ಭಾರತದ ವೈಚಾರಿಕತೆ ಮೌಢ್ಯತೆಯೊಂದಿಗೆ ಎಂದಿಗೂ ರಾಜಿಯಾಗಿಲ್ಲ – ಡಾ.ಕೆ.ಎ.ಓಬಳೇಶ್
ದಾವಣಗೆರೆ (ಹರಿಹರ )ಸೆ-೭,
ಹರಿಹರ ಹೊರ ವಲಯ ಮೈತ್ರಿವನದಲ್ಲಿ ಸತೀಶ್ ಜಾರಕಿಹೊಳಿ ಫೌಂಡೇಶನ್ ವತಿಯಿಂದ ಆಯೋಜಿಸಿದ್ಧ ಗ್ರಾಮ ಲೆಕ್ಕಿಗರ ಪರೀಕ್ಷಾ ತರಬೇತಿ ಕಾರ್ಯಗಾರದ ಶಿಬಿರಾರ್ಥಿಗಳನ್ನು ಉದ್ದೇಶಿ ಮಾತನಾಡಿದ ಡಾ.ಕೆ.ಎ.ಓಬಳೇಶ್ ಅವರು ಭಾರತದ ಚರಿತ್ರೆಯಲ್ಲಿ ವೈಚಾರಿಕೆತೆಯೂ ಎಂದಿಗೂ ಮೌಢ್ಯತೆಯೊಂದಿಗೆ ರಾಜಿಯಾಗಿರುವ ನಿದರ್ಶನವಿಲ್ಲ ಎಂಬುದಾಗಿ ತಿಳಿಸಿದರು.


ಭಾರತದ ಮೂಲ ನಿವಾಸಿಗಳನ್ನು ಆರ್ಯನ್ನರು ದಮನಕ್ಕೆ ಒಳಪಡಿಸಿ ಅವರ ಶಿಕ್ಷಣದ ಹಕ್ಕನ್ನು ಕಸಿದುಕೊಂಡಿದ್ದರು ಇಲ್ಲಿನ ನೆಲಮೂಲ ವಾಸಿಗಳು ತಮ್ಮ ಅನುಭಾವಿಕ ವಿದ್ವತ್ತಿನ ಮೂಲಕ ಪುರಾಣ ಕಾಲದಿಂದಲೂ ವೈಚಾರಿಕ ಚಿಂತನೆಗಳನ್ನು ಪ್ರತಿಪಾದಿಸುತ್ತ ಬಂದಿದ್ದು, ವೈದಿಕ ನೆಲೆಯ ಮೌಢ್ಯತೆಗಳಿಗೆ ಪ್ರತಿರೋಧ ವ್ಯಕ್ತಪಡಿಸುತ್ತ ಬಂದಿದ್ದಾರೆ. ಡಾ. ಓಬಳೇಶ್

ರಾಮಾಯಣ ಕಾಲದಲ್ಲಿಯೇ ಶೂರ್ಪನಖಿ ತನ್ನ ಜೀವಪರ ಚಿಂತನೆಗಳ ಮೂಲಕ ಯಜ್ಞ ಯಾಗಗಳ ಮೂಲಕ ದಟ್ಟವಾದ ಅರಣ್ಯಗಳಿಗೆ ಬೆಂಕಿ ಹಚ್ಚಿ ಇಂದ್ರನಿಗೆ ಅವಿಸ್ಸು ಕೊಡುವ ಕ್ರಮವನ್ನು ತೀವ್ರವಾಗಿ ಪ್ರತಿಭಟಿಸಿ, ಪ್ರಕೃತಿ ರಕ್ಷಣೆಗೆ ಮುಂದಾದ ಕಾರಣ ಅವಳನ್ನು ಪುರೋಹಿತಶಾಹಿ ವ್ಯವಸ್ಥೆ ರಾಮನ ಪರಂಪರೆಯ ಮೂಲಕ ವಿರೂಪಗೊಳಿಸಿ ರಾಕ್ಷಸಿಯನ್ನಾಗಿ ಬಿಂಬಿಸಿಕೊಂಡು ಬಂದಿದೆ. ಹೀಗಾಗಿ ರಾಮಾಯಣ ಕಾಲದಲ್ಲಿಯೇ ಆರ್ಯರಿಗೂ ಮತ್ತು ದ್ರಾವಿಡರಿಗೆ ವೈಚಾರಿಕತೆ ಮತ್ತು ಮೌಢ್ಯತೆಯ ಸಂಘರ್ಷ ನಡೆದುಕೊಂಡು ಬಂದಿದೆ.


