Editor m rajappa vyasagondanahalli

By shukradeshenews Kannada | online news portal |Kannada news online   

By shukradeshenews | published on ಡಿಸೆಂಬರ್ 22

ನ್ಯಾಯನಿಷ್ಟುರಿ ನಿಟ್ಟೆ ಸಂತೋಷ ಹೆಗಡೆಯವರಿಗೆ
ಜೆ. ಎಂ.ಇಮಾಂ ರಾಜ್ಯ ಪ್ರಶಸ್ತಿ :

ಭಾರತದ ಚುನಾವಣಾ ಆಯೋಗಕ್ಕೆ ಟಿ.ಎನ್. ಶೇಷನ್,ರಾಷ್ಟ್ರಪತಿ ಸ್ಥಾನಕ್ಕೆ
ಎಪಿಜೆ ಅಬ್ದುಲ್ ಕಲಾಂ, ಪ್ರಧಾನಿಗಳ ಹುದ್ದೆಗೆ ಲಾಲ್ ಬಹದ್ದೂರ್ ಶಾಸ್ತ್ರಿಗಳಂತಹ ಮಹನೀಯರು ಬಂದು ತಮ್ಮ ಪರಿಶುದ್ಧ ಕಾಯಕ, ತತ್ವ ನಿಷ್ಠೆ, ಜೀವನಾದರ್ಶಗಳ ಮೂಲಕ ಜನಪರ ನಿಲುವು, ನಿರ್ಧಾರಗಳ ಅನುಷ್ಠಾನದ ದ್ಯೋತಕದಿಂದ ಜನರ ಹೃದಯ ಸಿಂಹಾಸನದಲ್ಲಿ ಶಾಶ್ವತವಾದ ಸ್ಥಾನವನ್ನು ಗಳಿಸಿರುವರು. ಒಬ್ಬ ಅಧಿಕಾರಿ, ರಾಜಕಾರಣಿ, ಜನಪ್ರತಿನಿಧಿ ಸಾರ್ವಜನಿಕ ಬದುಕನ್ನು ಬದುಕಬೇಕಾದ ರೀತಿ ಯಾವುದು? ಎಂಬುದನ್ನು ತಮ್ಮ ನಡೆ ನುಡಿಗಳ ಮೂಲಕ ನಮಗೆ ತಿಳಿಸಿಕೊಟ್ಟ ಘನವಂತರು ಇವರು.

ದೂರದ ಮಾತೇಕೆ ? ನಮ್ಮದೇ ನೆಲದ ರಾಷ್ಟ್ರ ನಾಯಕ, ಮಾಜಿ ಮುಖ್ಯಮಂತ್ರಿ ಎಸ್ ನಿಜಲಿಂಗಪ್ಪನವರು ಚಿತ್ರದುರ್ಗದಲ್ಲಿ ಸರಳಾತಿ ಸರಳವಾಗಿ ಬಾಳಿ ಬದುಕಿದ ಪರಿ ಇದೆಯಲ್ಲ, ಅದು ನಮ್ಮೆಲ್ಲರ ಕಣ್ಣು ತೆರೆಸಬಲ್ಲದು. ಒಮ್ಮೆ ಅವರಿಗೆ ಅವರ ಮನೆಯ ಎರಡಂಕಿಯ ಟೆಲಿಫೋನ್ ಬಿಲ್ಲು ಕೂಡ ಕಟ್ಟಲಾಗದ ಅಸಹಾಯಕ ಪರಿಸ್ಥಿತಿ ಬಂದಿತ್ತು ಎಂದರೆ ಅವರ ಪ್ರಾಮಾಣಿಕ ಬದುಕಿನ ಬಗ್ಗೆ ನಮಗೆ ತಂತಾನೆ ಗೌರವ ಭಾವನೆ ಮೂಡಿಸಬಲ್ಲದು.

