ಹೂವ ತರುವೆನಲ್ಲದೆ ಹುಲ್ಲ ತಾರೆನೆಂದ ಶಾಸಕರು:

ಇತ್ತೀಚೆಗೆ ಇಳಿಸಂಜೆ ಸಮಯದಲ್ಲಿ ಜಗಳೂರು ಪ್ರವಾಸಿ ಮಂದಿರದಲ್ಲಿ ಸಾಹಿತಿಗಳ ದೊಡ್ಡ ದಂಡೆ ನೆರೆದಿತ್ತು .ಒಂದೆರಡಲ್ಲ ಅಲ್ಲಿ ಆರು ಕನ್ನಡ ಪರ ಸಂಘಟನೆಗಳ ಸಮೂಹ ಆದಾಗಿತ್ತು. ಕನ್ನಡ ಸಾಹಿತ್ಯ ಪರಿಷತ್ತು, ಶರಣ ಸಾಹಿತ್ಯ ಪರಿಷತ್ತು, ಕದಳಿ ಮಹಿಳಾ ವೇದಿಕೆ, ಚುಟುಕು ಸಾಹಿತ್ಯ ಪರಿಷತ್ತು, ಬಯಲು ಸಾಹಿತ್ಯ ವೇದಿಕೆ, ಮಕ್ಕಳ ಸಾಹಿತ್ಯ ಪರಿಷತ್ತು ಹೀಗೆ ಎಲ್ಲರ ಸಂಗಮ ಅಲ್ಲಿ. ಕಾರಣ ನೂತನವಾಗಿ ಆಯ್ಕೆಯಾದ ಜಗಳೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಬಿ ದೇವೇಂದ್ರಪ್ಪನವರಿಗೆ ಗೌರವ ಸಮರ್ಪಣೆ ಸಲ್ಲಿಸುವ ಆಶಯ.

ಘಂಟೆ ಬಾರಿಸಿದ ಹಾಗೆ ಕರಾರುವಕ್ಕಾಗಿ ಏಳು ಗಂಟೆಗೆ ಶಾಸಕರು ಬಂದರು. ಎಲ್ಲಾ ಸಂಘಟನೆಗಳ ಪರವಾಗಿ ಸಾಹಿತಿ ಎನ್. ಟಿ. ಎರ್ರಿ ಸ್ವಾಮಿ ಅವರು ಚುಟುಕಾಗಿ ಪ್ರಾಸ್ತಾವಿಕ ನುಡಿ ನುಡಿದರು .ಎಲ್ಲರೂ ಸರಳವಾಗಿ ಗೌರವಿಸಿದ್ದು ಶಾಸಕರಿಗೆ ಹತ್ತಾರು ಉತ್ತಮ ಪುಸ್ತಕಗಳನ್ನು ನೀಡುವುದರ ಮೂಲಕ.

