃಷ್ಠಿಯಿಂದ ಎದುರಾಗುವ ಪ್ರಕೃತಿವಿಕೋಪ ನಿರ್ವಹಣೆಗೆ ಅಗತ್ಯ ಮುಂಜಾಗ್ರತಾ ಕ್ರಮಕೈಗೊಳ್ಳಿ’ ಎಂದು ಶಾಸಕ.ಬಿ.ದೇವೇಂದ್ರಪ್ಪ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.
ಶನಿವಾರ ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಕರೆದಿದ್ದ ತಾಲೂಕುಮಟ್ಟದ ಅನುಷ್ಠಾನ ಅಧಿಕಾರಿಗಳ ಸಮ್ಮುಖದಲ್ಲಿ ಪ್ರಥಮ ತ್ರೈಮಾಸಿಕಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
‘ಕಳೆದ ವರ್ಷ ಅನಾವೃಷ್ಠಿಯಿಂದ ಸಂಕಷ್ಟ ಅನುಭವಿಸಿದ್ದ ರೈತರಿಗೆ,ಪ್ರಸಕ್ತಸಾಲಿನಲ್ಲಿ ಅತಿವೃಷ್ಠಿಯಿಂದ ಕೆರೆ ಕಟ್ಟೆಗಳು ಮೈದುಂಬಿ ಹರಿಯುತ್ತಿರುವುದು ಹರ್ಷತಂದಿದೆ.ಮತ್ತೊಂದೆಡೆ ಜಲಾವೃತಗೊಂಡು ಬೆಳೆಹಾನಿ ಅನುಭವಿಸುತ್ತಿದ್ದು ವಿಳಂಬಮಾಡದೆ ಅರ್ಹ ರೈತರಿಗೆ ಸಕಾಲದಲ್ಲಿ ಸೂಕ್ತ ಪರಿಹಾರ ಒದಗಿಸಬೇಕು.ದಶಕಗಳ ಹಿಂದೆ ನಿರ್ಮಿಸಿದ ಬಹುತೇಕ ಶಾಲಾಕಟ್ಟಡಗಳು ಶಿಥಿಲಾವಸ್ಥೆಗೊಂಡಿದ್ದು ಶೈಕ್ಷಣಿಕ ಚಟುವಟಿಕೆಗಳಿಗೆ ತೊಂದರೆಯಾಗದಂತೆ ಶೀಘ್ರ ದುರಸ್ಥಿಗೊಳಿಸಲು ಮುಂದಾಗಬೇಕು’ಎಂದು ಸೂಚಿಸಿದರು.
ರಸ್ತೆ ವಿಸ್ತರಣೆಗೆ ವಿಳಂಬ ಸಲ್ಲದು:ರಸ್ತೆ ವಿಸ್ತರಣೆಗೆ ಶೀಘ್ರದಲ್ಲಿ ಕ್ರಮಕೈಗೊಂಡು,ಮಾರ್ಕಿಂಗ್,ಕಾಮಗಾರಿ ಟೆಂಡರ್ ಪ್ರಕ್ರಿಯೆ ಆರಂಭಿಸಬೇಕು. ರಸ್ತೆಅಗಲೀಕರಣಗೊಂಡಿದ್ದರೆ ಇತ್ತೀಚೆಗೆ ಪಟ್ಟಣದ ಮಧ್ಯಭಾಗದಲ್ಲಿ ನಡೆದ ಭೀಕರ ಅಪಘಾತ ತಪ್ಪಿಸಬಹುದಿತ್ತು.ಅಂತೆಯೇ ಹಳೇಯ ತಾಲೂಕು ಆಸ್ಪತ್ರೆ ಕಟ್ಟಡವನ್ನು ಕೂಡಲೇ ನೆಲಸಮಗೊಳಿಸಲು ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಲು ಲೋಕೋಪಯೋಗಿ ಇಲಾಖೆ ಎಇಇ ನಾಗರಾಜ್ ಅವರಿಗೆ ತಿಳಿಸಿದರು.
