editor:- rajappa m vyasagondanahalli

By shukradeshenews Kannada | online news portal |Kannada news online  august 31 

By shukradeshenews | published on September 4

ಅರ್ಧಶತಮಾನದ
ಜ್ಞಾನಭಂಡಾರದ ಕನಸು
ಈಗನನಸಾಯ್ತು !!

ಜಗಳೂರು ಎಂದರೇನೇ ಬರದ , ಬದಲಾಗದ, ಹಿಂದುಳಿದ ತಾಲೂಕು ಎಂಬ ಹಣೆ ಪಟ್ಟಿಯನ್ನು ಹಲವು ದಶಕಗಳ ಕಾಲ ಹೊತ್ತು ಮೆರೆದವರು ನಾವು ! ಉಣಲು ,ಉಡಲು ಇರುವ ಬಡತನದ ಜೊತೆಗೆ ನಾವು ಬದಲಾಗಬೇಕು ಎನ್ನುವ ಭಾವನೆಯೇ ಇಲ್ಲದ ಮಾನಸಿಕ ಬರ ನಮ್ಮನ್ನು ಇದುವರೆಗೆ ಕಾಡಿದಂತೆ ಕಾಣುತ್ತಿದೆ. ಅದೃಷ್ಟವಸಾತ್ ಈಗ ಬದಲಾವಣೆಯ ಗಾಳಿ ಬೀಸುವಂತಾಗಿ ಒಂದಿಷ್ಟು ಆಶಾ ಭಾವನೆ, ಹೊಸತನ, ಹೊಸ ಆಶಾ ಕಿರಣಗಳು ಮೂಡುವಂತಾಗಿದೆ!
1965ರ ಸಾರ್ವಜನಿಕ ಗ್ರಂಥಾಲಯ ಕಾಯ್ದೆ ಪ್ರಕಾರ 1973ರಲ್ಲಿಯೇ ಜಗಳೂರಿನಲ್ಲಿ ಸಾರ್ವಜನಿಕ ಗ್ರಂಥಾಲಯ ಪ್ರಾರಂಭವಾಗುತ್ತದೆ. 1975ರಲ್ಲಿ ನಾನು ಜಗಳೂರಿನಲ್ಲಿ ಕಾಲೇಜುವಿದ್ಯಾರ್ಥಿ.ಹಳ್ಳಿಮುಕ್ಕನಾದ ನನಗೆ ಪಠ್ಯಪುಸ್ತಕಗಳನ್ನು ಕೊಳ್ಳಲಾಗದ ಪರಿಸ್ಥಿತಿ . ಆಗ ನನ್ನ ಓದಿನ ದಾಹಕ್ಕೆ ತಂಪು ನೀಡಿದ ಸ್ಥಳವೆಂದರೆ ಜಗಳೂರಿನ ಗ್ರಂಥಾಲಯ. ಕಳೆದ 50 ವರ್ಷಗಳಲ್ಲಿ ನನ್ನಂತಹ ಲಕ್ಷಾಂತರ ಜನ ವಿದ್ಯಾರ್ಥಿಗಳು, ಆಸಕ್ತರು ಇದರ ಪ್ರಯೋಜನ ಪಡೆದಿರಬಹುದು.

ಎಲ್ಲವೂ ಸರಿ. ಆದರೆ ಒಂದುವಿಪರ್ಯಾಸವೇನು ಗೊತ್ತೆ? ಗ್ರಂಥಾಲಯಕ್ಕೆ ಸ್ವಂತ ಅಥವಾ ಸೂಕ್ತ ಕಟ್ಟಡವಿಲ್ಲದೆ ಅದು ಮೂಲೆ ಮುಂಕಟ್ಟಿನಲ್ಲಿಯೇ ನೆಲೆಸಿ ಅರೆ ಜೀವದಲ್ಲಿಯೇ ಕೊಸರಿಕೊಂಡು ಸಾಗಿ ಬಂದದ್ದು! ಅದರ ಪರಿಣಾಮ ಗ್ರಂಥಾಲಯದಲ್ಲಿ ಪುಸ್ತಕಗಳ ಇಳಿಕೆ ಮತ್ತು ಇರುವ ಗ್ರಂಥಗಳು ಸುಲಲಿತವಾಗಿ ಓದುಗರಿಗೆ ದೊರಕದೆ ಹೋದದ್ದು. ಗ್ರಹಣ ಹಿಡಿದ ಗ್ರಂಥಾಲಯಕ್ಕೆ ಪುನಶ್ಚೇತನ ನೀಡಬೇಕೆಂಬ ಸಂಕಲ್ಪ ದಶಕಗಳು ಸಂದರೂ ಕೂಡ ಯಾರಿಗೂ ಬಾರದೆ ಹೋಗಿದ್ದು ಮಾತ್ರ ನೋವಿನ ಸಂಗತಿ.

