ಹಿಂದುಳಿದ ಸಮಾಜಕ್ಕೆ ಬಿಜೆಪಿ ಅನ್ಯಾಯ
ಬಿ.ಎಸ್.ವೈ ಧೃತರಾಷ್ಟ್ರ ಪ್ರೇಮಕ್ಕೆ ನಾಶದತ್ತ ಬಿಜೆಪಿ
ಹಿಂದ ಒಕ್ಕೂಟದ ರಾಜ್ಯಾಧ್ಯಕ್ಷ ಕೆ.ಮುಕುಡಪ್ಪ ಆರೋಪ
ಜಗಳೂರು, ಏ.೧
ರಾಜ್ಯದಲ್ಲಿ ಮೂರನೇ ಬಹುದೊಡ್ಡ ಸಂಖ್ಯೆಯಲ್ಲಿರುವ ಕುರುಬ ಸಮಾಜಕ್ಕೆ ಲೋಕಸಭಾ ಚುನಾವಣೆಯಲ್ಲಿ ಒಂದೂ ಟಿಕೆಟ್ ನೀಡದೆ ಬಿಜೆಪಿ ಅನ್ಯಾಯ ಎಸಗಿದೆ ಎಂದು ಹಿಂದುಳಿದ ದಲಿತ ವರ್ಗಗಳ (ಹಿಂದ) ಒಕ್ಕೂಟದ ರಾಜ್ಯಾಧ್ಯಕ್ಷ ಕೆ.ಮುಕುಡಪ್ಪ ಆರೋಪ ಮಾಡಿದ್ದಾರೆ.
ಪಟ್ಟಣದಲ್ಲಿ ಬುಧವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಯಾವುದೇ ಪಕ್ಷ ಒಂದು ಜಾತಿ ಅವಲಂಭಿಸಿ ರಾಜಕಾರಣ ಮಾಡುವುದು ಆ ಪಕ್ಷ ಆತ್ಮಹತ್ಯೆ ದಾರಿ ಹಿಡಿದಂತೆ. ಈ ಹಾದಿಯಲ್ಲಿ ಕಾರ್ಯಕರ್ತರು ಕಟ್ಟಿದ ಬಿಜೆಪಿ ಸಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಲಿಂಗಾಯತ ಜನಾಂಗದವರಿಗೆ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಟಿಕೆಟ್ ನೀಡಿ ಕುರುಬರು ಹಾಗೂ ಹಿಂದುಳಿದವರನ್ನು ಕಡೆಗಣಿಸಲಾಗಿದೆ. ಇದಕ್ಕೆ ಮುಖ್ಯ ಕಾರಣ ಬಿ.ಎಸ್.ಯಡಿಯೂರಪ್ಪ ಅವರ ಧೃತರಾಷ್ಟ್ರ ಪ್ರೇಮ ಎಂದು ದೂರಿದರು.
ತನ್ನ ಮಕ್ಕಳಿಗೆ ರಾಜಕಾರಣದಲ್ಲಿ ಶಾಶ್ವತವಾಗಿ ನೆಲೆ ಒದಗಿಸುವ ದುರುದ್ದೇಶದಿಂದ ತನ್ನೊಂದಿಗೆ ಪಕ್ಷ ಕಟ್ಟಲು ಶ್ರಮಿಸಿದ ಈಶ್ವರಪ್ಪ ಹಾಗೂ ಪಕ್ಷನಿಷ್ಠರಾದ ಸಿ.ಟಿ.ರವಿ, ಬಸವನಗೌಡ ಪಾಟೀಲ್ ಯತ್ನಾಳ್ ಸೇರಿದಂತೆ ಹತ್ತಾರು ಪ್ರಬಲ ನಾಯಕರನ್ನು ರಾಜಕೀಯವಾಗಿ ಮುಗಿಸಲು ಮುಂದಾಗಿದ್ದಾರೆ ಎಂದರು.
