ಚಿತ್ರದುರ್ಗ ಜಿಲ್ಲಾ ಸುದ್ದಿ.

ಸಿದ್ದು ಕಿರೀಟಕ್ಕೆ ಮತ್ತೊಂದು ಗರಿ

ಸಿದ್ದು ಕೆಣಕಿದ್ದಕ್ಕೆ ಜನ ತಕ್ಕ ಉತ್ತರ

ಮುಡಾ ಹೆಸರಲ್ಲಿ ಕಳಂಕ ತರುವ ಯತ್ನಕ್ಕೆ ಮತದಾರ ವಿರೋಧ
ಮಾಜಿ ಸಚಿವ ಎಚ್.ಆಂಜನೇಯ ಹೇಳಿಕೆ

ಚಿತ್ರದುರ್ಗ:ನ:23 ಸಿದ್ದರಾಮಯ್ಯ ನಾಡು ಕಂಡ ಅಪರೂಪದ ನಾಯಕ, 40 ವರ್ಷ ನಿಷ್ಕಳಂಕ ರಾಜಕಾರಣ ಮಾಡಿದ ಮುತ್ಸದ್ಧಿ. ಆದರೆ, ಅವರ ಹೆಸರಿಗೆ ಕಳಂಕ ತರಲು ಅನಗತ್ಯವಾಗಿ ಮುಡಾ ವಿಷಯ ಮುನ್ನೆಲೆಗೆ ತಂದ ಪ್ರತಿಪಕ್ಷಗಳ ನಡೆಗೆ ಜನಾಕ್ರೋಶ ಮೂರು ಉಪ ಚುನಾವಣೆಯಲ್ಲಿ ಹೊರಬಿದ್ದಿದೆ ಎಂದು ಮಾಜಿ ಸಚಿವ, ಕೆಪಿಸಿಸಿ ಉಪಾಧ್ಯಕ್ಷ ಎಚ್.ಆಂಜನೇಯ ಹೇಳಿದ್ದಾರೆ.

ಅಹಿಂದ ವರ್ಗದ ಹಿತ ಸದಾ ಬಯಸುವ ಸಿದ್ದರಾಮಯ್ಯ, ಎಲ್ಲ ಸಮುದಾಯದ ಹಿತಕ್ಕಾಗಿ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿ, ಯಶಸ್ಸು ಕಂಡಿದ್ದಾರೆ. ಆದರೆ, ಇದನ್ನು ಸಹಿಸದೆ, ಸಿದ್ದರಾಮಯ್ಯ ಅವರನ್ನು ಕೆಣಕುವ ಪ್ರಯತ್ನ ನಡೆಸಿ, ಮತದಾರರಿಂದ ಪ್ರತಿಪಕ್ಷಗಳು ಮಂಗಳಾರತಿ ಮಾಡಿಸಿಕೊಂಡಿವೆ ಎಂದಿದ್ದಾರೆ.

ರಾಜ್ಯದಲ್ಲಿನ ಮೂರು ಕ್ಷೇತ್ರಗಳಲ್ಲಿನ ಗೆಲುವು ಸಿದ್ದರಾಮಯ್ಯ ಅವರ ನಾಯಕತ್ವದ ಕಿರೀಟಕ್ಕೆ ಮತ್ತೊಂದು ಗರಿ ಆಗಿದ್ದು, ಈ ಮೂಲಕ ಕಾಂಗ್ರೆಸ್ ಸರ್ಕಾರದ ವಿರುದ್ಧ ಅನಗತ್ಯ ಆರೋಪ ,ಮಾಡುತ್ತಿದ್ದವರಿಗೆ ಜನರೇ ಉತ್ತರ ಕೊಟ್ಟಿದ್ದಾರೆ ಎಂದು ಹೇಳಿದ್ದಾರೆ.

