ಮಾದಿಗ ದಂಡೋರ ಕಾರ್ಯಕಾರಿ ಸಮಿತಿ ತುರ್ತು ಸಭೆಯಲ್ಲಿ ತೀರ್ಮಾನ
ದಾವಣಗೆರೆ: ಸಿಎಂ ಮನೆಗೆ ದಂಡೋರ ಮುತ್ತಿಗೆ 20ಕ್ಕೆ

ದಾವಣಗೆರೆಯಲ್ಲಿ ಎಚ್‌.ಸಿ. ಗುಡ್ಡಪ್ಪ ಅಧ್ಯಕ್ಷತೆಯಲ್ಲಿ ಮಾದಿಗ ದಂಡೋರ ಕಾರ್ಯಕಾರಿ ಸಮಿತಿ ತುರ್ತು ಸಭೆ ಭಾನುವಾರ ನಡೆಯಿತು

ದಾವಣಗೆರೆ: ಪರಿಶಿಷ್ಟ ಜಾತಿಯಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ನೀಡಬೇಕು ಎಂದು ಆಗ್ರಹಿಸಿ ಮಾರ್ಚ್‌ 20ರಂದು ಮುಖ್ಯಮಂತ್ರಿ ಮನೆಗೆ ಮುತ್ತಿಗೆ ಹಾಕುಲು ಮಾದಿಗ ದಂಡೋರ ಜಿಲ್ಲಾ ಸಮಿತಿ ನಿರ್ಧರಿಸಿದೆ.

ಭಾನುವಾರ ನಡೆದ ಮಾದಿಗ ದಂಡೋರ ಕಾರ್ಯಕಾರಿ ಸಮಿತಿ ತುರ್ತು ಸಭೆಯಲ್ಲಿ ಈ ತೀರ್ಮಾನಕ್ಕೆ ಬರಲಾಗಿದೆ ಎಂದು ಅವರು ತಿಳಿಸಿದ್ದಾರೆ.

‘ಕರ್ನಾಟಕದಲ್ಲಿ ಪರಿಶಿಷ್ಟ ಜಾತಿಯಲ್ಲಿ 101 ಸಮಾಜಗಳಿವೆ. ಅದರಲ್ಲಿ ಮಾದಿಗ (ಎ.ಕೆ.) ಮತ್ತು ಅದರ ಉಪಪಂಗಡಗಳು 35 ಇವೆ. ಹೊಲೆಯ ಮತ್ತು ಅದರ ಉಪಪಂಗಡಗಳು 24 ಇವೆ. ಈ ಎರಡು ಸಮುದಾಯಗಳೇ ಜನಸಂಖ್ಯೆಯಲ್ಲಿ ಅತಿ ಹೆಚ್ಚು ಇರುವಂಥವುಗಳು. ಸಂವಿಧಾನ ಬದ್ಧವಾಗಿ ಸಿಗಬೇಕಾದ ಉದ್ಯೋಗ, ಶಿಕ್ಷಣ, ರಾಜಕೀಯ, ಆರ್ಥಿಕ ಸೌಲಭ್ಯಗಳು ಸರಿಯಾಗಿ ಸಿಗದೇ ಹಿಂದುಳಿದಿವೆ’ ಎಂದು ಸಭೆಯ ಅಧ್ಯಕ್ಷತೆ ವಹಿಸಿದ್ದ ಸಮಿತಿಯ ಜಿಲ್ಲಾಧ್ಯಕ್ಷ ಎಚ್‌.ಸಿ. ಗುಡ್ಡಪ್ಪ ತಿಳಿಸಿದರು.

