ಚಿತ್ರದುರ್ಗ ಜಿಲ್ಲೆ :- ನಾಯಕನಹಟ್ಟಿ

ದಾನಿಗಳ ನೆರವಿನಿಂದ ಸಮಾಜದ ಏಳಿಗೆಗೆ ಪ್ರಯತ್ನಿಸಿ: ಮಂಜುಳಾ ಶ್ರೀಕಾಂತ್

ಸರ್ಕಾರಿ ಮಾದರಿ ಶಾಲೆಯಲ್ಲಿ ಬ್ಯಾಗ್ ವಿತರಣೆ.

ನಾಯಕನಹಟ್ಟಿ:
ಪ್ರಸ್ತುತ ದಿನಮಾನಗಳಲ್ಲಿ ಸಮಾಜದ ಎಲ್ಲ ಅವಶ್ಯಕತೆಗಳನ್ನು ಕೇವಲ ಸರ್ಕಾರದಿಂದ ಪೂರೈಸಲು ಸಾಧ್ಯವಿಲ್ಲ. ಹೀಗಾಗಿ ದಾನಿಗಳ ನೆರವು ಪಡೆದು ಸಮಾಜದ ಏಳಿಗೆಗೆ ಪ್ರಯತ್ನಿಸಬೇಕಿದೆ ಎಂದು ಪಟ್ಟಣ ಪಂಚಾಯತಿ ಅಧ್ಯಕ್ಷೆ ಟಿ.ಮಂಜುಳಾ ಶ್ರೀಕಾಂತ್ ಅಭಿಪ್ರಾಯಪಟ್ಟರು.

ಪಟ್ಟಣದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಸೋಮವಾರ ಬೆಂಗಳೂರಿನ ಉದ್ಯಮಿ ಮೋಹನ್‍ಕುಮಾರ್ ದಾನವಾಗಿ ನೀಡಿದ್ದ 300 ಬ್ಯಾಗ್‍ಗಳನ್ನು ವಿತರಿಸಿ ಅವರು ಮಾತನಾಡಿದರು.

ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಶಿಕ್ಷಣವು ಅತ್ಯಂತ ಮಹತ್ವತೆಯಿಂದ ಕೂಡಿದೆ. ಹೀಗಾಗಿ ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ ಹೊಂದಲು ದಾನಿಗಳು ಅಗತ್ಯ ನೆರವು ನೀಡಬೇಕು. ಸರ್ಕಾರವೂ ಸಹ ಮಕ್ಕಳ ವಿಧ್ಯಾಭ್ಯಾಸಕ್ಕೆ ಹಲವು ಕಾರ್ಯಕ್ರಮಗಳನ್ನು ರೂಪಿಸಿದೆ. ಮಧ್ಯಾಹ್ನದ ಬಿಸಿಯೂಟ, ಕ್ಷೀರಭಾಗ್ಯ, ಶೂಭಾಗ್ಯ, ಸಮವಸ್ತ್ರ, ಮೊಟ್ಟೆÉ ವಿತರಣೆ ಇವುಗಳೆಲ್ಲವನ್ನು ಸದ್ಭಳಕೆ ಮಾಡಿಕೊಂಡು ಉತ್ತಮ ಪ್ರಜೆಗಳಾಗಿ ರೂಪುಗೊಳ್ಳಬೇಕು ಎಂದರು.

ನಮ್ಮ ಸುತ್ತಮುತ್ತಲಿನ ಹಳ್ಳಿಗಳ ಜನರು ಬಹುತೇಕ ಕೂಲಿ ವೃತ್ತಿಯಿಂದ ಜೀವನ ನಡೆಸುತ್ತಿದ್ದಾರೆ. ಮಕ್ಕಳ ಶೈಕ್ಷಣಿಕ ಅಗತ್ಯ ಸವಲತ್ತುಗಳನ್ನು ಪೂರ್ಣ ಪ್ರಮಾಣದಲ್ಲಿ ಒದಗಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಗುಣಮಟ್ಟದ ಶಿಕ್ಷಣಕ್ಕೆ ಕಲಿಕಾ ಸಾಮಗ್ರಿಗಳು ಅವಶ್ಯವಾಗಿವೆ. ಸಂಘ ಸಂಸ್ಥೆಗಳು, ಸ್ಥಿತಿವಂತರು ಅಗತ್ಯ ಸೌಲಭ್ಯಗಳನ್ನು ಒದಗಿಸಲು ಮುಂದೆ ಬರಬೇಕಿದೆ ಎಂದು ಅಭಿಪ್ರಾಯಪಟ್ಟರು.

