ಸುದ್ದಿ ಜಗಳೂರು

ಕೆಪಿಎಸ್ ಮ್ಯಾಗ್ನೆಟ್ ಯೋಜನೆಯನ್ನು ಧಿಕ್ಕರಿಸಿ ಜಗಳೂರೂ ತಾಲೂಕಿನ ಜಗಳೂರು ಗೊಲ್ಲರಹಟ್ಟಿ ಎಸ್ ಡಿ ಎಂ ಸಿ ಮತ್ತು ಪೋಷಕರ ಪ್ರತಿಭಟನೆ!.

ಈ ಕರಾಳ ನೀತಿಯ ವಿರುದ್ಧ ಎಐಡಿಎಸ್ ಹಳ್ಳಿ ಹಳ್ಳಿಗಳಲ್ಲಿ ಹೋರಾಟವನ್ನು ಬೆಳೆಸುತ್ತಿದೆ. ಜಗಳೂರು ಗೊಲ್ಲರಹಟ್ಟಿ ಎಸ್ ಡಿ ಎಂ ಸಿ ಮತ್ತು ಪೋಷಕರು, ಗ್ರಾಮಸ್ಥರು ಈ ಯೋಜನೆಯನ್ನು ಧಿಕ್ಕರಿಸಿ ಇಂದು ಶಾಲೆ ಮುಂದೆ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದರು. ಯಾವುದೇ ಕಾರಣಕ್ಕೂ ನಮ್ಮ ಊರಿನ ಶಾಲೆಯನ್ನು ವಿಲೀನ ಮಾಡಲು ನಾವು ಒಪ್ಪುವುದಿಲ್ಲ ಎಂದು ಪೂಜಾ ನಂದಿಹಳ್ಳಿ ಆಕ್ರೋಶ ವ್ಯಕ್ತಪಡಿಸಿದರು.
: ರಾಜ್ಯ ಸರ್ಕಾರ ಕೆ ಪಿ ಎಸ್ ಮ್ಯಾಗ್ನೆಟ್ ಯೋಜನೆ ಹೆಸರಲ್ಲಿ 40,000ಕ್ಕೂ ಅಧಿಕ ಸರ್ಕಾರಿ ಶಾಲೆಗಳನ್ನು ಮುಚ್ಚುತ್ತಿದೆ. ಶಾಲೆಗಳ ವಿಲಿನೀಕರಣ ಎಂಬ ಹೆಸರಿನಲ್ಲಿ ಐದು ಕಿಲೋಮೀಟರ್ ವ್ಯಾಪ್ತಿಯಲ್ಲಿ ಬರುವಂತಹ ಕನಿಷ್ಠ ಏಳು ಶಾಲೆಯನ್ನು ಒಂದು ಮ್ಯಾಗ್ನೆಟ್ ಶಾಲೆಗೆ ವಿಲೀನ ಮಾಡುವ ಈ ನೀತಿಯು ದೊಡ್ಡ ಸಂಖ್ಯೆಯ ಬಡ ವಿದ್ಯಾರ್ಥಿಗಳನ್ನು ಶಿಕ್ಷಣದಿಂದ ವಂಚಿತರನ್ನಾಗಿಸುತ್ತದೆ. ಕಳೆದ 15 ವರ್ಷದಲ್ಲಿ ರಾಜ್ಯದ 17 ಲಕ್ಷ ವಿದ್ಯಾರ್ಥಿಗಳು ಶಿಕ್ಷಣದಿಂದ ಹೊರಗುಳಿದಿದ್ದಾರೆ. ಇಂತಹ ಸಂದರ್ಭದಲ್ಲಿ ಸರ್ಕಾರಿ ಶಾಲೆಗಳಿಗೆ ಪೋಷಣೆ ನೀಡಿ ಅವುಗಳ ಬಲವರ್ಧನೆ ಮಾಡುವುದನ್ನು ಬಿಟ್ಟು ರಾಜ್ಯ ಸರ್ಕಾರವು ಕಡಿಮೆ ದಾಖಲಾತಿ ನೆಪವೊಡ್ಡಿ ಶಾಲೆಗಳಿಗೆ ಬೀಗ ಹಾಕುತ್ತಿದೆ. ಅಕ್ಟೋಬರ್ 15ರ ಸರ್ಕಾರದ ನಡವಳಿಯಂತೆ 2025, 2026 ಮತ್ತು 2027 ನೇ ಸಾಲಿನಲ್ಲಿ ಈ ಕೆಪಿಎಸ್ ಮ್ಯಾಗ್ನೆಟ್ ಶಾಲೆಗಳನ್ನು ಅನುಷ್ಠಾನ ಮಾಡಲಾಗುವುದು ಎಂದು ತಿಳಿಸಲಾಗಿದೆ.

