| online news portal | Kannada news online
Search. August 9. 2023
Shukradeshe suddi Kannada | online news portal | Kannada news online
Kannada | online news portal | Kannada news online
ಚಿತ್ರದುರ್ಗದ ಕಲುಷಿತ ನೀರಿನ ಪ್ರಕರಣವನ್ನು ಸಿ.ಬಿ.ಐ ಗೆ ಒಪ್ಪಿಸುವಂತೆ ದ.ಸಂ.ಸ ಆಗ್ರಹ
ಜಗಳೂರು:ತಾಲೂಕಿನ ಪಟ್ಟಣದ ಅಂಬೇಡ್ಕರ್ ವೃತ್ತದಿಂದ ತಾಲೂಕ್ ಕಚೇರಿಯವರೆಗೆ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ವತಿಯಿಂದ ಚಿತ್ರದುರ್ಗ ಜಿಲ್ಲೆಯ ಕವಾಡಿಗರಹಟ್ಟಿಯಲ್ಲಿ ದಲಿತ ಕೇರಿಗೆ ಕುಡಿಯುವ ನೀರಿಗೆ ವಿಷ ಹಾಕಿರುವ ಘಟನೆ ಮತ್ತು ಆದೆ ಜಿಲ್ಲೆಯ ಅಡವಿ ರಾಮಜೋಗಿಹಳ್ಳಿಯಲ್ಲಿ ಅಂಬೇಡ್ಕರ್ ನಾಮಫಲಕವನ್ನು ವಿರೋಧಿಸಿ ಸವರ್ಣೀಯವರಿಂದ ದಲಿತರ ಮೇಲೆ ಹಲ್ಲೆ ಖಂಡಿಸಿ ಇಂದು ದಸಂಸ ಪದಾಧಿಕಾರಿಗಳಿಂದ ಈ ಘನಘೋರ ಅನ್ಯಾಯವನ್ನ ಖಂಡಿಸಿ ತಹಶೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿ ಸಂತ್ರಸ್ತರ ಕುಟುಂಬಕ್ಕೆ ತಲಾ 5 ಲಕ್ಷ. ಪರಿಹಾರ ನೀಡಿ ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಿ ಈ ಎರಡು ಪ್ರಕರಣವನ್ನ ಸಿ ಬಿ ಐ ತನಿಖೆಗೆ ಒಪ್ಪಿಸುವಂತೆ ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ದ.ಸಂ.ಸ ತಾಲೂಕ್ ಘಟಕದ ಅಧ್ಯಕ್ಷರಾದ ಸತೀಶ್ ಬಿ ಮಾತನಾಡಿ, ಚಿತ್ರದುರ್ಗ ಜಿಲ್ಲೆಯ ನಗರಸಭೆ ವ್ಯಾಪ್ತಿಯ ಕಾವಾಡಿಗರಹಟ್ಟಿ 17ನೇ ವಾರ್ಡಿನಲ್ಲಿ ಕಲುಷಿತ ವಿಷಪೂರಿತ ನೀರನ್ನು ನಗರಸಭೆಯವರು ಪೂರೈಸಿದ ಹಿನ್ನೆಲೆಯಲ್ಲಿ ಆ ನೀರನ್ನು ಕುಡಿದು ಗರ್ಭದಲ್ಲಿ ಇರುವ ಮಗು ಸೇರಿದಂತೆ ಏಳು ಜನ ಸಾವನ್ನಪ್ಪಿದ್ದು, ಸುಮಾರು 200 ಜನ ಅನಾರೋಗ್ಯ ಪೀಡಿತರಾಗಿದ್ದು ಚಿತ್ರದುರ್ಗ ಜಿಲ್ಲಾಸ್ಪತ್ರೆಯಲ್ಲಿ 80 ಜನ ಚಿಕಿತ್ಸೆ ಪಡೆಯುತ್ತಿದ್ದು, ಅದರಲ್ಲಿ 22ಜನ ಮಕ್ಕಳು ಐಸಿಯು ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಾವಡಿಗರಹಟ್ಟಿಯಲ್ಲಿ ಪರಿಶಿಷ್ಟರು ಹಾಗೂ ಮೇಲ್ವರ್ಗದ ಸವರ್ಣೀಯರ ಘರ್ಷಣೆಯ ವೈಷಮ್ಯವೆ ಈ ಘಟನೆಗೆ ಕಾರಣವಾಗಿದೆ. ಕುಡಿಯುವ ನೀರಿನ ಕೊಳಾಯಿ ಮೂಲಕ ನೀರಿಗೆ ವಿಷ ಬೆರೆಸಿ ಪೂರೈಸಿರುವ ಬಗ್ಗೆ ಅನುಮಾನವಿದೆ. ಆದರೆ ತನಿಖೆ ಮಾಡಬೇಕಾದ ಜಿಲ್ಲಾಡಳಿತವು ಮೇಲ್ನೋಟಕ್ಕೆ ‘ಕಾಲರಾ’ ಇರಬಹುದೆಂದು ತಿಳಿಸಿದೆ. ಅಧಿಕಾರಿಗಳೆ ಪ್ರಕರಣ ತಿರುಚುವ ಹುನ್ನಾರವಿದೆ.
