ದಾವಣಗೆರೆ ದಂಗಲ್‌: ಶಾಮನೂರು ಮೊಮ್ಮಗನಿಗೆ ಸಾದಿಕ್ ಪೈಲ್ವಾನ್‌ ಬೆಂಬಲ

By shukradeshe news
editor m.rajappa vyasgondanahalli
Kannada | online news portal |Kannada news online

: ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಎದುರಾಗಿದ್ದ ಬಹುದೊಡ್ಡ ತಲೆನೋವು ಕೊನೆಗೂ ಪರಿಹಾರವಾಗಿದೆ. ಎಸ್‌.ಎಸ್‌ ಮಲ್ಲಿಕಾರ್ಜುನ್ ಅವರ ಪುತ್ರ ಸಮರ್ಥ್ ಶಾಮನೂರು ಅವರಿಗೆ ಟಿಕೆಟ್ ನೀಡಿದ್ದನ್ನು ವಿರೋಧಿಸಿ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಹಿರಿಯ ನಾಯಕ ಸಾದಿಕ್ ಪೈಲ್ವಾನ್, ಈಗ ಅಧಿಕೃತವಾಗಿ ಕಾಂಗ್ರೆಸ್‌ ಪರ ನಿಲ್ಲಲು ಒಪ್ಪಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜತಾಂತ್ರಿಕ ಸಂಧಾನಕ್ಕೆ ಮಣಿದಿರುವ ಪೈಲ್ವಾನ್, ಕಾಂಗ್ರೆಸ್ ಅಭ್ಯರ್ಥಿ ಪರ ಕೆಲಸ ಮಾಡಲು ಒಪ್ಪಿಕೊಂಡಿದ್ದಾರೆ.

ಶಾಸಕ ರಿಜ್ವಾನ್ ಅರ್ಷದ್ ನೇತೃತ್ವದಲ್ಲಿ ಸಾದಿಕ್ ಪೈಲ್ವಾನ್ ಅವರು ಮುಖ್ಯಮಂತ್ರಿಗಳ ಅಧಿಕೃತ ನಿವಾಸ ಕಾವೇರಿಗೆ ಭೇಟಿ ನೀಡಿದ್ದರು. ಸುಮಾರು ಒಂದು ಗಂಟೆ ಕಾಲ ನಡೆದ ಸುದೀರ್ಘ ಚರ್ಚೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರು ಪೈಲ್ವಾನ್ ಅವರ ಮನವೊಲಿಸುವಲ್ಲಿ ಯಶಸ್ವಿಯಾದರು. ದಾವಣಗೆರೆ ದಕ್ಷಿಣದಲ್ಲಿ ಅಲ್ಪಸಂಖ್ಯಾತ ಮತಗಳು ನಿರ್ಣಾಯಕವಾಗಿದ್ದು, ಪೈಲ್ವಾನ್ ಬಂಡಾಯ ಎದ್ದಿದ್ದರೆ ಕಾಂಗ್ರೆಸ್‌ಗೆ ದೊಡ್ಡ ಹೊಡೆತ ಬೀಳುವ ಆತಂಕವಿತ್ತು.

ಸಿಎಂ ನೀಡಿದ ಭರವಸೆಗಳೇನು ?
ಸಂಧಾನದ ವೇಳೆ ಸಿಎಂ ಸಿದ್ದರಾಮಯ್ಯ ಅವರು ಪೈಲ್ವಾನ್ ಅವರಿಗೆ ಕೆಲವು ಪ್ರಮುಖ ಭರವಸೆಗಳನ್ನು ನೀಡಿದ್ದಾರೆ ಎನ್ನಲಾಗಿದೆ:

ಪಕ್ಷಕ್ಕೆ ನಿಷ್ಠೆಯಿಂದ ದುಡಿದ ನಿಮಗೆ ಮುಂದಿನ ದಿನಗಳಲ್ಲಿ ಪ್ರಭಾವಿ ನಿಗಮ-ಮಂಡಳಿಗಳಲ್ಲಿ ಅಧ್ಯಕ್ಷ ಸ್ಥಾನ ನೀಡುವುದಾಗಿ ಭರವಸೆ ನೀಡಿದ್ದಾರೆ.

