| online news portal | Kannada news online

Search
Shukradeshe suddi Kannada | online news portal | Kannada news online
Kannada | online news portal | Kannada news online

ಆಗಸ್ಟ್ 12 _2023

ಬದುಕಿಗೆ ಸಂಸ್ಕಾರ ಕಲಿಸುವ ಶಕ್ತಿ ಸಾಹಿತ್ಯಕ್ಕಿದೆ

ಸಾಹಿತ್ಯದಿಂದ ಏನಾಗುವುದಿದೆ ಎಂದು ಕೇಳುವವರಿದ್ದಾರೆ. ಆದರೆ ಬದುಕಿಗೆ ಸಂಸ್ಕಾರ ಕಲಿಸುವ ಶಕ್ತಿ ಸಾಹಿತ್ಯಕ್ಕಿದೆ ಎಂದು ತಾಲೂಕು ನೌಕರರ ಸಂಘದ ಅಧ್ಯಕ್ಷರು ಹಾಗೂ ದೊಣೆಹಳ್ಳಿ ಸರಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ಬಿ ಆರ್ ಚಂದ್ರಪ್ಪನವರು ನುಡಿದರು. ಅವರು ಮೊನ್ನೆ ದೊಣೆಹಳ್ಳಿಯಲ್ಲಿ ಜಗಳೂರು ತಾಲೂಕು ಶರಣ ಸಾಹಿತ್ಯ ಪರಿಷತ್ತು, ಕದಳಿ ಮಹಿಳಾ ವೇದಿಕೆ ಮತ್ತು ಸರ್ಕಾರಿ ಪ್ರೌಢಶಾಲೆಯ ಸಂಯುಕ್ತ ಆಶ್ರಯದಲ್ಲಿ ನಡೆದ “ಶರಣರ ಜೀವನ ಮೌಲ್ಯಗಳು” ಎನ್ನುವ ದತ್ತಿ ಉಪನ್ಯಾಸ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಯಾಂತ್ರಿಕ ಬದುಕಿನಲ್ಲಿ ಮೌಲ್ಯಗಳು ನಶಿಸುತ್ತಿವೆ. ಇಂತಹ ಪರ್ವಕಾಲದಲ್ಲಿ ಶರಣರ ಜೀವನ ಮೌಲ್ಯಗಳು ಜೀವಸಂಜೀವಿನಿ ಇದ್ದಂತೆ ಎಂದು ಅವರು ತಿಳಿಸಿದರು.

ಬಸವ ಭಾರತಿ ಪ್ರಥಮ ದರ್ಜೆ ಕಾಲೇಜಿನ ನಿವೃತ್ತ ಪ್ರಾಚಾರ್ಯರಾದ ಶ್ರೀ ಪ್ರಭಾಕರ ಲಕ್ಕೊಳರವರು ತಮ್ಮ ಉಪನ್ಯಾಸದಲ್ಲಿ ಬದುಕಿನ ಅನುಭವಗಳ ಸಾರವೇ ವಚನಗಳು, ವಚನ ಎಂದರೆ ಮಾತು, ಪ್ರಮಾಣ. ಮಗು ತೊದಲು ನುಡಿಗಳನ್ನು ಆಡಿದಾಗ ತಾಯಿ, ಕುಟುಂಬ, ಸಮಾಜಕ್ಕೆ ಹಿತವೆನಿಸುತ್ತದೆ. ಅಂತೆಯೇ ವಚನಗಳು ಮನೆ ,ಮಠ, ಸಮಾಜಕ್ಕೆ ಹಿತವಾದವುಗಳು. ನುಡಿದರೆ ಮುತ್ತಿನ ಹಾರದಂತಿರಬೇಕು …. ಎಂದು ನಮ್ಮ ನಡೆ ನುಡಿಗಳನ್ನು ಕಲಿಸಿಕೊಟ್ಟವರು ಶರಣರು ಎಂಬುದನ್ನು ಅವರು ಮನವರಿಕೆ ಮಾಡಿಕೊಟ್ಟರು. ವಚನಗಳನ್ನು ತಿಳಿಯುವುದರಿಂದ ನಮ್ಮಲ್ಲಿ ಆತ್ಮ ನಿಗ್ರಹ, ಸ್ವಾಭಿಮಾನ ,ಕಾಯಕ ಪ್ರಜ್ಞೆ, ಜ್ಞಾನದ ಮೌಲ್ಯಗಳು ವೃದ್ಧಿಸುತ್ತವೆ ಎಂಬುದನ್ನು ಅವರು ಸೋದಾಹರಣಗಳ ಮೂಲಕ ತಿಳಿಸಿಕೊಟ್ಟರು .