2020ರಲ್ಲಿ ನಾನು ನಿವೃತ್ತಿ ನಂತರ ಜಗಳೂರಿಗೆ ಬಂದು ನೆಲೆಸಿದೆ. ಗ್ರಂಥಾಲಯದ ಸ್ಥಿತಿ ಕಂಡು ಜುಲೈ 2022 ರಲ್ಲಿ ಸುಮಾರು ಎಂಟು ದಿನಪತ್ರಿಕೆಗಳಲ್ಲಿ ಲೇಖನಗಳನ್ನು ಬರೆದಿವೆ. ಅದಕ್ಕೆ ಯಾರು ಕ್ಯಾರೇ ಎನ್ನಲಿಲ್ಲ. ಆಗ ತಿಳಿದ ಮತ್ತೊಂದು ಸಂಗತಿ ಎಂದರೆ ಈಗಾಗಲೇ ಇಲ್ಲಿನ ಪತ್ರಕರ್ತರು ಸಾಕಷ್ಟು ಬಾರಿ ಲೇಖನಗಳನ್ನು ಬರೆದಿದ್ದರೂ ಯಾರೂ ಸ್ಪಂದಿಸದೆ ಇದ್ದದ್ದು,

ಈ ಸಮಸ್ಯೆಗೆ ಸಂಘಟನಾತ್ಮಕ ಪರಿಹಾರ ಕಂಡುಕೊಳ್ಳಬೇಕೆಂದು ನಿರ್ಧರಿಸಿದ ನಾನು ಇಲ್ಲಿನ ಎಲ್ಲಾ ಸಂಘಟನೆಗಳ ಜೊತೆ ಮಾತನಾಡಿದುದರ ಫಲವಾಗಿ 2022ರ ಜುಲೈ 18ರಂದು ನಾವು ಸುಮಾರು 10 ಸಂಘಟನೆಗಳು ಒಗ್ಗೂಡಿ ಪಟ್ಟಣ ಪಂಚಾಯಿತಿಗೆ ಗ್ರಂಥಾಲಯಕ್ಕೆ ಸೂಕ್ತ ಕಟ್ಟಡ ಒದಗಿಸುವಂತೆ ಅಧಿಕೃತ ಮನವಿ ಮಾಡಿದೆವು. ನಾನು ಈ ಮನವಿಯ ಆಧಾರದ ಮೇಲೆ ಜಿಲ್ಲಾಧಿಕಾರಿಗಳಿಗೆ, ಅಂದಿನ ಶಾಸಕರಿಗೆ, ಸಂಸದರಿಗೆ, ಪಟ್ಟಣ ಪಂಚಾಯತಿಯ ಮುಖ್ಯಾಧಿಕಾರಿ ಹಾಗೂ ಪ್ರತಿ ಸದಸ್ಯರಿಗೂ ಪತ್ರಗಳನ್ನು ಬರೆದು ಒತ್ತಾಯಿಸಿದೆ. ಫಲಿತಾಂಶ ಮಾತ್ರ ಶೂನ್ಯ.

