ಮಾರಕ ರೋಗಗಳಿಂದ ಜಾನುವಾರುಗಳ ರಕ್ಷಣೆಗೆ ಲಸಿಕೆ ಅಗತ್ಯ:ಶಾಸಕ.ಬಿ.ದೇವೇಂದ್ರಪ್ಪ ಅಭಿಮತ
ಜಗಳೂರು ಸುದ್ದಿ: ಮಾರಕ ರೋಗಗಳಿಂದ ಜಾನುವಾರುಗಳ ರಕ್ಷಣೆಗೆ ಲಸಿಕೆ ಅಗತ್ಯ ಎಂದು ಶಾಸಕ ಬಿ.ದೇವೇಂದ್ರಪ್ಪ ಅಭಿಮತ ವ್ಯಕ್ತಪಡಿಸಿದರು.
ತಾಲೂಕಿನ ಜಗಳೂರು ಗೊಲ್ಲರಹಟ್ಟಿ ಗ್ರಾಮದಲ್ಲಿ ಮಂಗಳವಾರ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆವತಿಯಿಂದ ಹಮ್ಮಿಕೊಂಡಿದ್ದ ಎನ್ಎಡಿಸಿಪಿ ಮತ್ತು ಎಫ್ ಎಂ ಡಿ 4 ನೇ ಸುತ್ತಿನ ಕಾಲುಬಾಯಿ ಲಸಿಕಾ ಅಭಿಯಾನಕಾರ್ಯಕ್ರಮವನ್ನು ಗೋಮಾತೆ ಪೂಜಿಸುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
ಮಕ್ಕಳಗಿಂತಲೂ ಮಿಗಿಲಾಗಿ ಲಾಲನೆ ಪಾಲನೆಯೊಂದಿಗೆ ಸಾಕಿದ ರಾಸುಗಳು ಔಷಧಗಳಿಲ್ಲದ ರೋಗಗಳಿಗೆ ತುತ್ತಾಗಿ ಸರಣಿ
ಸಾವನ್ನಪ್ಪಿದರೆ ಲಕ್ಷಾಂತರ ರೂಪಾಯಿ ಮೌಲ್ಯಕ್ಕೆ ಬೆಲೆಬಾಳುವ ಎತ್ತುಗಳು,ಹಸುಗಳನ್ನು ಕಳೆದುಕೊಂಡರೆ ಆರ್ಥಿಕ ಸಂಕಷ್ಟದ ಜೊತೆಗೆ ಕೃಷಿಚಟುವಟಿಕೆಗಳಿಗೆ ಅವಲಂಬಿತವಾಗಿರುವ ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗುವುದು.ಅಲ್ಲದೆ ಕುರಿಗಾಹಿಗಳು ಕುರಿಸಾಕಾಣಿಕೆಯನ್ನೇ ಸ್ವಯಂ ಉದ್ಯೋಗವನ್ನಾಗಿಸಿಕೊಂಡಿದ್ದು.ಮಳೆಚಳಿಗಾಳಿಯಿಂದ ಮಾತ್ರವಲ್ಲ ಸಾಂಕ್ರಾಮಿಕ ರೋಗಗಳಿಂದ ರಕ್ಷಿಸಿಕೊಳ್ಳಲು ಮುಂಜಾಗ್ರತರಾಗಬೇಕು ಎಂದು ಕಿವಿಮಾತು ಹೇಳಿದರು.