‘ತಾಲೂಕಿನ 27 ಸಹಕಾರ ಸಂಘಗಳ ಪ್ರಗತಿ ವರದಿಪಡೆದ ಅವರು, ಪಹಣಿದಾರರ ಹೆಸರಿನಲ್ಲಿ ಸಾಲಮಂಜೂರಾತಿ ₹3ಲಕ್ಷದವರೆಗೆ ನೀಡಿ,ಕೆಲ ಅಧಿಕಾರಿಗಳ ಮತ್ತು ಪ್ರಭಾವಿ ವ್ಯಕ್ತಿಗಳ ಕೈವಾಡದಿಂದ ಫಲಾನುಭವಿಗಳಿಗೆ ಕೇವಲ ₹50,000 ಹಣತಲುಪಿಸಿ ವಂಚಿಸಿರುವ ದೂರು ಕೇಳಿಬರುತ್ತಿವೆ.ನನ್ನ ಆಡಳಿತಾವಧಿಯಲ್ಲಿ ಯಾವುದೇ ಅವ್ಯವಹಾರಗಳು ನಡೆಯಬಾರದು,ಸಣ್ಣ ಹಿಡುವಳಿದಾರರಿಗೆ ಸಾಲಸೌಲಭ್ಯ ತಲುಪಬೇಕು.ಒಂದು ವೇಳೆ ಅವ್ಯವಹಾರ ನಡೆದಿದ್ದು ದಾಖಲೆಸಮೇತ ಕಂಡುಬಂದಲ್ಲಿ ಸೂಕ್ತ ಕಾನೂನು ಕ್ರಮಕೈಗೊಳ್ಳಲಾಗುವುದು ಎಂದು ಸಹಕಾರ ಇಲಾಖೆ ಅಧಿಕಾರಿ ಹರೀಶ್ ಅವರನ್ನು ತರಾಟೆಗೆ ತೆಗೆದುಕೊಂಡರು.
ಪಿಡಿಓ ಗಳಿಗೆ ಕ್ಲಾಸ್ ತೆಗೆದುಕೊಂಡ ಶಾಸಕ:’ತಾಲೂಕಿನಲ್ಲಿ ಪಿಡಿಓಗಳ ಕಾರ್ಯವೈಖರಿ ನಡಾವಳಿಕೆಗಳು ತೀವ್ರ ಬೇಸರತಂದಿದೆ.ಸಾರ್ವಜನಿಕರನ್ನು ಅಲೆದಾಡಿಸದೆ ಆತ್ಮಸಾಕ್ಷಿಯಿಂದ ಕರ್ತವ್ಯ ನಿರ್ವಹಿಸಬೇಕು.ಅನಗತ್ಯ ಚರ್ಚೆ ಬೇಡ ತಾಲೂಕಿನ ಅಭಿವೃದ್ದಿ ನಮ್ಮಗುರಿಯಾಗಲಿ.ಎಚ್ಚೆತ್ತುಕೊಂಡು ಕೆಲಸಮಾಡಿ’ ಎಂದು ಒಬ್ಬೊಬ್ಬರನ್ನು ಕ್ಲಾಸ್ ತೆಗೆದುಕೊಂಡರು.
