Editor m rajappa vyasagondanahalli

By shukradeshenews Kannada | online news portal |Kannada news online   

By shukradeshenews | published on may 10

ಬಸವಣ್ಣನ ತತ್ವ ಸದಾ ಪ್ರಸ್ತುತ

ವಿಷಮುಕ್ತ ಸಮಾಜ ನಿರ್ಮಾಣಕ್ಕೆ ಔಷಧ

ಬಸವ ಪರಿಕಲ್ಪನೆಯೇ ಗ್ಯಾರಂಟಿ ಯೋಜನೆ ಜಾರಿ

ಸಂಸತ್ತಿಗೆ ಅನುಭವ ಮಂಟಪವೇ ಬುನಾದಿ

ಮಾಜಿ ಸಚಿವ ಎಚ್.ಆಂಜನೇಯ ಅಭಿಮತ

ಚಿತ್ರದುರ್ಗ, ಮೇ 10
ಪ್ರಸ್ತುತ ರಾಜಕೀಯ ಕಾರಣಕ್ಕಾಗಿ ಜಾತಿ, ಧರ್ಮಗಳ ಮಧ್ಯೆ ವಿಷ ಬೀಜ ಬಿತ್ತುವ, ದ್ವೇಷದ, ಸುಳ್ಳು ಭಾಷಣಗಳ ಪ್ರಭಾವಕ್ಕೆ ಸಂಪೂರ್ಣ ಕಡಿವಾಣ ಹಾಕಲು ಬಸವ ತತ್ತತ್ವೇ ಬ್ರಹ್ಮಾಸ್ತ್ರ ಆಗಿದೆ ಎಂದು ಮಾಜಿ ಸಚಿವ ಎಚ್.ಆಂಜನೇಯ ಹೇಳಿದರು.
ಸೀಬಾರದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಬಸವ ಜಯಂತ್ಯುತ್ವವದಲ್ಲಿ ಬಸವಣ್ಣನ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಅವರು, 12ನೇ ಶತಮಾನದಲ್ಲಿಯೇ ಮುಂದಿನ ದಿನಗಳಲ್ಲಿ ನಾಡು ಎದುರಿಸುವ ಸಮಸ್ಯೆಗಳಿಗೆ ವಚನಗಳ ಮೂಲಕ ಸಂದೇಶ ನೀಡಿದ ಬಸವಣ್ಣ, ಈಗಿನ ಸಂಸತ್ತು ಸ್ಥಾಪನೆಗೆ ಅವರ ಅನುಭವ ಮಂಟಪವೇ ಬುನಾದಿ ಆಗಿದೆ ಎಂದರು.

ನೊಂದ ಜನರ ಕಣ್ಣೀರು ಹೊರೆಸಿದ ಬಸವಣ್ಣ, ಅಸ್ಪೃಶ್ಯತೆ, ಮೌಢ್ಯಾಚರಣೆ, ಅಸಮಾನತೆ ವಿರುದ್ಧ ಹೋರಾಟ ನಡೆಸಿದ ಫಲ ಇಂದು ಎಲ್ಲ ವರ್ಗದ ಜನ ವಿವಿಧ ಕ್ಷೇತ್ರದಲ್ಲಿ ಸ್ಥಾನಮಾನ ಪಡೆದು, ಬದುಕು ಕಟ್ಟಿಕೊಳ್ಳಲು ಸಾಧ್ಯವಾಗಿದೆ ಎಂದು ಹೇಳಿದರು.

ಬಸವ ಚಿಂತನೆಗಳು ಪ್ರಸ್ತುತ ಸಮಾಜಕ್ಕೆ ತುರ್ತು ಚಿಕಿತ್ಸೆ ರೀತಿ ಅಗತ್ಯವಿದ್ದು, ಅದರ ಪಾಲನೆ ನಮ್ಮೆಲ್ಲರ ಹೊಣೆ ಆಗಿದೆ. ಬಸವಾದಿ ಶರಣರ ತತ್ತ್ವಗಳು ಸದಾ ಪ್ರಸ್ತುತವಾಗಿದ್ದು ಅವುಗಳನ್ನು ಪಾಲನೆ ಮಾಡಿದರೆ ಸಮಸಮಾಜ ನಿರ್ಮಾಣದ ಹಾದಿ ಸುಲಭವಾಗಲಿದೆ ಎಂದರು.

ಬಸವ ಅನುಯಾಯಿಗಳು ಎಂದು ಹೇಳಿಕೊಂಡು ವರ್ಷಕ್ಕೊಮ್ಮೆ ಜಯಂತಿ ಆಚರಣೆ ಮಾಡುವ ನಾವುಗಳು ಕಾಯಕ ತತ್ವ ಮರೆತಿದ್ದೇವೆ. ಜನಸೇವೆ, ನೊಂದ ಜನರಿಗೆ ಸ್ಪಂದಿಸುವ ಮೂಲಕ ದೇವರನ್ನು ಕಾಣುವುದನ್ನೇ ಮರೆತಿದ್ದೇವೆ. ದ್ವೇಷದ ಮಾತುಗಳಿಗೆ ಕಿವಿಕೊಟ್ಟು ಮನಸ್ಸನ್ನು ಕಲುಷಿತಗೊಳಿಸಿಕೊಳ್ಳುತ್ತಿದ್ದೇವೆ ಎಂದು ಬೇಸರಿಸಿದರು.

