ಸ್ಮಾರ್ಟ್ ಸಿಟಿ ಯೋಜನೆ ಕಾಮಗಾರಿಗಳ ಗುಣಮಟ್ಟ ಪರಿಶೀಲನೆಗೆ ಸೂಚಿನೆ ನೀಡಿದ ಸಚಿವ

ದಾವಣಗೆರೆ: (smart city)ದಾವಣಗೆರೆ ಸ್ಮಾರ್ಟ್‍ಸಿಟಿ ಯೋಜನೆಯಡಿ ಕೈಗೊಂಡ ಕಾಮಗಾರಿಗಳ ನೈಜತೆ ಮತ್ತು ಗುಣಮಟ್ಟ ಪರಿಶೀಲನೆಯನ್ನು ಪಾಲಿಕೆ ಮೇಯರ್ ಮತ್ತು ಸದಸ್ಯರು ನಡೆಸಬೇಕೆಂದು ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಸೂಚಿಸಿದ್ದಾರೆ.

ಅವರು ಶನಿವಾರ ಜಿಲ್ಲಾ ಆಡಳಿತ ಭವನದಲ್ಲಿ ಜಿಲ್ಲಾಧಿಕಾರಿ ಮತ್ತು ಸ್ಮಾರ್ಟ್ ಸಿಟಿ ಯೋಜನೆ ಅಧಿಕಾರಿಗಳು, ಪಾಲಿಕೆ ಅಧಿಕಾರಿಗಳು ಮತ್ತು ಜಲಸಿರಿ ಯೋಜನೆ ಅಧಿಕಾರಿಗಳು ಹಾಗೂ ನಗರಾಭಿವೃದ್ದಿ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ನಡೆಸಿದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸ್ಮಾರ್ಟ್ ಸಿಟಿ ಯೋಜನೆಯಡಿ ನಗರವನ್ನು ಅಚ್ಚುಕಟ್ಟಾಗಿ ಮತ್ತು ಸುಂದರವಾಗಿಸಲು ಅಗತ್ಯವಿರುವ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವ ಉದ್ದೇಶದಿಂದ ಯೋಜನೆಯನ್ನು ಜಾರಿಗೊಳಿಸಿದ್ದು, ಅಧಿಕಾರಿಗಳು ಮನಸೋ ಇಚ್ಚೆ ಕಾಮಗಾರಿಗಳನ್ನು ತೆಗೆದುಕೊಂಡು ಅನ್ಯತಾ ಉದ್ದೇಶಗಳಿಗೆ ಯೋಜನೆ ಬಳಸಿದ್ದಾರೆ. ಕೆಲವು ಕಡೆ ತೀರಾ ಸಣ್ಣ ಸಣ್ಣ ಕಾಮಗಾರಿಗಳನ್ನು ತೆಗೆದುಕೊಂಡಿರುವುದು ಕಂಡು ಬಂದಿದೆ. ಈ ಕಾಮಗಾರಿಗಳನ್ನು ನೈಜವಾಗಿ ಕೈಗೊಂಡಿರುವ ಬಗ್ಗೆ ಮತ್ತು ಗುಣಮಟ್ಟ ಕಾಪಾಡಿರುವ ಬಗ್ಗೆ ಪಾಲಕೆ ಸದಸ್ಯರು ಸ್ಥಳ ಪರಿಶೀಲನೆ ಮಾಡಿ ವರದಿ ನೀಡಲು ಪಾಲಿಕೆ ಆಯುಕ್ತರಿಗೆ ಸೂಚನೆ ನೀಡಿದರು.

