ಮೈಸೂರು ಜಿಲ್ಲೆಯಲ್ಲಿ ಗೃಹಪ್ರವೇಶ ಊಟ ಸೇವಿಸಿ 39 ಮಂದಿ ಅಸ್ವಸ್ಥ; ಆಸ್ಪತ್ರೆಗೆ ದಾಖಲು
By m rajappa vyasagondanahalli
Published:, June 3, 2024]
ಸಿಎಂ ತವರು ಜಿಲ್ಲೆ ಮೈಸೂರಿನಲ್ಲಿ ಕಲುಷಿತ ನೀರು ಸೇವಿಸಿ ಓರ್ವ ಮೃತಪಟ್ಟ ಘಟನೆ ಮಾಸುವ ಮುನ್ನವೇ ಮಾರ್ಬಳ್ಳಿ ಗ್ರಾಮದಲ್ಲಿ ನಡೆದ ಗೃಹಪ್ರವೇಶ ಸಮಾರಂಭದಲ್ಲಿ ಆಹಾರ ಸೇವಿಸಿದ 26 ಮಂದಿಗೆ ವಾಂತಿ, ಭೇದಿ ಕಾಣಿಸಿಕೊಂಡಿದೆ. ಎಲ್ಲರನ್ನೂ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಎಲ್ಲರೂ ಚೇತರಿಸಿಕೊಂಡಿದ್ದಾರೆ.

ಮೇ 31ರಂದು ಮಾರ್ಬಳ್ಳಿ ಗ್ರಾಮದಲ್ಲಿ ನಡೆದ ಗೃಹಪ್ರವೇಶದಲ್ಲಿ ಊಟ ಸೇವಿಸಿದ 26 ಮಂದಿಗೆ ಮತ್ತು ಜೂ. 2ರಂದು, 13 ಮಂದಿಗೆ ಜೂನ್ 3ರಂದು ಹೊಟ್ಟೆನೋವು, ವಾಂತಿ ಭೇದಿ ಕಾಣಿಸಿಕೊಂಡಿದೆ. ತಕ್ಷಣ ಎಚ್ಚೆತ್ತುಕೊಂಡ ಆರೋಗ್ಯ ಇಲಾಖೆ ಎಲ್ಲರಿಗೂ ಚಿಕಿತ್ಸೆ ನೀಡಿ, ಹೆಚ್ಚಿನ ಅನಾಹುತವನ್ನು ತಪ್ಪಿಸಿದೆ. ರೋಗಿಗಳಿಗೆ ಮೊದಲು ಗ್ಲೂಕೋಸ್ ನೀಡಿ ಚೇತರಿಸಿಕೊಳ್ಳುವಂತೆ ಮಾಡಲಾಯಿತು.

ರೋಗ ಲಕ್ಷಣ ಇರುವವರಿಗೆ ಒಆರ್‌ಎಸ್ ನೀಡಿ ಕೆಲವೊಂದು ಆರೋಗ್ಯ ಸಲಹೆ ನೀಡಿ ಹೊರ ರೋಗಿಗಳಾಗಿ ಚಿಕಿತ್ಸೆ ನೀಡಲಾಗಿದೆ. ತೀರಾ ನಿರ್ಜಲೀಕರಣಕ್ಕೆ ಒಳಗಾದವರಿಗೆ ಗ್ಲೂಕೋಸ್ ನೀಡಿ ಚೇತರಿಕೆಯಾದ ನಂತರ ಬಿಡುಗಡೆ ಮಾಡಲಾಗುತ್ತಿದೆ. ಆಹಾರ ವಿಷಮಯವಾಗಿರುವುದೇ ಘಟನೆಗೆ ಕಾಣವಿರಬಹುದು ಎಂದು ಶಂಕಿಸಲಾಗಿದೆ,” ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಪಿ.ಸಿ.ಕುಮಾರಸ್ವಾಮಿ ತಿಳಿಸಿದರು.

