ವಿದ್ಯಾರ್ಥಿಗಳಿಗೆ ಮೌಲ್ಯಾಧಾರಿತ ಶಿಕ್ಷಣ ಅಗತ್ಯ:ಶಾಸಕ.ಬಿ.ದೇವೇಂದ್ರಪ್ಪ ಅಭಿಮತ.

ಜಗಳೂರು ಸುದ್ದಿ:’ಮೌಲ್ಯಾಧಾರಿತ ಶಿಕ್ಷಣದ ಅಂಶಗಳು ವಿದ್ಯಾರ್ಥಿಗಳ ಮಾನಸಿಕ ಬೆಳವಣಿಗೆಗೆ ಹಾಗೂ ಸುಸಂಸ್ಕೃತ ಬದುಕಿಗೆ ಪೂರಕ’ ಎಂದು ಶಾಸಕ.ಬಿ.ದೇವೇಂದ್ರಪ್ಪ ವ್ಯಾಖ್ಯಾನಿಸಿದರು.

ಪಟ್ಟಣದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಶುಕ್ರವಾರ ಸಾಂಸ್ಕೃತಿಕ,ಕ್ರೀಡಾ,ರಾ.ಸೇ.ಯೋ.ಯುವರೆಡ್ ಕ್ರಾಸ್,ರೋವರ್ಸ್ ಮತ್ತು ರೇಂಜರ್ಸ್,ಐಕ್ಯೂ ಎಸಿ,ವಿವಿಧ ಸಮಿತಿಗಳ ಸಮಾರೋಪ ಹಾಗೂ ತೃತೀಯ ವರ್ಷದ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕಟ್ಟಕಡೆಯ ವ್ಯಕ್ತಿಗೂ ಶಿಕ್ಷಣ ಸಾರ್ವತ್ರಿಕ ಸದ್ಬಳಕೆಯಾಗಬೇಕು.ಶಿಕ್ಷಣದಿಂದ ಜ್ಞಾನಸಂಪಾದನೆ‌ ಮಾತ್ರವಲ್ಲ.ಔದ್ಯೋಗಿಕ ಕ್ಷೇತ್ರದಲ್ಲಿ ಸಾಧನೆಗೈದರೆ ಸಂಪತ್ತು ಗಳಿಸಲು ಸಹಕಾರಿಯಾಗಿದ್ದು,ವಿದ್ಯಾರ್ಥಿಗಳು ಅಂಕಗಳಿಕೆಯ ಜೊತೆಗೆ ಉಜ್ವಲ ಭವಿಷ್ಯ ರೂಪಿಸುವ ಕೌಶಲಾಧಾರಿತ ಶಿಕ್ಷಣ,ನೈತಿಕತೆ ಅಳವಡಿಸಿಕೊಳ್ಳಬೇಕು’ ಎಂದು ಕಿವಿಮಾತು ಹೇಳಿದರು.

‘ಕಾಲೇಜಿನ ವಿದ್ಯಾರ್ಥಿಗಳ ಬೇಡಿಕೆಯಂತೆ ಸರ್ಕಾರಿ ಬಸ್,ಕೊರೆದಿರುವ ಬೋರ್ ವೆಲ್ ಗೆ ಪಂಪ್,ಮೋಟಾರ್ ವ್ಯವಸ್ಥೆ,ಕಾಂಪೌಂಡ್ ನಿರ್ಮಾಣ‌ ಸೇರಿದಂತೆ ಅಗತ್ಯ ಮೂಲಸೌಕರ್ಯಗಳನ್ನು ಒದಗಿಸಲಾಗುವುದು’ ಎಂದು ಹೇಳಿದರು.

ಚಿತ್ರದುರ್ಗದ ಎಸ್ ಜೆಎಂ ಕಾನೂನು ಕಾಲೇಜಿನ ಉಪನ್ಯಾಸಕ ಡಾ.ವಿಶ್ವನಾಥ್ ಮಾತನಾಡಿ,’ವಿದ್ಯಾರ್ಥಿ ಜೀವನದಲ್ಲಿ ಆಲೋಚನಾ ಲಹರಿಗಳು ಬದಲಾವಣೆಗೊಂಡರೆ ಗುರಿಸಾಧಿಸಲು ಸಾಧ್ಯ.ಋಣಾತ್ಮಕ ಚಿಂತನೆಗಳನ್ನು ತೊರೆದು ಧನಾತ್ಮಕ ಆಲೋಚನೆಗಳೊಂದಿಗೆ ಕಷ್ಟಗಳನ್ನು ಎದುರಿಸುವ ನಾಯಕತ್ವ ಗುಣ ಮೈಗೂಡಿಸಿಕೊಳ್ಳಬೇಕು’ಎಂದು ಸಲಹೆ ನೀಡಿದರು.

‘ವಿದ್ಯಾರ್ಥಿಗಳು ಪದವಿ ಹಂತದಲ್ಲಿ‌ ಯಾವುದೇ ಕೋರ್ಸ್ ಆಯ್ಕೆಮಾಡಿಕೊಂಡರೂ ಭವಿಷ್ಯ ಕುರಿತು ಅತಂಕಪಡುವ ಅಗತ್ಯವಿಲ್ಲ.ಕೋರ್ಸ್ ಗಳಲ್ಲಿನ ಕೌಶಲ್ಯಗಳನ್ನು ಗ್ರಹಿಸಿಕೊಂಡು ತಮ್ಮಲ್ಲಿ ಅಡಗಿರುವ ಪ್ರತಿಭೆಯನ್ನು ಅನಾವರಣಗೊಳಿಸಿದರೆ ಯಶಸ್ಸು ನಿಶ್ಚಿತ ‘ಎಂದು ತಿಳಿಸಿದರು.

ಸಂದರ್ಭದಲ್ಲಿ ತಹಶೀಲ್ದಾರ್ ಸಯ್ಯದ್ ಕಲೀಂ ಉಲ್ಲಾ,ಪ.ಪಂ ಮುಖ್ಯಾಧಿಕಾರಿ ಲೋಕ್ಯಾನಾಯ್ಕ,ಪ್ರಾಂಶುಪಾಲರಾದ ಡಾ.ರಂಗಪ್ಪ,ರಾಜೇಶ್ವರಿ,ಪ.ಪಂ ಸದಸ್ಯ ರಮೇಶ್ ರೆಡ್ಡಿ,ಸಿಡಿಸಿ ಸದಸ್ಯರಾದ ಷಂಷುದ್ದೀನ್,ಜಯಶೀಲರೆಡ್ಡಿ,ಮುಖಂಡ ಪಲ್ಲಾಗಟ್ಟೆ ಶೇಖರಪ್ಪ,ಪ್ರಾಧ್ಯಾಪಕರಾದ ಚೈತ್ರಾ,ಸತೀಶ್ ,ಸಲ್ಮಾಬಾನು,ಅಮರೇಶ್,ವಿದ್ಯಾಶ್ರೀ,ಮಲ್ಲಿಕಾರ್ಜುನ್ ಕಪ್ಪಿ,ಉಪನ್ಯಾಸಕರಾದ ಅಜ್ಜಪ್ಪ,ವೆಂಕಟೇಶ್,ಬಸವರಾಜ್,ಶ್ವೇತಾ,ಧನಂಜಯ್,ಸೇರಿದಂತೆ ಇದ್ದರು.

Leave a Reply

Your email address will not be published. Required fields are marked *

You missed

error: Content is protected !!