ಕರ್ನಾಟಕದ ಎಲ್ಲ ಕಡೆ ಹರಡಿರುವ ನಾಲ್ಕು ಅತೀ ಜನಸಂಖ್ಯೆ ಇರುವ ಜನಾಂಗಗಳು ಲಿಂಗಾಯಿತ, ಒಕ್ಕಲಿಗ, ಪರಿಸಿಷ್ಟ ಜಾತಿ – ಪಂಗಡ ಮತ್ತು ಹಿಂದುಳಿದ ಕುರುಬ ಜಾತಿ.
ಮಂಡಲ ವರದಿಯನ್ನು ಸುಪ್ರೀಂ ಕೋರ್ಟ್ ಒಪ್ಪಿದ ಪ್ರಕಾರ, ಹಿಂದುಳಿದ ದಲಿತ ಜನಸಂಖ್ಯೆ 58%, ಇತರೆ 42%.
ಇದರಲ್ಲಿ ಪರಿಸಿಷ್ಟ ಜಾತಿ – ಪಂಗಡ 25%, ಕುರುಬ, ಗೊಲ್ಲ, ಉಪ್ಪಾರ, ಈಡಿಗ, ತಿಗಳ, ಮಡಿವಾಳ, ಸವಿತಾ ಇತ್ಯಾದಿ ಹಿಂದುಳಿದವರು ಶೇ 33ರಷ್ಟು ಇದೆ.
ಈ ಜಾತಿ ಜನಸಂಖ್ಯೆ ಆಧಾರದ ಮೇಲೆ ಈಗ ನಡೆಯುತ್ತಿರುವ 28 ಲೋಕಸಭಾ ಚುನಾವಣೆಯಲ್ಲಿ ಲಿಂಗಾಯಿತರಿಗೆ 4 ಸ್ಥಾನ; ಒಕ್ಕಲಿಗರಿಗೆ 3 ಸ್ಥಾನ; ಹಿಂದುಳಿದವರಿಗೆ 9 ಸ್ಥಾನ (ಕುರುಬರಿಗೆ 3 , ಯಾದವ, ಉಪ್ಪಾರ, ಈಡಿಗ, ತಿಗಳ ಇತ್ಯಾದಿಗಳಿಗೆ 6 ಸ್ಥಾನ ); ಬ್ರಾಹ್ಮಣ, ಮರಾಠ, ಅರಸು ಇತ್ಯಾದಿ 2 ಸ್ಥಾನ ; ಮುಸ್ಲಿಂ-ಕ್ರಿಸ್ತ 3 ಸ್ಥಾನ ಮತ್ತು ಪರಿಸಿಷ್ಟ ಜಾತಿ-ಪಂಗಡ 7 ಸ್ಥಾನ ಹಂಚಬೇಕಾಗಿತ್ತು ಎಂದು ಹೇಳಿದರು.
ಆದರೆ ಬಿಜೆಪಿ ಸರ್ಕಾರ ಹಿಂದುಳಿದ ವರ್ಗದಲ್ಲಿ ಎಲ್ಲ ಸಮುದಾಯಗಳಿಗೆ ಅದರಲ್ಲೂ ಕುರುಬರಿಗೆ ತೀವ್ರ ವಂಚನೆ ಮಾಡಿದೆ. ಜೊತೆಗೆ ಲಿಂಗಾಯತ ಸಮುದಾಯಲ್ಲಿ ಗೆಲ್ಲುವ ವ್ಯಕ್ತಿಗಳಿಗೆ ಟಿಕೆಟ್ ತಪ್ಪಿಸಿ ಪಕ್ಷಕ್ಕೆ ಸಣ್ಣ ಸೇವೆಯನ್ನೇ ಸಲ್ಲಿಸಿದ ಸೋಲುವ ಗಾಯತ್ರಿ ಸಿದ್ದೇಶ್ವರ ಅಂತಹವರಿಗೆ ಮಣೆ ಹಾಕಲಾಗಿದೆ ಎಂದು ಬೇಸರಿಸಿದರು.
