ಎಸ್ ಸಿ ಎಸ್ ಟಿ ಪತ್ರಿಕಾವರದಿಗಾರರ ಕ್ಷೇಮಾಭಿವೃದ್ದಿ ಸಂಘದಿಂದ ಮಹಾತ್ಮಗಾಂಧಿಜಿ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಆಚರಣೆ.
ಜಗಳೂರು ಸುದ್ದಿ:ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ಎಸ್ ಸಿ ಎಸ್ ಟಿ ಪತ್ರಿಕಾ ವರದಿಗಾರರ ಕ್ಷೇಮಾಭಿವೃದ್ದಿ ಸಂಘದಿಂದ ಮಹಾತ್ಮಗಾಂಧಿಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಅಂಗವಾಗಿ ಪದಾಧಿಕಾರಿಗಳು ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದರು.
ಸಂಘದ ರಾಜ್ಯ ಗೌರವ ಅಧ್ಯಕ್ಷ ಸಿ.ಬಸವರಾಜ್ ಮಾತನಾಡಿ,ದೇಶದ ಸ್ವಾತಂತ್ರ್ಯಕ್ಕಾಗಿ ಅಹಿಂಸಾ ಮಾರ್ಗದಿಂದ ಹಲವಾರು ಚಳುವಳಿ ನಡೆಸಿದ ಮಹಾತ್ಮಗಾಂಧಿಜಿ ಅವರ ಆದರ್ಶಗಳನ್ನು ಯುವಪೀಳಿಗೆ ಜೀವನದಲ್ಲಿ ಅಳವಡಿಸಿಕೊಳ್ಳಬೇಕು.ಮಹಾನೀಯರ ಚರಿತ್ರೆಗಳನ್ನು ಮರೆಮಾಚುವ ಮೂಲಕ ಗಾಂಧಿಜಿಯನ್ನು ಹತ್ಯೆಗೈದ ಗೂಡ್ಸೆ ವಂಶದವರನ್ನು ಸಮಾಜದಲ್ಲಿ ವೈಭವೀಕರಿಸುತ್ತಿರುವುದು ಬೇಸರದ ಸಂಗತಿ ಎಂದರು.
ಸಂಘದ ರಾಜ್ಯ ಉಪಾಧ್ಯಕ್ಷ ರಾಜಪ್ಪ ವ್ಯಾಸಗೊಂಡನಹಳ್ಳಿ ಮಾತನಾಡಿ,ಮಹಾತ್ಮಗಾಂಧಿಜಿ ಅವರು ದೇಶದ ಜನತೆಗೆ ಬ್ರಿಟೀಷರ ಗುಲಾಮಗಿರಿ ದಾಸ್ಯದಿಂದ ವಿಮೋಚನೆಗಾಗಿ ದೇಶದ ಮೂಲೆ ಮೂಲೆಗಳಿಂದ ಜನಜಾಗೃತಿಗೊಳಿಸಿ ಹೊರಾಟ ರೂಪಿಸಿದರು.ಅಲ್ಲದೆ ಪತ್ರಿಕೆಗಳನ್ನು ಆರಂಭಿಸಿ ಬರವಣಿಗೆ ಮೂಲಕ ಹೊಸ ಆಂದೋಲನ ಸೃಷ್ಠಿಸಿದರು.ಅಲ್ಲದೆ ಗ್ರಾಮಸ್ವರಾಜ್ಯದ ಪರಿಕಲ್ಪನೆ ಸಾರಿದರು ಎಂದು ತಿಳಿಸಿದರು.
ರಾಜ್ಯ ಸಂಘಟನಾ ಕಾರ್ಯದರ್ಶಿ ಮಾದಿಹಳ್ಳಿ ಮಂಜುನಾಥ್ ಮಾತನಾಡಿ,ಸ್ವಾತಂತ್ರ್ಯ ಪೂರ್ವದಲ್ಲಿ ಅಸ್ಪೃಶ್ಯತೆ ಮತ್ತು ಪರಕೀಯರ ಆಳ್ವಿಕೆ ವಿಜೃಂಭಿಸುತ್ತಿದ್ದ ಸಂದರ್ಭದಲ್ಲಿ ಮಹಾತ್ಮಗಾಂಧಿಜಿ ಹಾಗೂ ಬಾಬಾಸಾಹೇಬ್ ಅಂಬೇಡ್ಕರ್ ಅವರ ಸಂಕಲ್ಪದಿಂದ ಹೊರಾಟದ ಫಲವಾಗಿ ಸ್ವಾತಂತ್ರ್ಯ ಮತ್ತು ಸಂವಿಧಾನ ಕೊಡುಗೆಯಾದವು.ಪ್ರಸಕ್ತವಾಗಿ ದೇಶದ ಸಂಪತ್ತನ್ನು ಸಂವಿಧಾನಬದ್ದ ಸಮಾನಹಕ್ಕುಗಳನ್ನಾಗಿ ಅನುಭವಿಸುತ್ತಿದ್ದೇವೆ ಎಂದು ಹೇಳಿದರು.
