ಗಾನ (ಜ್ಞಾನ) ಯೋಗಿ ಪುಟ್ಟರಾಜರು
(ಪಂಡಿತ್ ಪುಟ್ಟ ರಾಜ ಗವಾಯಿಗಳ ಜನ್ಮ ದಿನದ ವೈಶಿಷ್ಟ್ಯತೆ
ಭೂಮಿಯ ಮೇಲೆ ಹುಟ್ಟಿದ ಪ್ರತಿ ಜೀವಿಯು ತನ್ನದೇ ಆದ ಕಷ್ಟಗಳನ್ನು ಎದುರಿಸುತ್ತಾ ಇರುತ್ತಾನೆ. ನ್ಯೂನ್ಯತೆ ಇಲ್ಲದ ಮನುಷ್ಯರನ್ನ ಕಾಣುವುದೇ ಅಸಾಧ್ಯ ಆದರೆ ಆ ನ್ಯೂನ್ಯತೆಗಳನ್ನ ಮೆಟ್ಟಿನಿದ್ದಾಗ ಮಾತ್ರವೇ ಸಾಧನೆಯ ಶಿಖರವನ್ನ ಏರಬಹುದು ಎಂಬುದನ್ನು ಸಾಧಿಸಿ ತೋರಿಸಿದವರಲ್ಲಿ ಗಾನಯೋಗಿಗಳಾದ ಪಂಚಾಕ್ಷರಿ ಗವಾಯಿಗಳು ಹಾಗೂ ಪುಟ್ಟರಾಜ ಗವಾಯಿಗಳು ಪ್ರಮುಖರು. ಪಂಚಾಕ್ಷರಿ ಗವಾಯಿಗಳು ಹಾಕಿದಂತಹ ಸಂಗೀತ ಸಾಮ್ರಾಜ್ಯ ಎಂಬ ಮೊಳಕೆಗೆ ನೀರನ್ನು ಎರೆದು ಬೃಹತ್ ಬರವನ್ನಾಗಿಸಿದ ಕೀರ್ತಿ ಪುಟ್ಟರಾಜರಿಗೆ ಸಲ್ಲಬೇಕು.
ಪುಟ್ಟರಾಜರು ಹಾವೇರಿ ಜಿಲ್ಲೆಯ ಹಾನಗಲ್ಲ ತಾಲೂಕಿನ ದೇವರ ಹೊಸಪೇಟೆಯ ವೆಂಕಟಪುರ ಮಠದ ಜಂಗಮ ದಂಪತಿಗಳಾದ ರೇವಣ್ಯಯ್ಯ ಮತ್ತು ಸಿದ್ದಮ್ಮನವರ ಮಗನಾಗಿ 1914 ಮಾರ್ಚ್ 3ರಂದು ಜನಿಸಿದರು.ಬಾಲ್ಯದಲ್ಲಿ ತಮ್ಮ ಕಣ್ಣುಗಳನ್ನ ಕಳೆದುಕೊಂಡಿದ್ದ ಇವರು ತಮ್ಮ ಈ ನ್ಯೂನ್ಯತೆಯನ್ನು ಮೀರಿ ಸಂಗೀತದಲ್ಲಿ ಆಸಕ್ತಿಯನ್ನು ಹೊಂದಿದ್ದರು. ತಮ್ಮ ಮಾವನವರಾದ ಚಂದ್ರಶೇಖರಯ್ಯನವರ ಸಹಾಯದಿಂದ ಪಂಡಿತ ಪಂಚಾಕ್ಷರಿ ಗವಾಯಿಗಳ ಸಂಚಾರ ಸಂಗೀತ ಪಾಠಶಾಲೆಯ ಮೂಲಕ ಶ್ರೀಗಳ ಶಿಷ್ಯತ್ವವನ್ನು ಪಡೆದರು. ಪಂಚಾಕ್ಷರಿ ಗವಾಯಿಗಳು ಪುಟ್ಟಯ್ಯನವರ ಆಸಕ್ತಿ ಅಭಿರುಚಿಗಳನ್ನು ಅರಿತಿದ್ದು ಇವರಿಗೆ ಕೇವಲ ಸಂಗೀತವನ್ನು ಅಷ್ಟೇ ಅಲ್ಲದೆ ವಿವಿಧ ಶಾಸ್ತ್ರಗಳನ್ನು ಕಲಿಸಲು ವ್ಯವಸ್ಥೆ ಮಾಡಿದರು. ಜೊತೆಗೆ ಸ್ವತಃ ಓದಲು ಮತ್ತು ಬರೆಯಲು ಬ್ರೈಲ್ ಲಿಪಿಯನ್ನು ಕಲಿಸಿದರು. ಈ ಮೂಲಕ ಪುಟ್ಟಯ್ಯನವರು ಹಲವಾರು ಕೃತಿಗಳನ್ನು ಸಹ ರಚಿಸಿದ್ದಾರೆ.