ಅದರಲ್ಲೂ ಶಿವಮೊಗ್ಗದಲ್ಲಿ ಬಿ.ಎಸ್.ವೈ ಮಕ್ಕಳ ಉಪಟಳಕ್ಕೆ ದಾವಣಗೆರೆಯಲ್ಲಿ ಜಿ.ಎಂ.ಸಿದ್ದೇಶ್ವರ ಅಹಂಕಾರಕ್ಕೆ ಮನನೊಂದಿರುವ ಬಿಜೆಪಿ ಕಾರ್ಯಕರ್ತರು, ಮುಖಂಡರು ಬಿ.ವೈ.ರಾಘವೇಂದ್ರ, ಗಾಯತ್ರಿ ಸಿದ್ದೇಶ್ವರ ಸೋಲಿಗೆ ಪಣ ತೊಟ್ಟಿದ್ದಾರೆ. ಆದ್ದರಿಂದ ಹಿಂದ ಸಮುದಾಯದವರು ಶಿವಮೊಗ್ಗದಲ್ಲಿ ಕೆ.ಎಸ್.ಈಶ್ವರಪ್ಪ, ದಾವಣಗೆರೆಯಲ್ಲಿ ಜಿ.ಬಿ.ವಿನಯಕುಮಾರ್ ಅವರನ್ನು ಗೆಲ್ಲಿಸಿಕೊಳ್ಳುವ ಮೂಲಕ ಶಕ್ತಿಪ್ರದರ್ಶನ ಮಾಡಬೇಕು ಎಂದರು.
ಶಿವಮೊಗ್ಗದಲ್ಲಿ ಗೀತಾ ಶಿವರಾಜಕುಮಾರ್ ಮತ್ತು ಈಶ್ವರಪ್ಪ, ದಾವಣಗೆರೆಯಲ್ಲಿ ಪ್ರಭಾ ಮಲ್ಲಿಕಾರ್ಜುನ ಮತ್ತು ಜಿ.ಬಿ.ವಿನಯಕುಮಾರ್ ಮಧ್ಯೆ ನೇರ ಸ್ಪರ್ಧೆ ಏರ್ಪಟ್ಟಿದ್ದು, ಈ ಎರಡು ಕ್ಷೇತ್ರದಲ್ಲಿ ಬಿಜೆಪಿ ಹೀನಾಯ ಸೋಲು ಅನುಭವಿಸಲಿದೆ ಎಂದು ಹೇಳಿದರು.
ಅದರಲ್ಲೂ ಕೆಎಎಸ್, ಐಎಎಸ್ ಸೇರಿ ಶಿಕ್ಷಣ ಕ್ಷೇತ್ರದಲ್ಲಿ ಬಹುದೊಡ್ಡ ಹೆಸರು ಗಳಿಸಿರುವ ವಿನಯಕುಮಾರ್ ಅವರನ್ನು ವಿದ್ಯಾನಗರಿ ಖ್ಯಾತಿಯ ದಾವಣಗೆರೆ ಕ್ಷೇತ್ರದ ಶಿಕ್ಷವಂತರು ಗೆಲ್ಲಿಸುವ ಮೂಲಕ ಶಿಕ್ಷಣ ಕ್ಷೇತ್ರದ ಬಲವರ್ಧನೆಗೆ ಕೊಡುಗೆ ನೀಡಬೇಕು. ದಾವಣಗೆರೆ ಜಿಲ್ಲೆಯನ್ನು ಎರಡು ಕುಟುಂಬಗಳು ತಾವೇ ಗುತ್ತಿಗೆ ಪಡೆದಿರುವ ರೀತಿ ವರ್ತಿಸುತ್ತಿದ್ದು, ಇದಕ್ಕೆ ಕಡಿವಾಣ ಹಾಕಬೇಕು ಎಂದರು.
ಪ್ರಧಾನಕಾರ್ಯದರ್ಶಿ ಶಾಂತಕುಮಾರ್ ಪಗಡಲಬಂಡೆ ಇತರರು ಇದ್ದರು.