ಶುಕ್ರದೆಸೆ ನ್ಯೂಸ್: ಶೆಟ್ಟರ್ ಏಟಿಗೆ ತತ್ತರಿಸಿದ ಬಿಜೆಪಿ | ಧರ್ಮ ಗುರುಗಳ ಮೂಲಕ ಲಿಂಗಾಯತರ ಓಲೈಕೆ; ಮುಂದಿನ ಸಿಎಂ ಭರವಸೆ
ಲಿಂಗಾಯತ ಸಮುದಾಯಕ್ಕೆ ಮತ್ತೆ ಮನ್ನಣೆ ನೀಡಿದ ಬಿಜೆಪಿ
ಪಕ್ಷ ಅಧಿಕಾರಕ್ಕೆ ಬಂದರೆ ಲಿಂಗಾಯತರಿಗೇ ಮತ್ತೆ ಸಿಎಂ ಪಟ್ಟ
ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಬಿಜೆಪಿ ತೊರೆದ ವಿಚಾರ ಕಮಲ ಪಕ್ಷದೊಳಗೆ ತಲ್ಲಣ ಸೃಷ್ಟಿಸಿದೆ. ಪ್ರಯೋಗ ಮಾಡಲು ಹೋಗಿ ಪಡಿಪಾಟಲು ಪಡುವಂತಹ ಸನ್ನಿವೇಶ ಸೃಷಿ ಮಾಡಿಕೊಂಡಿರುವ ಬಿಜೆಪಿ ಈಗ ಆ ಡ್ಯಾಮೇಜ್ ಕಂಟ್ರೋಲ್‌ಗೆ ಹೊಸ ಹಾದಿ ಹುಡುಕಿಕೊಂಡಿದೆ.
ಹೌದು ಬಿಜೆಪಿ ರಾಷ್ಟ್ರೀಯ ಸಂಘನಾ ಪ್ರಮುಖ ಬಿ ಎಲ್ ಸಂತೋಷ್ ಅವರ ವಿರುದ್ದ ನೇರ ವಾಗ್ದಾಳಿ ನಡೆಸಿ ಸದ್ಯದ ಬಿಜೆಪಿ ಪರಿಸ್ಥಿತಿ ಬಗ್ಗೆ ಬಹಿರಂಗವಾಗಿ ಮಾತನಾಡಿ ಜಗದೀಶ್ ಶೆಟ್ಟರ್ ಪಕ್ಷ ತೊರೆದಿದ್ದರು.
ಶೆಟ್ಟರ್ ಹೊರ ಹೋದ ಬಳಿಕ ಅವರೊಬ್ಬರಿಂದ ಪಕ್ಷಕ್ಕೇನೂ ತೊಂದರೆ ಇಲ್ಲ ಎನ್ನುವ ಸಿದ್ದ ಸೂತ್ರದ ಹೇಳಿಕೆಯನ್ನು ಬಿಜೆಪಿ ಮಾಧ್ಯಮಗಳ ಮುಂದಿಟ್ಟಿತ್ತು. ಆದ ಡ್ಯಾಮೇಜ್ ಕಂಟ್ರೋಲ್‌ಗೆ ಹುಬ್ಬಳ್ಲಿಯಲ್ಲೊಂದು ಪಕ್ಷದ ಸಭೆ ನಡೆಸಿ ಒಗ್ಗಟ್ಟಿನ ಮಂತ್ರವನ್ನೂ ಹಾಡಿತ್ತು.
ಆದರೆ ಅಸಲಿಗೆ ಜಗದೀಶ್ ಶೆಟ್ಟರ್ ಅವರ ನಿಜ ಶಕ್ತಿ ಬಿಜೆಪಿಗೆ ಅರಿವಾಗಿದ್ದು ಅವರು ಪಕ್ಷ ಬಿಟ್ಟು ಹೋದ ನಂತರವೇ. ಏಕೆಂದರೆ ಅಲ್ಲಿಯವರೆಗೂ ಬಿಎಸ್‌ವೈ ನಂತರದ, ಎರಡನೇ ಹಂತದ ಲಿಂಗಾಯತ ನಾಯಕರೆಂದು ಪರಿಗಣಿಸಿದ್ದ ಬಿಜೆಪಿ, ಶೆಟ್ಟರ್ ಶಕ್ತಿ ಅಳತೆ ಮಾಡುವ ಚಿಂತನೆ ನಡೆಸಿರಲಿಲ್ಲ.
