ದಾವಣಗೆರೆ: ಲಂಚ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಚನ್ನಗಿರಿ ಕ್ಷೇತ್ರದ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರ ಚನ್ನೇಶಪುರದ ನಿವಾಸದಲ್ಲಿ ಲೋಕಾಯುಕ್ತ ಸಿಬ್ಬಂದಿ ಶೋಧ ನಡೆಸಿದ ಸಂದರ್ಭ 2.8 ಕೆ.ಜಿ (2,800 ಗ್ರಾಂ) ಚಿನ್ನ, 20 ಕೆ.ಜಿ ಬೆಳ್ಳಿ ದೊರೆತಿದೆ. ಇದೇ ವೇಳೆ ದೊರೆತಿರುವ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿಗಳಿಗೆ ಸಂಬಂಧಿಸಿದ ಮಹತ್ವದ ದಾಖಲೆಗಳನ್ನು ಪರಿಶೀಲನೆಗಾಗಿ ಬೆಂಗಳೂರಿಗೆ ಕಳುಹಿಸಿಕೊಡಲಾಗಿದೆ.
ಶುಕ್ರವಾರ ಮನೆಯ ಮೇಲೆ ದಾಳಿ ನಡೆದಿತ್ತು. ಆಸ್ತಿಗೆ ಸಂಬಂಧಿಸಿದ ದಾಖಲೆಗಳು ಮತ್ತು ಕೆಲವು ವಾಹನಗಳನ್ನು ವಶಪಡಿಸಿಕೊಂಡು ಪರಿಶೀಲಿಸಲಾಗುತ್ತಿದೆ ಎಂದು ಲೋಕಾಯುಕ್ತ ಮೂಲಗಳು ಖಚಿತಪಡಿಸಿವೆ.
ತಾಲ್ಲೂಕಿನ ಮಾವಿನಹೊಳೆ ಗ್ರಾಮದಲ್ಲಿರುವ ಶಾಸಕರ ಒಡೆತನದ ಜಲ್ಲಿ ಕ್ರಷರ್ ಕಚೇರಿ ಹಾಗೂ ಮಾವಿನಕಟ್ಟೆ ಗ್ರಾಮದಲ್ಲಿನ ತೋಟದ ಮನೆಗಳಲ್ಲೂ ಲೋಕಾಯುಕ್ತ ಸಿಬ್ಬಂದಿ ಶೋಧ ನಡೆಸಿದಾಗ ಮಹತ್ವದ ದಾಖಲೆಗಳು ದೊರೆತಿವೆ.