ಭವಿಷ್ಯದ ಟಿಕೆಟ್: ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಅಲ್ಪಸಂಖ್ಯಾತರಿಗೆ ಟಿಕೆಟ್ ನೀಡುವ ಬಗ್ಗೆ ಗಂಭೀರವಾಗಿ ಪರಿಗಣಿಸುವುದಾಗಿ ತಿಳಿಸಿದ್ದಾರೆ.

ಸಮನ್ವಯ: ಶಾಮಮನೂರು ಶಿವಶಂಕರಪ್ಪ ಮತ್ತು ಮಲ್ಲಿಕಾರ್ಜುನ್ ಕುಟುಂಬದೊಂದಿಗೆ ಇರುವ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳನ್ನು ತಾವೇ ನಿಂತು ಬಗೆಹರಿಸುವುದಾಗಿ ಸಿಎಂ ಸಮಾಧಾನಪಡಿಸಿದ್ದಾರೆ.

ಸಿಎಂ ಭೇಟಿಯ ನಂತರ ಮಾತನಾಡಿದ ಸಾದಿಕ್ ಪೈಲ್ವಾನ್, ನಾನು 40 ವರ್ಷಗಳಿಂದ ಕಾಂಗ್ರೆಸ್‌ಗಾಗಿ ರಕ್ತ ಸುರಿಸಿದ್ದೇನೆ. ಕ್ಷೇತ್ರದಲ್ಲಿ ಅಲ್ಪಸಂಖ್ಯಾತರು ಹೆಚ್ಚಿರುವ ಕಾರಣ ಟಿಕೆಟ್ ಕೇಳಿದ್ದು ನ್ಯಾಯಯುತವಾಗಿತ್ತು. ಆದರೆ ಈಗ ಸಿಎಂ ಸಿದ್ದರಾಮಯ್ಯ ಅವರ ಮಾತಿಗೆ ಗೌರವ ಕೊಟ್ಟು, ವೈಯಕ್ತಿಕ ಹಿತಾಸಕ್ತಿ ಬದಿಗಿಟ್ಟಿದ್ದೇನೆ. ಯಾವುದೇ ಕಾರಣಕ್ಕೂ ದಾವಣಗೆರೆಯಲ್ಲಿ ಬಿಜೆಪಿ ಗೆಲ್ಲಬಾರದು. ನಾವು ಒಗ್ಗಟ್ಟಿನಿಂದ ಸಮರ್ಥ್ ಅವರನ್ನು ಗೆಲ್ಲಿಸುತ್ತೇವೆ ಎಂದು ಘೋಷಿಸಿದರು.

ದಾವಣಗೆರೆ ದಕ್ಷಿಣದಲ್ಲಿ ಶಾಮನೂರು ಕುಟುಂಬದ ಹಿಡಿತವಿದ್ದರೂ, ಸಾದಿಕ್ ಪೈಲ್ವಾನ್ ಅವರಂತಹ ಸ್ಥಳೀಯ ಪ್ರಭಾವಿ ನಾಯಕರು ದೂರ ಉಳಿದಿದ್ದರೆ ಚುನಾವಣಾ ಫಲಿತಾಂಶದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿತ್ತು. ಇದೀಗ ಪೈಲ್ವಾನ್ ಅವರು ಡಿ.ಸಿ.ಎಂ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿ ಪ್ರಚಾರವನ್ನ ಆರಂಭಿಸಲು ಸಜ್ಜಾಗಿದ್ದಾರೆ. ಪರಿಷತ್ ಮುಖ್ಯ ಸಚೇತಕ ಸಲೀಂ ಅಹ್ಮದ್ ಕೂಡ ಈ ಸಂಧಾನವನ್ನು ಸ್ವಾಗತಿಸಿದ್ದಾರೆ.

ಒಟ್ಟಿನಲ್ಲಿ, ದಾವಣಗೆರೆ ದಕ್ಷಿಣದಲ್ಲಿ ‘ಕೈ’ ನಾಯಕರು ಬಂಡಾಯದ ಕಿಚ್ಚನ್ನು ಆರಿಸುವ ಮೂಲಕ ಚುನಾವಣಾ ಪ್ರಚಾರದಲ್ಲಿ ಹೊಸ ಹುಮ್ಮಸ್ಸು ಮೂಡಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!