ಕೆಪಿಎಸ್ ಶಾಲೆಗೆ ಬಸ್ ಬಿಡುತ್ತೇವೆ ಮತ್ತು ಆಯಾ ವನ್ನು ಕೊಡುತ್ತೇವೆ ಎಂದು ಹೇಳುತ್ತಿರುವ ರಾಜ್ಯ ಸರ್ಕಾರಕ್ಕೆ ನಾಚಿಕೆಯಾಗಬೇಕು 61,000 ಶಿಕ್ಷಕರ ಹುದ್ದೆಗಳು ಖಾಲಿ ಇದ್ದರೂ ಇಂದಿಗೂ ಕೂಡ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಯಾವ ಯೋಜನೆಯು ಕೂಡ ಇಲ್ಲ. ವಿರೋಧ ಪಕ್ಷದಲ್ಲಿದ್ದಾಗಲೂ ಕೂಡ ಶಿಕ್ಷಕರ ನೇಮಕಾತಿ ಬಗ್ಗೆ ಮಾತನಾಡಿದ್ದರು ಅಧಿಕಾರಕ್ಕೆ ಬಂದು ಮೂರು ವರ್ಷ ಕಳೆದರೂ ಕೂಡ ನೇಮಕಾತಿ.ಆಗಿಲ್ಲ. ಕಳೆದ ಬಜೆಟ್ ನಲ್ಲಿ 15000 ಶಿಕ್ಷಕರನ್ನು ತೆಗೆದುಕೊಳ್ಳುತ್ತೇವೆ ಎಂದು ಹೇಳಿದ್ದರು. ಆದರೆ ಆ ಪ್ರಕ್ರಿಯೆ ಇನ್ನೂ ಆರಂಭವಾಗಿಲ್ಲ. ಇಂದು ಅವರು ಹೇಳುತ್ತಿರುವುದು 2500 ಕಂಪ್ಯೂಟರ್ ಶಿಕ್ಷಕರನ್ನ ಡಿಪ್ಲೊಮ ಮತ್ತು ಇಂಜಿನಿಯರಿಂಗ್ ಓದಿದವರನ್ನು ತೆಗೆದುಕೊಳ್ಳುತ್ತೇವೆ ಎಂದು ಹೇಳುತ್ತಿದ್ದಾರೆ ಇದನ್ನು ನಾವು ಹೇಗೆ ನಂಬುವುದ?
ಎಲ್ಲವೂ ಆಶ್ವಾಸನೆಗಳಾಗಿ ಉಳಿಯವುದೊ,ಅಥವ ನೇಮಕಾತಿ ಮಾಡಿಕೊಳ್ಳುವರೋ?