ಮುಡಾ ಹೆಸರಲ್ಲಿ ಹಗರಣ ನಡೆದಿದೆ ಎಂದು ಸುಳ್ಳು ಸುದ್ದಿ ಹರಡಿ, ಸಿದ್ದರಾಮಯ್ಯ ಮತ್ತು ಅವರ ಕುಟುಂಬಕ್ಕೆ ಮಾನಸಿಕ ಹಿಂಸೆ ನೀಡುವ ಯತ್ನ ಹಾಗೂ ಅಹಿಂದ ನಾಯಕನೊಬ್ಬ ಎರಡನೇ ಬಾರಿ ಸಿಎಂ ಆಗಿ ಅವಧಿ ಪೂರ್ಣಗೊಳಿಸುವ ಪ್ರಯತ್ನಕ್ಕೆ ಅಡ್ಡಿಪಡಿಸುವ ಪ್ರತಿಪಕ್ಷಗಳ ಷಡ್ಯಂತ್ರವನ್ನು ಸಹಿಸಿಕೊಳ್ಳುವುದಿಲ್ಲವೆಂಬ ಸಂದೇಶವನ್ನು ಮತದಾರರೇ ರವಾನಿಸಿದ್ದಾರೆ.
ಅನ್ನಭಾಗ್ಯ, ಇಂದಿರಾ ಕ್ಯಾಂಟೀನ್ ಹಾಗೂ ಐದು ಗ್ಯಾರಂಟಿಗಳು ಜಾರಿ ಹಾಗೂ ಸರ್ಕಾರಿ ಕಚೇರಿಗಳಲ್ಲಿ ಬಸವಣ್ಣನ ಭಾವಚಿತ್ರ ಅಳವಡಿಸುವ ಆದೇಶ ಸೇರಿ ಅನೇಕ ಕ್ರಾಂತಿಕಾರಿ ನಡೆ ಕೈಗೊಂಡ ಸಿದ್ದರಾಮಯ್ಯ ನಾಯಕತ್ವ ಪ್ರಶ್ನಾತೀತ ಎಂಬ ಸಂದೇಶವನ್ನು ಜನರು ಫಲಿತಾಂಶದ ಮೂಲಕ ಸಾರಿದ್ದಾರೆ.

ಸಿದ್ದರಾಮಯ್ಯ ಅವರನ್ನು ಷಡ್ಯಂತ್ರ ನಡೆಸಿ ಅಧಿಕಾರದಿಂದ ಕೆಳಗಿಸುವ ಕುತಂತ್ರಕ್ಕೆ ಅಹಿಂದ ವರ್ಗದ ಜನರು ಸಿಡಿದೆದ್ದು, ರಾಜ್ಯದಲ್ಲಿ ಮತ್ತಷ್ಟು ಗಟ್ಟಿಗೊಂಡಿದ್ದಾರೆ. ಅದರ ಫಲವೇ ಮೂರು ವಿಧಾನಸಭಾ ಕ್ಷೇತ್ರದಲ್ಲಿ ನಿರೀಕ್ಷೆಗೂ ಮೀರಿದ ಹೆಚ್ಚು ಅಂತರದಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದೆ ಎಂದಿದ್ದಾರೆ.

ರಾಜ್ಯದಲ್ಲಿ ಅಹಿಂದ ಮತಗಳು ಸಿದ್ದರಾಮಯ್ಯ ಬೆನ್ನಿಗೆ ಗಟ್ಟಿಯಾಗಿ ನಿಂತುಕೊಂಡಿದ್ದು, ಜತೆಗೆ ವೀರಶೈವ ಲಿಂಗಾಯಿತ, ಒಕ್ಕಲಿಗ ಮತಗಳನ್ನು ಕೂಡ ಕಾಂಗ್ರೆಸ್ ಪಕ್ಷ ಪಡೆದುಕೊಳ್ಳುವಲ್ಲಿ ಯಶಸ್ಸು ಕಂಡಿದೆ. ಜತೆಗೆ ಶಿಗ್ಗಾವಿ, ಸಂಡೂರಲ್ಲಿ ಹೆಚ್ಚು ಸಂಖ್ಯೆಯಲ್ಲಿರುವ ಮಾದಿಗ ಸಮುದಾಯವು ಕೂಡ ಕೈಹಿಡಿದಿರುವುದು ಪಕ್ಷದ ಗೆಲುವಿಗೆ ಸಹಕಾರಿ ಆಗಿದೆ ಎಂದಿದ್ದಾರೆ.

