ಗೌರಿ ಲಂಕೇಶ್ ಕೊಲೆ ಆರೋಪಿ ನವೀನ್ ಕುಮಾರ್‌ನನ್ನು ಭೇಟಿಯಾದ ಪ್ರತಾಪ್ ಸಿಂಹ

August 13, 2024

ಹಿರಿಯ ಪತ್ರಕರ್ತೆ ದಿವಂಗತ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ನವೀನ್ ಕುಮಾರ್ ನನ್ನು ಮಾಜಿ ಬಿಜೆಪಿ ಸಂಸದ ಪ್ರತಾಪ್ ಸಿಂಹ ಭೇಟಿಯಾಗಿದ್ದು, ಅದನ್ನು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಪೋಸ್ಟ್‌ ಮಾಡಿದ್ದಾರೆ.

ಗೌರಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಹೈಕೋರ್ಟ್ ಏಕಸದಸ್ಯ ಪೀಠವು ಆರೋಪಿಗಳಾದ ನವೀನ್ ಕುಮಾರ್, ಅಮಿತ್, ಎಚ್ಎಲ್ ಸುರೇಶ್ ಅವರಿಗೆ ಜುಲೈ 16ರಂದು ಜಾಮೀನು ನೀಡಿತ್ತು. ನಿನ್ನೆ ಪ್ರತಾಪ್ ಸಿಂಹ ಅವರು ಕೊಲೆ‌ ಆರೋಪಿ ನವೀನ್ ಕುಮಾರ್ ಅವರನ್ನು ಭೇಟಿಯಾಗಿದ್ದಾರೆ.

ಈ ಬಗ್ಗೆ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿರುವ ಪ್ರತಾಪ್, “ಗೌರಿ ಲಂಕೇಶ್ ಕೊಲೆ ಪ್ರಕರಣದಲ್ಲಿ ಮೊದಲಿಗೆ ಆರೋಪಿ ನಂ-1 ಆಗಿ, ನಂತರ ಎ-17 ಆಗಿ, ಆರೂವರೆ ವರ್ಷ ಜೈಲಿನಲ್ಲಿದ್ದು ಇತ್ತೀಚೆಗೆ ಜಾಮೀನಿನ ಹೊರಬಂದಿರುವ ಸ್ನೇಹಿತ ಮದ್ದೂರು ನವೀನ್ ರನ್ನು ಭೇಟಿಯಾಗಿ ಅರೋಗ್ಯ ವಿಚಾರಿಸಿದೆ. ಮದ್ದೂರಿನ ಯುವ ಸ್ನೇಹಿತರೂ ಜತೆಗಿದ್ದರು” ಎಂದು ಬರೆದುಕೊಂಡಿದ್ದಾರೆ.

ಮೈಸೂರು ಕೊಡಗು ಟಿಕೆಟ್ ಕೈತಪ್ಪಿದ ಬಳಿಕ ಜನರ ಜೊತೆ ನಿಲ್ಲುತ್ತೇನೆ ಎಂದು ಬಾಯಿ ಮಾತಿಗೆ ಹೇಳಿಕೊಂಡು ದಾರಿ ತಪ್ಪಿರುವ ಮಾಜಿ ಸಂಸದ ಪ್ರತಾಪ್ ಸಿಂಹ, ಈಗ ಕೊಲೆ ಆರೋಪಿಗಳು ಮತ್ತು ಹಿಂದುತ್ವದ ಹೆಸರಿನಲ್ಲಿ ಅಶಾಂತಿ ಸೃಷ್ಟಿಸುತ್ತಿರುವ ಪುನಿತ್ ಕೆರೆಹಳ್ಳಿ, ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿಗಳ ಬೆಂಬಲಕ್ಕೆ ನಿಂತು ಸದಾ ಸುದ್ದಿಯಲ್ಲಿದ್ದಾರೆ.

ಈ ಪೋಸ್ಟ್ ಮಾಡಿದ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಪ್ರತಾಪ್ ಸಿಂಹನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

Leave a Reply

Your email address will not be published. Required fields are marked *

You missed

error: Content is protected !!