ಸ್ಮಾರ್ಟ್ ಸಿಟಿ ಯೋಜನೆ ಲೆಕ್ಕ ಪರಿಶೀಲನೆಗೆ ಸೂಚನೆ: ಸ್ಮಾರ್ಟ್ ಸಿಟಿ ಯೋಜನೆಯಡಿ ಮೂಲಭೂತ ಸೌಕರ್ಯ, ಆರೋಗ್ಯ, ಸಾರಿಗೆ, ರಸ್ತೆ, ಮಾಹಿತಿ ತಂತ್ರಜ್ಞಾನ ವಲಯ ಸೇರಿದಂತೆ 14 ವಿವಿಧ ವಲಯಗಳಲ್ಲಿ ಒಟ್ಟು 114 ಕಾಮಗಾರಿಗಳನ್ನು ತೆಗೆದುಕೊಳ್ಳಲಾಗಿದೆ. ಇದುವರೆಗೆ 882 ಕೋಟಿ ಅನುದಾನವನ್ನು ಬಿಡುಗಡೆ ಮಾಡಲಾಗಿದೆ. ಇದುವರೆಗೆ ಎಷ್ಟು ಬಿಲ್ಲುಗಳನ್ನು ಪಾವತಿಸಲಾಗಿದೆ ಮತ್ತು ಉಳಿಕೆ ಎಷ್ಟಿದೆ ಎಂಬ ಸಂಪೂರ್ಣ ವಿವರವನ್ನು ನೀಡಲು ಸೂಚನೆ ನೀಡಿದರು.

ಬಸ್ ನಿಲ್ಲಂದತೆ ಬಸ್‍ಸ್ಟ್ಯಾಂಡ್ ನಿರ್ಮಾಣ : ಖಾಸಗಿ ಬಸ್ ನಿಲ್ದಾಣ ಸೇರಿದಂತೆ ಅನೇಕ ಕಾಮಗಾರಿಗಳನ್ನು ಅವೈಜ್ಞಾನಿಕವಾಗಿ ನಿರ್ಮಾಣ ಮಾಡಲಾಗಿದೆ. ಖಾಸಗಿ ಬಸ್ ನಿಲ್ದಾಣವನ್ನು 23 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದ್ದು ಅಲ್ಲಿ ಬಸ್ ನಿಲ್ಲಿಸಲು ಸಾಧ್ಯವಾಗದ ರೀತಿಯಲ್ಲಿ ಬಸ್ ಸ್ಟ್ಯಾಂಡ್ ನಿರ್ಮಿಸಲಾಗಿದೆ. ಮತ್ತು ಅಗತ್ಯವಿಲ್ಲದ ಕಡೆ ಸ್ಮಾರ್ಟ್ ಸಿಟಿ ಯೋಜನೆಯಡಿ ಕಾಮಗಾರಿ ಕೈಗೊಳ್ಳಲಾಗಿದೆ. ಚರಂಡಿ ನಿರ್ಮಾಣವನ್ನು ಪಾಲಿಕೆಯಿಂದ ಮಾಡಲಾಗುತ್ತಿದೆ. ಆದರೆ ಈ ಯೋಜನೆಯಡಿ ಕನಿಷ್ಠ 1 ಲಕ್ಷದ ಕಾಮಗಾರಿಯನ್ನು ತೆಗೆದುಕೊಳ್ಳಲಾಗಿದೆ. ಮತ್ತು ರಸ್ತೆಯ ಪಾದಚಾರಿ ಮಾರ್ಗದಲ್ಲಿ ಅಳವಡಿಸಿರುವ ಪೈಪ್‍ಗಳು 2.02 ಎಂಎಂ ಇದ್ದು ಯೋಜನೆಯಲ್ಲಿ 3.4 ಎಂಎಂ ಎಂದು ತೋರಿಸಲಾಗಿದೆ. ಒಳಚರಂಡಿ ಮುಚ್ಚಲು ಮ್ಯಾನ್‍ವೋಲ್ ಗೆ ಅಳವಡಿಸಿರುವ ಮುಚ್ಚಳ 40 ಟನ್ ಸಾಮಥ್ರ್ಯವನ್ನು ಹೊಂದಿರಬೇಕು, ಆದರೆ ಅದಕ್ಕಿಂತ ಕಡಿಮೆ ಗುಣಮಟ್ಟದಲ್ಲಿ ಅಳವಡಿಸಿರುವುದರಿಂದ ಮಳೆಗಾಲದಲ್ಲಿ ಇದರಿಂದ ತೊಂದರೆಯಾಗಲಿದೆ ಎಂದರು.