ಯಾವಾಗ ಅವರ ಪಕ್ಷ ಬಿಟ್ಟು ಹೊರನಡೆದು ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆಗೆ ಹೊರಟು ನಿಂತ ಅವರ ಹಿಂದೆ ಸಾಗಿ ಬಂದ ಜನಸಾಗರ ನೋಡಿದಾಗಲೇ ಬಿಜೆಪಿಗೆ ಅವರ ಬಲ ಏನೆಂದು ಅರ್ಥವಾಗಿದ್ದು. ಅಲ್ಲೇ ಶೆಟ್ಟರ್ ಬಿಜೆಪಿ ಪಾಲಿಗೆ ಉತ್ತರ ಕರ್ನಾಟಕ ಅದರಲ್ಲೂ ಹುಬ್ಬಳ್ಳಿ ಭಾಗದ ಲಿಂಗಾಯತ ಸಮುದಾಯದ ನಾಯಕನಾಗಿ, ಪ್ರಭಾವಿ ರಾಜಕಾರಣಿಯಾಗಿ ಕಣ್ಣಿಗೆ ಕಂಡಿದ್ದು.
ಈ ಬೆಳವಣಿಗೆ ಬಳಿಕ ಯಡಿಯೂರಪ್ಪನವರನ್ನು ಬದಿಗೆ ಸರಿಸಿ ಕೇವಲ ಬೊಮ್ಮಾಯಿ ಹೆಸರಲ್ಲಿ ಲಿಂಗಾಯತರನ್ನು ಪಕ್ಷದೊಂದಿಗೆ ಒಯ್ಯುವ ಲೆಕ್ಕಾಚಾರ ಮಾಡಿಕೊಂಡ ಬಿಜೆಪಿಗೆ ಶೆಟ್ಟರ್ ಕೊಟ್ಟ ಹೊಡೆತ ಮತ್ತೆ ಕಮಲ ಪಕ್ಷ ಲಿಂಗಾಯತರ ಜಪ ಮಾಡುವಂತೆ ಮಾಡಿತು.
ಈ ಪರಿಣಾಮವಾಗಿ ಶೆಟ್ಟರ್ ಆರೋಪ ಮಾಡಿದ್ದ ಬಿ ಎಲ್ ಸಂತೋಷ್ ಅವರೇ ಖುದ್ದು, ಬೆಳಗಾವಿಯಲ್ಲಿ ಲಿಂಗಾಯತ ಮುಖಂಡರ ಸಭೆ ಕರೆದು ಶೆಟ್ಟರ್ ಬಿಟ್ಟುಹೋದ ಮೇಲಾದ ಬೆಳವಣಿಗೆ ಮತ್ತು ಅವರ ಶಕ್ತಿ ಬಗ್ಗೆ ಮಾಹಿತಿ ಪಡೆದುಕೊಳ್ಳುವಂತೆ ಮಾಡಿತು.
ಈ ಸಭೆಯಲ್ಲಿ ಮುಖಂಡರಿಗೆ ಸೂಚನೆ ನೀಡಿದ ಸಂತೋಷ್, ಶೆಟ್ಟರ್ ಬೆಂಬಲಿಗರಾಗಿದ್ದವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷದಲ್ಲಿ ಉಳಿಸಿಕೊಳ್ಳುವಂತೆ ನೋಡಿಕೊಳ್ಳುವುದು. ಪ್ರಚಾರದಲ್ಲಿ ಲಿಂಗಾಯತ ಸಮುದಾಯಕ್ಕೆ ಮತ್ತೆ ಮನ್ನಣೆ ಕೊಡುತ್ತಿರುವುದಾಗಿ ಜನರಿಗೆ ಅರಿಕೆ ಮಾಡಿಸುವ ಕಾರ್ಯ ಮಾಡುವಂತೆ ಹೇಳಿದ್ದಾರೆನ್ನಲಾಗಿದೆ.
ಮತ್ತೊಂದು ಕಡೆ ಇದೇ ವಿಚಾರವಾಗಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರ ಬೆಂಗಳೂರು ನಿವಾಸದಲ್ಲೂ ಲಿಂಗಾಯತ ಮುಖಂಡರು ಮತ್ತು ಧರ್ಮಗುರುಗಳ ಸಭೆ ನಡೆದಿದೆ. ಬಳಿಕ ಅವರ ಮೂಲಕ ಸಮುದಾಯಕ್ಕೆ, ಪಕ್ಷ ಗೌರವ ಮನ್ನಣೆ ಕೊಡುತ್ತಿದೆ ಎಂದು ಹೇಳಿಸಿದೆ.