‘ಸಣ್ಣನೀರಾವರಿ ಇಲಾಖೆಇಂಜಿನಿಯರ್ ರಾಘವೇಂದ್ರ,ಜಿಲ್ಲಾಪಂಚಾಯತ್ ಇಲಾಖೆ ಎಇಇ ಶಿವಮೂರ್ತಿ ಅವರಿಂದ ತಾಲೂಕಿನ ಕೆರೆಗಳ ಸಂಖ್ಯೆ ಮತ್ತು ಸ್ಥಿತಿಗತಿ ಮಾಹಿತಿ ಪಡೆದ ಅವರು,ಕೆರೆಗಳಲ್ಲಿ ಒತ್ತುವರಿ ತೆರವುಗೊಳಿಸಬೇಕು.ಹಳ್ಳಿಗಳಲ್ಲಿ ಜಮೀನುರಹಿತ ಬಡರೈತರು ಕೆರೆಗಳಲ್ಲಿ ಉಳುಮೆಮಾಡುತ್ತಿದ್ದು.ಕೆರೆಗಳಲ್ಲಿ ನೀರು ಸಂಗ್ರಹವಾದರೆ ಬಿತ್ತನೆಬೀಜ,ರಸಗೊಬ್ಬರ ಖರ್ಚು ವೆಚ್ಚ,ವ್ಯರ್ಥವಾಗುತ್ತದೆ.ಬೆಳೆ ಕಟಾವುಮಾಡುವಾಗ ಪ್ರಾಣಹಾನಿಯಾದರೆ ಯಾರು ಹೊಣೆ? ಎಂದು ಅಧಿಕಾರಿಗಳಿಗೆ ಪ್ರಶ್ನಿಸಿದರು.
‘ತಾಲೂಕಿನ ಮೂಡಲಮಾಚಿಕೆರೆ ಸಿದ್ದಿಹಳ್ಳಿ ಮಾರ್ಗಮಧ್ಯೆ ನಿರ್ಮಾಣಗೊಂಡಿರುವ ₹4 ಕೋಟಿ ವೆಚ್ಚದ ಬ್ರಿಡ್ಜ್ ಕಂ ಬ್ಯಾರೇಜ್,ಚೆಕ್ ಡ್ಯಾಂ ಬಳಿ ನೀರು ಸಂಗ್ರಹವಾಗುತ್ತಿಲ್ಲ ಎಂದು ಗ್ರಾಮಸ್ಥರು ದೂರು ನೀಡಿದ್ದಾರೆ.ಡಿಸೈನ್ ಗಿಂತ 2.5 ಅಡಿ ಎತ್ತರದಷ್ಟು ಹೆಚ್ಚುವರಿ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಸಣ್ಣನೀರಾವರಿ ಇಲಾಖೆ ಇಂಜಿನಿಯರ್ ಗೆ ತಿಳಿಸಿದರು.
ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ಶ್ವೇತಾ ಮಾತನಾಡಿ,’ಪ್ರಸಕ್ತಸಾಲಿನಲ್ಲಿ 558 ಮಿ.ಮೀ ಮಳೆಯಾಗಿದ್ದು.ವಾಡಿಕೆಗಿಂತ ಅಧಿಕಪ್ರಮಾಣ ಮಳೆಯಾಗಿದೆ.ಅತಿವೃಷ್ಠಿಯಿಂದ 3ಹೆಕ್ಟರ್ ಪ್ರದೇಶದಲ್ಲಿ ಹಾನಿಗೊಳಗಾದ ಮೆಕ್ಕೆಜೋಳ,ಸೂರ್ಯಕಾಂತಿ,ಬೆಳೆಗಳಿಗೆ ಪರಿಹಾರಕ್ಕೆ ವರದಿಸಲ್ಲಿಸಲಾಗಿದೆ.ಸೆಪ್ಟೆಂಬರ್ ಮಾಹೆಯಲ್ಲಿ ಹಿಂಗಾರು ಕಡಲೇ ಬಿತ್ತನೆ ಬೀಜಪೂರೈಕೆಗೆ ಸರ್ಕಾರದಮಟ್ಟದಲ್ಲಿ ಟೆಂಡರ್ ಪ್ರಕ್ರಿಯೆ ಹಂತದಲ್ಲಿದೆ ಎಂದು ಮಾಹಿತಿ ನೀಡಿದರು.