ಕೆಪಿಎಸ್ ಶಾಲೆಗಳಲ್ಲಿ ಒಂದನೇ ತರಗತಿಯಿಂದ ಕಂಪ್ಯೂಟರ್ ಶಿಕ್ಷಣ ಮೂರನೇ ತರಗತಿಯಿಂದ ಎಐ ಶಿಕ್ಷಣ ಮತ್ತು 6ನೇ ತರಗತಿಯಿಂದ ಕೌಶಲ್ಯ ಅಭಿವೃದ್ಧಿ ಹೇಳಿಕೊಡಲಾಗುವುದು. ಒಂದನೇ ತರಗತಿಯಿಂದ ಯಾವ ಮಗುವಿಗೂ ಕೂಡ ಕಂಪ್ಯೂಟರ್ ಶಿಕ್ಷಣದ ಅವಶ್ಯಕತೆ ಇಲ್ಲ ಆ ಮಗು ಮೊದಲು ಕನ್ನಡ ಭಾಷೆ ಮತ್ತು ಆಂಗ್ಲ ಭಾಷೆಯನ್ನು ಓದುವ ಬರೆಯುವ ಅಕ್ಷರಗಳನ್ನು ಗುರುತಿಸುವ ವ್ಯಾಕರಣವನ್ನು ಸರಿಯಾಗಿ ಕಲಿಯಬೇಕು. ಮೂಲಭೂತ ಶಿಕ್ಷಣವನ್ನು ಕೊಡಬೇಕಿತ್ತು ಆದರೆ ಒಂದು ಕಡೆ ರಾಜ್ಯ ಸರ್ಕಾರ 16 ವಯಸ್ಸಿನ ಮಕ್ಕಳಿಗೆ ಮೊಬೈಲ್ ಬ್ಯಾನ್ ಅಂತ ಹೇಳಿ ಅದರ ಬೆನ್ನಲ್ಲೇ ಒಂದನೇ ತರಗತಿಯಿಂದ ಕಂಪ್ಯೂಟರ್ ಶಿಕ್ಷಣ ಕೊಡಲು ಆರಂಭಿಸುತ್ತಿದ್ದಾರೆ ಅಂದರೆ ಈಗ ಆ ಮಕ್ಕಳು ಸಣ್ಣ ಸ್ಕ್ರೀನ್ ಬಿಟ್ಟು ಲ್ಯಾಪ್ಟಾಪ್ ಕೊಡಿಸಿ ಎಂದು ತಂದೆ ತಾಯಿಗಳಿಗೆ ಪೀಡಿಸುತ್ತಾರೆ. ಸರ್ಕಾರವೇ ಮಕ್ಕಳನ್ನು ಕಂಪ್ಯೂಟರಿಗೆ ಅವಲಂಬಿತರಾಗುವ ಕೆಲಸ ಮಾಡುತ್ತಿದೆ. ಅದರ ಬದಲು ಮಕ್ಕಳು ಮೊದಲಿಗೆ ವಿಜ್ಞಾನ ಮತ್ತು ಗಣಿತ ಸಮಾಜ ವಿಜ್ಞಾನದ ಮೂಲಭೂತ ಅಂಶಗಳನ್ನು ಕಲಿಯಬೇಕು. ನೈತಿಕ ಶಿಕ್ಷಣವನ್ನು ಕಲಿಸಬೇಕಿತ್ತು.
