ಇಂದಿನಿಂದ ಎಸ್ ಎಸ್ ಎಲ್ ಸಿ ಪರೀಕ್ಷೆ, ಪ್ರಾರಂಭ ಈ ಬಾರಿ 8 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳ ನೋಂದಣಿ!31 .

ಬೆಂಗಳೂರು: ವಿದ್ಯಾರ್ಥಿ ಜೀವನದ ಪ್ರಮುಖ ಘಟ್ಟ ಎಂದೇ ಪರಿಗಣಿಸಲಾದ ಎಸ್ ಎಸ್ ಎಲ್ ಸಿ ವಾರ್ಷಿಕ ಪರೀಕ್ಷೆ ಇಂದಿನಿಂದ (ಮಾ.31) ಆರಂಭವಾಗಲಿದೆ. ರಾಜ್ಯ ವಿಧಾನಸಭಾ ಚುನಾವಣಾ ಪ್ರಕ್ರಿಯೆ ನಡುವೆಯೂ ಏಪ್ರಿಲ್ 15 ರವರೆಗೂ ನಡೆಯಲಿರುವ ಪರೀಕ್ಷೆಯನ್ನು ಸುಸೂತ್ರವಾಗಿ ನಡೆಸಲು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಕಲ ಸಿದ್ಧತೆ ಮಾಡಿಕೊಂಡಿದೆ.

ಈ ಬಾರಿ 5,833 ಸರ್ಕಾರಿ ಶಾಲೆ ವಿದ್ಯಾರ್ಥಿಗಳು 3,605 ಅನುದಾನಿತ, 6,060 ಅನುದಾನ ರಹಿತ ಶಾಲೆಗಳ ವಿದ್ಯಾರ್ಥಿಗಳು ಸೇರಿದಂತೆ ಒಟ್ಟಾರೇ 8.42 ಲಕ್ಷ ವಿದ್ಯಾರ್ಥಿಗಳು ಪರಿಕ್ಷೆಗೆ ಹೆಸರು ನೋಂದಾಯಿಸಿಕೊಂಡಿದ್ದಾರೆ.

ಪರೀಕ್ಷೆ ಆರಂಭದ ದಿನವಾದ ಶುಕ್ರವಾರ ಬೆಳಗ್ಗೆ 10-30 ರಿಂದ ಮಧ್ಯಾಹ್ನ 1-45ರವರೆಗೆ ಪ್ರಥಮ ಭಾಷೆ ಕನ್ನಡ, ತೆಲುಗು, ಹಿಂದಿ, ಮರಾಠ, ತಮಿಳು, ಉರ್ದು ಮತ್ತು ಇಂಗ್ಲೀಷ್ ವಿಷಯಗಳ ಪರೀಕ್ಷೆ ನಡೆಯಲಿದೆ. ನಾಳೆ ಗಣಿತ ಮತ್ತು ಸಮಾಜ ಶಾಸ್ತ್ರ ವಿಷಯದ ಪರೀಕ್ಷೆ ನಡೆಯಲಿದ್ದು, ನಕಲು ತಡೆಗೆ ಬಿಗಿ ಕ್ರಮ ಕೈಗೊಳ್ಳಲಾಗಿದೆ.

ಪರೀಕ್ಷಾ ಕೇಂದ್ರದ ಬಳಿಯಿರುವ ಜೆರಾಕ್ಸ್ ಅಂಗಡಿಗಳನ್ನು ಮುಚ್ಚುವಂತೆ ಸೂಚಿಸಲಾಗಿದೆ. ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ಸಕಲ ಸಿದ್ದತೆ ಕೈಗೊಳ್ಳಲಾಗಿದೆ. ಶಿಕ್ಷಣ ಇಲಾಖೆ ಅಧಿಕಾರಿಗಳು ಪರೀಕ್ಷೆ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಸೂಕ್ತ ವ್ಯವಸ್ಥೆ ಮಾಡಲಾಗಿದೆ. ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಕೆಎಸ್ ಆರ್ ಟಿಸಿ ಹಾಗೂ ಬಿಎಂಟಿಸಿ ಬಸ್ ಗಳಲ್ಲಿ ಉಚಿತ ಪ್ರಯಾಣದ ಅವಕಾಶ ನೀಡಲಾಗಿದೆ. ಪರೀಕ್ಷೆಯ ಪ್ರವೇಶ ಪತ್ರ ತೋರಿಸಿ ಪರೀಕ್ಷಾ ಕೇಂದ್ರಗಳಿಗೆ ಉಚಿತವಾಗಿ ಪ್ರಯಾಣಿಸಬಹುದಾಗಿದೆ.

ಪ್ರಶ್ನೆ ಪತ್ರಿಕೆಗಳನ್ನು ಜಿಲ್ಲಾ, ತಾಲೂಕ್ ಖಜಾನೆಯಿಂದ ಕೇಂದ್ರಗಳಿಗೆ ತಲುಪಿಸಲು ವಿತರಣಾ ಮಾರ್ಗಗಳನ್ನು ರಚಿಸಲಾಗಿದೆ. ನಿಯಮಾವಳಿ ರೀತಿ ವೇಳಾಪಟ್ಟಿಯಂತೆ ಸಕಾಲಕ್ಕೆ ಪ್ರಶ್ನೆ ಪತ್ರಿಕೆಯನ್ನು ಪರೀಕ್ಷಾ ಕೇಂದ್ರಕ್ಕೆ ತಲುಪಿಸುವ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಈ ವರ್ಷವೂ ಕೊರೋನಾ ಬ್ಯಾಚ್ ಎಂದು ಪರಿಗಣಿಸಲಾಗಿದ್ದು, ವಿದ್ಯಾರ್ಥಿಗಳಿಗೆ ಶೇ. 10 ರಷ್ಟು ಗ್ರೇಸ್ ಅಂಕ ಇರುತ್ತದೆ ಎಂದು ರಾಜ್ಯ ಪ್ರೌಢ ಶಿಕ್ಷಣಾ ಪರೀಕ್ಷಾ ಮಂಡಳಿ ನಿರ್ದೇಶಕ ಹೆಚ್.ಎ.ಗೋಪಾಲ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You missed

error: Content is protected !!