ದಾವಣಗೆರೆ | ದುಬೈ ಪ್ರವಾಸಕ್ಕೆ ತೆರಳಿ ಇರಾನ್ ಯುದ್ಧದಲ್ಲಿ ಸಿಲುಕಿದ ಜಗಳೂರು ಪ್ರವಾಸಿಗರು ಬೆಂಗಳೂರಿಗೆ

ದುಬೈ ಪ್ರವಾಸಕ್ಕೆಂದು ತೆರಳಿ, ಇರಾನ್ ಮತ್ತು ಅಮೆರಿಕ, ಇಸ್ರೇಲ್ ಯುದ್ಧ ಪ್ರಾರಂಭವಾದ ನಂತರ ಸ್ವದೇಶಕ್ಕೆ ಹಿಂದಿರುಗದೇ ಸಿಲುಕಿ ಅತಂತ್ರರಾಗಿದ್ದ, ದಾವಣಗೆರೆ ಜಿಲ್ಲೆ ಜಗಳೂರು ತಾಲೂಕಿನ ಹಲವು ಗ್ರಾಮ ಮತ್ತು ನಗರಗಳ ನಾಗರಿಕರು ಸ್ಥಳೀಯ ಶಾಸಕರು ಮತ್ತು ಸರ್ಕಾರದ ನೆರವಿನಿಂದ ಸುರಕ್ಷಿತವಾಗಿ ಬೆಂಗಳೂರಿಗೆ ಬಂದಿಳಿದಿದ್ದಾರೆ.

ಕಳೆದ ತಿಂಗಳು ದುಬೈ ಪ್ರವಾಸಕ್ಕೆಂದು ಜಗಳೂರಿನ ರುದ್ರಮುನಿ, ಚಂದ್ರಶೇಖರ್, ಲೋಕೇಶ್ ಮತ್ತು ಕುಟುಂಬದವರು ಸೇರಿದಂತೆ ಸುಮಾರು 15 ಜನ ತೆರಳಿದ್ದರು. ಏಕಾಏಕಿ ಇಸ್ರೇಲ್, ಅಮೆರಿಕ ಮತ್ತು ಇರಾನ್ ನಡುವೆ ಸಂಘರ್ಷ ಏರ್ಪಟ್ಟ ಹಿನ್ನೆಲೆಯಲ್ಲಿ ಹಾಗೂ ಯುದ್ಧದ ವಾತಾವರಣ ಮತ್ತು ದಾಳಿಗಳು ದುಬೈ, ಸೌದಿ ಸೇರಿದಂತೆ ಮಧ್ಯಪ್ರಾಚ್ಯಕ್ಕೆ ಹರಡಿದ್ದರಿಂದ ವಿಮಾನ ಸೇವೆ ಸ್ಥಗಿತಗೊಂಡಿತ್ತು. ವಾಪಸ್ ಭಾರತಕ್ಕೆ ಹಿಂದಿರುಗಲಾರದೆ ಸಿಲುಕಿಕೊಂಡಿದ್ದರು.

ತಾಲೂಕಿನ ತೋರಣಗಟ್ಟೆ ಮೂಲದ ನಿವೃತ್ತ ಪ್ರಾಧ್ಯಾಪಕ ಚಂದ್ರಶೇಖರ್ ಮತ್ತು ಪತ್ನಿ, ಜಗಳೂರು ಪಟ್ಟಣದ ಜಿ.ಬಿ ಶಿವಕುಮಾರ್ ಮತ್ತು ಪತ್ನಿ, ಪಟ್ಟಣ ಪಂಚಾಯತಿಯ ನಾಮನಿರ್ದೇಶಿತ ಮಾಜಿ ಸದಸ್ಯರಾದ ರುದ್ರಮನಿ ಮತ್ತು ಪತ್ನಿ, ವಾಚ್ ಅಂಗಡಿ ಮಾಲೀಕರಾದ ಲೋಕೇಶ್ ಮತ್ತು ಪತ್ನಿ ಮತ್ತು ಇವರ ಸ್ನೇಹಿತರು ಸೇರಿದಂತೆ ಸೇರಿದಂತೆ ಒಟ್ಟು 15 ಜನ ಫೆಬ್ರವರಿ 23ರಂದು ದುಬೈಗೆ ಪ್ರವಾಸ ತೆರಳಿದ್ದರು. ಶಾರ್ಜಾ ವಿಮಾನ ನಿಲ್ದಾಣದಿಂದ ಫೆಬ್ರವರಿ 28ಕ್ಕೆ ವಾಪಾಸಾಗಬೇಕಿತ್ತು. ಯುದ್ಧದ ಹಿನ್ನೆಲೆಯಲ್ಲಿ ವಿಮಾನ ಸಂಚಾರ ರದ್ದುಗೊಂಡಿದ್ದರಿಂದ ಇವರೆಲ್ಲರೂ ದುಬೈನಲ್ಲಿಯೇ ಉಳಿದಿದ್ದರು.