ಈ ಘಟನೆಯಲ್ಲಿ ಸಾವನಪ್ಪಿದ ಏಳು ಜನರ ಮೃತರ ಕುಟುಂಬಕ್ಕೆ ತಲಾ 50 ಲಕ್ಷ ರೂ.ಗಳು ಪರಿಹಾರ ನೀಡಬೇಕು. ಅದಲ್ಲದೆ ಕುಟುಂಬದ ಒಬ್ಬ ಸದಸ್ಯರಿಗೆ ಸರ್ಕಾರಿ ನೌಕರಿ ಕೊಡಬೇಕು ಹಾಗೂ 25 ಲಕ್ಷ ರೂ.ಗಳ ವೆಚ್ಚದಲ್ಲಿ ಮನೆಯನ್ನು ನಿರ್ಮಿಸಿಕೊಡಬೇಕು. ಕವಾಡಿಗರಹಟ್ಟಿಯಲ್ಲಿ ನೂತನ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ತೆರೆಯಬೇಕು. ಹೊಸದಾಗಿ ಬೋರ್ವೆಲ್ ಕೊರೆಯಿಸಿ ದಲಿತ ಕೇರಿಗೆ ನೀರು ಹರಿಸಬೇಕು ಹಾಗೂ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಬೇಕು. ಮೃತ ಮಂಜುಳರವರ ಎರಡು ವರ್ಷದ ಹೆಣ್ಣು ಮಗುವಿಗೆ ಉನ್ನತ ಶಿಕ್ಷಣದವರೆಗೂ ಉಚಿತ ಶಿಕ್ಷಣವನ್ನು ನೀಡಬೇಕು. ಈ ಘಟನೆಗೆ ಸಂಬಂಧಿಸಿದ ನಿರ್ಲಕ್ಷ್ಯವಹಿಸಿದ ಎಲ್ಲಾ ಅಧಿಕಾರಿಗಳನ್ನು ಸೇವೆಯಿಂದ ವಜಗೊಳಿಸಿ ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿಕೊಂಡು ಸಿ.ಬಿ.ಐ/ ಸಿ.ಓ.ಡಿ ತನಿಖೆಗೆ ವಹಿಸಬೇಕು ಒತ್ತಾಯಿಸಿದರು.
ಇನ್ನು ಈ ಘಟನೆ ಮಾಸುವ ಮುಂಚೆಯೇ ಇದೇ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕು ಐಮಂಗಳ ಹೋಬಳಿ ವ್ಯಾಪ್ತಿಯ ಎಂ.ಡಿ.ಕೋಟೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಅಡವಿ ರಾಮಜೋಗಿಹಳ್ಳಿ ಗ್ರಾಮದಲ್ಲಿ ಅಂಬೇಡ್ಕರ್ ಭಾವಚಿತ್ರವಿರುವ ನಾಮಫಲಕವನ್ನು ಹಾಕಿದ್ದಕ್ಕೆ ವಿರೋಧಿಸಿ ಅದೇ ಗ್ರಾಮದ ಕುರುಬ ಮತ್ತು ಒಕ್ಕಲಿಗ ಸಮುದಾಯದವರು ಒಟ್ಟಾಗಿ ಮಾದಿಗರ ಹಟ್ಟಿಗೆ ನುಗ್ಗಿ ಕಂಡ ಕಂಡವರ ಮೇಲೆ ಹಲ್ಲೆ ನಡೆಸಿರುವುದು ವರದಿಯಾಗಿದೆ. ಗ್ರಾಮದಲ್ಲಿ ಅಂಬೇಡ್ಕರ್ ಚಿತ್ರವಿರುವ ಬೋರ್ಡ್ ನಿಲ್ಲಿಸಿದ್ದೆ ಈ ಘಟನೆಗೆ ಕಾರಣ ಎನ್ನಲಾಗಿದೆ. ಈ ಘಟನೆಯಲ್ಲಿ ಮಾದಿಗ ಸಮುದಾಯದ ಸುಮಾರು 25ಕ್ಕೂ ಹೆಚ್ಚು ಹೆಣ್ಣು ಮಕ್ಕಳು ಹಾಗೂ ಆರು ಜನ ಗಂಡು ಮಕ್ಕಳು