ಹೆಲ್ಮೆಟ್ ಧರಿಸದವರ ವಿರುದ್ಧ ಶಿಸ್ತು ಕ್ರಮ

ದಾವಣಗೆರೆ: ದ್ವಿಚಕ್ರ ವಾಹನ ಸವಾರರು ಉತ್ತಮ ಗುಣಮಟ್ಟದ ಐಎಸ್ಐ ಮಾರ್ಕಿನ ಹೆಲ್ಮೆಟ್ ಗಳನ್ನೇ ಧರಿಸಿ ಸಂಚಾರ ನಿಯಮ ಪಾಲಿಸಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್ ಹೇಳಿದರು.

ಇಂದು ನಗರದ ಡಿಎಆರ್ ಮೈದಾನದಲ್ಲಿ ಹೆಲ್ಮೆಟ್ ಹಾಗೂ ಸಂಚಾರಿ ಜಾಗೃತಿ ಬೈಕ್ ಜಾಥಾಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಸಾರ್ವಜನಿಕರಿಗಷ್ಟೇ ಅಲ್ಲ, ಪೊಲೀಸರೂ ಹೆಲ್ಮೆಟ್ ಧರಿಸದಿದ್ರೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು. ಹೆದ್ದಾರಿಯಲ್ಲಿ ಲೇನ್ ನಿಯಮ ಉಲ್ಲಂಘಿಸಿದ್ರೆ 500 ರೂ. ದಂಡ ವಿಧಿಸಲಾಗುವುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್ ಎಚ್ಚರಿಸಿದರು.

ನಗರದಲ್ಲಿ ಈಗಾಗಲೇ ಒಬ್ಬ ಪೊಲೀಸ್ ಸಿಬ್ಬಂದಿ ಹೆಲ್ಮೆಟ್ ಧರಿಸದೆ ಪ್ರಾಣ ಕಳೆದುಕೊಂಡಿದ್ದಾರೆ. ಮತ್ತೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಜನರಲ್ಲಿ ಜಾಗೃತಿ ಮೂಡಿಸಬೇಕಾದ ನಾವೇ ಕಾನೂನು ಉಲ್ಲಂಘಿಸಿದರೆ ಹೇಗೆ…? ಪೊಲೀಸರು ಹೆಲ್ಮೆಟ್ ಧರಿಸದೇ ಇರುವ ಫೋಟೋವನ್ನು ಸಾರ್ವಜನಿಕರು ಶೇರ್ ಮಾಡಿದ್ರೆ, ಅಂಥವರ ವಿರುದ್ಧ ಶಿಸ್ತು ಕ್ರಮ ಕೈಗೊಂಡು ದುಪ್ಪಟ್ಟು ದಂಡ ವಿಧಿಸಲಾಗುವುದು ಎಂದು ಎಚ್ಚರಿಸಿದರು.

ಹೆದ್ದಾರಿಗಳಲ್ಲಿ ದಂಡ: ಹೆದ್ದಾರಿಗಳಲ್ಲಿ ಲೇನ್ ಡಿಸಿಪ್ಲೇನ್ ಜಾರಿಗೆ ತರುವಂತೆ ಐಜಿ ಅವರು ಸೂಚಿಸಿದ್ದು, ಪೈಲೆಟ್ ಪ್ರಾಜೆಕ್ಟ್ ಆಗಿ ಬೆಂಗಳೂರು ಬೆಳಗಾವಿ ರಾಷ್ಟ್ರೀಯ ಹೆದ್ದಾರಿಯನ್ನು ಆಯ್ದುಕೊಳ್ಳಲಾಗಿದೆ. ಇಂದು ಸಂಜೆಯಿಂದಲೇ ಹೆದ್ದಾರಿಯಲ್ಲಿ ಕಾನೂನು ಉಲ್ಲಂಘಿಸಿದರೆ ದಂಡ ವಿಧಿಸಲಾಗುವುದು ಎಂದು ರಿಷ್ಯಂತ್ ಹೇಳಿದರು.
ನಗರದಲ್ಲಿ 3 ಸ್ಥಳಗಳಲ್ಲಿ ಎಎನ್ ಪಿ ಆರ್ ಕ್ಯಾಮರಾಗಳನ್ನು ಅಳವಡಿಸಿದ್ದು, ನಿಯಮ ಉಲ್ಲಂಘಿಸಿದರೆ ಈ ಕ್ಯಾಮೆರಾಗಳು ಸೆರೆ ಹಿಡಿದು ಕಂಟ್ರೋಲ್ ರೂಂಗೆ ಕಳುಹಿಸಲಿದ್ದು, ಟೋಲ್ ಗಳಲ್ಲಿ ದಂಡ ವಸೂಲಿ ಮಾಡಲಾಗುವುದು. ಭಾರಿ ವಾಹನಗಳು, ಬಸ್ ಹಾಗೂ ಟ್ರಕ್ ಗಳು ಎಡಗಡೆಯ ಲೇನ್ ನಲ್ಲಿ ಚಲಿಸಬೇಕು. ಕಾರುಗಳು ಡಿವೈಡರ್ ಸಮೀಪದ ಬಲ ಭಾಗದ ಲೇನ್ ನಲ್ಲಿ ಕಾರುಗಳು ಸಂಚರಿಸಬೇಕು. ಒಂದು ವೇಳೆ ಟ್ರಕ್ ಗಳು ಕಾರಿನ ಲೇನ್ ಗಳಲ್ಲಿ ಚಲಿಸಿದರೆ 500 ರೂ. ದಂಡ ವಿಧಿಸಲಾಗುವುದು ಎಂದು ಹೇಳಿದರು. ಈ ಸಂದರ್ಭದಲ್ಲಿ ಹೆಚ್ಚುವರಿ ಎಸ್ಪಿ ಆರ್‌.ಬಿ.ಬಸರಗಿ, ಸಂಚಾರಿ ಸಿಪಿಐ ಅನಿಲ್ ಹಾಜರಿದ್ದರು.

Leave a Reply

Your email address will not be published. Required fields are marked *

You missed

error: Content is protected !!