ಇವರಂತೆ ಪ್ರವಾಸಕ್ಕೆಂದು ಹಾಗೂ ಕೆಲಸ, ಕಾರ್ಯಗಳಿಗೆ ತೆರಳಿ ಸಿಲುಕಿಕೊಂಡಿದ್ದ ಅನೇಕರ ಸುರಕ್ಷಿತ ವಾಪಸಾತಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪ್ರಯತ್ನ ನಡೆಸಿದ್ದವು. ಎರಡು ಮೂರು ದಿನದಿಂದಲೂ ಹಂತಹಂತವಾಗಿ ಕರೆಸಿಕೊಳ್ಳುವ ಕಾರ್ಯ ನಡೆಯುತ್ತಿತ್ತು. ಜಗಳೂರು ಕ್ಷೇತ್ರದ ಸ್ಥಳೀಯ ಶಾಸಕ ದೇವೇಂದ್ರಪ್ಪ, ಗೃಹ ಸಚಿವ ಪರಮೇಶ್ವರ್ ಹಾಗೂ ಕೇಂದ್ರ, ರಾಜ್ಯ ಸರ್ಕಾರಗಳ ನೆರವಿನಿಂದ ಇಂದು ಅಂತಿಮವಾಗಿ ಜಗಳೂರಿನ ಪ್ರವಾಸಿಗರು ಸುರಕ್ಷಿತವಾಗಿ ಬೆಂಗಳೂರು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದರು.

ಕೆಲವು ದಿನಗಳ ಹಿಂದೆ ಜಗಳೂರು ಕ್ಷೇತ್ರದ ಶಾಸಕ ದೇವೇಂದ್ರಪ್ಪ, ಗೃಹ ಸಚಿವ ಡಾ.ಪರಮೇಶ್ವರ್ ಅವರನ್ನು ಭೇಟಿ ಮಾಡಿ ಜಗಳೂರಿನ 15 ಪ್ರವಾಸಿಗರ ಸುರಕ್ಷಿತ ವಾಪಸಾತಿಗೆ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದರು. ಅಂದು ಪ್ರತಿಕ್ರಿಯಿಸಿದ್ದ ಸಚಿವರು ರಾಜ್ಯ ಸರ್ಕಾರ ಕನ್ನಡಿಗರ ಸುರಕ್ಷಿತ ವಾಪಸಾತಿಗೆ ಎಲ್ಲಾ ಕ್ರಮಗಳನ್ನೂ ಕೈಗೊಂಡಿದೆ. ಎಲ್ಲರೂ ಸುರಕ್ಷಿತವಾಗಿ ಮರಳಲಿದ್ದಾರೆ ಎಂದು ತಿಳಿಸಿದ್ದರು.

ಈ ವೇಳೆ ಬಂದಿಳಿದ ಜಗಳೂರಿನ ನಾಗರಿಕರನ್ನು ಸ್ವತಃ ಶಾಸಕ ದೇವೇಂದ್ರಪ್ಪ ಹಾಜರಿದ್ದು, ಆತ್ಮೀಯವಾಗಿ ಸ್ವಾಗತಿಸಿ, ಆರೋಗ್ಯ ವಿಚಾರಿಸಿದರು.

Leave a Reply

Your email address will not be published. Required fields are marked *

You missed

error: Content is protected !!