ಬುದ್ಧ ಕ್ರಿ.ಪೂ ಆರನೇ ಶತಮಾನದಲ್ಲಿಯೇ ತನ್ನ ವೈಚಾರಿಕ ಚಿಂತನೆಗಳ ಮೂಲಕ ಜಗತ್ತಿನ ಜ್ಞಾನ ತೆರೆಸಿದ ಶ್ರೇಷ್ಠ ಜ್ಞಾನಿಯಾಗಿದ್ದಾನೆ. ಬುದ್ಧಗುರುವಿನ ವಿಚಾರಗಳು ಜಗತ್ತಿನ ಹಲವು ಧರ್ಮಗಳ ಮೂಲಪುರುಷರಿಗೆ ಪ್ರೇರಣೆ ನೀಡಿವೆ. ಹೀಗಾಗಿ ಜಗತ್ತಿಗೆ ವೈಚಾರಿಕತೆಯನ್ನು ಧಾರೆ ಎರೆದ ಕೀರ್ತಿ ಭಾರತದ ನೆಲಕ್ಕೆ ಸಲ್ಲುತ್ತದೆ.
ಬುದ್ಧ ಗುರುವಿನ ತರುವಾಯ ಭಾರತದಲ್ಲಿ ವೈಚಾರಿಕೆತಯು ನಿರಂತರವಾಗಿ ವೈದಿಕರು ಬಿತ್ತಿದ ಮೌಢ್ಯತೆಯೊಂದಿಗೆ ಸಂಘರ್ಷ ನಡೆಸುತ್ತ ಬಂದಿದ್ದು ಹಲವಾರು ಸಾಮಾಜಿಕ ಹೋರಾಟಗಳಿಗೆ ಪ್ರೇರಣೆ ನೀಡಿದೆ. ಕನ್ನಡ ನೆಲದಲ್ಲಿ ವೈಚಾರಿಕತೆಯು ವಿಭಿನ್ನ ಸಾಂಸ್ಕೃತಿಕ ಚಳವಳಿಗೂ ಕಾರಣವಾಗಿದೆ.
೧೦ನೇ ಶತಮಾನದಲ್ಲಿ ಮಹಾಕವಿ ಪಂಪ ‘ಮಾನವ ಜಾತಿ ತಾನೊಂದೆ ವಲಂ’ ಎಂಬುದಾಗಿ ತನ್ನ ವೈಚಾರಿಕತೆಯನ್ನು ಪ್ರತಿಪಾದಿಸಿದರೆ, ನಂತರ ೧೨ ನೇ ಶತಮಾನದಲ್ಲಿ ಬಸವಾದಿ ಪ್ರಮಥರ ನೇತೃತ್ವದಲ್ಲಿ ಪ್ರಾರಂಭವಾದ ಶರಣ ಚಳುವಳಿಯು ಮೌಢ್ಯತೆಗೆ ದೊಡ್ಡ ಪೆಟ್ಟು ನೀಡಿತು. ನಂತರ ದಾಸರು ವೈಚಾರಿಕತೆಯನ್ನು ಮನೆ ಮನೆಗಳಿಗೆ ತಲುಪಿಸಿದರೆ, ೧೬ನೇ ಶತಮಾನದ ವೇಳೆಗೆ ಉತ್ತರ ಕರ್ನಾಟಕದಲ್ಲಿ ಪಂಚಗಣಾಧೀಶರು, ದಕ್ಷಿಣ ಕರ್ನಾಟಕ ಭಾಗದಲ್ಲಿ ಮಲೆಮಾದಪ್ಪ ಮತ್ತು ಮಂಟೆಸ್ವಾಮಿ ಬಸವಾದಿ ಪ್ರಮಥರ ವೈಚಾರಿಕ ಚಿಂತನೆಗಳನ್ನು ಪುನರುಜ್ಜೀವನಗೊಳಿಸುವಲ್ಲಿ ಅವಿರತ ಶ್ರಮಿಸಿದ್ದಾರೆ. ನಂತರ ಈ ಪರಂಪರೆಯನ್ನು ತತ್ವಪದಕಾರರು ಜನಮಾನಸದಲ್ಲಿ ಬಿತ್ತಿ, ಮೌಢ್ಯತೆಗೆ ಪ್ರತಿರೋಧ ವ್ಯಕ್ತಪಡಿಸಿದ್ದಾರೆ.