ಈ ಹಿಂದೆ ಸಿಜೆ ಆಸ್ಪತ್ರೆ ಟ್ರಾಮಾ ಕೇರ್ ಸೆಂಟರ್ ನಿರ್ಮಾಣಕ್ಕೆ ಬಜೆಟ್‍ನಲ್ಲಿ ಸೇರಿಸಲಾಗಿತ್ತು. ಆದರೆ ಸರ್ಕಾರದಿಂದ ಅನುದಾನವನ್ನು ಬಿಡುಗಡೆ ಮಾಡಿಸದೇ ಈ ಯೋಜನೆಯಡಿ ನಿರ್ಮಾಣ ಮಾಡಲಾಗಿದೆ. ಮತ್ತು ಸ್ಟೇಡಿಯಂ, ಯುಬಿಡಿಟಿ ಇಂಜಿನಿಯರಿಂಗ್ ಕಾಲೇಜಿನ ಸಂಶೋಧನಾ ಕೊಠಡಿ ನಿರ್ಮಾಣ, ಈಜುಕೊಳ ಸೇರಿದಂತೆ ಅನೇಕ ಕಾಮಗಾರಿಗಳನ್ನು ತೆಗೆದುಕೊಂಡು ಅನುದಾನ ಸದ್ಬಳಕೆ ಮಾಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸ್ಮಾರ್ಟ್ ಸಿಟಿ ಯೋಜನೆಯಡಿ ಪ್ರಮುಖ ವೃತ್ತಗಳಲ್ಲಿ ಮತ್ತು ರಸ್ತೆಗಳಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಆದರೆ ಈ ಹಿಂದೆ ಅಳವಡಿಸಲಾದ ಕ್ಯಾಮೆರಾಗಳು ಎಲ್ಲಿವೆ, ವೃತ್ತಗಳಲ್ಲಿ ಅಳವಡಿಸಿರುವ ಸಿಗ್ನಲ್‍ಗಳನ್ನು ಒಂದಕ್ಕೊಂದು ವೃತ್ತಕ್ಕೆ ಸರಾಗವಾಗಿ ಕ್ರಮಿಸುವಂತೆ ವೈಜ್ಞಾನಿಕವಾಗಿ ಅಳವಡಿಸಲು ಸೂಚನೆ ನೀಡಿದರು.

ಜುಲೈನಲ್ಲಿ ಜನಸಿರಿ ನೀರು; ಜಲಸಿರಿ ಯೋಜನೆಯಡಿ ಪ್ರತಿ ಮನೆಗೂ 24×7 ಶುದ್ದ ಕುಡಿಯುವ ನೀರು ಒದಗಿಸಲು ಉದ್ದೇಶಿಸಲಾಗಿದ್ದು, ಬರುವ ಜುಲೈನಲ್ಲಿ ಎಲ್ಲಾ ವಾರ್ಡ್‍ಗಳಿಗೂ ಜಲಸಿರಿ ಯೋಜನೆಯಡಿ ನೀರು ಸರಬರಾಜು ಮಾಡಲು ಕ್ರಮ ಕೈಗೊಳ್ಳಬೇಕೆಂದು ಸೂಚನೆ ನೀಡಿದರು. ಎರಡು ಪ್ರಾಜೆಕ್ಟ್‍ಗಳಲ್ಲಿ ಇದು ಅನುಷ್ಟಾನವಾಗುತ್ತಿದ್ದು ಬಾತಿ ಗುಡ್ಡಕ್ಕೆ ಲಿಫ್ಟ್ ಮಾಡಲು 83 ಕೋಟಿ ಮತ್ತು ವಿತರಣಾ ಪ್ರಾಜೆಕ್ಟಾಗಿ 453 ಕೋಟಿಗೆ ಯೋಜನೆ ಅನುಷ್ಠಾನ ಮಾಡಲಾಗುತ್ತಿದೆ. ರಾಷ್ಟ್ರೀಯ ಹೆದ್ದಾರಿ ಸರ್ವೀಸ್ ರಸ್ತೆಯ ಪಕ್ಕದಲ್ಲಿ 1 ಕಿ.ಮೀ ಮತ್ತು ಮೈನ್‍ಲೈನ್‍ನಲ್ಲಿ ಖಾಸಗಿ ಜಮೀನಿನಲ್ಲಿ 500 ಮೀಟರ್ ಪೈಪ್ ಅಳವಡಿಕೆ ಬಾಕಿ ಇದ್ದು ಇದನ್ನು ಜುಲೈ 15 ರೊಳಗಾಗಿ ಮುಕ್ತಾಯ ಮಾಡಿ ಜುಲೈ ಅಂತ್ಯದೊಳಗಾಗಿ ನೀರು ನೀಡಲು ಕ್ರಮ ವಹಿಸಲು ಸೂಚನೆ ನೀಡಿದರು.
ಎಂ-40 ರಸ್ತೆ ಗುಣಮಟ್ಟ ಕಾಪಾಡಿ: ಜಲಸಿರಿ ಕಾಮಗಾರಿಗಳನ್ನು ನಗರದಲ್ಲಿ ಕೈಗೊಳ್ಳುವಾಗ ರಸ್ತೆ ಪುನರ್ ನಿರ್ಮಾಣ ಮಾಡುವಾಗ ಕೇವಲ ಎಂ-20 ಮತ್ತು ಎಂ-10 ಗುಣಮಟ್ಟದಲ್ಲಿ ರಸ್ತೆ ನಿರ್ಮಾಣ ಮಾಡಲಾಗುತ್ತದೆ. ಈ ಹಿಂದೆಯೇ ನಾನು ಎಂ-40 ಗುಣಮಟ್ಟದ ರಸ್ತೆ ನಿರ್ಮಾಣ ಮಾಡಲಾಗಿತ್ತು. ಅದೇ ರೀತಿ ಎಂ-40 ಗುಣಮಟ್ಟದಲ್ಲಿಯೇ ರಸ್ತೆ ಪುನರ್ ನಿರ್ಮಾಣ ಮಾಡಬೇಕೆಂದು ಸೂಚನೆ ನೀಡಿದರು.