ಜಗಳೂರು ಬದಲಾಗದು ಎಂದು ಚಿಂತಿಸುವ ಸಂದರ್ಭದಲ್ಲಿಯೇ ವಿಧಾನಸಭಾ ಚುನಾವಣೆಗಳು ಬಂದು ನಮ್ಮದೇ ನೆಲದ ಚಿಕ್ಕಪ್ಪನ ಹಟ್ಟಿ ಬಿ . ದೇವೇಂದ್ರಪ್ಪನವರು ಶಾಸಕರಾಗಿ ಆಯ್ಕೆಯಾದರು. ಶಾಸಕರನ್ನು ಅಭಿನಂದಿಸಿ ಬರುವ ಎಂದು ನಾವು ಒಂದಿಷ್ಟು ಸಾಹಿತ್ಯ, ಸಂಘಟನೆಗಳ ಗೆಳೆಯರು ಜೂನ್ 13 ರಂದು ಅವರನ್ನು ಪ್ರವಾಸಿ ಮಂದಿರದಲ್ಲಿ ಭೇಟಿಯಾದೆವು. ಸುಮಾರು ಒಂದುವರೆ ಗಂಟೆಗಳ ಕಾಲ ಸಾಹಿತ್ಯಕ ವಿಷಯಗಳನ್ನು ಮಾತನಾಡಿ ದೇವೇಂದ್ರಪ್ಪ ನವರು ನಮ್ಮನ್ನು ಮೂಕ ವಿಸ್ಮಿತರನ್ನಾಗಿ ಮಾಡಿದರಲ್ಲದೆ ಸ್ವಯಂ ಸ್ಫೂರ್ತಿಯಿಂದ ಗ್ರಂಥಾಲಯಕ್ಕೆ ನಗರದ ಹೃದಯ ಭಾಗದಲ್ಲಿರುವ ಪಟ್ಟಣ ಪಂಚಾಯಿತಿಯ ಮಹಡಿ ಕಟ್ಟಡವನ್ನು ಒದಗಿಸಿ ಕೊಡುವುದಾಗಿ ವಾಗ್ದಾನ ಮಾಡಿದರು. ಐದು ದಶಕಗಳ ಸಮಸ್ಯೆಯ ಪರಿಹಾರಕ್ಕೆ ಅವರು ತೆಗೆದುಕೊಂಡಿದ್ದು ಕೇವಲ ಐದು ನಿಮಿಷಗಳು ಮಾತ್ರ ! ಅಂದು ನಮಗೆಲ್ಲ ಆದ ಸಂತೋಷ ಅಷ್ಟಿಷ್ಟಲ್ಲ..ಶಾಸಕರು ತಕ್ಷಣ ಕಾರ್ಯಾತ್ಮಕರಾಗಿ ಕಾನೂನಾತ್ಮಕ ಅಡೆತಡೆಗಳನ್ನು ಬಗೆಹರಿಸಿ ಜುಲೈ 2 ರಂದು ಕಟ್ಟಡವನ್ನು ಗ್ರಂಥಾಲಯಕ್ಕೆ ಹಸ್ತಾಂತರಿಸುವ ಕೆಲಸವನ್ನು ಮಾಡಿದರು. ಆ ಕಟ್ಟಡ ಆಧುನಿಕ ಗ್ರಂಥಾಲಯದ ಎಲ್ಲ ಸೌಲಭ್ಯಗಳೊಂದಿಗೆ ಈಗ ನಳನಳಿಸುವಂತಾಗಿದ್ದು ಶಿಕ್ಷಕರ ದಿನಾಚರಣೆಯ ಸುದಿನ ಸೆಪ್ಟೆಂಬರ್ 5 ರಂದು ಶಾಸಕರಿಂದ ಉದ್ಘಾಟನೆ ಗೊಳ್ಳುವ ಯೋಗ ಪಡೆದಿದೆ. ರಾಜ್ಯದಲ್ಲಿ ಡಿಜಿಟಲ್ ಗ್ರಂಥಾಲಯ ಚಳುವಳಿಯ ಪಿತಾಮಹರೆಂದೇ ಹೆಸರು ಗಳಿಸಿರುವ ರಾಜ್ಯ ಗ್ರಂಥಾಲಯ ಇಲಾಖೆಯ ನಿರ್ದೇಶಕರಾದ ಶ್ರೀ ಸತೀಶ್ ಹೊಸಮನಿ ಯವರು ಈ ಶುಭ ಸಂದರ್ಭದಲ್ಲಿ ಜೊತೆಗಿರಲಿದ್ದಾರೆ.

ಜಗಳೂರಿನ ಗ್ರಂಥಾಲಯದಲ್ಲಿ ಸುಮಾರು 22 ಸಾವಿರ ಪುಸ್ತಕಗಳಿವೆ, ಕನ್ನಡ, ಇಂಗ್ಲಿಷ್, ಹಿಂದಿ ಭಾಷೆಯಲ್ಲಿ ಸಾಹಿತ್ಯದ ಎಲ್ಲಾ ಪ್ರಕಾರಗಳಾದ ಜಾನಪದ, ಕಥೆ ,ಕವನ, ಲೇಖನ, ಕಾದಂಬರಿ, ಪ್ರವಾಸ ಕಥನ, ವ್ಯಕ್ತಿ ಚಿತ್ರಣ, ವೈಚಾರಿಕ ಸಾಹಿತ್ಯ, ವಚನ ಸಾಹಿತ್ಯ, ಧರ್ಮ ಗ್ರಂಥಗಳಲ್ಲದೆ ಯುವ ಜನತೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಕೂಡಲು ಬೇಕಾದ ಎಲ್ಲಾ ಪುಸ್ತಕಗಳು ಲಭ್ಯವಿದೆ. ವಿಶಾಲವಾದ ಕಟ್ಟಡದಲ್ಲಿ ಉತ್ತಮ ಪರಿಸರದಲ್ಲಿ ,ಗ್ರಂಥಾಲಯ ಮೈದಾಳಿದೆ. ಚಿತ್ರಕಲೆಯ ಮೂಲಕ ಬಿಡಿಸಿರುವ ಗೋಡೆ ಚಿತ್ರಗಳು ಮಹನೀಯರ ಭಾವಚಿತ್ರಗಳು ಎಲ್ಲರ ಗಮನ ಸೆಳೆದಿವೆ. ವಾಚನಾಲಯಕ್ಕೆ ಪ್ರತ್ಯೇಕ ವ್ಯವಸ್ಥೆಯನ್ನು ಮಾಡಲಾಗಿದೆ. ಡಿಜಿಟಲ್ ಗ್ರಂಥಾಲಯ ಸ್ಥಾಪಿಸಲಾಗಿದ್ದು ಅದರಲ್ಲಿ 10 ಲಕ್ಷ ಪುಸ್ತಕಗಳನ್ನು ಆಸಕ್ತರು ಉಚಿತವಾಗಿ ಓದಬಹುದಾಗಿದೆ.

