ಸಿದ್ದು ಮೇಲೆ ಸಚಿವಾಕಾಂಕ್ಷಿಗಳ ಮುನಿಸು ? ಮೈಸೂರಲ್ಲಿ ಅಭಿನಂದನಾ ಕಾರ್ಯಕ್ರಮಕ್ಕೆ ಹಿರಿಯರು ಗೈರು
ಮೈಸೂರು: ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಕಾರ್ಯಕ್ರಮಕ್ಕೆ ಶಾಸಕರಾದ ಡಾ.H.C.ಮಹದೇವಪ್ಪ, ತನ್ವೀರ್ ಸೇಠ್, K.ವೆಂಕಟೇಶ್ ಗೈರಾಗಿದ್ದಾರೆ. ಸಚಿವ ಸ್ಥಾನಕ್ಕೆ H.C.ಮಹದೇವಪ್ಪ, ತನ್ವೀರ್ ಸೇಠ್, K.ವೆಂಕಟೇಶ್ ಪ್ರಬಲ ಆಕಾಂಕ್ಷಿಗಳಾಗಿದ್ದು, ಮೊದಲ ಪಟ್ಟಿಯಲ್ಲಿ ಸಚಿವ ಸ್ಥಾನ ಸಿಗದಿರುವುದಕ್ಕೆ ಮುನಿಸಿಕೊಂಡ್ರಾ ಎಂಬ ಪ್ರಶ್ನೆ ಮೂಡಿದೆ.
ಮೈಸೂರು ಜಿಲ್ಲೆಯಿಂದ ತಲಾ 6 ಬಾರಿ ಗೆದ್ದಿರುವ ಹಿರಿಯ ಶಾಸಕರು ಮೊದಲ ಪಟ್ಟಿಯಲ್ಲೇ ತಮ್ಮ ಹೆಸರು ಅಂತಿಮವಾಗುವ ನಿರೀಕ್ಷೆಯಲ್ಲಿದ್ರು. ಇನ್ನ ದಲಿತ ಕೋಟಾದಲ್ಲಿ ಡಾ.ಹೆಚ್.ಸಿ.ಮಹದೇವಪ್ಪ, ಮುಸ್ಲಿಂ ಕೋಟಾದಡಿ ತನ್ವೀರ್ ಸೇಠ್, ಒಕ್ಕಲಿಗ ಕೋಟಾದಡಿ ಕೆ.ವೆಂಕಟೇಶ್ ಸಚಿವ ಸ್ಥಾನ ಸಿಗುವ ನಿರೀಕ್ಷೆಯಲ್ಲಿದ್ರು. ಆದ್ರೆ, ಮೊದಲ ಪಟ್ಟಿಯಲ್ಲಿ ಮೂವರಿಗೂ ಮಂತ್ರಿ ಸ್ಥಾನ ಸಿಗದೇ ನಿರಾಸೆ ಉಂಟಾಗಿದೆ. ಈ ಹಿನ್ನೆಲೆ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಅಭಿನಂದನಾ ಕಾರ್ಯಕ್ರಮಕ್ಕೆ ಗೈರಾಗುವ ಮೂಲಕ ಮೂವರು ಶಾಸಕರು ಅಸಮಾಧಾನ ಹೊರ ಹಾಕಿದ್ದಾರೆ ಎನ್ನಲಾಗಿದೆ.
ಕಾಂಗ್ರೆಸ್ ಶಾಸಕರಿಗೆ ಅಭಿನಂದನೆ
ಕಾಂಗ್ರೆಸ್ ಪಕ್ಷದಿಂದ ನೂತನವಾಗಿ ಆಯ್ಕೆಯಾಗಿರುವ ಶಾಸಕರಿಗೆ ಅಭಿನಂದನಾ ಸಮಾರಂಭವನ್ನ ಹಮ್ಮಿಕೊಳ್ಳಲಾಗಿತ್ತು ನೂತನವಾಗಿ ಆಯ್ಕೆಯಾಗಿರುವ ಶಾಸಕರನ್ನ ಮೆಟ್ರೊಪೋಲ್ ವೃತ್ತದಿಂದ,ಕಾಂಗ್ರೆಸ್ ಕಚೇರಿಯವರೆಗೆ ಮಂಗಳವಾದ್ಯಗಳೊಂದಿಗೆ ಮೆರವಣಿಗೆ ಮಾಡಲಾಯ್ತು.