ಜೊತೆಗೆ ಶಾಲೆಗಳಲ್ಲಿ ಆರನೇ ತರಗತಿಯಿಂದ ಕೌಶಲ್ಯಾಭಿವೃದ್ಧಿ ಹೆಸರಿನಲ್ಲಿ “ಸ್ಕಿಲ್ ಅಟ್ ಸ್ಕೂಲ್” ಮತ್ತು “ಅರ್ನ್ ವೈಲ್ ಲರ್ನಿಂಗ್” ಅನುಷ್ಠಾನ ಮಾಡಲಿದೆ. ಶಾಲೆಗಳಲ್ಲಿ ಅಡಿಕೆ ಸುಲಿಯುವುದು, ಹತ್ತಿ ಬಿಡಿಸುವುದು, ಎಲೆಕ್ಟ್ರಿಕಲ್ ಕೆಲಸ, ಪ್ಲಂಬರ್ ಕೆಲಸ, ಟೈಲರಿಂಗ್ ಕೆಲಸ, ಈ ರೀತಿ ಕೌಶಲ್ಯವನ್ನು ಶಾಲೆಗಳಲ್ಲಿ ಕಲಿಸಲಾಗುವುದು ಎಂದು ಮಾನ್ಯ ಶಿಕ್ಷಣ ಸಚಿವರಾದ ಮಧು ಬಂಗಾರಪ್ಪ ಅವರೇ ಹೇಳಿದ್ದರು. ಸಮಾಜ ಮುಂದುವರೆಯುತ್ತಿರುವ ಈ ಕಾಲದಲ್ಲಿ ಶ್ರೀಮಂತರ ಮಕ್ಕಳು ಗಣಿತ ವಿಜ್ಞಾನದ ವಿಷಯಗಳನ್ನು ಕಲಿತರೆ, ವೃತ್ತಿಶಿಕ್ಷಣದ ಹೆಸರಿನಲ್ಲಿ ಬಡವರ ಮಕ್ಕಳನ್ನು ಅಗ್ಗದ ಕಾರ್ಮಿಕರನ್ನಾಗಿಸಲು ಸರ್ಕಾರವು ಸಂಚು ರೂಪಿಸಿದೆ. ಸರ್ಕಾರಿ ಶಾಲೆಯಲ್ಲಿ ಓದುವ ಬಡವರ ಮಕ್ಕಳಲ್ಲಿ ಒಬ್ಬ ವೈದ್ಯನಾಗುವ, ಇಂಜಿನಿಯರ್ ಆಗುವ ಅಥವಾ ಶಿಕ್ಷಕ ಅಥವಾ ಉನ್ನತ ಹುದ್ದೆಗೇರುವ ಯಾವ ಯೋಚನೆಯು ಕೂಡ ಸುಳಿಯದಂತೆ ತಳಹಂತದಿಂದಲೇ ಆ ಮಗುವಿನ ಶೈಕ್ಷಣಿಕ ಗುಣಮಟ್ಟವನ್ನು ಕಡಿತಗೋಳಿಸುವ ಹುನ್ನಾರ ಇದಾಗಿದೆ. 150 ವರ್ಷಗಳ ಹಿಂದೆಯೇ ಈಶ್ವರ್ ಚಂದ್ರ ವಿದ್ಯಾಸಾಗರ್ ವೈಜ್ಞಾನಿಕ ಶಿಕ್ಷಣಕ್ಕೆ ಒತ್ತು ನೀಡಿದರು. ವಿಜ್ಞಾನ, ಗಣಿತಶಾಸ್ತ್ರ, ಅರ್ಥಶಾಸ್ತ್ರ, ರಸಾಯನ ಶಾಸ್ತ್ರ, ಭೌತಶಾಸ್ತ್ರವನ್ನು ಮಕ್ಕಳು ಕಲಿಯಬೇಕು ತಾರ್ಕಿಕ ಆಲೋಚನೆಯನ್ನು ಹೊಂದಬೇಕು ಎಂದು ಪ್ರತಿಪಾದಿಸಿದರು ಮತ್ತು ಸಾವಿತ್ರಿಬಾಯಿ ಫುಲೆ, ಜ್ಯೋತಿಬಾ ಫುಲೆ ಶಿಕ್ಷಣಕ್ಕಾಗಿ, ಸಮಾಜದ ಸುಧಾರಣೆಗಾಗಿ ಅವಿರತ ಶ್ರಮ ಪಟ್ಟರು. ಕೇವಲ 18 ಮಕ್ಕಳಿಗೆ ಮೊದಲ ಶಾಲೆಯನ್ನು ತೆರೆದರು. ಆದರೆ ಕರ್ನಾಟಕ ರಾಜ್ಯ ಸರ್ಕಾರವು ಈ ಎಲ್ಲಾ ಮಹಾನ್ ವ್ಯಕ್ತಿಗಳ ಆಶಯಗಳನ್ನು ಗಾಳಿಗೆ ತೂರಿ ಶಿಕ್ಷಣ ಸಂಸ್ಥೆಗಳನ್ನು ಕಾರ್ಪೊರೇಟ್ ಕಂಪನಿಗಳಿಗೆ ದಾನ ಮಾಡಲು ನಿಂತಿದೆ. ಈ ಮೂಲಕ ಬಡವರ ಮಕ್ಕಳ ಶಿಕ್ಷಣವನ್ನು ಕಸಿಯುತ್ತಿದೆ. ಒಂದು ಕಡೆ ಬಾಲಕಾರ್ಮಿಕರನ್ನು ನಿಷೇಧಿಸಿ ಇನ್ನೊಂದು ಕಡೆ ಶಾಲೆಗಳಲ್ಲಿ ಬಾಲಕಾರ್ಮಿಕರನ್ನು ಕಾನೂನುಬದ್ಧ ಮಾಡುತ್ತಿದೆ. ಕಲಿಯುವಾಗ ಮಕ್ಕಳು ದುಡಿಬೇಕಂತೆ ಇದು ಈ ಸರ್ಕಾರದ ನೀತಿ. ಒಟ್ಟಾರೆಯಾಗಿ ಬಡವರ ಮಕ್ಕಳು ಕೂಲಿ ಮಾಡುವಂತಹ ನೀತಿಯನ್ನು ಜಾರಿಗೊಳಿಸುತ್ತಿದ್ದಾರೆ. ರಾಜ್ಯ ಸರ್ಕಾರ ಈ ನೀತಿಯನ್ನು ಹಿಂಪಡೆಯಲೇಬೇಕು ಇಲ್ಲದಿದ್ದರೆ ಇನ್ನು ಉಗ್ರ ಹೋರಾಟಗಳನ್ನು ನೀವು ಎದುರಿಸಬೇಕಾಗುತ್ತದೆ ಜನಗಳ ವಿಶ್ವಾಸವನ್ನು ಕಳೆದುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ಕೊಟ್ಟರು.

ಎಸ್ ಡಿ ಎಂ ಸಿ ಅಧ್ಯಕ್ಷ ಹೊನ್ನುರುಸಾಬ್ ಮಾತನಾಡಿ ನಮ್ಮೂರ ಶಾಲೆ ನಮ್ಮ ಹಕ್ಕು ಕೆಪಿಎಸ್ ಶಾಲೆಗೆ ವಿಲೀನ ಮಾಡಲು ಬಿಡುವುದಿಲ್ಲ. ಬದಲಾಗಿ ನಮ್ಮೂರ ಶಾಲೆಗೆ ಸಮರ್ಪಕ ಶೌಚಾಲಯ ಇಲ್ಲ ಮಕ್ಕಳು ಹೊರಗೆ ಹೋಗುವ ಪರಿಸ್ಥಿತಿ ಇದೆ. ಈ ಸಂದರ್ಭದಲ್ಲಿ ಆಪಘಾತ ಸಂಭವಿಸಿ ವಿದ್ಯಾರ್ಥಿಯನ್ನು ಕಳೆದುಕೊಂಡಿದ್ದೇವೆ. ಹಲವು ಬಾರಿ ಮನವಿ ಮಾಡಿದರು ಇಲಾಖೆಯಿಂದ ಯಾವ ಸ್ಪಂದನೆ ಸಿಕ್ಕಿಲ್ಲ. ಕುಡಿಯುವ ನೀರಿನ ಸೌಲಭ್ಯ ಕೂಡ ಇಲ್ಲ. ಮೋಟರ್ ವ್ಯವಸ್ಥೆಯಾಗಬೇಕಿದೆ. ಕೇಳಿ ಕೇಳಿ ಸಾಕಾಗಿದೆ. ಯಾವುದೇ ಸ್ಪಂದನೆ ಸಿಗದಿದ್ದರೆ. ಉಗ್ರ ಹೋರಾಟ ಮಾಡುತ್ತೇವೆ.