ಕಳೆದ ವರ್ಷದಲ್ಲಿ ಚರ್ಮಗಂಟು ರೋಗ ತಾಲೂಕಿನಲ್ಲಿ ಎತ್ತುಗಳ ಮರಣಮೃದಂಗವೇ ಬಾರಿಸಿತು.ಆದ್ದರಿಂದ ಆಡಳಿತ ಘನ ಸರಕಾರ ಪಶುಪಾಲನಾ ಮತ್ತು ವೈದ್ಯಕೀಯ ಇಲಾಖೆಯಿಂದ ರಾಜ್ಯವ್ಯಾಪಿ ಒಂದು ತಿಂಗಳುಗಳಕಾಲ ಲಸಿಕಾ ಅಭಿಯಾನ ಆಯೋಜಿಸಿದ್ದು.ಪ್ರತಿಯೊಬ್ಬರೂ ಸದುಪಯೋಗ ಪಡೆದುಕೊಳ್ಳಬೇಕು.ದ್ವಾಪರ ಯುಗದಿಂದಲೂ ಕೃಷ್ಣನ ಆರಾಧಕರಾಗಿರುವ ಯಾದವ ಸಮುದಾಯದವರು ಇಂದಿಗೂ ಗೋವು ಸಾಕಾಣಿಕೆಯಲ್ಲಿ ಮುಂಚೂಣಿಯಲ್ಲಿರುವುದು ಶ್ಲಾಘನೀಯ.ಆದ್ದರಿಂದ ಗೊಲ್ಲರಹಟ್ಟಿ ಗ್ರಾಮದ ಮನೆ ಬಾಗಿಲಿನಿಂದಲೇ ಲಸಿಕಾ ಅಭಿಯಾನ ಆರಂಭಿಸಲಾಗಿದೆ.ಹಾಗೂ ಅಂಬ್ಯುಲೆನ್ಸ್ ಸೇವೆಯಿಂದ ಆಸ್ಪತ್ರೆಗಳಲ್ಲಿ ಹೆಚ್ಚಿನ ಚಿಕಿತ್ಸೆ ಕೊಡಿಸಲು ಸಹಕಾರಿಯಾಗಲಿದೆ ಎಂದು ತಿಳಿಸಿದರು.
ಪಶುಇಲಾಖೆ ಸಹಾಯಕ ನಿರ್ದೇಶಕ ಡಾ. ಲಿಂಗರಾಜ್ ಮಾತನಾಡಿ,ಕಾಲುಬಾಯಿ ವೈರಸ್ ಸೋಂಕಿತ ರೋಗವಾಗಿದ್ದು.ಯಾವುದೇ ಔಷಧಿ ಚಿಕಿತ್ಸೆಗಳು ಲಭ್ಯವಿಲ್ಲ.ಲಸಿಕೆಯಿಂದ ಪರಿಹಾರ ಸಾಧ್ಯ.ಲಸಿಕೆ ಕುರಿತು ಆತಂಕ ಸಲ್ಲದು.ಹಸುಗಳಿಗೆ ಯಾವುದೇ ಅಡ್ಡಪರಿಣಾಮಗಳಿಲ್ಲ.ಹಾಲು ಕೊಡುವ ಪ್ರಮಾಣ ಎರಡು ದಿನಗಳಕಾಲ ಕಡಿಮೆಯಾಗಬಹುದು.ಆದರೆ ಗಂಟು ಇತರೆ ಲಕ್ಷಣಗಳು ವಾಸಿಯಾಗುತ್ತವೆ ಎಂದು ಮಾಹಿತಿ ನೀಡಿದರು.
ಸಂದರ್ಭದಲ್ಲಿ ಕೆಎಂಎಫ್ ವಿಸ್ತರಣಾಧಿಕಾರಿ ಶ್ರೀಮತಿ ರಶ್ಮಿ,ಪಶುಇಲಾಖೆ ವಿಸ್ತರಣಾಧಿಕಾರಿ ಡಾ.ರಾಮಚಂದ್ರಪ್ಪ ,ಜಾನುವಾರು ಅಭಿವೃದ್ದಿ ಅಧಿಕಾರಿ ಡಾ.ಷಡಕ್ಷರಿ,ಸಿಬ್ಬಂದಿಗಳಾದ ಶಾಂತಕುಮಾರ,ರಾಜಭಕ್ಷಿ,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಷಂಷೀರ್ ಅಹಮ್ಮದ್,ಸಮಾಜಕಲ್ಯಾಣ ಇಲಾಖೆ ನಿವೃತ್ತ ಸಹಾಯಕ ನಿರ್ದೇಶಕ ಬಿ. ಮಹೇಶ್ವರಪ್ಪ,ಆಪ್ತಕಾರ್ಯದರ್ಶಿ ಗೌಸ್ ಪೀರ್, ಮುಖಂಡರಾದ ಕಾನನಕಟ್ಟೆ ಪ್ರಭು,ಆದರ್ಶರೆಡ್ಡಿ,ಸೇರಿದಂತೆ ಇದ್ದರು.