ಬ್ರಿಟಿಷರ ಆಗಮನದಿಂದ ಜನಸಾಮಾನ್ಯರಿಗೆ ಸಿಕ್ಕ ಶಿಕ್ಷಣದ ಕಾರಣದಿಂದ ಫುಲೆ, ವಿವೇಕಾನಂದ, ಪೆರಿಯಾರ್, ಅಂಬೇಡ್ಕರ್ ಅಂತವರಿಗೆ ಶಿಕ್ಷಣದ ಕಾರಣ ವೈಚಾರಿಕ ಕ್ರಾಂತಿಯನ್ನೆ ಸೃಷ್ಟಿಸಿದ್ದಾರೆ. ಇವರ ವಿಚಾರಗಳು ಸರ್ವಕಾಲಿಕ ಸತ್ಯವಾದವುಗಳಾಗಿವೆ.
ಕನ್ನಡ ನೆಲದಲ್ಲಿ ಆಧುನಿಕ‌ ಕಾಲದಲ್ಲಿ ಕುಂವೆಂಪು ಅವರ ವಿಶ್ವಮಾನವ ಚಿಂತನೆಯಿಂದ ಆರಂಭಗೊಂಡು ದೇವನೂರು ಮಹಾದೇವ ಅವರ ‘ಸಂಬಂಜ ಅನ್ನೋದು ದೊಡ್ಡದು’ ಎನ್ನುವ ಜೀವಪರ ಚಿಂತನೆಗಳು‌ ಮಾನವ ಸಂಬಂಧವನ್ನು ವೈಚಾರಿಕ ನೆಲೆಯಲ್ಲಿ ಪ್ರತಿಪಾದಿಸುವ ಮೂಲಕ ಹಲವಾರು ವೈಚಾರಿಕ‌ ಚಿಂತನೆಗಳಿಗೆ ಪ್ರೇರಣೆಯಾಗಿವೆ ಎಂಬುದಾಗಿ ತಮ್ಮ ವಿಚಾರಗಳನ್ನು ಹಂಚಿಕೊಂಡರು.
ಉಪನ್ಯಾಸದ ನಂತರ ಶಿಬಿರಾರ್ಥಿಗಳೊಂದಿಗೆ ಸಂವಾದ ನಡೆಸಿ, ಶಿಬಿರಾರ್ಥಿಗಳ ಪ್ರಶ್ನೆಗಳಿಗೆ ಉತ್ತರಿಸಿದರು. ಕಾರ್ಯಕ್ರಮದಲ್ಲಿ ಶಿಬಿರದ ಸಂಚಾಲಕರಾದ ಅಂಜಿನಪ್ಪ ಲೋಕಿಕರೆ, ಅತಿಥಿಗಳಾದ ಪುರಂದರ್ ಲೋಕಿಕೆರೆ, ಹಾಲೇಶ್, ಹೊನ್ನಪ್ಪ ಹಾಜರಿದ್ದರು.

Leave a Reply

Your email address will not be published. Required fields are marked *

You missed

error: Content is protected !!