‘ತಾಲೂಕಿನಲ್ಲಿ 9470 ಹೆಕ್ಟರ್ ಪ್ರದೇಶದಲ್ಲಿ ತೋಟಗಾರಿಕೆ ಬೆಳೆಗಳ ಬಿತ್ತನೆಕಾರ್ಯನಡೆದಿದ್ದು.ಮುಂಗಾರಿನಲ್ಲಿ ಪ್ರಮುಖಬೆಳೆ ಈರುಳ್ಳಿ 950 ಹೆಕ್ಟರ್ ಮತ್ತು ಹಿಂಗಾರು ಬೆಳೆ 1500 ಹೆಕ್ಟರ್ ಪ್ರದೇಶದಲ್ಲಿ ಈರುಳ್ಳಿ ಬಿತ್ತನೆಮಾಡಲಾಗಿದೆ.ಅತಿವೃಷ್ಠಿಗೆ ಹಾನಿಗೊಳಗಾದ ಈರುಳ್ಳಿ ಬೆಳೆಗಾರರಿಗೆ ಎನ್ ಡಿ ಆರ್ ಎಫ್ ನಡಿ ಪರಿಹಾರ ಸಿಗಲಿದೆ’ಎಂದು ತೋಟಗಾರಿಕೆ ಸಹಾಯಕನಿರ್ದೇಶಕ ಪ್ರಭುಶಂಕರ್ ಮಾಹಿತಿ ನೀಡಿದರು.
ತಹಶೀಲ್ದಾರ್ ಸಯ್ಯದ್ ಕಲೀಂ ಉಲ್ಲಾ ಮಾತನಾಡಿ,’ವಿವಿಧ ಇಲಾಖೆಗಳ ವ್ಯಾಪ್ತಿಯಲ್ಲಿನ ಸರ್ಕಾರಿ ಜಮೀನುಗಳನ್ನು ತಾವೇ ಅದ್ದುಬಸ್ತು ಮಾಡಿಕೊಳ್ಳಬೇಕು.ಚಿಕ್ಕಪುಟ್ಟ ಸಮಸ್ಯೆಗಳನ್ನು ತಹಶೀಲ್ದಾರ್ ಕಡೆ ಬೆರಳಿಟ್ಟು ತೋರಿಸಿ ರೈತರನ್ನು ವಿನಾಕಾರಣ ಅಲೆದಾಡಿಸಬೇಡಿ’ಎಂದು ಹೇಳಿದರು.
ಇದೇವೇಳೆ ಸಮಾಜಕಲ್ಯಾಣ ಇಲಾಖೆ,ಮೀನುಗಾರಿಕೆ ಇಲಾಖೆ,ಸಿಡಿಪಿಓ,ಬಿಇಓ,ಪಶು ಪಾಲನಾ ಮತ್ತು ವೈದ್ಯಕೀಯ ಚಿಕಿತ್ಸೆ,ಟಿಎಚ್ ಓ,ಇಲಾಖೆಗಳ ಪ್ರಗತಿ ವರದಿ ಯನ್ನು ಅಧಿಕಾರಿಗಳು ಮಂಡಿಸಿದರು.
ಸಂದರ್ಭದಲ್ಲಿ ಜಿಲ್ಲಾ ಉಪನಿರ್ದೇಶಕ ಕೊಟ್ರೇಶ್,ತಾ.ಪಂ.ಇಓ ಕೆಂಚಪ್ಪ,ಮುಖಂಡ ಪಲ್ಲಾಗಟ್ಟೆ ಶೇಖರಪ್ಪ,ಬಿ.ಮಹೇಶ್ವರಪ್ಪ,ಮಧುಕುಮಾರ್,ಸಿಡಿಪಿಓ ಬೀರೇಂದ್ರಕುಮಾರ್,ಬಿಇಓ ಹಾಲಮೂರ್ತಿ,ಅರಣ್ಯ ಇಲಾಖೆ ಅಧಿಕಾರಿಗಳಾದ ಶ್ರೀನಿವಾಸ್,ಜ್ಯೋತಿ,ಮಹೇಶ್ವರಪ್ಪ,ಬೆಸ್ಕಾಂ ಎಇಇ ಸುಧಾಮಣಿ,ಸೇರಿದಂತೆ ಅನುಷ್ಠಾನ ಅಧಿಕಾರಿಗಳು ಇದ್ದರು.