ಬೇರೆ ಯಾವುದೇ ಭಾಷಣಗಳಿಲ್ಲ ಭಾಷಣದ ಬದಲಾಗಿ ತಾಲೂಕಿನ ಅಭಿವೃದ್ಧಿಗೆ ಎಲ್ಲರೂ ಸೇರಿ ಕೈಗೊಳ್ಳಬಹುದಾದ ಅಭಿವೃದ್ಧಿ ಕಾರ್ಯಗಳ ಚಿಂತನೆ ಅಲ್ಲಿ ನಡೆಯಿತು. ನೀವೆಲ್ಲ ಬುದ್ಧಿಜೀವಿಗಳಿದ್ದೀರಿ ,ನಿಮ್ಮ ಸಲಹೆ, ಸೂಚನೆಗಳು ನನಗೆ ಬೇಕು ಎಂದು ಮಾತು ಆರಂಭಿಸಿದ ದೇವೇಂದ್ರಪ್ಪನವರು ಸಂವಾದ ನಡೆಸಿದ್ದು ಎಷ್ಟು ಸಮಯ ಗೊತ್ತೇ? ಬರೋಬ್ಬರಿ ಎರಡುವರೆ ಗಂಟೆಗಳ ಕಾಲ .ಸಂವಾದದಲ್ಲಿ ಶಾಸಕರು ಮನ ಬಿಚ್ಚಿ ಮಾತನಾಡಿದ್ದು, ಅಭಿವೃದ್ಧಿಯ ಬಗ್ಗೆ ತೋರಿದ ಕಾಳಜಿ, ನಿಶ್ಚಿತ ಗುರಿ, ಕಾರ್ಯತಂತ್ರ,ರೂಪು ರೇಷಗಳ ಬಗ್ಗೆ ಅವರು ಗಂಟೆಗಳ ಕಾಲ ಏಳೆ ಎಳೆಯಾಗಿ ಸಾಹಿತಿಗಳ ಸಮೂಹದ ಮುಂದೆ ಬಿಚ್ಚಿಟ್ಟರು.ಸಾಹಿತಿಗಳೆಲ್ಲ ಸೇರಿ ಏನನ್ನು ಹೇಳಬೇಕು ಎಂದುಕೊಂಡಿದ್ದರು ಆ ಎಲ್ಲಾ ವಿಚಾರಗಳು ಈಗಾಗಲೇ ದೇವೇಂದ್ರಪ್ಪನವರ ಎದೆಯಲ್ಲಿ ಮನೆ ಮಾಡಿದ್ದವು ಎಂಬುದೊಂದು ಆಶ್ಚರ್ಯ. ಶಾಲೆಯಲ್ಲಿ ಗುರುಗಳು ಪಾಠ ಮಾಡಿದರೆ ಮಕ್ಕಳೆಲ್ಲ ಕೇಳ್ತಾರಲ್ಲ ,ಅಂತಹ ವಾತಾವರಣ ದೇವೇಂದ್ರಪ್ಪನವರ ಮಾತುಗಳಲ್ಲಿ ಅಂದು ಸೃಷ್ಟಿಯಾಗಿತ್ತು.

ನಾನು ಕಲ್ಲಾಗಿ ನಿಂತ ಅಹಲ್ಯೆ ಯಂತಿದ್ದೆ. ಶ್ರೀರಾಮಚಂದ್ರನ ದರ್ಶನದಿಂದ ಶಾಪ ವಿಮೋಚನೆಯಾಗಿ ಅಹಲ್ಯೆ ಮತ್ತೆ ಬದುಕು ಕಟ್ಟಿಕೊಂಡ ಹಾಗೆ ನಾನು ಮತದಾರ ಪ್ರಭುವಿನ ,ಬುದ್ಧಿಜೀವಿಗಳ ದರ್ಶನದಿಂದ ಪುಣ್ಯವಂತನಾಗಿದ್ದೇನೆ. ನಿಮ್ಮೆಲ್ಲರದು ಸೂರ್ಯನ ಬೆಳಕಾದರೆ ನನ್ನದು ದೀಪದ ಬೆಳಕು,ಆದರೆ ಆರದಿರಲಿ ಬೆಳಕು .

ಸಮಾಜವನ್ನು ಬದಲಾಯಿಸುವ ವ್ಯಕ್ತಿ ಮೊದಲು ತಾನು ಬದಲಾಗಬೇಕು ಎನ್ನುವ ಮಹಾತ್ಮ ಗಾಂಧೀಜಿಯವರ ಮಾತು ನನಗೆ ಬಹಳ ಹಿತ. ನಾನು ಬೇರೆಲ್ಲ ಶಾಸಕರಿಗಿಂತ ಭಿನ್ನವಾಗಿ ನನ್ನ ನಡೆ ನುಡಿಗಳ ಮೂಲಕ ಆದರ್ಶವಾಗಿ ಇರಲು ಬಯಸುತ್ತೇನೆ ಅಂತೆಯೇ ಜಗಳೂರು ವಿಧಾನಸಭಾ ಕ್ಷೇತ್ರ ಮಾದರಿಯಾಗುವಂತೆ ಶ್ರಮಿಸುತ್ತೇನೆ .

ನನ್ನ ಜೀವನವೇ ಒಂದು ನಾಟಕ ರಂಗ, ಹಲವು ಅಚ್ಚರಿಗಳ ,ತಿರುವುಗಳ ಕಂತೆ
ದೇವರು ನನಗೆ ಬೇಕಾದಷ್ಟು ಕೊಟ್ಟಿದ್ದಾನೆ .ಹಾಗಾಗಿ ನಾನು ಯಾರ ಬಳಿಯೂ ಹಣಕ್ಕಾಗಿ ಕೈ ಒಡ್ಡುವುದಿಲ್ಲ. ನಾನು ತಿನ್ನುವುದಿಲ್ಲ, ಯಾವ ಅಧಿಕಾರಿಯು ತಿನ್ನಲು ಬಿಡುವುದಿಲ್ಲ .ಸರ್ಕಾರದ ಕೆಲಸ ದೇವರ ಕೆಲಸ ಎಂಬುದನ್ನು ಅಧಿಕಾರಿಗಳಿಗೆ ನಾನು ಮನವರಿಕೆ ಮಾಡುತ್ತೇನೆ .

ಮದರ್ ತೆರೇಸಾ ಒಬ್ಬ ದಾದಿಯಾಗಿ ಇಲ್ಲಿಗೆ ಬಂದು ತನ್ನ ಸೇವೆಯ ಮೂಲಕ ತಾಯಿಯ ಸ್ಥಾನವನ್ನು ಅಲಂಕರಿಸಿದವರು .ಸೇವೆಯ ಮಹತ್ವವೇ ಅಂತಹುದು. ನಾನು ಅಂತಹ ಪ್ರಾಮಾಣಿಕ ಸೇವೆಗಾಗಿ ಶ್ರಮಿಸುವೆ .

ಹಸಿವು ,ಬಡತನದ ಅರಿವು ನನಗಿದೆ. ನಾನು ಸ್ವತಃ ಅದನ್ನು ಅನುಭವಿಸಿದ್ದೇನೆ .ಕ್ಷೇತ್ರದಲ್ಲಿ ಇರುವ ಬಡವರ ,ದೀನದಲಿತರ ,ನಿರ್ಗತಿಕರ, ಅನಾಥರ ,ಆಬಲೆಯರ ,ಮಹಿಳೆಯರ ಕಣ್ಣೀರು ಒರೆಸುವ ಕಾಯಕ ಪ್ರಥಮವಾದುದು ಎಂದು ನಾನು ನಂಬಿದ್ದೇನೆ. ಎಲ್ಲದಕ್ಕೂ ಸರ್ಕಾರವನ್ನೇ ನಂಬಿ ಕೂಡುವುದಕ್ಕಿಂತ ತಕ್ಷಣ ಕಾರ್ಯೂನ್ಮುಖವಾಗಬೇಕಿದೆ. ಒಂದು ಅನಾಥ ಸೇವಾ ನಿಧಿಯನ್ನು ಸ್ಥಾಪಿಸುವ ಹಂಬಲ ನನ್ನದು. ಶಾಸಕನಾಗಿ ನನಗೆ ಬರುವ ಪ್ರಥಮ ಸಂಬಳವನ್ನು ನಾನು ಇದಕ್ಕಾಗಿ ಮುಡುಪಾಗಿರುವೆ .ಇದ್ದಂತವರು, ಇಲ್ಲದವರು ಎಲ್ಲರೂ ಈ ನಿಧಿಗೆ ಕೈಜೋಡಿಸಲಿ. ಜಾಡಮಾಲಿ ಒಬ್ಬ ಒಂದು ರೂಪಾಯಿ ನಿಧಿಗೆ ನೀಡಿದರೂ ನನಗೆ ಸಂತೋಷವೇ. ಅನಾಥರನ್ನು ಬೀದಿ ಹೆಣವಾಗಿಸುವ ಬದಲು ಸೂಕ್ತ ಶವ ಸಂಸ್ಕಾರವನ್ನಾದರೂ ಮಾಡೋಣ ಎಂಬುದು ದೇವೇಂದ್ರಪ್ಪನವರ ಮನದಾಳದ ಮಾತು .

