ಕೆರೆಗಳು ಋತುಮಾನ ಜಲಸಂಗ್ರಹ ಆಸ್ತಿಗಳು:ಉಜ್ಜಿನಿ ಶ್ರೀಗಳು ಆಶೀರ್ವಚನ.
ಜಗಳೂರು ಸುದ್ದಿ:’ವಿಜ್ಞಾನ ತಂತ್ರಜ್ಞಾನವಿಲ್ಲದ ಕಾಲಘಟ್ಟದಲ್ಲಿ ಪೂರ್ವಜರು ನಿರ್ಮಿಸಿದ ಕೆರೆಗಳು ಋತುಮಾನ ಜಲಸಂಗ್ರಹದ ಆಸ್ತಿಗಳು’ ಎಂದು ಉಜ್ಜಿನಿ ಸದ್ದರ್ಮ ಪೀಠದ ಸಿಂಹಾಸನಾಧೀಶ್ವರ ಶ್ರೀ ಸಿದ್ದಲಿಂಗ ರಾಜದೇಶಿಕೇಂದ್ರ ಸ್ವಾಮೀಜಿ ವ್ಯಾಖ್ಯಾನಿಸಿದರು.
ತಾಲೂಕಿನ ಗಡಿಮಾಕುಂಟೆ ಕೆರೆಗೆ 15ಅಡಿಗೂ ಅಧಿಕ ನೀರು ಭರ್ತಿಯಾದ ಹಿನ್ನೆಲೆ ವಿಶೇಷಗಂಗೆ ಪೂಜೆ,ಬಾಗೀನ ಅರ್ಪಿಸಿ ಅವರು ಆಶೀರ್ವಚನನೀಡಿದರು.
‘ಜಮೀನುಗಳಲ್ಲಿ ಮಣ್ಣಿನ ಸವಕಳಿ ತಪ್ಪಿಸಲು,ಅಂತರ್ಜಲ ವೃದ್ದಿಗಾಗಿ ಪೂರ್ವಜರು ನಿರ್ಮಿಸಿದ ಬದುಗಳು,ಗೋಕಟ್ಟೆಗಳನ್ನು ಇತ್ತೀಚೆಗೆ ರೈತರು ದುರಾಸೆಯಿಂದ ನೆಲಸಮಗೊಳಿಸುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ.ಕೂಡಲೇ ಜಾಗೃತರಾಗಿ ನೀರಿನ ಆಕರಗಳ ಸಂರಕ್ಷಿಸಿ ಜಲಮೂಲಗಳನ್ನು ಉಳಿಸಬೇಕು’ಎಂದು ಸಲಹೆ ನೀಡಿದರು.
‘ಭೂಮಂಡಲದಲ್ಲಿ ಮೂರು ಭಾಗ ನೀರಿದ್ದು ಒಂದು ಭಾಗ ಭೂಮಿ ಆವರಿಸಿದ್ದರೂ ಬಹುತೇಕ ದೇಶಗಳಲ್ಲಿ ಕುಡಿಯುವ ನೀರಿಗೂ ಆಹಾಕಾರವಿದೆ.ಪಂಚಭೂತಗಳಲ್ಲಿ ಮೂಲ ಧಾತು ನೀರು ಸಕಲ ಜೀವರಾಶಿಗಳಿಗೂ ಅತ್ಯವಶ್ಯಕ.ಪ್ರಕೃತಿ ಸಂಪತ್ಭರಿತ ಭಾರತದಲ್ಲಿ ಜನಿಸಿದ ನಾವೇ ಪುಣ್ಯವಂತರು.ಧರ್ಮಾತೀತ,ಜಾತ್ಯಾತೀತ ರಾಷ್ಟ್ರದಲ್ಲಿ ಸರ್ವರೂ ಸಮನ್ವಯ ಜೀವನ ಸಾಗಿಸಿದರೆ ಸರ್ವೋದಯ ಪರಿಕಲ್ಪನೆ ಸಾಧಿಸಿದಂತೆ’ಎಂದು ತಿಳಿಸಿದರು.
‘ಮಳೆಯಿಂದ ನಾಡು ಸಮೃದ್ದಿಯಾಗಲಿ,ಬೆಳೆದ ಬೆಳೆಗಳಿಗೆ ಮಾರುಕಟ್ಟೆಯಲ್ಲಿ ಸೂಕ್ತ ಬೆಲೆದೊರೆತು ರೈತರ ಬದುಕು ಹಸನಾಗಬೇಕಿದೆ.ದಶಕಗಳ ಕನಸಿನ ಭದ್ರಾಮೇಲ್ದಂಡೆ ಯೋಜನೆ ಸಕಾಲದಲ್ಲಿ ಸಾಕಾರಗೊಳ್ಳದೆ ರೈತರು ವಂಚಿತರಾಗುತ್ತಿರುವುದು ಬೇಸರದ ಸಂಗತಿ’ ಎಂದರು.