ಹಿರಿಯ ಪತ್ರಕರ್ತರಾದ ಶ್ರೀ ಅಣಬೂರು ಮಠದ ಕೊಟ್ರೇಶ್ ರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ ನೆಲದಲ್ಲಿನ ಸಸಿಗೆ ನೀರು ಗೊಬ್ಬರಗಳನ್ನು ಎರೆ ದರೆ ಅದು ಹೆಮ್ಮರ ವಾಗುವಂತೆ ಮಕ್ಕಳ ಮನೋವಿಕಾಸದ ನೆಲದಲ್ಲಿ ವಚನಗಳ ಸಾರವನ್ನು ಎರೆಯುವ ಕೆಲಸ ಮಾಡಿದಲ್ಲಿ ಅದು ಮುಂದೆ ಉತ್ತಮ ಸಮಾಜವನ್ನು ನೀಡಬಲ್ಲದು ಎಂದು ತಿಳಿಸಿದರು

ನಿವೃತ್ತ ಉಪನ್ಯಾಸಕರಾದ ಶ್ರೀ ಡಿಸಿ ಮಲ್ಲಿಕಾರ್ಜುನ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ತಮ್ಮ ಉದ್ಘಾಟನಾ ಭಾಷಣದಲ್ಲಿ ಅವರು ಕಡುದರ್ಪವೇರಿದ ಒಡಲೆಂಬ ಬಂಡಿಗೆ ಮೃಡ ಶರಣರ ನುಡಿಗಡಣ ಕಡೆಗೀಲು ಇದ್ದಂತೆ ಎಂಬುದನ್ನು ಸಾರವತ್ತಾಗಿ ತಿಳಿಸಿದರು.

ನಾಲಂದ ಕಾಲೇಜಿನ ಶ್ರೀಮತಿ ಅನ್ನಪೂರ್ಣಮ್ಮ, ಡಾ. ಟಿ ತಿಪ್ಪೇಸ್ವಾಮಿ, ಶ್ರೀಮತಿ ಶೈಲಾ,ಶ್ರೀ ಬಿಎನ್ಎಂ ಸ್ವಾಮಿಗಳ ದತ್ತಿ ದಾನದಿಂದ ಉಪನ್ಯಾಸವನ್ನು ಏರ್ಪಡಿಸಲಾಗಿದೆ ಎಂಬುದನ್ನು ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಎನ್ ಟಿ ಎರ್ರಿ ಸ್ವಾಮಿ ಅವರು ತಿಳಿಸಿದರು. ಕದಳಿ ಮಹಿಳಾ ವೇದಿಕೆಯ ಅಧ್ಯಕ್ಷರಾದ ಶ್ರೀಮತಿ ಜೆ. ಆರ್. ಗೌರಮ್ಮನವರು ತಮ್ಮ ಸುಮಧುರ ಕಂಠಸಿರಿಯಿಂದ ಹಾಡುಗಳನ್ನು ಹಾಡಿ ರಂಜಿಸಿದರು. ವೇದಿಕೆಯಲ್ಲಿ ಪರಿಷತ್ತಿನ ಈ .ಸತೀಶ್,. ವೈ ಎಂ. ಲೀಲಾವತಿ ಶಾಲೆಯ ಅಧ್ಯಾಪಕರಾದ ಶ್ರೀಮತಿ ಕವಿತಾ, ಶಶಿರೇಖಾ, ಶ್ರೀ ತಿಪ್ಪೇಶ್, ಬಸವರಾಜ್, ಮನೋಜ್ ಮುಂತಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

You missed

error: Content is protected !!