ಜಗಳೂರಿನ ಜೆ. ಎಂ. ಇಮಾಂ ರವರ ಬದುಕು ಕೂಡ ಇದಕ್ಕಿಂತ ಹೊರತಾಗಿಲ್ಲ. ಅವರು ಮೈಸೂರು ಮಹಾರಾಜರ ಕಾಲದಲ್ಲಿ ಎಂಟಕ್ಕಿಂತ ಅಧಿಕ ಖಾತೆಗಳ ಮಂತ್ರಿಗಳಾಗಿದ್ದರು. ಹಂಗಾಮಿ ದಿವಾನರಾಗಿದ್ದರು. ಸ್ವಾತಂತ್ರ ನಂತರ ಶಾಸಕರಾಗಿ ಕರ್ನಾಟಕದ ನಾಲ್ಕು ಜನ ಮುಖ್ಯಮಂತ್ರಿಗಳ ಅವಧಿಯಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದರು. ಸಂಸದರಾಗಿ ಹಂಗಾಮಿ ಸ್ಪೀಕರ್ ಆಗಿದ್ದವರು.ಅವರು ಗಳಿಸಿದ ಬಹುದೊಡ್ಡ ಆಸ್ತಿಯೆಂದರೆ ಜನರ ಪ್ರೀತಿಯೊಂದೇ. ಮೈಸೂರು ಮಹಾರಾಜರು ಬೆಂಗಳೂರಿನಲ್ಲಿ ಬಂಗಲೆ ಕೊಡಲು ಮುಂದಾದಾಗ ಅದನ್ನು ನಿರಾಕರಿಸಿ ಇಮ್ಮಣ್ಣ ಜಗಳೂರಿಗೆ ಬಂದರು. ಜಗಳೂರಿನಲ್ಲಿ ತಮಗಿದ್ದ ಪಿತ್ರಾರ್ಜಿತ ಬಂಗ್ಲೆಯನ್ನು ಖಾಸಗಿ ಕಾಲೇಜಿಗೆ ಬಿಟ್ಟುಕೊಟ್ಟು ಅದರ ಆವರಣದಲ್ಲಿಯೇ ಚಿಕ್ಕದೊಂದು ಕೋಣೆಯಂತಹ ಮನೆಯಲ್ಲಿ ವಾಸವಾದರು.ಅವರು ದೈಹಿಕವಾಗಿ ದೂರವಾಗಿದ್ದು ಅಲ್ಲಿಯೇ . ಆದರೆ ಬಹು ಜನರ ಹೃದಯ ಸಿಂಹಾಸನದಲ್ಲಿ ಇಮ್ಮಣ್ಣನಿಗೆ ಶಾಶ್ವತ ನೆಲೆ ಇದೆ ಎಂಬುದು ದಿಟ.

ಇಂತಹುದೇ ಪವಾಡ ಸದೃಶ ಬದುಕನ್ನು ಬದುಕುತ್ತಾ ಜೀವನ ಪಾವನಗೊಳಿಸಿಕೊಂಡವರು ನಮ್ಮೆಲ್ಲರ ನಡುವೆ ಜೀವ ಸ್ಪೂರ್ತಿಯಾಗಿ ,ನೈತಿಕತೆಗೆ ಬೆನ್ನೆಲುಬಾಗಿ, ನೇರ ನಿಷ್ಟುರವಾದಿಯಾಗಿ, ನ್ಯಾಯಪರ ಶಕ್ತಿಯಾಗಿ ಕಂಗೊಳಿಸುತ್ತಿರುವ ನಿಟ್ಟೆ ಸಂತೋಷ ಹೆಗ್ಡೆ ಯವರು . ಅವರ ತಂದೆ ತಾಯಿಗಳು ಕೂಡ ಅಸಾಮಾನ್ಯರೇ ಆಗಿದ್ದರು.ತಂದೆ ಕೆ.ಎಸ್.ಹೆಗ್ಡೆಯವರು ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳಾಗಿ, ಲೋಕಸಭೆಯ ಸ್ಪೀಕರ್ ಆಗಿ ಹೆಸರಾದವರು ಸಾಮಾಜಿಕ ಸೇವೆಗಳಲ್ಲಿ ಮುಂಚೂಣಿಯಲ್ಲಿದ್ದವರು. ತಂದೆ ತಾಯಿಗಳ ಎಲ್ಲಾ ಒಳಿತಿನ ಸಾರವನ್ನು ಅರೆದು ಕುಡಿದು ಹಿಮಾಲಯ ಸದೃಶವಾಗಿ ಬೆಳೆದು ನಿಂತವರು ಸಂತೋಷ ಹೆಗ್ಡೆ

