ಶಾಸಕ ಬಿ.ದೇವೇಂದ್ರಪ್ಪ ಅವರಿಂದ 18 ಜನ ವಿಶೇಷ ಚೇತನ ಫಲಾನುಭವಿಗಳಿಗೆ ತ್ರಿಚಕ್ರವಾಹನ ವಿತರಣೆ.
ಸುದ್ದಿ,
ಜಗಳೂರು, ಡಿ.25:ಪಟ್ಟಣದ ತಾಲ್ಲೂಕು ಪಂಚಾಯಿತಿ ಆವರಣದಲ್ಲಿ 2024-25 ನೇ ಸಾಲಿನ ಶಾಸಕರ ಪ್ರದೇಶ ಅಭಿವೃದ್ದಿ ಯೋಜನೆ ಅನುದಾನದಡಿ 18 ಜನ ವಿಶೇಷ ಚೇತನ ಫಲಾನುಭವಿಗಳಿಗೆ ಶಾಸಕ ಬಿ.ದೇವೇಂದ್ರಪ್ಪ ಅವರು ತ್ರಿಚಕ್ರವಾಹನ ವಿತರಿಸಿದರು.
ನಂತರ ಮಾತನಾಡಿದ ಅವರು,ಸಮಾಜದಲ್ಲಿ ವಿಶೇಷ ಚೇತನರ ಸವಾಲುಗಳು,ತಲ್ಲಣಗಳನ್ನು ಪ್ರತಿಯೊಬ್ಬರೂ ಅರಿತುಕೊಂಡು ದೇವರ ಸ್ವರೂಪವಾಗಿ ಗೌರವಿಸಬೇಕಿದೆ.ನನ್ನ ಕ್ಷೇತ್ರದಲ್ಲಿ ವಿಶೇಷ ಚೇತನರಿಗೆ ಅಪಮಾನಗೊಳಿಸುವುದು ಗಮನಕ್ಕೆ ಬಂದರೆ ನಿರ್ದಾಕ್ಷೀಣ್ಯವಾಗಿ ಶಿಕ್ಷೆಗೊಳಪಡಿಸುವೆ.ಪ್ರತಿಯೊಂದು ಇಲಾಖೆಗಳಿಂದ ವಿಶೇಷ ಚೇತನರಿಗೆ ಸಿಗುವ ಸೌಲಭ್ಯಗಳನ್ನು ಸಮರ್ಪಕವಾಗಿ ಅಧಿಕಾರಿಗಳು ಅರ್ಹ ಫಲಾನುಭವಿಗಳಿಗೆ ತಲುಪಿಸಬೇಕು.ವಿಳಂಬಮಾಡಿದಲ್ಲಿ ಅಗತ್ಯ ಕ್ರಮಕೈಗೊಳ್ಳಲಾಗುವುದು ಎಂದು ಸೂಚಿಸಿದರು.
ಕ್ಷೇತ್ರದಲ್ಲಿ ವಯೋವೃದ್ದರು,ನಿರ್ಗತಿಕರು,ಬಡಮಕ್ಕಳು,ರೋಗಿಗಳು,ವಿಶೇಷ ಚೇತನರು ನನ್ನ ಕಣ್ಣು ಗಳಿದ್ದಂತೆ,ಅವರ ಕಣ್ಣೀರು ಒರೆಸುವುದಲ್ಲದೆ ಶ್ರೇಯೋಭಿವೃದ್ದಿಗೆ ಬದ್ದನಾಗಿರುವೆ.ಸಮಾಜದಲ್ಲಿ ಅಸಮಾನತೆ ತೊಲಗಿಸಿ,ಸಂಘರ್ಷ ತಾಂಡವಾಡುತ್ತಿರುವ ಕಾಲಘಟ್ಟದಲ್ಲಿ ಸಾಮರಸ್ಯತೆ ಕಾಪಾಡುವೆ.ನನ್ನ ಶಿಫಾರಸ್ಸಿನಂತೆ ಮಾನವೀಯತೆ ದೃಷ್ಟಿಯಿಂದ ಇಂದು ತ್ರಿಚಕ್ರವಾಹನ ವಿತರಿಸಲಾಗುತ್ತಿದ್ದು.ಕಾರ್ಯಕ್ರಮಯೊಂದರಲ್ಲಿ ಪದವಿ ವಿದ್ಯಾರ್ಥಿನಿಗೆ ನೀಡಿದ ಭರವಸೆಯನ್ನು ಈಡೇರಿಸಿದ ಅಧಿಕಾರಿಗಳ ಕಾಳಜಿಗೆ ಪ್ರಶಂಸನೀಯ ಎಂದರು.
