ಬಿಜೆಪಿ ಟಿಕೆಟ್ ಹಂಚಿಕೆ ವಿಚಾರ: ಸಿ.ಟಿ ರವಿ-ವಿಜಯೇಂದ್ರ ನಡುವೆ ವಾಕ್ಸಮರ

ರಾಜ್ಯದಲ್ಲಿ ಬಿಎಸ್ ಯಡಿಯೂರಪ್ಪ ಅಂದ್ರೆ ಬಿಜೆಪಿ, ಬಿಜೆಪಿ ಎಂದರೆ ಬಿಎಸ್‌ವೈ ಎನ್ನುವ ಕಾಲವಿತ್ತು. ಆದರೆ ಅವರು ಪಕ್ಷದ ಅಣತಿಯಂತೆ ಮುಖ್ಯಮಂತ್ರಿ ಸ್ಥಾನವನ್ನೇ ಬಿಡಬೇಕಾಯಿತು. ಈಗ ತಮ್ಮ ಪುತ್ರನ ಒಂದು ಟಿಕೆಟ್‌ಗಾಗಿಯೂ ಕದನಕ್ಕೆ ಇಳಿಯುವ ಸ್ಥಿತಿ ನಿರ್ಮಾಣ ಆಗಿದೆ. ಬಿಎಸ್‌ವೈ ಸ್ಪರ್ಧೆ ಮಾಡುತ್ತಿದ್ದ ಶಿಕಾರಿಪುರ ಕ್ಷೇತ್ರದ ಟಿಕೆಟ್‌ ಅನ್ನು ತಮ್ಮ ಮಗ ವಿಜಯೇಂದ್ರನಿಗೆ ಕೊಡಿಸಲು ಪ್ಲ್ಯಾನ್ ಮಾಡಿದ್ದರು. ಆದರೆ ಅದಕ್ಕೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಅವರು ತಕರಾರು ತಗೆದಿದ್ದಾರೆ.

ಸಿಟಿ ರವಿ ಹಾಗೂ ವಿಜಯೇಂದ್ರ ನಡುವೆ ಭರ್ಜರಿ ಟಾಕ್ ವಾರ್

ರಾಜ್ಯ ಬಿಜೆಪಿಯ ಭವಿಷ್ಯದ ನಾಯಕರಿಬ್ಬರ ನಡುವೆ, ಕೇವಲ ಒಂದು ಟಿಕೆಟ್ ವಿಚಾರಕ್ಕೆ ಕಿತ್ತಾಟ ನಡೆಯುತ್ತಿರುವುದು, ಬಿಜೆಪಿಯಲ್ಲಿ ತಲ್ಲಣ ಸೃಷ್ಟಿಸಿದೆ. ಮಾಜಿ ಸಿಎಂ ಯಡಿಯೂರಪ್ಪ ತಮ್ಮ ಪುತ್ರನಿಗೆ ತಮ್ಮ ಕ್ಷೇತ್ರ ಶಿಕಾರಿಪುರದಿಂದಲೇ ಟಿಕೆಟ್ ಕೊಡಿಸಲು ಪ್ಲ್ಯಾನ್ ಹಾಕಿಕೊಂಡಿದ್ದಾರೆ. ಆದರೆ ಈ ಬಗ್ಗೆ ಸಿ.ಟಿ ರವಿ ಪ್ರಶ್ನೆ ಮಾಡುವ ಮೂಲಕ ಯಡಿಯೂರಪ್ಪ ಮತ್ತು ಅವರ ಮಗನ ವಿರುದ್ಧ ಯುದ್ಧ ಸಾರಿದ್ದಾರೆ.