ಬೀದಿ ದೀಪ ಅಳವಡಿಕೆಗೆ ಸೂಚನೆ: ಪಾಲಿಕೆಯ ವ್ಯಾಪ್ತಿಯಲ್ಲಿ ಶಾಮನೂರಿನಲ್ಲಿಯೇ ಮುಖ್ಯವಾಗಿರುವ ಹೈಮಾಸ್ಕ್ ದೀಪ ಕೆಟ್ಟು ಸುಮಾರು ದಿನಗಳಾಗಿವೆ. ಇದೇ ರೀತಿ ಅನೇಕ ಕಡೆ ಕತ್ತಲೆಯಿಂದ ಕೂಡಿದ್ದು ಅಗತ್ಯವಿರುವ ಕಡೆ ಬೀದಿದೀಪಗಳನ್ನು ಅಳವಡಿಸಲು ಸೂಚನೆ ನೀಡಿ ಈ ಹಿಂದೆ ಪಾಲಿಕೆಯಿಂದ ಹಾಸ್ಟೆಲ್‍ಗಳಿಗೆ ಸೋಲಾರ್ ಅಳವಡಿಸಲು ಕಾಮಗಾರಿ ಕೈಗೊಳ್ಳದೇ ಒಂದು ಕೋಟಿಗಿಂತ ಹೆಚ್ಚು ಮೊತ್ತವನ್ನು ಗುತ್ತಿಗೆದಾರರಿಗೆ ಪಾವತಿಸಿರುವ ದೂರು ಬಂದಿದ್ದು ಕೂಡಲೇ ಪರಿಶೀಲಿಸಿ ತಪ್ಪಿತಸ್ಥರ ವಿರುದ್ದ ಕ್ರಮಕ್ಕೆ ಸೂಚನೆ ನೀಡಿದರು.

ಸಭೆಯಲ್ಲಿ ಮೇಯರ್ ವಿನಾಯಕ್ ಪೈಲ್ವಾನ್, ಜಿಲ್ಲಾಧಿಕಾರಿ ಶಿವಾನಂದ ಕಾಪಶಿ, ಅಪರ ಜಿಲ್ಲಾಧಿಕಾರಿ ಪಿ.ಎನ್.ಲೋಕೇಶ್, ಪಾಲಿಕೆ ಆಯುಕ್ತರಾದ ರೇಣುಕಾ, ಸ್ಮಾರ್ಟ್ ಸಿಟಿ ಎಂ.ಡಿ ವೀರೇಶ್‍ಕುಮಾರ್, ದೂಡಾ ಆಯುಕ್ತ ಬಸವನಗೌಡ, ಜಲಸಿರಿ ಕಾರ್ಯಪಾಲಕ ಇಂಜಿನಿಯರ್ ಕಾಯಿ ಮಂಜುನಾಥ್ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

You missed

error: Content is protected !!