ಹಲ್ಲೆಗೊಳಗಾಗಿದ್ದು, ಹಿರಿಯೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆಯ ಸಂದರ್ಭದಲ್ಲಿ ಮಹಿಳೆಯರನ್ನು ಅವಾಚ್ಯವಾಗಿ ಬೈದು ಜಾತಿ ನಿಂದನೆ ಮಾಡಿರುವುದಾಗಿ ಊರಿನ ವ್ಯಕ್ತಿಯೊಬ್ಬರು ತಿಳಿಸಿದ್ದಾರೆ. ಜಾಗದ ವಿವಾದವು ಇದರಲ್ಲಿ ಇದೆ ಎಂದು ಹೇಳಲಾಗುತ್ತಿದ್ದು ಮಾದಿಗರ ಹಟ್ಟಿಗೆ ನುಗ್ಗಿದ ಮೇಲ್ಜಾತಿಯ ಜನರ ಗುಂಪು ಪ್ರಾಣ ತೆಗೆಯುತ್ತೇವೆ, ಊರು ಬಿಡಿಸುತ್ತೇವೆ ಎಂದು ಬೆದರಿಕೆಯೊಡ್ಡಿದ್ದಾರೆ ಎನ್ನಲಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಅಲ್ಲೇ ಮಾಡಿ ಜಾತಿ ನಿಂದನೆ ಮಾಡಿರುವವರನ್ನು ಎಸ್ಸಿ ಎಸ್ಟಿ ದೌರ್ಜನ್ಯ ನಿಯಂತ್ರಣ ಕಾಯ್ದೆ ಅಡಿಯಲ್ಲಿ ಬಂಧಿಸಿ ಜೈಲಿಗೆ ಕಳುಹಿಸಬೇಕು. ನೊಂದ ದಲಿತ ಕುಟುಂಬಗಳಿಗೆ ಸೂಕ್ತ ಪೊಲೀಸ ರಕ್ಷಣೆ ಒದಗಿಸಬೇಕು. ನಾಮಫಲಕ ಅಳವಡಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಜಿಲ್ಲಾಡಳಿತವೆ ನೇತೃತ್ವ ವಹಿಸಿ ಸಮಸ್ಯೆಯನ್ನು ಬಗೆಹರಿಸಬೇಕು. ಈ ಎರಡು ಘಟನೆಗಳಿಗೆ ಸಂಬಂಧಿಸಿದಂತೆ ಸೂಕ್ತ ಕಾನೂನು ಕ್ರಮ ಕೈಗೊಳ್ಳದಿದ್ದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟವನ್ನು ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಸಂಘಟನಾ ಸಂಚಾಲಕರಾದ ಕ್ಯಾಸನಹಳ್ಳಿ ಹನುಮಂತಪ್ಪ, ಹಿರೇಮಲ್ಲನಹೊಳೆ ಉಮೇಶ್, ಸಾಗಲಗಟ್ಟೆ ತಿಮ್ಮಣ್ಣ, ರಾಜನಹಟ್ಟಿ ಚೌಡಪ್ಪ, ಸಣ್ಣ ನಾಗಪ್ಪ, ಪಲ್ಲಾಗಟ್ಟೆ ರವಿಚಂದ್ರ, ಸೂರೆಡ್ಡಿಹಳ್ಳಿ ರವಿ, ಅಸಗೋಡು ಪರಶುರಾಮ್, ದೇವಣ್ಣ ನಿಬಗೂರು, ಸಿ.ಎಂ.ಹೊಳೆ ಮಾರುತಿ, ಮಾಧ್ಯಮ ಸಲಹೆಗಾರರಾದ ಜಗಜೀವನ್ ರಾಮ್ ಆರ್ ಎಲ್, ವಿದ್ಯಾರ್ಥಿ ಘಟಕದ ಸಂಚಾಲಕರಾದ ಅಸಗೋಡು ಶಿವಕುಮಾರ್ ಎಸ್, ರಮೇಶ್ ವ್ಯಾಸಗೊಂಡನಹಳ್ಳಿ, ಸೂರ್ಯ.ಎಚ್ ಲಕ್ಕಂಪುರ, ಮೈಲಾರಸ್ವಾಮಿ, ರಾಜು, ಇನ್ನು ಅನೇಕರು ಭಾಗವಹಿಸಿದ್ದರು.