ಬಳಿಕ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಸಕರಿಗೆ ಅಭಿನಂದನೆ ಸಲ್ಲಿಕೆ ಮಾಡಲಾಯ್ತು. ಹೆಚ್.ಡಿ.ಕೋಟೆ ಕ್ಷೇತ್ರದಿಂದ 2ನೇ ಬಾರಿ ಆಯ್ಕೆಯಾದ ಅನಿಲ್ ಚಿಕ್ಕಮಾದು, ಚಾಮರಾಜದಿಂದ ಮೊದಲ ಬಾರಿ ಆಯ್ಕೆಯಾಗಿರುವ ಹರೀಶ್ ಗೌಡ, ಕೆ.ಆರ್.ನಗರದಿಂದ ಮೊದಲ ಬಾರಿ ಆಯ್ಕೆಯಾಗಿರುವ ಡಿ.ರವಿಶಂಕರ್, ನಂಜನಗೂಡಿನಿಂದ ಮೊದಲ ಬಾರಿ ಆಯ್ಕೆಯಾದ ದರ್ಶನ್ ಧ್ರುವಗೆ ಅಭಿನಂದನೆ ಸಲ್ಲಿಸಲಾಯ್ತು.
ಇದೇ ವೇಳೆ ಮಾಜಿ ಪ್ರಧಾನಿ, ದಿವಂಗತ ರಾಜೀವ್ ಗಾಂಧಿ ಪುಣ್ಯಸ್ಮರಣೆ ಆಚರಿಸಲಾಯ್ತು . ರಾಜೀವ್ ಗಾಂಧಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಕೆ ಮಾಡಿ ನೆನೆಯಲಾಯಿತು.
“ವಿಧಾನಸಭೆ ಚುನಾವಣೆ ಗೆಲ್ಲಲು ಬಿಜೆಪಿ ಎಲ್ಲಾ ರೀತಿ ತಂತ್ರಗಾರಿಕೆ ಮಾಡಿತ್ತು .ಆದ್ರೆ, ಬಿಜೆಪಿಯ ಸವಾಲನ್ನು ಎದುರಿಸಿ ಕಾಂಗ್ರೆಸ್ ಪಕ್ಷ ಗೆಲುವು ಸಾಧಿಸಿದೆ. ನಂಜನಗೂಡು ಜನತೆಗೆ ಸದಾ ಋಣಿ” ಅಂತ ಶಾಸಕ ದರ್ಶನ್ ಧ್ರುವನಾರಾಯಣ್ ಹೇಳಿಕೆ ನೀಡಿದರು. “ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದ ಕಾರಣ,ಈ ಬಾರಿಯ ವಿಧಾನಸಭೆ ಚುನಾವಣೆ ಕಾಂಗ್ರೆಸ್‌ಗೆ ತುಂಬಾ ಸವಾಲಾಗಿತ್ತು. ಬಿಜೆಪಿಯ ಎಲ್ಲಾ ತಂತ್ರಗಾರಿಕೆಗಳನ್ನ ಎದುರಿಸಿ ಕಾಂಗ್ರೆಸ್ ಈ ಬಾರಿ ಗೆದ್ದಿದೆ. ಹಗಲಿರುಳು, ಬಿಸಿಲು, ಮಳೆ ಲೆಕ್ಕಿಸದೇ ಕಾರ್ಯಕರ್ತರು ದುಡಿದಿದ್ದಾರೆ. ಕಾರ್ಯಕರ್ತರು ನಿರಂತರವಾಗಿ ಕೆಲಸ ಮಾಡಿದ್ದಕ್ಕೆ ಗೆಲುವು ಸಾಧಿಸಿದ್ದೇವೆ. ನನಗೆ ರಾಜಕೀಯ ತಂದೆಯವರು ಹಠಾತ್ ನಿಧನರಾದ ಕಾರಣ ಚುನಾವಣೆಯಲ್ಲಿ ಸ್ಪರ್ಧಿಸಿದೆ . ನನ್ನ ತಂದೆ ಗೆದ್ದು ಬಂದು ನಿಲ್ಲಬೇಕಾದ ಸ್ಥಾನದಲ್ಲಿ ನಾನು ನಿಲ್ಲುವಂತಾಯಿತು .ತಂದೆ ಮೇಲೆ ಕ್ಷೇತ್ರದ ಜನ ಇಟ್ಟಿರುವ ನಂಬಿಕೆಯನ್ನು ಹುಸಿಗೊಳಿಸುವುದಿಲ್ಲ” ಅಂತ ಹೇಳಿದರು.
ಸಾರ್ವಜನಿಕರಿಂದ ಸನ್ಮಾನ ರೂಪದಲ್ಲಿ ಹಾರ-ತುರಾಯಿ, ಶಾಲು-ಶಲ್ಯಗಳನ್ನು ಸ್ವೀಕರಿಸಲ್ಲ; ಪುಸ್ತಕಗಳನ್ನು ನೀಡಬಹುದು – ಸಿಎಂ ಸಿದ್ದರಾಮಯ್ಯ