ರೈತರ ಮುಖದಲ್ಲಿ ಮಂದಹಾಸದ ನಗುವು ಮೂಡುವಂತಾಗಬೇಕು ಎಂಬುದು ನನ್ನ ಅಭಿಲಾಷೆ .ಅವರ ಸಂಕಷ್ಟಗಳಿಗೆ ಧ್ವನಿಯಾಗಿ, ಗಟ್ಟಿ ನೆಲೆಯಾಗಿ ನಾನು ನಿಲ್ಲುವೆ.

ಶಿಕ್ಷಕರು ಎಲ್ಲಿಯವರೆಗೆ ಕಲಿಕೆಯಲ್ಲಿ ವಿದ್ಯಾರ್ಥಿ ಆಗುವುದಿಲ್ಲವೋ ಅಲ್ಲಿಯವರೆಗೆ ತನ್ನ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಲಾರರು. ಕೆಲವು ಶಿಕ್ಷಕರು ತಪ್ಪು ಮಾಡಿದಾಗ ಅವರಿಗೆ ಶಿಕ್ಷೆ ಕೊಡುವ ಬದಲು ಮನ ಪರಿವರ್ತನೆ ಮಾಡಿ ಶಿಕ್ಷಕ ವೃತ್ತಿಯ ಮಹತ್ವವನ್ನು ತಿಳಿಸಿ ಕೊಡುವುದು ಮುಖ್ಯ ಎಂಬುದನ್ನು ತಾವು ಶಾಸಕರಾದ ನಂತರ ತಮಗೆ ಎದುರಾದ ಒಂದು ಘಟನಾವಳಿಯ ಮೂಲಕ ಎಲ್ಲರಿಗೂ ಮನವರಿಕೆ ಮಾಡಿದರು.

ಹೊಟ್ಟೆಯ ಹಸಿವಿನ ಜೊತೆ ನೆತ್ತಿಯ ಹಸಿವು ನೀಗಿಸುವುದೂ ಪ್ರಮುಖ. ತಾಲೂಕಿನಲ್ಲಿ ಹತ್ತಾರು ಸಾಹಿತ್ಯ ಸಂಘಟನೆಗಳಿವೆ .ಪ್ರತಿ ತಿಂಗಳು ಒಂದಿಲ್ಲೊಂದು ಚಟುವಟಿಕೆ ಆಗುವಂತಾಗಬೇಕು .ಅದಕ್ಕೆ ಬೇಕಾದ ಎಲ್ಲ ಸಹಕಾರ ನೀಡುವೆ ಎಂದು ಅವರು ನುಡಿದರು.

ನೂತನವಾಗಿ ಶಾಸಕನಾದ ನನ್ನಿಂದ ಬಹಳಷ್ಟು ನಿರೀಕ್ಷಿಗಳಿವೆ. ನಾನು ನಿಮ್ಮ ನಿರೀಕ್ಷೆಗಳನ್ನು ಹುಸಿಗೊಳಿಸುವುದಿಲ್ಲ .ನಾನು ಸತ್ಯದ ಪರವಾಗಿ ,ನ್ಯಾಯ ,ನೀತಿಯ ಪರವಾಗಿ ,ಮಾನವತೆಯ ಪರವಾಗಿ ನಿಲ್ಲುವೆ .ನಾನು ಕ್ಷೇತ್ರದಲ್ಲಿ ಜನರಿಗೆ ಹೂವ ತರುವೆನಲ್ಲದೆ ಹುಲ್ಲ ತಾರೆನು ಎಂದು ದೇವೇಂದ್ರಪ್ಪನವರು ಮಾತು ಸಮಾಪ್ತಿಗೊಳಿಸಿದಾಗ ಅಲ್ಲಿದ್ದ ಎಲ್ಲರಿಗೂ ಬೇರಾವುದೂ ಲೋಕದಲ್ಲಿ ವಿಹರಿಸಿದ ಅನುಭವ ಆಗಿದ್ದು ನಿಜ