: ನಿವೃತ್ತ ಬಿ.ಎಂ.ಟಿ.ಸಿ ಇನ್ಸ್ಪೆಕ್ಟರ್ ವೆಂಕಟೇಶ್ ಮಾತನಾಡಿ ನಾನು ಓದಿದ ಶಾಲೆ ಇದು. ಈ ತರಹದ ಹಲವು ಪ್ರತಿಭೆಗಳು ಈ ಶಾಲೆಯಲ್ಲೇ ಕಲಿತು ಹೋಗಿದ್ದಾರೆ. ನಾವು ಯಾವುದೇ ಕಾರಣಕ್ಕೂ ಶಾಲೆ ಮುಚ್ಚಲು ಬಿಡುವುದಿಲ್ಲ. ಎಂದು ಹೇಳಿದರು.

ಪ್ರತಿಭಟನೆ ನಂತರ ಕ್ಷೇತ್ರ ಶಿಕ್ಷಣಾಧಿಕಾರಿಗಳು ಸ್ಥಳಕ್ಕೆ ಬಂದು ಮನವಿ ಸ್ವೀಕರಿಸಿದರು. ಶೀಘ್ರದಲ್ಲೆಯೆ ದುರಸ್ಥಿಯಾಗುವಂತೆ ನೋಡಿಕೊಳ್ಳುತ್ತೇವೆ ಎಂದರು. ಒಬ್ಬ ಶಿಕ್ಷಕರನ್ನು ಕೊಡುವ ವ್ಯವಸ್ಥೆ ಮಾಡುತ್ತೇವೆ. ಶಾಲೆ ವಿಲೀನವಾಗುವ ಯಾವ ಆದೇಶ ಸದ್ಯ ಬಂದಿಲ್ಲ. ಶಾಲೆ ಮುಚ್ಚುವುದಿಲ್ಲ ಎಂದರು.

ಈ ಪ್ರತಿಭಟನೆಯಲ್ಲಿ ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷರಾದ ಹೊನ್ನೂರ ಸಾಬ್, ನಿವೃತ್ತ ಬಿಎಂಟಿಸಿ ಇನ್ಸ್ಪೆಕ್ಟರ್ ವೆಂಕಟೇಶ್, ಬೋರಪ್ಪ ಗ್ರಾಮ ಪಂಚಾಯಿತಿ ಮಾಜಿ ಸದಸ್ಯರು, ಮಾಜಿ ಎಸ್ ಡಿ ಎಂ ಸಿ ಗುರುಸ್ವಾಮಿ, ರಘು ಎಂ, ಇಂದ್ರಮ್ಮ, ಲೋಕೇಶ, ತಿಪ್ಪೇಸ್ವಾಮಿ, ಈಶ್ವರ,ಹರೀಶ, ಜಗದೀಶ,ರಾಮದಾಸ್ .AIDSOಜಿಲ್ಲಾಧ್ಯಕ್ಷರಾದ ಪೋಜಾ ಹಾಗೂ ಎಸ್ ಆರ್ ಇಂದಿರಾ ಸರ್ವಜನಿಕ ಶಿಕ್ಷಣ ಉಳಿಸಿ ಹೋರಾಟ ಸಮಿತಿಯ ಜಿಲ್ಲಾ ಮುಂಖಡರು.ಸುಮನ ಟಿ ಎಸ್ ಜಿಲ್ಲಾ ಕಾರ್ಯದರ್ಶಿ ಎಐಡಿಎಸ್ಓ ಸೇರಿದಂತೆ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

You missed

error: Content is protected !!