ಜಗಳೂರಿನಲ್ಲಿ ಗ್ರಂಥಾಲಯ ಆಧುನಿಕಗೊಳ್ಳಲು ಗ್ರಂಥಾಲಯ ಅಧಿಕಾರಿಗಳಾದ ಶ್ರೀ ಎಚ್ ಪಿ ಶರಣಪ್ಪ, ಜಿಲ್ಲಾ ಉಪ ನಿರ್ದೇಶಕರಾದ ಶ್ರೀ ಪಿ. ಆರ್. ತಿಪ್ಪೇಸ್ವಾಮಿಯವರ ಶ್ರಮ ಅಪಾರವಾದದ್ದು. ಅವರ ಶ್ರಮಕ್ಕೆ ಬೆಲೆ ಕಟ್ಟಲಾಗದು.
ಪಟ್ಟಣ ಪಂಚಾಯಿತಿ, ತಾಲೂಕು ಆಡಳಿತ, ಜಿಲ್ಲಾಡಳಿತ ,ಗ್ರಂಥಾಲಯ ಇಲಾಖೆ, ಶಾಸಕರ ,ಸಂಘಟನೆಗಳ ಆಶಯಕ್ಕೆ ತಕ್ಷಣ ಸ್ಪಂದಿಸಿ ನೆರವಾದುದಕ್ಕೆ ಅವರೆಲ್ಲರಿಗೆ ಕೃತಜ್ಞತೆ ಸಲ್ಲುತ್ತದೆ. ಅಂತೆಯೇ ಎಲ್ಲ ಸಂಘಟನೆಗಳಿಗೆ ಅಭಿನಂದನೆಗಳು ಹೇಳಬೇಕಾಗುತ್ತದೆ.

ಎಲ್ಲದಕ್ಕೂ ಮುಕಟಪ್ರಾಯವಾಗಿ ಶಾಸಕರಾದ ಬಿ ದೇವೇಂದ್ರಪ್ಪನವರು ತೆಗೆದುಕೊಂಡ ದೃಢ, ಸೂಕ್ತ ಹಾಗೂ ತ್ವರಿತ ನಿರ್ಧಾರ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ ಒಂದು ವಿಶೇಷವೇನು ಗೊತ್ತೇ? ಶಾಸಕರು ಕೂಡ ತಮ್ಮ ಕಾಲೇಜಿನ ದಿನಗಳಲ್ಲಿ ಜಗಳೂರಿನ ಗ್ರಂಥಾಲಯದಿಂದ ಉಪಕೃತರಾಗಿರುವುದು, ಹಾಗಾಗಿ ಅವರು ಗ್ರಂಥಾಲಯಕ್ಕೆ ಮೊದಲ ಆದ್ಯತೆ ನೀಡಿ ಶಾಸಕರ ಸಂಪರ್ಕ ಕಚೇರಿಯ ಆವರಣದಲ್ಲಿಯೇ ಸೂಕ್ತ ಅವಕಾಶ ಕಲ್ಪಿಸಿರುವುದು . ಇನ್ನು ಮುಂದೆ ನಾನು ಗ್ರಂಥಾಲಯದ ನಿತ್ಯ ಓದುಗ ಎಂದು ಅವರು ಅಭಿಮಾನದಿಂದ ನುಡಿಯುತ್ತಾರೆ.

ಅವರ ಈ ಚಿಂತನೆ ತಾಲೂಕಿನಲ್ಲಿ ಗ್ರಂಥಾಲಯಗಳ ಪುನಶ್ವೇತನ ಹಾಗೂ ಓದಿನ ಬಗ್ಗೆ ಹೊಸ ಚಳುವಳಿಗೆ ನಾಂದಿಯಾಗಲಿ ಎಂದು ಆಶಿಸೋಣ.

ಎನ್ ಟಿ. ಎರ್ರಿಸ್ವಾಮಿ
ನಿವೃತ್ತ ಕೆನರಾಬ್ಯಾಂಕ್ ಡಿ.ಎಂ. ಜಗಳೂರು 577528

Leave a Reply

Your email address will not be published. Required fields are marked *

You missed

error: Content is protected !!