ಹಳ್ಳಿಗಳಲ್ಲಿ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಮಸೀದಿ, ಮಂದಿರ, ಚರ್ಚ್ ನಿರ್ಮಿಸುವ ನಾವು, ನಮ್ಮದೇ ಊರಿನ, ನಮ್ಮ ಮನೆಯ ಮುಗ್ಧ ಮಕ್ಕಳ ಶಿಕ್ಷಣಕ್ಕೆ ಶಾಲೆ, ನೊಂದ ಜನರಿಗೆ ಆಶ್ರಯ ಕಲ್ಪಿಸುವಲ್ಲಿ ನಿರ್ಲಕ್ಷ್ಯ ವಹಿಸಿದ್ದೇವೆ. ಈ ನಿಟ್ಟಿನಲ್ಲಿ ಬಸವ ಅನುಯಾಯಿಗಳಾದ ನಾವು ಆತ್ಮವಿಮರ್ಶೆ ಮಾಡಿಕೊಳ್ಳಬೇಕಿದೆ ಎಂದರು.

ನನ್ನ ದೇಹವೇ ದೇಗುಲ ಎಂಬ ವಚನದ ಸಾರ ಅರಿತು ಜನಸೇವೆಯಲ್ಲಿ ದೇವರನ್ನು ಕಾಣುವ ಗುಣ ಬೆಳೆಸಿಕೊಳ್ಳಬೇಕಿದೆ. ನಾನು ಕೂಡ ಗುಡಿ-ಗುಂಡಾರ ಸುತ್ತದೇ ನನ್ನ ಬಳಿ ಬರುವ ಜನರ ಸಂಕಷ್ಟಕ್ಕೆ ಸ್ಪಂದಿಸುವ ಮೂಲಕ ದೇವರನ್ನು ಕಾಣುತ್ತಿರುವೆ ಎಂದು ಹೇಳಿದರು.


ಬಸವಣ್ಣನ ಚಿಂತನೆಯ ಪರಿಕಲ್ಪನೆಯೇ ಗ್ಯಾರಂಟಿ ಯೋಜನೆ: ಸಮ ಸಮಾಜ ನಿರ್ಮಾಣ, ನೊಂದ ಜನರ ಸಂಕಷ್ಟಕ್ಕೆ ಸ್ಪಂದಿಸುವ ಮೂಲ ಉದ್ದೇಶವೇ ಕಾಂಗ್ರೆಸ್ ಸರ್ಕಾರ ಪಂಚ ಗ್ಯಾರಂಟಿ ಯೋಜನೆ ಜಾರಿ ಮಾಡಿರುವುದು. ಇದು ಬಸವತತ್ವದ ಪರಿಕಲ್ಪನೆಯೇ ಆಗಿದೆ ಎಂದು ಮಾಜಿ ಸಚಿವ ಎಚ್.ಆಂಜನೇಯ ಹೇಳಿದರು.

ಈ ಐದು ಯೋಜನೆಗಳು ಮಹಿಳೆ, ಯುವ ಪೀಳಿಗೆ, ಬಡ ಜನರನ್ನು ಮುಖ್ಯವಾಹಿನಿಗೆ ತರುವ ಗುರಿ ಹೊಂದಲಾಗಿದೆ. ಈ ಯೋಜನೆಗಳನ್ನು ಟೀಕಿಸುವವರು ಬಸವಣ್ಣನ ಚಿಂತನೆಯ ವಿರೋಧಿಗಳು ಎಂದು ತಿಳಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಬಸವಣ್ಣನ ಆಶಯದಂತೆ ಆಡಳಿತ ನಡೆಸುತ್ತಿದೆ. ಬಸವಣ್ಣನನ್ನು ಸಾಂಸ್ಕೃತಿಕ ನಾಯಕನೆಂದು ಘೋಷಿಸುವ ಮೂಲಕ ತನ್ನ ಬದ್ಧತೆ ಪ್ರದರ್ಶಿಸಿದೆ ಎಂದರು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಿ.ಪಿ.ಪ್ರಕಾಶಮೂರ್ತಿ, ಅಂಬೇಡ್ಕರ್ ವಿದ್ಯಾರ್ಥಿ ಪರಿಷತ್ತಿನ ಅಧ್ಯಕ್ಷ ಬಿ.ಪಿ.ತಿಪ್ಪೇಸ್ವಾಮಿ, ಕಾಂಗ್ರೆಸ್ ಎಸ್ಸಿ ಘಟಕದ ತಾಲೂಕು ಅಧ್ಯಕ್ಷ ಅನಿಲ್ ಕೋಟಿ, ಮುಖಂಡರಾದ ಎಲ್.ಐ.ಸಿ ಈರಣ್ಣಯ್ಯ, ರವಿ ಬಿ.ಜಿ.ಹಳ್ಳಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

You missed

error: Content is protected !!