ದೈವಭಕ್ತಿ ಆರಾಧಿಸಿ ಸಮಾಜಕ್ಕೆ ಒಳಿತುಬಯಸಿ:ನಟ ಶ್ರೀ ಮುರುಳಿ
ಜಗಳೂರು ಸುದ್ದಿ:’ಪ್ರತಿಯೊಬ್ಬ ಮನುಷ್ಯ ದೈವಭಕ್ತಿ ಮೈಗೂಡಿಸಿಕೊಂಡು ಸಮಾಜಕ್ಕೆ ಒಳಿತು ಬಯಸಬೇಕು’ ಎಂದು ಖ್ಯಾತ ಚಲನಚಿತ್ರ ನಟ ರೋರಿಂಗ್ ಸ್ಟಾರ್ ಶ್ರೀ ಮುರುಳಿ ಹೇಳಿದರು.
ತಾಲೂಕಿನ ವೆಂಕಟೇಶಪುರ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಚಾಮುಂಡೇಶ್ವರಿ ದೇವಿಯ ನೂತನ ದೇವಸ್ಥಾನ ಉದ್ಘಾಟನೆ ಹಾಗೂ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಮತ್ತು ಕಳಸಾರೋಹಣ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಅವರು ಮಾತನಾಡಿದರು.
‘ಮೈಸೂರಿನ ಪ್ರಖ್ಯಾತ ಶಕ್ತಿ ದೇವತೆ ಚಾಮುಂಡೇಶ್ವರಿ ಭಕ್ತ ಸಮೂಹ ಜಗಳೂರಿನಲ್ಲಿರುವುದು ಸಂತಸದ ಸಂಗತಿ.ಕನ್ನಡ ಚಿತ್ರ ರಂಗದಲ್ಲಿ ನಾನು ನಟಿಸಿದ ಚಲನಚಿತ್ರಗಳನ್ನು ಕನ್ನಡ ಅಭಿಮಾನಿ ಬಳಗದವರು ಪ್ರೊತ್ಸಾಹಿಸುತ್ತಿರುವುದು ಶ್ರೀ ರಕ್ಷೆಯಾಗಿದೆ.ಅಕ್ಟೋಬರ್ 31 ರಂದು ಬಿಡುಗಡೆಗೊಳ್ಳಲಿರುವ ‘ಬಘೀರ’ಚಲನಚಿತ್ರವನ್ನು ತಪ್ಪದೇ ವೀಕ್ಷಿಸಬೇಕು ಎಂದು ಬಘೀರ ಸಿನಿಮಾದ ಡಯಲಾಗ್,ಮತ್ತು ಹಾಡು ಹಾಡುವ ಮೂಲಕ ಯುವಕರನ್ನು ಮಕ್ಕಳನ್ನು ರಂಜಿಸಿದರು’.
ಶಾಸಕ ಬಿ.ದೇವೇಂದ್ರಪ್ಪ ಮಾತನಾಡಿ,’ಭಕ್ತಿ ಸಂಸ್ಕಾರದಿಂದ ಬರದನಾಡಿನ ಕುಗ್ರಾಮಕ್ಕೆ ಆಗಮಿಸಿರುವ ನಟ ಮುರುಳಿ ಅವರು ಸ್ಪೂರ್ತಿಯಾಗಬೇಕು.ಬಣ್ಣದ ಲೋಕದ ಸಾಕಷ್ಜು ಕಲಾವಿದರ ಬದುಕು ನೋವಿನಿಂದ ಅಂತ್ಯವಾಗಿದೆ.ಒಡೆದು ಹೋಗಿರುವ ಮನಸ್ಸು,ಜಾತಿಗಳ ಮಧ್ಯೆ ಬಾಂಧವ್ಯ ಬೆಸೆಯುವ ಪವಿತ್ರವಾದದ್ದು ಹಿಂದೂ ಧರ್ಮವಾಗಿದೆ.ಸಾಧು ಸಂತರು,ಶ್ರೀಗಳು ನಡೆದಾಡಿರುವ ಜಗಳೂರು ಕ್ಷೇತ್ರದಲ್ಲಿ ಅಧರ್ಮ ಅವನತಿ ಹೊಂದಿ ಧರ್ಮರಕ್ಷಣೆಯಾಗಬೇಕು’ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಕೊಟ್ಟೂರು ಕೆ.ಬಸಾಪುರ ಶಕ್ತಿ ಬಂಜಾರ ಗುರುಪೀಠದ ಶಿವಪ್ರಕಾಶ್ ಮಹಾರಾಜ್ ಸಾನಿಧ್ಯವಹಿಸಿ ಮಾತನಾಡಿ,’ವಿಶಿಷ್ಟ ಶೈಲಿಯ ಉಡುಪು,ಸಂಸ್ಕೃತಿ,ಆಚಾರ ವಿಚಾರ ಹೊಂದಿರುವ ಬಂಜಾರ ಸಮುದಾಯ ಮಕ್ಕಳ ಶಿಕ್ಷಣಕ್ಕೆ ಒತ್ತುಕೊಡಬೇಕು.ಯುವ ಸಮೂಹ ದುಶ್ಚಟಗಳಿಂದ ದೂರವಿರಬೇಕು.ದೇವಸ್ಥಾನ ನಿರ್ಮಿಸುವುದು ಪ್ರತಿಷ್ಠೆಯಾಗದೆ ಧಾರ್ಮಿಕ ಕೈಂಕರ್ಯಗಳು ಸಕಾಲದಲ್ಲಿ ಜರುಗಬೇಕು’ಎಂದು ಕಿವಿಮಾತು ಹೇಳಿದರು.