ಬಿ.ಎಸ್ ಯಡಿಯೂರಪ್ಪ ಅವರು ಕಳೆದ ಅಧಿವೇಶನದಲ್ಲಿ ವಿಧಾನಸಭೆಗೆ ವಿದಾಯ ಹೇಳಿದ್ದಾರೆ. ಇತ್ತೀಚಿಗೆ ಅವರು, ಚುನಾವಣಾ ರಾಜಕೀಯದಿಂದ ನಿವೃತ್ತರಾದ ನಂತರ ತಮ್ಮ ಕಿರಿಯ ಪುತ್ರ ವಿಜಯೇಂದ್ರ ಅವರು 2023ರ ಚುನಾವಣೆಯಲ್ಲಿ ಶಿಕಾರಿಪುರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂದು ಹೇಳಿದ್ದರು. ಈಗ ಇದೇ ವಿಚಾರಕ್ಕೆ ಪಕ್ಷದಲ್ಲಿ ಕಿತ್ತಾಟಕ್ಕೆ ಕಾರಣವಾಗಿದೆ. ಎಲೆಕ್ಷನ್‌ಲ್ಲಿ ಟಿಕೆಟ್ ಯಾರಿಗೆ ಟಿಕೆಟ್ ಕೊಡಬೇಕು ಎನ್ನುವುದು ಮನೆಯಲ್ಲಿ ನಿರ್ಧಾರವಾಗಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ತಕರಾರು ತಗೆದಿದ್ದಾರೆ.

ಈ ಬಗ್ಗೆ ಇತ್ತೀಚೆಗೆ ವಿಜಯಪುರದಲ್ಲಿ ಮಾತನಾಡಿದ ಸಿ.ಟಿ ರವಿ, ಬಿಜೆಪಿಯಲ್ಲಿ ಟಿಕೆಟ್ ನೀಡುವ ಮಾನದಂಡದ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ”ನಮ್ಮ ಪಕ್ಷದಲ್ಲಿ ಟಿಕೆಟ್ ಯಾರಿಗೆ ನೀಡಬೇಕು ಎನ್ನುವ ವಿಚಾರ ಕುಟುಂಬದಲ್ಲಿ ತೀರ್ಮಾನವಾಗಲ್ಲ. ಸಂಸದೀಯ ಮಂಡಳಿ ಸಭೆಯಲ್ಲಿ ನಿರ್ಧಾರ ಆಗುತ್ತೆ. ಸಮೀಕ್ಷೆಯ ಆಧಾರದ ಮೇಲೆ ಗೆಲ್ಲುವ ಮಾನದಂಡದ ಆಧರಿಸಿ ಟಿಕೆಟ್ ನೀಡುವ ಕುರಿತು ನಿರ್ಧರಿಸಲಾಗುತ್ತದೆ. ಆದರೆ ಕುಟುಂಬದಲ್ಲಿ ಸಮೀಕ್ಷೆ ನಡೆಯುವುದಿಲ್ಲ, ನಮ್ಮ ಪಕ್ಷದಲ್ಲಿ ಕಿಚನ್‌ನಲ್ಲಿ ತೀರ್ಮಾನ ತೆಗೆದುಕೊಳ್ಳಲ್ಲ. ನಾಯಕರ ಮಕ್ಕಳೆಂದ ಕಾರಣಕ್ಕೆ ಅವರಿಗೆ ಟಿಕೆಟ್ ಕೊಡಬೇಕಾ? ಎಂದು ಪ್ರಶ್ನೆ ಮಾಡಿದ್ದಾರೆ. ಅಷ್ಟೇ ಅಲ್ಲದೇ ವಿಜಯೇಂದ್ರ ಟಿಕೆಟ್ ನಿರ್ಧಾರವನ್ನು ಸಂಸದೀಯ ಮಂಡಳಿ ತೆಗೆದುಕೊಳ್ಳುತ್ತದೆ ಎಂದು ಹೇಳುವ ಮೂಲಕ ಹಿರಿಯ ನಾಯಕ ಯಡಿಯೂರಪ್ಪ ಅವರ ಆಟ ಇನ್ನೂ ಮುಂದೆ ನಡೆಯುವುದಿಲ್ಲ ಎನ್ನುವ ಸಂದೇಶವನ್ನು ಸಿಟಿ ರವಿ ನೀಡಿದ್ದಾರೆ.