ಕಾರ್ಯಕ್ರಮ ಅಲ್ಲಿಗೇ ಮುಗಿಯಲಿಲ್ಲ. ಶಾಸಕರು ಸಾಹಿತಿಗಳ ಇಡೀ ತಂಡವನ್ನು ಹೊಸದಾಗಿ ಪ್ರಾರಂಭಿಸಿದ ಜನ ಸಂಪರ್ಕ ಕಚೇರಿಗೆ ಕರೆದೊಯ್ದು ಅಲ್ಲಿ ಕೈಗೊಳ್ಳಲಿರುವ ಜನ ಮುಖಿ ಕಾರ್ಯಗಳ ಪರಿಚಯ ಮಾಡಿಸಿಕೊಟ್ಟರು .ಅಲ್ಲದೆ ಕಚೇರಿಯ ಗೋಡೆಗಳ ಮೇಲೆ ಅರ್ಥಪೂರ್ಣವಾದ ಶರಣರ,ದಾರ್ಶನಿಕರ, ಸಾಹಿತಿಗಳ ನುಡಿ ಸಾಲುಗಳು ಬರೆದಿರುವುದನ್ನು ತೋರಿಸಿದರು . ಅಲ್ಲಿ ಚರ್ಜೆ ಮುಗಿದದ್ದು ಗೋಡೆ ಗಡಿಯಾರ ರಾತ್ರಿ 9.30 ಕ್ಕೆ ಢಣ್ ಎಂದು ಘಂಟೆ ಬಾರಿಸಿದಾಗಲೇ.
ಇರಿ,ಇಲ್ಲಿಗೇ ಊಟ ತರಿಸೋಣ ಎಂದು ಶಾಸಕರು ನುಡಿದಾಗ ಇರಲಿ ಪರವಾಗಿಲ್ಲ ಎಂದು ಎಲ್ಲರೂ ಶುಭಕೋರಿ ಮೇಲೆದ್ದರು. ಇದೊಂದು ದಿಕ್ಸೂಚಿ ಕಾರ್ಯಕ್ರಮವಾಗಿ ಎಲ್ಲರಿಗೂ ಭಾಸವಾಯಿತು.
ಈ ಸಂದರ್ಭದಲ್ಲಿ ಸಾಹಿತಿ ಬಳಗದ ಡಿ.ಸಿ .ಮಲ್ಲಿಕಾರ್ಜುನ ಎನ್. ಟಿ. ಎ ರಿಸ್ವಾಮಿ, ಕೆ .ಸುಜಾತ ಜೆ .ಆರ್. ಗೌರಮ್ಮ, ಗೀತಾ ಮಂಜು, ಸತೀಶ್ ಬಿದರಿಕೆರೆ ,ನಾಗಲಿಂಗಪ್ಪ, ಓಬಪ್ಪ, ಎನ್ ಎಂ ರವಿಕುಮಾರ, ವ್ಯಾಸ ಗೊಂಡನಹಳ್ಳಿ ರಾಜಪ್ಪ ,ಕೃಷ್ಣಮೂರ್ತಿ, ಮಾರ ನಾಯಕ, ಲೀಲಾವತಿ ,ನಾಗರತ್ನ, ಶಾರದಮುಂತಾದವರುಇದ್ದರು.

(ವರದಿ :ಎನ್ ಟಿ ಎರ್ರಿ ಸ್ವಾಮಿ ಜಗಳೂರು)

ಹೂವ ತರುವೆನಲ್ಲದೆ ಹುಲ್ಲ ತಾರೆನೆಂದ ಶಾಸಕರು

Leave a Reply

Your email address will not be published. Required fields are marked *

You missed

error: Content is protected !!