ರಾಜ್ಯ ಉಪಾಧ್ಯಕ್ಷ ಧನ್ಯಕುಮಾರ್ ಎಚ್.ಎಂ.ಹೊಳೆಮಾತನಾಡಿ,ರಾಷ್ಟ್ರಪಿತರಾಗಿರುವ ಗಾಂಧೀಜಿ ಅವರು ಸಂಘರ್ಷದ ಹೊರತಾಗಿ ಶಾಂತಿಯ ಹೊರಾಟದಿಂದ ಹಕ್ಕುಗಳನ್ನು ಪಡೆಯಬಹುದು ಎಂಬುದನ್ನು ಸಾಬೀತುಪಡಿಸಿ ಇಂದಿಗೂ ದಾರಿದೀಪವಾಗಿದ್ದಾರೆ.ಅವರ ಕೌಶಲ್ಯಾಧಾರಿತ ಶಿಕ್ಷಣದ ಕೊಡುಗೆ,ಸರಳ ಜೀವನಶೈಲಿಯಿಂದ ತಳಸಮುದಾಯಗಳಿಗೆ ಸಾಮಾಜಿಕನ್ಯಾಯ ಒದಗಿಸಿದರು.ವಿಶ್ವಕ್ಕೆ ಅವರ ತತ್ವಾದರ್ಶಗಳನ್ನು ಸಾರಬೇಕಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ರಾಜ್ಯಾಧ್ಯಕ್ಷ ಎಚ್.ಆರ್.ಬಸವರಾಜ್ ಮಾತನಾಡಿ,ರಾಜ್ಯದಲ್ಲಿ ಎಸ್ ಸಿ ಎಸ್ ಟಿ ಪತ್ರಿಕಾ ವರದಿಗಾರರ ಕ್ಷೇಮಾಭಿವೃದ್ದಿಗೆ ಹಾಗೂ ನ್ಯಾಯಯುತ ಹಕ್ಕುಗಳಿಗಾಗಿ ಸಂಘಟನೆ ಸ್ಥಾಪನೆಯಾಗಿದ್ದು.ಪದಾಧಿಕಾರಿಗಳು ಒಗ್ಗಟ್ಟಿನಿಂದ ವೈಮನಸ್ಸು ತೊರೆದು ಸಮಾಜಮುಖಿಕಾರ್ಯಕ್ರಮಗಳಲ್ಲಿ ತೊಡಗಬೇಕಿದೆ ಎಂದು ಕರೆ ನೀಡಿದರು.
ಸಂದರ್ಭದಲ್ಲಿ ಸಂಘದ ರಾಜ್ಯ ಪ್ರಧಾನಕಾರ್ಯದರ್ಶಿ ಓ.ಮಂಜಣ್ಣ, ಸಂಘಟನಾ ಕಾರ್ಯದರ್ಶಿ ಸಿದ್ದಮ್ಮನಹಳ್ಳಿ ಬಸವರಾಜ್,ಖಜಾಂಚಿ ಮಾರುತಿ,ಕಾರ್ಯದರ್ಶಿಗಳಾದ ಬಾಬು.ಎಚ್.ಮರೇನಹಳ್ಳಿ,ಮಾರಪ್ಪ,ಸದಸ್ಯ ಮಾರುತಿ,ದಲಿತ ಸಂಘಟನೆ ಮುಖಂಡರಾದ ವಕೀಲ ಹನುಮಂತಪ್ಪ,ಪೂಜಾರಿ ಸಿದ್ದಪ್ಪ,ಸೇರಿದಂತೆ ಉಪಸ್ಥಿತರಿದ್ದರು.