ಮೂತ್ರಪಿಂಡ ಸಮಸ್ಯೆಯಿಂದ ಶಿವಮ್ಮ ಸಾವು
“ಮಾರ್ಬಳ್ಳಿ ನಿವಾಸಿ ಶಿವಮ್ಮ(78) ಎಂಬುವರು ಅಧಿಕ ರಕ್ತದೊತ್ತಡ ಮತ್ತು ಮೂತ್ರಪಿಂಡ ಸಮಸ್ಯೆಯಿಂದ ಮೃತಪಟ್ಟಿದ್ದಾರೆ. ಆದರೆ ಗ್ರಾಮದಲ್ಲಿ ವಾಂತಿ, ಭೇದಿ ಪ್ರಕರಣಗಳು ಇದೇ ವೇಳೆ ಕಾಣಿಸಿಕೊಂಡಿದ್ದರಿಂದ ಶಿವಮ್ಮ ಅವರೂ ಅದೇ ಕಾರಣಕ್ಕೆ ಸಾವಿಗೀಡಾಗಿದ್ದಾರೆ ಎಂಬ ವದಂತಿ ಹರಡಿತ್ತು. ಶಿವಮ್ಮ ಅವರ ಸಾವಿಗೂ ವಾಂತಿ, ಭೇದಿ ಪ್ರಕರಣಕ್ಕೂ ಸಂಬಂಧವಿಲ್ಲ” ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಪಿ.ಸಿ. ಕುಮಾರಸ್ವಾಮಿ ಸ್ಪಷ್ಟನೆ ನೀಡಿದ್ದಾರೆ.

ಗ್ರಾಮಕ್ಕೆ ಜಿಪಂ ಸಿಇಒ ಭೇಟಿ
ಗ್ರಾಮದ 39 ಮಂದಿಗೆ ವಾಂತಿಭೇದಿ ಕಾಣಿಸಿಕೊಂಡ ಹಿನ್ನೆಲೆ ಜಿಲ್ಲಾ ಪಂಚಾಯತ್ ಸಿಇಒ ಕೆ.ಎಂ.ಗಾಯಿತ್ರಿ ಅವರು ಸೋಮವಾರ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದರು. ಈ ವೇಳೆ ಮಾರ್ಬಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಅಧ್ಯಕ್ಷರು, ಸದಸ್ಯರು ಹಾಗೂ ಗ್ರಾಮಸ್ಥರ ಸಮ್ಮುಖದಲ್ಲಿ ಸಭೆ ನಡೆಸಿದ ಅವರು, ಕಲುಷಿತ ಆಹಾರ ಸೇವನೆಯಿಂದಾಗ ವಾಂತಿಭೇದಿ ಕಾಣಿಸಿಕೊಂಡಿದೆ. ಹೀಗಾಗಿ ಗ್ರಾಮದಲ್ಲಿ ನೈರ್ಮಲ್ಯ ಕಾಪಾಡಿಕೊಳ್ಳಲು ಆದ್ಯತೆ ನೀಡಬೇಕು. ಸ್ವಚ್ಛತೆ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಕೂಡ ಗ್ರಾಮ ಪಂಚಾಯಿತಿ ಜೊತೆಗೆ ಕೈಜೋಡಿಸಿ ಸಹಕರಿಸಬೇಕು ಎಂದು ತಿಳಿಸಿದರು.

ಗ್ರಾಮದಲ್ಲಿ ಜರುಗುವ ಯಾವುದೇ ಕಾರ್ಯಕ್ರಮಗಳಲ್ಲಿ ಪರಿಶುದ್ದವಾಗಿ ಆಹಾರ ಸಿದ್ದಪಡಿಸಲು ಗಮನಹರಿಸಬೇಕು. ಶುದ್ಧ ನೀರನ್ನು ಬಳಸುವ ಮೂಲಕ ಆಹಾರ ತಯಾರಿಸಬೇಕು. ಶುಚಿತ್ವ ಕಾಯ್ದುಕೊಳ್ಳುವ ಬಗ್ಗೆ ಯಾರೂ ನಿರ್ಲಕ್ಷ್ಯ ಮಾಡಬಾರದು ಎಂದು ಸಲಹೆ ನೀಡಿದರು. ಗ್ರಾಮ ಪಂಚಾಯಿತಿ ವತಿಯಿಂದ ಶುದ್ಧ ಕುಡಿಯುವ ನೀರಿನ ಪೂರೈಕೆಗಾಗಿ ಅನೇಕ ಕ್ರಮಗಳನ್ನು ಕೈಗೊಳ್ಳಲಾಗಿದೆ. ಇದರ ಜೊತೆಗೆ ಮಳೆಗಾಲದಲ್ಲಿ ಜನರು ಚನ್ನಾಗಿ ಕುದಿಸಿ ಆರಿಸಿದ ನೀರನ್ನು ಕುಡಿಯಬೇಕು. ಬಿಸಿ ಆಹಾರ ಸೇವನೆ ಮಾಡಬೇಕು ಎಂದರು.

Leave a Reply

Your email address will not be published. Required fields are marked *

You missed

error: Content is protected !!