ಈ ಗೆಲುವಿನ ಮೆರವಣಿಗೆ ಮುಂಬರುವ ಬಿಬಿಎಂಪಿ, ಜಿಲ್ಲಾ, ತಾಲೂಕು ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲೂ ಮುಂದುವರಿಯಲಿದೆ. ಪ್ರತಿಪಕ್ಷಗಳು ಈಗಲಾದರೂ ಸೋಲು ಒಪ್ಪಿಕೊಂಡು, ರಾಜ್ಯದ ಸಮಗ್ರ ಅಭಿವೃದ್ಧಿಗೆ ಸಹಕಾರ ನೀಡಬೇಕು.
ಮುಖ್ಯವಾಗಿ ಎಲ್ಲ ವರ್ಗದ ಜನರ ಹಿತಕ್ಕಾಗಿ ಸ್ವಾತಂತ್ರ್ಯ ಭಾರತದಲ್ಲಿ ಪ್ರಥಮ ಬಾರಿಗೆ ರಾಜ್ಯದಲ್ಲಿ ನಡೆಸಿದ ಶೈಕ್ಷಣಿಕ, ಸಾಮಾಜಿಕ ಸಮೀಕ್ಷೆ ವರದಿ ಅನುಷ್ಠಾನಕ್ಕೆ ಬೆಂಬಲ ವ್ಯಕ್ತಪಡಿಸಬೇಕು. ಜತೆಗೆ ಗ್ಯಾರಂಟಿ ಯೋಜನೆಗಳ ಕುರಿತು ಅಪಪ್ರಚಾರ ನಿಲ್ಲಿಸಿ, ಜವಾಬ್ದಾರಿಯುತ ವಿರೋಧ ಪಕ್ಷವಾಗಿ ಕಾರ್ಯನಿರ್ವಹಿಸುವತ್ತ ಗಮನಹರಿಸಬೇಕು.

ಬಿಜೆಪಿ ಸರ್ಕಾರದ ಅವಧಿಯಲ್ಲಿ ಆಗಿದ್ದ ವಕ್ಫ್ ಮಂಡಳಿ ಆದೇಶ, ಕೇಂದ್ರ ಸರ್ಕಾರದ ಸೂಚನೆ ಕಾರಣಕ್ಕೆ ರಾಜ್ಯದಲ್ಲಿ ಅನೇಕರ ಬಿಪಿಎಲ್ ಪಡಿತರ ಚೀಟಿ ರದ್ದು ವಿಷಯವನ್ನು ಕಾಂಗ್ರೆಸ್ ಪಕ್ಷವೇ ನಡೆಸಿದೆ ಎಂದು ಸುಳ್ಳು ಆರೋಪ ಮಾಡಿ, ಜನರನ್ನು ಎತ್ತಿಕಟ್ಟುವ ಯತ್ನಕ್ಕೆ ಮತದಾರ ಸೊಪ್ಪು ಹಾಕಿಲ್ಲ. ಸತ್ಯವನ್ನಷ್ಟೇ ನಾವು ಒಪ್ಪಿಕೊಳ್ಳುವುದು ಎಂಬ ಸಂದೇಶ ಮತದಾರರು ನೀಡಿದ್ದಾರೆ.
ಆದ್ದರಿಂದ ಇನ್ಮುಂದೆ ಜಾತಿ-ಧರ್ಮಗಳ ಮಧ್ಯೆ ಕಂದಕ ಸೃಷ್ಟಿಸುವ ಪ್ರಯತ್ನ ಹಾಗೂ ಸುಳ್ಳು ಸುದ್ದಿಗಳನ್ನು ಹರಡಿ ಉತ್ತಮವಾಗಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಪಕ್ಷ ಹಾಗೂ ಸಿದ್ದರಾಮಯ್ಯ ಅವರ ನಾಯಕತ್ವಕ್ಕೆ ಕಳಂಕ ತರುವ ಷಡ್ಯಂತ್ರ ಕೈಬಿಡಬೇಕು. ರಾಜ್ಯದ ಅಭಿವೃದ್ಧಿಗೆ ಎಲ್ಲ ರಾಜಕೀಯ ಪಕ್ಷಗಳು ಸಿದ್ದರಾಮಯ್ಯ ನಾಯಕತ್ವದ ಸರ್ಕಾರಕ್ಕೆ ಸಹಕಾರ ನೀಡಬೇಕು ಎಂದು ಎಚ್. ಆಂಜನೇಯ ಕೋರಿದ್ದಾರೆ.

Leave a Reply

Your email address will not be published. Required fields are marked *

You missed

error: Content is protected !!