ವಿದ್ಯಾರ್ಥಿಯಾಗಿ ಗುರುಗಳ ಮಡಿಲು ಸೇರಿ ತಮ್ಮ ನಿಷ್ಠೆ, ವಿಶ್ವಾಸ, ಶುದ್ಧ ಮನಸ್ಸಿನಿಂದ ಆಶ್ರಮದ ಉತ್ತರಾಧಿಕಾರಿಗಳಾದರು. 1944ರ ನಂತರ ವೀರೇಶ್ವರ ಪುಣ್ಯಶ್ರಮದ ಜವಾಬ್ದಾರಿಯನ್ನು ಹೊತ್ತು ತಮ್ಮ ವೈಯಕ್ತಿಕ ಬದುಕನ್ನ ಬದಿಗಿರಿಸಿ ಆಶ್ರಮದ ಹಾಗೂ ಅಂಧ- ಅನಾಥ ಮಕ್ಕಳ ಶ್ರೇಯೋಭಿವೃದ್ಧಿಗಾಗಿ ದುಡಿದರು.
ಶ್ರೀಗಳು ಸಾವಿರಾರು ಅಂಧ-ಅನಾಥ ಮಕ್ಕಳಿಗೆ ಸಂಗೀತ ಜ್ಞಾನ ನೀಡಿದ ಪುಟ್ಟರಾಜರು ನ್ಯೂನ್ಯತೆಯನ್ನು ಮೀರಿ ಸಾಧಿಸಲು ಹಾಗೂ ಕಲಿಯಲು ಆತ್ಮವಿಶ್ವಾಸ ತುಂಬಿದರು. ಇವರ ಆಳವಾದ ಅಧ್ಯಯನ ಇವರನ್ನು ಶ್ರೇಷ್ಠ ಗಾಯಕರಾಗಿ, ಸಾಧಕರಾಗಿ ಹೊರಹೊಮ್ಮುವಂತೆ ಮಾಡಿತು. ಗಾಂಧಿ ತತ್ವ ಪಾಲಕರಾಗಿದ್ದಂತಹ ಪಂಚಾಕ್ಷರಿ ಗವಾಯಿಗಳಂತೆ ಪುಟ್ಟರಾಜರೂ ಸಹ ಸ್ವದೇಶಿ ಸೂತ್ರವನ್ನು ಅಳವಡಿಸಿಕೊಂಡು ಸರ್ವರಿಗೂ ಮಾದರಿಯಾಗಿದ್ದರು. ಇವರದು ಶುಭ್ರವಾದ ಬಿಳಿಯ ಉದ್ದನೆಯಾಗಿ ಪಂಚೆ, ತಲೆಗೆ ಕೆಂಪು ಪೇಟ, ಹಣೆಯಲ್ಲಿ ವಿಭೂತಿ, ಕೈಯಲ್ಲಿ ಉದ್ದನೆಯ ಬೆತ್ತ, ಎಡಗೈಗೆ ಬ್ರೈಲ್ ವಾಚು, ಕೊರಳಲ್ಲಿ ರುದ್ರಾಕ್ಷಿಮಾಲೆ ಇದು ಇವರ ಸರಳತೆಯ ಪ್ರತೀಕವಾಗಿತ್ತು. ವೀರೇಶ್ವರ ಪುಣ್ಯಾಶ್ರಮದ ಪೀಠಾದಿಪತಿಗಳು ಆಗಿದ್ದರೂ ಸಹ ಸ್ವಲ್ಪವೂ ಗರ್ವ ಎಂಬುದು ಅವರಲ್ಲಿ ಇರಲಿಲ್ಲ. ಇವರ ವ್ಯಕ್ತಿತ್ವ ಸರ್ವರನ್ನು ಆಕರ್ಷಿಸುತ್ವಂತಿತ್ತು.