‘ಪೋಷಕರೊಂದಿಗೆ ಗುಳೆ ಹೋಗುವ ಮಕ್ಕಳ ವಸತಿ ಶಿಕ್ಷಣಕ್ಕಾಗಿ ಕೊಟ್ಟೂರು ತಾಲೂಕಿನದೂಪದಹಳ್ಳಿ ಗ್ರಾಮದಲ್ಲಿ ಒಂದು ಎಕರೆ ವ್ಯಾಪ್ತಿ ವಸತಿ ನಿಲಯ ನಿರ್ಮಿಸಲಾಗುವುದು ಸಮಾಜದವರು ಕೈಜೋಡಿಸಬೇಕು.
ಬಂಜಾರ ಸಮುದಾಯಕ್ಕೆ ಮಾರಕವಾಗಿರುವ ಒಳಮೀಸಲಾತಿ ವಿರುದ್ದ ಜಾಗೃತರಾಗಿ ಸಂಘಟಿತ ಹೊರಾಟನಡೆಸಬೇಕು’ ಎಂದು ಕರೆ ನೀಡಿದರು.
ಇದೇವೇಳೆಹೊಳೆಪೂಜೆ,ಹೋಮಹವನ,ನವರಾತ್ರಿವಿಶೇಷ ಪೂಜೆ ಸೇರಿದಂತೆ ಧಾರ್ಮಿಕ ಕೈಂಕರ್ಯಗಳು ನೆರವೇರಿದವು.
ಸಂದರ್ಭದಲ್ಲಿ ತಾಂಡಾ ಅಭಿವೃದ್ದಿ ನಿಗಮದ ಅಧ್ಯಕ್ಷ ಜಯದೇವನಾಯ್ಕ,ದಾವಣಗೆರೆ ಕೃಷ್ಣ ಮಠದ ಶ್ರೀ ನಾಗರಾಜ್ ಮಹಾರಾಜ್, ಕೊಪ್ಪಳದ ಶ್ರೀಗುರುಗೋಸಾಯಿ ಬಾಬಾ,ಕೆಪಿಸಿಸಿ ಎಸ್ ಟಿ ಘಟಕದ ರಾಜ್ಯ ಮುಖಂಡ ಕೆಪಿ ಪಾಲಯ್ಯ,ಪ.ಪಂ ಅಧ್ಯಕ್ಷ ನವೀನ್ ಕುಮಾರ್,ಕೊಟ್ರೇಶ್ ನಾಯ್ಕ,ಪುರುಷೋತ್ತಮ ನಾಯ್ಕ,ಬಿ.ಮಹೇಶ್ವರಪ್ಪ,ಪಲ್ಲಾಗಟ್ಟೆ ಶೇಖರಪ್ಪ,ಆರ್ ಎಫ್ ದಿನೇಶ್ ನಾಯ್ಕ,ಲೋಹಿತ್ ನಾಯ್ಕ,ಛತ್ರಪತಿ ನಾಯ್ಕ,ಮಂಜುನಾಥ್,ಕುಮಾರ್ ನಾಯ್ಕ,ಮಾಜಿ ಮಂಜುನಾಥ್,ಸೇರಿದಂತೆ ಇದ್ದರು.