ಸಿ.ಟಿ ರವಿ ತಕರಾರುಗಳಿಗೆ ಕೆಂಡವಾದ ವಿಜಯೇಂದ್ರ

ಈ ವಿಚಾರವಾಗಿ ಬಿಎಸ್‌ವೈ ಪುತ್ರ, ಬಿಜೆಪಿ ರಾಜ್ಯ ಉಪಾಧ್ಯಕ್ಷ ವಿಜಯೇಂದ್ರ ಕೊಪ್ಪಳ ಜಿಲ್ಲೆಯ ಹನುಮಸಾಗರದಲ್ಲಿ ತಿರುಗೇಟು ನೀಡಿದ್ದಾರೆ. ”ಬಿಜೆಪಿ ಟಿಕೆಟ್ ವಿಚಾರ ಬಿಎಸ್‌ವೈ ಕಿಚನ್‌ನಲ್ಲು ಆಗೋಲ್ಲ, ಮತ್ತೊಬ್ಬರ ಕಿಚನ್‌ನಲ್ಲು ಆಗೋಲ್ಲ” ಎಂದು ಸಿಟಿ ರವಿಗೆ ತಿರುಗೇಟು ನೀಡಿದ್ದಾರೆ.

”ರಾಜಕಾರಣದಲ್ಲಿ ಶತ್ರುಗಳ ಸಂಖ್ಯೆ ಹೆಚ್ಚಾದಾಗಲೇ ನಾವು ಎತ್ತರಕ್ಕೆ ಬೆಳೆಯೋಕೆ ಸಾಧ್ಯ ಆಗೋದು” ಎಂದು ವಾಗ್ದಾಳಿ ನಡೆಸುವ ಮೂಲಕ ಸಿಟಿ ರವಿ ಅವರನ್ನು ತಮ್ಮ ಶತ್ರು ಎಂದು ಘೋಷಿಸಿದ್ದಾರೆ. ಬಿಜೆಪಿ ಕಟ್ಟಿದ್ದು ಬಿಎಸ್‌ವೈ ಅಂತ ಅವರಿಗೂ ನೆನಪಿರಲಿ ಎಂದು ತಮ್ಮ ತಂದೆಯ ಸ್ಥಾನಮಾನದ ಬಗ್ಗೆ ಸಿಟಿ ರವಿಗೆ ನೆನಪಿಸಿದ್ದಾರೆ.

ಈ ರಾಜ್ಯದಲ್ಲಿ ಬಿಜೆಪಿ ಪಕ್ಷವನ್ನು ಕಟ್ಟಿಬೆಳಸಿದ್ದೇ ಯಡಿಯೂರಪ್ಪನವರು, ಅವರಿಗೆ ಟಿಕೆಟ್ ಹೇಗೆ ಕೊಡಬೇಕು ಅನ್ನೋದು ಗೊತ್ತಿದೆ. ಸಿ.ಟಿ ರವಿಯವರು ಹಿರಿಯರಿದ್ದಾರೆ. ಕರ್ನಾಟಕದಲ್ಲಿ ಯಡಿಯೂರಪ್ಪ ಅವರು ಎಷ್ಟು ದೊಡ್ಡವರೆಂದು ಅವರಿಗೂ ಗೊತ್ತಿದೆ. ಮೊದಲಿನಿಂದ ಪಕ್ಷ ಹೇಗೆ ಕಟ್ಟಿದ್ದಾರೆ ಎಂಬುವುದು ಗೊತ್ತಿದೆ. ಪಕ್ಷದಲ್ಲಿ ಯಾರಿಗೆ ಟಿಕೆಟ್ ಕೊಡಬೇಕು ಅನ್ನೋದು ಯಡಿಯೂರಪ್ಪ ಕಿಚನ್‌ನಲ್ಲು ತೀರ್ಮಾನ ಮಾಡಲ್ಲ, ಇನ್ನೊಬ್ಬರ ಕಿಚನ್‌ನಲ್ಲು ತೀರ್ಮಾನ ಆಗಲ್ಲ ಎಂದು ಸಿಟಿ ರವಿಗೆ ವಿಜಯೇಂದ್ರ ಜಾಡಿಸಿದ್ದಾರೆ.