ಈ ಅಸಮಾನತೆಯನ್ನು ತಪ್ಪಿಸುವುದಕ್ಕಾಗಿ ಒಳಮೀಸಲಾತಿ ಅಗತ್ಯ. ಅದಕ್ಕಾಗಿ ರಚನೆಗೊಂಡಿದ್ದ ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗ ವರದಿಯನ್ನು ಕೂಡ ನೀಡಿತ್ತು. ಆದರೆ ಆಯೋಗದ ವರದಿಯನ್ನು ಚರ್ಚೆಗೆ ತಂದಿಲ್ಲ. ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿಲ್ಲ. ಈ ಬಗ್ಗೆ ಅನೇಕ ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಶಿರಾ ಉಪಚುನಾವಣೆ ಮುಗಿದ ಕೂಡಲೇ ಸದಾಶಿವ ಆಯೋಗದ ವರದಿಯನ್ನು ಕೇಂದ್ರಕ್ಕೆ ಕಳುಹಿಸಲಾಗುವುದು ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಭರವಸೆ ನೀಡಿದ್ದರು. ಹುಬ್ಬಳ್ಳಿಯಲ್ಲಿ ನಡೆದ ಮಾದಿಗರ ಜಾಗೃತಿ ಸಮಾವೇಶದಲ್ಲಿ ಮುಖ್ಯಮಂತ್ರಿಯೇ ಭರವಸೆ ನೀಡಿದ್ದರು. ಯಾವುದೂ ಈಡೇರಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮಾರ್ಚ್‌ 20ರ ಒಳಗಾಗಿ ಎ.ಜೆ.ಸದಾಶಿವ ಆಯೋಗದ ವರದಿಯನ್ನು ಜಾರಿಗೊಳಿಸಬೇಕು. ಇಲ್ಲದಿದ್ದರೆ ಅಂದೇ ಬೆಂಗಳೂರು ನಗರದ ಆರ್.ಟಿ. ನಗರದಲ್ಲಿರುವ ಮುಖ್ಯಮಂತ್ರಿ ಮನೆಗೆ ಮುತ್ತಿಗೆ ಹಾಕುವ ಕಾರ್ಯಕ್ರಮವನ್ನು ರಾಜ್ಯ ಮಾದಿಗ ದಂಡೋರ ಸಮಿತಿ ಹಮ್ಮಿಕೊಂಡಿದೆ. ಈ ಕಾರ್ಯಕ್ರಮಕ್ಕೆ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಿಂದ ಮಾದಿಗ ದಂಡೋರರು ಭಾಗವನಹಿಸಬೇಕು ಎಂದು ಮನವಿ ಮಾಡಿದರು.

ಎಲ್ಲ ತಾಲ್ಲೂಕು ಮತ್ತು ಹೋಬಳಿ ಕೇಂದ್ರಗಳಿಗೆ ಜಿಲ್ಲಾ ಸಮಿತಿ ಪದಾಧಿಕಾರಿಗಳು ಭೇಟಿ ಕೊಟ್ಟು ಕರಪತ್ರ ಹಂಚಿ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಜಾಗೃತಿ ಮೂಡಿಸಬೇಕು ಎಂದು ಜಿಲ್ಲಾ ಸಮಿತಿಯ ಹಿರಿಯ ಉಪಾಧ್ಯಕ್ಷ ಎಚ್‌. ಚಿದಾನಂದಪ್ಪ ಸಲಹೆ ನೀಡಿದರು.

ಸಭೆಯಲ್ಲಿ ಮಳಲಕೆರೆ ಶೇಖರಪ್ಪ, ಶಾಮನೂರು ದಾನಪ್ಪ, ಬಿ. ಮಲ್ಲೇಶಪ್ಪ, ಹಾಲೇಶ, ಎಚ್‌. ನಾಗರಾಜ, ಎಂ. ಶಿವಕುಮಾರ್, ಎಚ್. ಬಸವರಾಜ, ಈಚಗಟ್ಟ ಕೆಂಚಪ್ಪ ಇನ್ನಿತರು ಇದ್ದರು.

Leave a Reply

Your email address will not be published. Required fields are marked *

You missed

error: Content is protected !!