ಕನ್ನಡಿಗರೇ ಆದ ನಿಟ್ಟೆ ಸಂತೋಷ ಹೆಗ್ಡೆ ಯವರು ಭಾರತದ ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳಾಗಿ, ದೇಶದ ಸಾಲಿಸಿಟರ್ ಜನರಲ್ ಆಗಿ, ಕರ್ನಾಟಕ ರಾಜ್ಯದ ಲೋಕಾಯುಕ್ತರಾಗಿ ತಮ್ಮ ಅಮೂಲ್ಯ ಸೇವೆಯ ಮೂಲಕ ಸಾರ್ಥಕ ಬದುಕನ್ನು ಬದುಕಿ ದೇಶಕ್ಕೆ ಕೀರ್ತಿಯನ್ನು ತಂದಿದ್ದಾರೆ.ತಮ್ಮ ಅಗಾಧವಾದ ನ್ಯಾಯಾಂಗದ ಜ್ಞಾನ ಸಂಪತ್ತಿನಿಂದ ಇಡೀ ದೇಶದ ಭ್ರಷ್ಟಾಚಾರಿಗಳಿಗೆ ಸಿಂಹ ಸ್ವಪ್ನವಾಗಿ ಪರಿಣಮಿಸಿದ ಹೆಗ್ಡೆಯವರು ದುರುಳ ಜನರ ಆಸೆ ಬುರುಕತನಕ್ಕೆ ಕಡಿವಾಣ ಹಾಕಿದವರು .ಸಮಯ ಬಂದಾಗ ಅಂಥವರನ್ನು ಜೈಲಿಗೆ ಅಟ್ಟಿಸಿದವರು. ದೇಶದ ಸಂಪತ್ತನ್ನು ಸಂರಕ್ಷಿಸುವಲ್ಲಿ, ನ್ಯಾಯಾಂಗದ ಘನತೆಯನ್ನು ಎತ್ತಿ ಹಿಡಿಯುವಲ್ಲಿ ಮಹತ್ತರ ಪಾತ್ರವಹಿಸಿ ಯುವ ಪೀಳಿಗೆಗೆ ಮಾರ್ಗದರ್ಶಕರಾಗಿ ಸ್ವಚ್ಚ ಹಾಗೂ ಸ್ವಸ್ಥ ಸಮಾಜ ನಿರ್ಮಾಣಕ್ಕೆ ನಾಂದಿ ಹಾಡಿದವರು.