ಪಪಂ ಉಪಾಧ್ಯಕ್ಷೆ ಸರ್ವಮಂಗಳಾ ಉಮಾಪತಿ ಮಾತನಾಡಿ, ಸ್ವಸ್ಥ ಸಮಾಜ ನಿರ್ಮಾಣದಲ್ಲಿ ದಾನಿಗಳ ಪಾತ್ರ ಅತ್ಯಂತ ಮಹತ್ವತೆಯಿಂದ ಕೂಡಿದೆ. ಸಮಾಜಕ್ಕೆ ನೆರವು ನೀಡುವ ದಾನಿಗಳ ಮಾನವೀಯ ಗುಣಗಳಿಗೆ ಬೆಲೆಕಟ್ಟಲು ಸಾಧ್ಯವಿಲ್ಲ. ಹೀಗಾಗಿ ಸರ್ಕಾರ ಮತ್ತು ದಾನಿಗಳು ನೀಡುವ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಂಡು ಶಿಕ್ಷಣವಂತರಾಗಿ ಎಂದು ಮಕ್ಕಳಿಗೆ ಸಲಹೆ ನೀಡಿದರು.

ಪಪಂ ಸದಸ್ಯ ಸೈಯದ್ ಅನ್ವರ್ ಮಾತನಾಡಿ, ಗ್ರಾಮೀಣ ಪ್ರದೇಶಗಳಿಗೂ ಆಂಗ್ಲ ಮಾಧ್ಯಮ ವ್ಯಾಪಿಸಿರುವ ಪರಿಣಾಮ ಬಡಜನರು ಸರ್ಕಾರಿ ಶಾಲೆಗಳನ್ನು ಅವಲಂಬಿಸುತ್ತಿದ್ದಾರೆ. ಇಲ್ಲಿನ ಶಾಲೆಯಲ್ಲಿ ಕಳೆದ ನಾಲ್ಕು ವರ್ಷಗಳಿಂದ ಒಂದನೇ ತರಗತಿಯಿಂದ ಆಂಗ್ಲ ಮಾಧ್ಯಮ ಆರಂಭಗೊಂಡಿದೆ. ಇದರ ದಾಖಲಾತಿಗೆ ಪೋಷಕರ ಒಲವು ಹೆಚ್ಚಳವಾಗುತ್ತಿರುವುದು ಅಶಾದಾಯಕ ಬೆಳವಣಿಗೆ ಎಂದರು.

ಶಾಲಾ ಮುಖ್ಯಶಿಕ್ಷಕಿ ಎನ್.ಇಂದಿರಮ್ಮ ಮಾತನಾಡಿ, ಶಾಲೆಗಳಲ್ಲಿ ಹೊಸತನ ಮೂಡಿಸುವ ಕೆಲಸ ಶಿಕ್ಷಕರಿಂದ ಆಗಬೇಕು. ಇದಕ್ಕೆ ಪೂರಕವಾಗಿ ದಾನಿಗಳ ನೆರವು ಅಗತ್ಯ. ದಾನಿಗಳು ನೀಡುವ ಸಲಕರಣೆ ಸಮರ್ಪಕವಾಗಿ ಮಕ್ಕಳು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಪಪಂ ಸದಸ್ಯರಾದ ಪಾಪಮ್ಮ, ಸುನೀತಾಮುದಿಯಪ್ಪ, ಮಹೇಶ್ವರಿ ರಾಜಯ್ಯ, ಬೋಸಮ್ಮ, ಎಸ್‍ಡಿಎಂಸಿ ಅಧ್ಯಕ್ಷೆ ಸುಮಲತಾ ಉಪಾಧ್ಯಕ್ಷ ತಿಪ್ಪೇಸ್ವಾಮಿ, ಸದಸ್ಯ ಎನ್.ಮಾರುತಿ ಮುಖಂಡ ಬಂಗಾರಪ್ಪ, ಶಿಕ್ಷಕರಾದ ಗಾಯಿತ್ರಿದೇವಿ, ಸುಮೀತ್ರಮ್ಮ, ಉಷಾ, ಸುಮ, ಮಂಜುಳಾ, ಚಂದನ, ಯತೀಶ್, ಕೃಷ್ಣರೆಡ್ಡಿ, ಮಂಜುನಾಥ್, ರಾಮಕೃಷ್ಣ ಉಪಸ್ಥಿತರಿದರು.

Leave a Reply

Your email address will not be published. Required fields are marked *

You missed

error: Content is protected !!