ಜೊತೆಗೆ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಮುಂದಿನ ಬಾರಿಯೂ ಮುಂದೆಯೂ ಲಿಂಗಾಯತರಿಗೆ ಉನ್ನತ ಸ್ಥಾನ ಕೊಡುವ ಭರವಸೆ ನೀಡಿದೆ. ಹಾಗೆಯೇ ಮುಂದಿನ ಅವಧಿಯಲ್ಲಿ ಪಕ್ಷ ಅಧಿಕಾರಕ್ಕೆ ಬಂದರೆ ಲಿಂಗಾಯತ ಸಮುದಾಯದವರಿಗೆ ಸಿಎಂ ಸ್ಥಾನ ಕೊಡುವ ಭರವಸೆ ನೀಡಿದೆ.
ಇದಕ್ಕೆ ಪೂರಕವೆನ್ನುವಂತೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಕೂಡ ಮುಂದಿನ ಅವಧಿಗೆ ಬೊಮ್ಮಾಯಿ ಅವರನ್ನೇ ಮುಖ್ಯಮಂತ್ರಿಯನ್ನಾಗಿಸಲಾಗುವುದು ಎಂದೂ ಹೇಳಿಕೊಂಡಿದ್ದಾರೆ.
ಇವೆಲ್ಲದರ ನಡುವೆ ಶಿಕಾರಿಪುರದಲ್ಲಿ ನಡೆದ ಬಿ ವೈ ವಿಜಯೇಂದ್ರ ನಾಮಪತ್ರ ಸಲ್ಲಿಕೆ ವೇಳೆ ಪಕ್ಷ ಪ್ರಮುಖರ ಎದುರಲ್ಲೇ ʼದೇಶಕ್ಕೆ ಮೋದಿ ರಾಜ್ಯಕ್ಕೆ ವಿಜಯಣ್ಣʼ ಎನ್ನುವ ಘೋಷಣೆ ಮೊಳಗಿಸಿ ಲಿಂಗಾಯತ ಸಮುದಾಯದ ಯುವನಾಯಕನನ್ನು ಮುನ್ನೆಲೆಗೆ ತರುವ ಮತ್ತೊಂದು ಪ್ರಯತ್ನ ನಡೆಸಲಾಗುತ್ತಿದೆ.
ಈ ಸುದ್ದಿ ಓದಿದ್ದೀರಾ?:ಚುನಾವಣೆ 2023 | ಕಲ್ಯಾಣ ಕರ್ನಾಟಕದಲ್ಲಿ ಎಸ್‌ಸಿ ‘ಬಲ ಸಮುದಾಯ’ಕ್ಕೆ ಒಂದೂ ಟಿಕೆಟ್ ನೀಡದ ಬಿಜೆಪಿ
ಇದು ಲಿಂಗಾಯತ ವೋಟ್ ಬ್ಯಾಂಕ್ ಬಿಜೆಪಿಗೆ ಎಷ್ಟು ಮುಖ್ಯ ಎನ್ನುವುದನ್ನು ಎತ್ತಿ ತೋರಿಸಿದೆ. ಒಟ್ಟಿನಲ್ಲಿ ಪಕ್ಷ ಬಿಟ್ಟು ಹೊರಬಂದ ಶೆಟ್ಟರ್ ಬಿಜೆಪಿಯಲ್ಲಿನ ಏಕವ್ಯಕ್ತಿ ಪ್ರಾಬಲ್ಯ ಕೊನೆಗಾಣಿಸುವಂತೆ ಮಾಡುವಲ್ಲಿ ಯಶ ಕಂಡಿದ್ದಾರೆ. ಹಾಗೆಯೇ, ಶೆಟ್ರರ್ ಕೊಟ್ಟ ಏಟಿನಿಂದಾಗಿರುವ ಗಾಯಕ್ಕೆ ಬಿ ಎಲ್ ಸಂತೋಷ್ ಅದ್ಯಾವ ಮುಲಾಮು ಹಚ್ಚಿಕೊಳ್ಳುತ್ತಾರೋ ಕಾದು ನೋಡಬೇಕಾಗಿದೆ.