ಜ.1ರಿಂದ ನೊಂದವರಿಗೆ ನೆರವು ವಿನೂತನ ಅಭಿಯಾನದಡಿ,ಪ್ರಥಮವಾಗಿ ನನ್ನ ವೇತನದ ಹಣದಲ್ಲಿ ಮಾಸಿಕವಾಗಿ ರೂ.100,000 ಹಣವನ್ನು ಜೋಳಿಗೆ ಹಾಕಿ ರಾಜ್ಯವ್ಯಾಪಿ ಸಂಚರಿಸಿ,ಹಣ ಮತ್ತು ಹೃದಯಶ್ರೀಮಂತಿಕೆ ಉಳ್ಳ ವ್ಯಕ್ತಿಗಳಿಂದ ಹಣವನ್ನು ದೇಣಿಗೆಹುಂಡಿಗೆ ಸಂಗ್ರಹಿಸಲಾಗುವುದು.ಕ್ಷೇತ್ರದಲ್ಲಿನ ನಿರ್ಗತಿಕರ,ರೋಗಿಗಳ,ಬಡ ವಿದ್ಯಾರ್ಥಿಗಳ,ವೃದ್ದರ ಕಲ್ಯಾಣಕ್ಕಾಗಿ ಪಾರದರ್ಶಕವಾಗಿ ವಿನಿಯೋಗಿಸಲಾಗುವುದು.
ವಿಶೇಷ ಚೇತನ ಸಬಲೀಕರಣ ಇಲಾಖೆ ಉಪನಿರ್ದೇಶಕ ಅಧಿಕಾರಿ ಕೆ.ಪ್ರಕಾಶ್ ಮಾತನಾಡಿ,ಶಾಸಕರ ವಿಶೇಷ ಅನುದಾನದಲ್ಲಿ ಒಟ್ಟು ರೂ.20 ವೆಚ್ಚದ,ತಲಾ ರೂ.1,10,050 ರಂತೆ ಒಟ್ಟು 18 ವಾಹನಗಳನ್ನು ವಿತರಿಸಲಾಗಿದ್ದು,ವಾಹನಕ್ಕೆ ಸಂಬಂಧಿಸಿದ ಆರ್ ಸಿ ಕಾರ್ಡ್,ವಿಮಾಪಾಲಿಸಿಯನ್ನು ಶೀಘ್ರದಲ್ಲಿ ಮನೆಬಾಗಿಲಿಗೆ ತಲುಪಿಸಲಾಗುವುದು.ಜಗಳೂರಿನಲ್ಲಿ ವಿಶೇಷ ಚೇತನರ ಸಭೆ ಸಮಾರಂಭಗಳಿಗೆ ಸಾಮರ್ಥ್ಯ ಸೌಧದ ಅಗತ್ಯವಿದ್ದು ಶಾಸಕರು ಕಟ್ಟಡ ಸೌಲಭ್ಯ ಒದಗಿಸಬೇಕುಎಂದು ಮನವಿಮಾಡಿದರು.