ಗವಾಯಿಗಳು ಕಾಯಕವೇ ಕೈಲಾಸ ಎಂಬ ಮಂತ್ರವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿದ್ದರು, ತಮ್ಮ ಇಡೀ ಜೀವನವನ್ನೇ ಗಾನಸೇವೆ ಹಾಗೂ ಅಂಧ ಅನಾಥರಿಗಾಗಿ ಮುಡುಪಾಗಿರಿಸಿದ ಗವಾಯಿಗಳು ಕೇವಲ ಸಂಗೀತ ಅಷ್ಟೇ ಅಲ್ಲದೆ ಕನ್ನಡ, ಹಿಂದಿ, ಸಂಸ್ಕೃತ ಭಾಷೆಗಳಲ್ಲಿ ಅಗಾಧ ಪಾಂಡಿತ್ಯವನ್ನು ಗಳಿಸಿ ಹಲವಾರು ಕ್ಷೇತ್ರಗಳಲ್ಲಿ ಸಾಧನೆಗೈದರು, ಈ ಮೂಲಕ ಜ್ಞಾನಯೋಗಿ – ಗಾನಯೋಗಿ ಎಂದು ಹೆಸರಾದರು. ಹಲವಾರು ಪ್ರಶಸ್ತಿಗಳು, ಪುರಸ್ಕಾರಗಳು, ಗೌರವಗಳು ಇವರ ಸೇವೆಗೆ ಲಭಿಸಿದವು. ಹೀಗೆ ಸಂಗೀತ ಲೋಕದ ಧ್ರುವತಾರೆ ಆಗಿ ಲಕ್ಷಾಂತರ ಶಿಷ್ಯರ ಬದುಕಿಗೆ ದಾರಿದೀಪವಾಗಿ ಪುಟ್ಟರಾಜರು ಎಲ್ಲರ ಮನೆ ಮನಗಳಲ್ಲಿ ಅಜರಾಮರರಾಗಿದ್ದಾರೆ. ಇವರ ಸೇವೆ ಎಲ್ಲರಿಗೂ ಮಾದರಿ ಇಂತಹ ಮಹಾನ್ ಚೇತನರನ್ನು ಸ್ಮರಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಈ ಯೋಗಿ ಶ್ರೇಷ್ಠರ ಜನ್ಮದಿನದಂದು ಗಾನಯೋಗಿಗೆ ನಮ್ಮೆಲ್ಲರ ಭಕ್ತಿ ಪೂರ್ವಕ ನಮನಗಳು.
ಜ್ಯೋತಿಕುಮಾರ್ ನಾಯ್ಕ ಎಂ
S /O ಮಲ್ಲೇಶ್ ನಾಯ್ಕ ಎನ್.ಎ
ಬಿ.ಇಡಿ . ಪ್ರಶಿಕ್ಷಣಾರ್ಥಿ ,
ಸಿದ್ಧಾರ್ಥಶಿಕ್ಷಣ ಮಹಾವಿದ್ಯಾಲಯ , ಜಗಳೂರು
ಮೊಬೈಲ್ : – 8618659094
ಇ – ಮೇಲ್ : jyothikumarnaik@editor