Editor m rajappa vyasagondanahalli
By shukradeshenews Kannada | online news portal |Kannada news online
By shukradeshenews | published on October 11
ಜಗಳೂರು:
ಕೃಷಿ ಪಂಪ್ ಸೆಟ್ಗಳಿಗೆ ವಿದ್ಯುತ್ ಪೂರೈಕೆ ಅವಧಿಯನ್ನು ಕಡಿತಗೊಳಿಸಿರುವ ಕ್ರಮವನ್ನು ವಿರೋಧಿಸಿ ತಾಲ್ಲೂಕಿನ ಸೊಕ್ಕೆ ಗ್ರಾಮದ ವಿದ್ಯುತ್ ವಿತರಣಾ ಕೇಂದ್ರದ ಎದುರು ವಿವಿಧ ಹಳ್ಳಿಗಳಿಂದ ಆಗಮಿಸಿದ್ದ ರೈತರು ಬುಧವಾರ ಪ್ರತಿಭಟನೆ ನಡೆಸಿದರು.
ಸೊಕ್ಕೆ, ಯರ್ಲಕಟ್ಟೆ, ಗೋಪಾಲಪುರ, ಚಿಕ್ಕಬಂಟನಹಳ್ಳಿ, ಗಡಿಮಾಕುಂಟೆ ಹಾಗೂ ಗೌರೀಪುರದ ರೈತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಪ್ರಸ್ತುತ ಮಳೆ ಇಲ್ಲದೆ ತೀವ್ರ ಬರಗಾಲ ಎದುರಾಗಿದ್ದು, ವಿವಿಧ ಬೆಳೆಗಳು ಒಣಗಿನಿಂತಿವೆ. ಕೃಷಿ ಪಂಪ್ ಸೆಟ್ ಗಳಿಂದ ರೈತರು ಹೊಲಗಳಿಗೆ ನೀರನ್ನು ಹಾಯಿಸಿ ಬೆಳೆಗಳನ್ನು ಉಳಿಸಿಕೊಳ್ಳಲು ರೈತರು ಹಗಲಿರುಳು ಶ್ರಮಿಸುತ್ತಿದ್ದಾರೆ. ಈ ಮಧ್ಯೆ ಸರ್ಕಾರ ಏಕಾಏಕಿ ವಿದ್ಯುತ್ ಪೂರೈಕೆಯನ್ನು 7 ತಾಸಿನಿಂದ ಕೇವಲ ಮೂರು, ನಾಲ್ಕು ತಾಸಿಗೆ ಇಳಿಸಿದ್ದು, ರೈತರಿಗೆ ತೀವ್ರ ಸಂಕಷ್ಟ ಎದುರಾಗಿದೆ. ಈಗಾಗಲೇ ಬರದಿಂದ ತತ್ತರಿಸಿರುವ ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಬೆಸ್ಕಾಂ ಇಲಾಖೆ ಕೂಡಲೇ ವಿದ್ಯುತ್ ಕಡಿತ ಕ್ರಮವನ್ನು ಹಿಂತೆಗೆದುಕೊಂಡು ಹಿಂದಿನಂತೆ ಹಗಲು ನಾಲ್ಕು ತಾಸು ಮತ್ತು ರಾತ್ರಿ 3 ತಾಸು ಒಟ್ಟು 7 ತಾಸು ವಿದ್ಯುತ್ ಪೂರೈಕೆಗೆ ಕ್ರಮಕೈಗೊಳ್ಳಬೇಕು ಎಂದು ರೈತರು ಒತ್ತಾಯಿಸಿದರು.
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ್ದ ಬೆಸ್ಕಾಂ ಇಲಾಖೆ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಸುಧಾಮಣಿ ಮಾತನಾಡಿ, ರೈತರ ಸಮಸ್ಯೆಗಳು ಅರ್ಥವಾಗುತ್ತವೆ. ಇಲಾಖೆಯ ಮೇಲಿನ ಆದೇಶದಂತೆ ವಿದ್ಯುತ್ ಪೂರೈಕೆ ಮಾಡಲಾಗುತ್ತಿದೆ. ಪಕ್ಕದ ಕೂಡ್ಲಿಗಿ ತಾಲ್ಲೂಕಿನ ಬಡೆಲಡಕು ವಿದ್ಯುತ್ ವಿತರಣಾ ಕೇಂದ್ರದ ವ್ಯಾಪ್ತಿಯಲ್ಲಿ ನೀಡಲಾಗುವ ಪ್ರಮಾಣದಲ್ಲಿಯೇ ಸೊಕ್ಕೆ ಹೋಬಳಿ ವ್ಯಾಪ್ತಿಯಲ್ಲೂ ಕೃಷಿ ಪಂಪ್ ಸೆಟ್ ಗಳಿಗೆ ವಿದ್ಯುತ್ ಪೂರೈಕೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಎಇಇ ಸುಧಾಮಣಿ ಅವರ ಭರವಸೆ ಹಿನ್ನೆಲೆಯಲ್ಲಿ ರೈತರು ಪ್ರತಿಭಟನೆಯನ್ನು ಅಂತ್ಯಗೊಳಿಸಿದರು.
ಸೊಕ್ಕೆ ಗ್ರಾಮ ಪಂಚಾಯಿತಿ ಅಧ್ಯಕ್ಷ ತಿರುಮಲ, ಮುಖಂಡರಾದ ಮಲ್ಲೇಶ್, ನಾಗರಾಜ್, ಶ್ರೀನಿವಾಸ್, ಡಿಸಿ ಹನುಮಂತ, ಸಿದ್ದಪ್ಪ, ಬಸಪ್ಪ, ಮಂಜಣ್ಣ ಯರ್ಲಕಟ್ಟೆ, ಮಹಾಂತೇಶ್ , ಕುಬೇರಪ್ಪ ಪ್ರತಿಭಟನೆಯ ನೇತೃತ್ವವಹಿಸಿದ್ದರು.
.