ವಿಆರ್ ಡಬ್ಲ್ಯೂ ತಾಲ್ಲೂಕು ಅಧ್ಯಕ್ಷ ಸೋಮಣ್ಣ ಮಾತನಾಡಿ,ತಾಲ್ಲೂಕಿನ 22 ವಿಆರ್ ಡಬ್ಲ್ಯೂ ಗಳಿಗೆ ಗ್ರಾಮಪಂಚಾಯಿತಿಯ ಶೇ.5 ರಷ್ಟು ವಿಶೇಷ ಅನುದಾನದಲ್ಲಿ ಪ್ರಯಾಣಭತ್ಯೆ,ಲ್ಯಾಪ್ ಟಾಪ್ ,ಸೇರಿದಂತೆ ಸೌಲಭ್ಯಗಳು ಸಮರ್ಪಕವಾಗಿ ತಲುಪುತ್ತಿಲ್ಲ ಅಧಿಕಾರಿಗಳು ಕೂಡಲೇ ಒದಗಿಸಬೇಕು ಎಂದು ಮನವಿಮಾಡಿದರು.
ತಾ.ಪಂ ಇಓ ಕೆಂಚಪ್ಪ ಮಾತನಾಡಿ,ತಾ.ಪಂ ಇಲಾಖೆಯಿಂದ 7 ಜನ ವಿಶೇಷ ಚೇತನ ಫಲಾನುಭವಿಗಳನ್ನು ಆಯ್ಕೆಗೊಳಿಸಲಾಗಿದ್ದು ಟೆಂಡರ್ ಪ್ರಕ್ರಿಯೆ ನಡೆಸಲಾಗಿದೆ.15 ನೇ ಹಣಕಾಸು ಯೋಜನೆಯಲ್ಲಿ ವಿಕಲಚೇತನರಿಗೆ ಶೇ.5ರಷ್ಟು ವಿಶೇಷ ಅನುದಾನ ನೀಡಲು ಅವಕಾಶವಿಲ್ಲ.ವರ್ಗ-1ರಲ್ಲಿ ಒದಗಿಸಲು ಕ್ರಮಕೈಗೊಳ್ಳಲಾಗುವುದು ಎಂದು ಮಾಹಿತಿ ನೀಡಿದರು.
ಇದೇ ವೇಳೆ ತಾ.ಪಂ ಇಓ ಅವರ ಕಛೇರಿಗೆ ನೂತನವಾಗಿ ಹೊಸ ವಾಹನದ ಚಾಲನೆನೀಡಲಾಯಿತು.
ಈ ಸಂದರ್ಭದಲ್ಲಿ ಅರಣ್ಯ ಇಲಾಖೆ ಅಧಿಕಾರಿ ಮಹೇಶ್ವರಪ್ಪ,ಅಕ್ಷದ ದಾಸೋಹ ಇಲಾಖೆ ಸಹಾಯಕ ನಿರ್ದೇಶಕ ಮಂಜಣ್ಣ,ತಾ.ಪಂ ವ್ಯವಸ್ಥಾಪಕ ರವಿಕುಮಾರ್,ಪಿಡಿಓ ಗಳಾದ ವಾಸುದೇವ,ನಂದಿಲಿಂಗೇಶ್ವರ,ರಾಘವೇಂದ್ರ,ಹಿರಿಯ ನಾಗರೀಕ ನಾಗರಾಜಪ್ಪ,ವಿಆರ್ ಡಬ್ಲಯೂ ತಾಲ್ಲೂಕು ಅಧ್ಯಕ್ಷ ಸೋಮಣ್ಣ,ಕಾರ್ಯದರ್ಶಿ ಅಂಜಿನಪ್ಪ,ಶಿವಾನಂದ,ಪ.ಪಂ ಮಾಜಿ ಸದಸ್ಯ ಶಕೀಲ್ ಅಹಮ್ಮದ್,ಮುಖಂಡರಾದ ಬಿ.ಮಹೇಶ್ವರಪ್ಪ,ಪಲ್ಲಾಗಟ್ಟೆ ಶೇಖರಪ್ಪ,ಶಾಸಕರ ಆಪ್ತ ಸಹಾಯಕ ರಾಜು,ಸೇರಿದಂತೆ ಇತರರು ಇದ್ದರು.
