ಮದ್ಯವ್ಯಸನಿಗಳಿಂದ ಸಮಾಜದಲ್ಲಿ ಅಪರಾಧಗಳು ಹೆಚ್ಚಳ: ಧರ್ಮಸ್ಥಳ ಮದ್ಯವರ್ಜನ ಶಿಬಿರದಲ್ಲಿ ವಕೀಲರಾದ ಎಚ್.ಎಂ ಕರಿಬಸಯ್ಯ ಕಳವಳ ವ್ಯಕ್ತಪಡಿಸಿದರು.
ಜಗಳೂರು ಸುದ್ದಿ,
ಜಗಳೂರು,ಡಿ.23:ಮದ್ಯ ವ್ಯಸನಿಗಳಿಂದ ಸಮಾಜದಲ್ಲಿ ಅಪರಾಧಗಳ ಹೆಚ್ಚುತ್ತವೆ ಎಂದು ವಕೀಲ ಎಚ್.ಎಂ ಕರಿಬಸಯ್ಯ ಆತಂಕ ವ್ಯಕ್ತಪಡಿಸಿದರು.
ಪಟ್ಟಣದ ವಾಲ್ಮೀಕಿ ಭವನದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಘದಿಂದ ಹಮ್ಮಿಕೊಳ್ಳಲಾಗಿದ್ದ ಮದ್ಯವರ್ಜನ ಶಿಬಿರ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕೆಲವರು ಸ್ವಾರ್ಥಕ್ಕಾಗಿ ಹಣಕೊಟ್ಟು ಯುವಕರನ್ನು ಸಮಾಜದಲ್ಲಿ ಕುಡುಕರನ್ನಾಗಿಸಿ ಪರಿವರ್ತಿಸುತ್ತಾರೆ.ಕೈಗೊಂಬೆಯಾಗಿ ಅಮಾಯಕರು ಬಲಿಯಾಗುತ್ತಾರೆ.ಅಪರಾಧಕೃತ್ಯಗಳಲ್ಲಿ ತೊಡಗಿದಾಗ ಕಾನೂನು ಹೋರಾಟಕ್ಕೆ ಹಣವಿಲ್ಲದಂತೆ ಪರದಾಡುವಂತಾಗುತ್ತದೆ ಎಂದರು.
ಶುಕ್ರದೆಸೆ ಪತ್ರಿಕೆ ಸಂಪಾದಕ ರಾಜಪ್ಪ ವ್ಯಾಸಗೊಂಡನಹಳ್ಳಿ ಮಾತನಾಡಿ,ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕಾಗಿ ಧರ್ಮಸ್ಥಳ ಸಂಘದ ಕಾರ್ಯ ಶ್ಲಾಘನೀಯ.ಬದಲಾವಣೆಯ ಬದುಕು ಕಟ್ಟಿಕೊಳ್ಳಲು ಮದ್ಯವರ್ಜನ ಶಿಬಿರ ಪೂರಕವಾಗಲಿದೆ.ಬಸವಣ್ಣನ ನಾಡಿನಲ್ಲಿ ಎಲ್ಲಾ ವರ್ಗದವರೂ ಮುಖ್ಯವಾಹಿನಿಗೆ ಬರಬೇಕಿದೆ.ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣದೊಂದಿಗೆ ಉಜ್ವಲ ಭವಿಷ್ಯ ರೂಪಿಸಬೇಕು.ಕುಡಿತದ ದಾಸರಾಗದೆ ಯುವಸಮೂಹ ಜಾಗೃತರಾಗಬೇಕು ಎಂದು ಹೇಳಿದರು.
ಪತ್ರಕರ್ತ ಮಾದಿಹಳ್ಳಿ ಮಂಜುನಾಥ್ ಮಾತನಾಡಿ,ಕುಡಿತದಿಂದ ಹಣ,ಆರೋಗ್ಯ ಕುಟುಂಬದಲ್ಲಿ ನೆಮ್ಮದಿ ವಿಶ್ವಾಸ,ಸಮಾಜದಲ್ಲಿ ಮೌಲ್ಯ ಕಳೆದುಹೋಗುತ್ತದೆ.ಬರ ಮತ್ತು ಬಡತಾಲ್ಲೂಕಿನಲ್ಲಿ ಕಾರ್ಮಿಕರು,ಹಿಂದುಳಿದ ಶೋಷಿತ ವರ್ಗದವರು ಕುಡಿತದಿಂದ ಮುಕ್ತರಾಗಿ ದುಡಿಮೆ ಹಣವನ್ನು ಸಂಗ್ರಹಿಸಿ ಆರ್ಥಿಕ ಸಬಲೀಕರಣದೊಂದಿಗೆ ಉತ್ತಮ ಜೀವನ ನಿರ್ವಹಣೆ ಸಾಗಿಸಬೇಕು ಎಂದು ಸಲಹೆ ನೀಡಿದರು.
ಎಸ್ ಸಿ ಎಸ್ ಟಿ ಪತ್ರಿಕಾ ವರದಿಗಾರರ ಸಂಘದ ರಾಜ್ಯಾಧ್ಯಕ್ಷ ಎಚ್.ಆರ್.ಬಸವರಾಜ್ ಮಾತನಾಡಿ,ಧರ್ಮಸ್ಥಳ ಸಂಘವು ಸಾಲಸೌಲಭ್ಯಗಳೊಂದಿಗೆ ಬಡಕುಟುಂಬಗಳಿಗೆ ಆರ್ಥಿಕ ನೆರವುನೀಡುವುದಲ್ಲದೆ ಮದ್ಯವರ್ಜನ ಶಿಬಿರದಂತಹ ಸಮಾಜಮುಖಿ ಕಾರ್ಯಕ್ರಮಗಳನ್ನು ಸದ್ಬಳಕೆಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾನಿರ್ದೇಶಕ ಪ್ರವೀಣ್ ಕುಮಾರ,ಸಿ.ಎಂ.ಮಲ್ಲಿಕಾರ್ಜುನ. ಕೃಷ್ಣಮೂರ್ತಿ ಹಾಗೂ ಪ್ರಾದೇಶಿಕ ಕಚೇರಿ ಜನಜಾಗೃತಿ ಯೋಜನಾಧಿಕಾರಿ ನಾಗರಾಜ್ ಕುಲಾಲ್ ,ಯೋಜನಾಧಿಕಾರಿಗಳಾದ ವಸಂತಿ ಜಗದೀಶ್ ಅಮಿನ್ , ಶಿಬಿರಾಧಿಕಾರಿ ನಂದಕುಮಾರ್, ಆರೋಗ್ಯ ಸಹಾಯಕಿ ರಂಜಿತಾ,ಮೇಲ್ವಿಚಾಕರಾದ ಹಾಲೇಶ್,ಸುಧಾ ಸೇರಿದಂತೆ ಇದ್ದರು.