ಬಿಜೆಪಿಯಲ್ಲಿ ಹಿರಿಯ ನಾಯಕ ಬಿಎಸ್ ಯಡಿಯೂರಪ್ಪನವರನ್ನು ಮೂಲೆಗುಂಪು ಮಾಡುತ್ತಿರುವುದರ ಬಗ್ಗೆ ಕಾಂಗ್ರೆಸ್ ಟ್ವೀಟ್ ಮಾಡಿದೆ. ”BSY ಅವರಿಗೆ ಅಧಿಕಾರವಿಲ್ಲ, ಟಿಕೆಟ್ ಕೂಡ ಇಲ್ಲ. BSYರಿಗೆ ಟಿಕೆಟ್ ನಿರ್ಧರಿಸುವ ಹಕ್ಕಿಲ್ಲ. BSYರಿಗೆ ಪ್ರಚಾರ ಸಮಿತಿಯ ನೇತೃತ್ವವಿಲ್ಲ. BSYರಿಗೆ ವೇದಿಕೆಗಳಲ್ಲಿ ಜಾಗವಿಲ್ಲ. BSY ಅವರ ರಾಜ್ಯ ಪ್ರವಾಸಕ್ಕೆ ಅವಕಾಶ ಕೊಡಲಿಲ್ಲ. BSY ಬಿಜೆಪಿಗೆ ಅನಿವಾರ್ಯವಲ್ಲ ಎಂದು ಕಟೀಲ್ ಹೇಳುತ್ತಾರೆ. ಈ ಘಟನೆಗಳೇ ಈ ಹೇಳಿಕೆಗೆ ಸ್ಪೂರ್ತಿಯೇ ಬಿಜೆಪಿ? ಎಂದು ಪ್ರಶ್ನೆ ಮಾಡಿದ್ದು, ಇದರ ಜೊತೆಗೆ ವಿಜಯೇಂದ್ರ ಅವರ- ”ರಾಜ್ಯದಲ್ಲಿ ಯಡಿಯೂರಪ್ಪರನ್ನ ಬಿಟ್ಟು ಬಿಜೆಪಿಯನ್ನು ಅಧಿಕಾರಕ್ಕೆ ತರುವ ಎದೆಗಾರಿಕೆ ಯಾರಿಗೆ ಇದೆ?” ಎಂಬ ಹೇಳಿಕೆಯನ್ನು ಕಾಂಗ್ರೆಸ್ ಹಂಚಿಕೊಂಡಿದೆ.

ಸಿಟಿ ರವಿ- ವಿಜಯೇಂದ್ರ ಅವರು ಟಾಕ್ ವಾರ್ ಜೋರಾಗುತ್ತಿದ್ದಂತೆ ಮಧ್ಯ ಪ್ರವೇಶಿಸಿರುವ ಬಿಎಸ್‌ವೈ ಅದನ್ನು ಶಮನಗೊಳಿಸುವ ಪ್ರಯತ್ನ ಮಾಡಿದ್ದಾರೆ. ”ಸಿಟಿ ರವಿ ಹೇಳಿದ್ದು ಸರಿ ಇದೆ. ಯಾವುದೇ ಟಿಕೆಟ್ ಆಕಾಂಕ್ಷಿಯ ತೀರ್ಮಾನ ಚುನಾವಣಾ ಸಮಿತಿ ಮಾಡುತ್ತದೆ ಹೊರತು, ನಾವ್ಯಾರು ತೀರ್ಮಾನ ಮಾಡೋಕಾಗೋದಿಲ್ಲ” ಎಂದು ಹೇಳುವ ಮೂಲಕ ಬಿಜೆಪಿಯಲ್ಲಿನ ಕದನಕ್ಕೆ ವಿರಾಮ ಘೋಷಿಸುವ ಪ್ರಯತ್ನ ಮಾಡಿದ್ದಾರೆ.

Leave a Reply

Your email address will not be published. Required fields are marked *

You missed

error: Content is protected !!