ಕರ್ನಾಟಕ ರಾಜ್ಯದ ಲೋಕಾಯುಕ್ತರಾಗಿ ಐದು ವರ್ಷಗಳ ಕಾಲ ಸಂತೋಷ ಹೆಗ್ಡೆಯವರು ಕಾರ್ಯನಿರ್ವಹಿಸಿದ ಸಮಯ ಮಾತ್ರ ಸುವರ್ಣ ಸದೃಶವೇ ಹೌದು .ಆ ಅವಧಿಯಲ್ಲಿ ಹೆಗ್ಡೆಯವರು ಯಾವುದೇ ತರತಮಗಳಿಗೆ ಆಸ್ಪದ ನೀಡದೆ, ಯಾರದೇ, ಯಾವುದೇ ಒತ್ತಡಗಳಿಗೆ ಒಳಗಾಗದೆ ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸಿ ಲೋಕಾಯುಕ್ತ ಹುದ್ದೆಯ ಘನತೆ ಮತ್ತು ಗೌರವವನ್ನು ಹೆಚ್ಚಿಸಿದವರಾಗಿದ್ದಾರೆ .82ರ ಇಳಿವಯಸ್ಸಿನಲ್ಲೂ ಸಂತೋಷ ಹೆಗ್ಡೆಯವರು ರಾಜ್ಯ, ಹೊರ ರಾಜ್ಯಗಳಲ್ಲಿ ಸಂಚರಿಸಿ ದೇಶ ವಾಸಿಗಳಿಗೆ, ಯುವ ಜನರಿಗೆ, ಅಧಿಕಾರಿ ವರ್ಗದವರಿಗೆ, ನ್ಯಾಯಾಂಗ ವಲಯದ ಮಿತ್ರರಿಗೆ ,ಜನಪ್ರತಿನಿಧಿಗಳಿಗೆ, ಸಂಘ ಸಂಸ್ಥೆಗಳಿಗೆ ಸೂಕ್ತ ಮಾರ್ಗದರ್ಶನವನ್ನು ಮಾಡುತ್ತಾ ತಾವೂ ಕ್ರಿಯಾಶೀಲರಾಗಿ ಸಮಾಜವನ್ನೂ ಕ್ರಿಯಾಶೀಲತೆಯೆಡೆಗೆ ಕೊಂಡೊಯ್ಯುವ ಕೆಲಸದಲ್ಲಿ ನಿರತರಾಗಿದ್ದಾರೆ .ಇವರ ಸಾರ್ಥಕದ ಬದುಕು ನಮಗೆಲ್ಲರಿಗೆ ದಾರಿ ದೀಪ.

ಈ ಎಲ್ಲ ಮಹನೀಯರ ನೆನಪು ಮೆಲುಕು ಹಾಕಲು ಕಾರಣವಾದದ್ದು ಇದೇ ಡಿಸೆಂಬರ್ 27ರಂದು ಸಂಜೆ ಜಗಳೂರಿನಲ್ಲಿ ನಡೆಯಲಿರುವ ಒಂದು ಕಾರ್ಯಕ್ರಮ.ಅಂದು ಜೆ .ಎಂ ಇಮಾಂ ಟ್ರಸ್ಟ್ ನವರು ಇಮಾಂರವರ ಹೆಸರಿನಲ್ಲಿ ಕೊಡಮಾಡುವ ಜೆ .ಎಂ ಇಮಾಂ ರಾಜ್ಯ ಪ್ರಶಸ್ತಿಯನ್ನು ಮಾನ್ಯ ಶ್ರೀ ಸಂತೋಷ್ ಹೆಗ್ದೆಯವರು ಸ್ವೀಕರಿಸಲಿದ್ದಾರೆ.ಜಗಳೂರಿನವರ ಪಾಲಿಗೆ ಇದೊಂದು ಅವಿಸ್ಮರಣೀಯ ಘಳಿಗೆ.ಪ್ರಶಸ್ತಿಗಳೇ ಅರ್ಥ ಕಳೆದುಕೊಳ್ಳುತ್ತಿರುವ ಇಂದಿನ ದಿನಮಾನಗಳಲ್ಲಿ ಇಂತಹ ಅರ್ಥಪೂರ್ಣ ಕ್ರಿಯೆ ಸಾರ್ಥಕವಾದುದು. ಈ ಸಂಭ್ರಮದಲ್ಲಿ ಭಾಗಿಯಾಗುವ ಸಂತಸ ನಿಮ್ಮೆಲ್ಲರದಾಗಲಿ .

ಎನ್. ಟಿ. ಎರ್ರಿಸ್ವಾಮಿ
ನಿವೃತ್ತ ಕೆನರಾ ಬ್ಯಾಂಕ್ ಡಿ ಎಂ ಜಗಳೂರು ೯೯೦೧೯೦೯೬೭೨

Leave a Reply

Your email address will not be published. Required fields are marked *

You missed

error: Content is protected !!