ಶಾಸಕ ಬಿ.ದೇವೇಂದ್ರಪ್ಪ ಮಾತನಾಡಿ,’ಪಂಚಪೀಠಗಳು ಜಾತ್ಯಾತೀತವಾಗಿ ಧಾರ್ಮಿಕ ಕೇಂದ್ರಗಳಾಗಿವೆ.ನಾನೊಬ್ಬ ಉಜ್ಜಿನಿ ಸದ್ದರ್ಮ ಪೀಠದ ಶಿಷ್ಯನಾಗಿ ಹಲವಾರು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿರುವೆ.ಪ್ರತಿಯೊಬ್ಬರೂ ಶ್ರೀಗಳ ವಾಣಿಯನ್ನು ಆಲಿಸಿ ಮೈಗೂಡಿಸಿಕೊಂಡರೆ ಹರಿಷಡ್ವರ್ಗಗಳ ನಿಗ್ರಹಸಾಧ್ಯ’ ಎಂದು ಕರೆ ನೀಡಿದರು.
‘ಅತಿವೃಷ್ಠಿಗೆ ತುತ್ತಾಗಿದ್ದ ಬರದನಾಡು ಪ್ರಸಕ್ತವಾಗಿ ಮುಂಗಾರು ಮಳೆಯಿಂದ ಕೆರೆಕಟ್ಟೆಗಳು ತುಂಬಿವೆ.ಅಂತೆಯೇ ಸಿರಿಗೆರೆ ಶ್ರೀಗಳ ಸಂಕಲ್ಪದಿಂದ ತಾಲೂಕಿಗೆ 57ಕೆರೆತುಂಬಿಸುವ ಯೋಜನೆಯಡಿ ತಾಲೂಕಿನ ಅತಿದೊಡ್ಡ ಕೆರೆಗಳಲ್ಲೊಂದಾಗಿರುವ ದಿವಂಗತ ಇಮಾಂ ಸಾಹೇಬರು ನಿರ್ಮಿಸಿದ ಗಡಿಮಾಕುಂಟೆಕೆರೆಗೆ ಕಳೆದ ರಾತ್ರಿ ಪೈಪ್ ಲೈನ್ ಮೂಲಕ ನೀರು ಹರಿದಿರುವುದು ಕಂಕಣಕೂಡಿಬಂದಂತಾಗಿ ರೈತರ ಮುಖದಲ್ಲಿ ಮಂದಹಾಸ ಮೂಡಿಸಿದೆ’ ಎಂದರು.
ಮಾಜಿ ಶಾಸಕ ಎಚ್.ಪಿ.ರಾಜೇಶ್ ಮಾತನಾಡಿ,ನನ್ನ ಆಡಳಿತಾವಧಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ಹಣವಿಲ್ಲ ಎಂದು 57ಕೆರೆ ತುಂಬಿಸುವ ಯೋಜನೆ ತಳ್ಳಿಹಾಕಿದ್ದರು.ನಂತರ ಅಧೀನ ಕಾರ್ಯದರ್ಶಿ ಅತೀಕ್ ಸಾಹೇಬರ ಸಹಕಾರದಿಂದ ನಾನು ಮತ್ತು ಮಾಜಿ ಸಚಿವ ಆಂಜನೇಯ ಸೇರಿಕೊಂಡು ಸಿರಿಗೆರೆ ಶ್ರೀಗಳ ಕಾಳಜಿಯಿಂದ ಭರಮಸಾಗರ,ಜಗಳೂರು ಅವಳಿ ನೀರಾವರಿ ಯೋಜನೆಗೆ ಚಾಲನೆ ನೀಡಿದೆವು.ಮೂರು ಜನ ಮುಖ್ಯಮಂತ್ರಿ,ಮೂರು ಜನ ಶಾಸಕರ ಪಕ್ಷಾತೀತ ಕಾಳಜಿಯಿಂದ ಕಾಮಗಾರಿ ತ್ವರಿತಗತಿಯಲ್ಲಿ ಪೂರ್ಣಗೊಂಡು ತಾಲೂಕಿನ ಕೆರೆಗಳಿಗೆ ನೀರು ಬಂದಿವೆ.2008 ರಿಂದ ಎಸ್ ಟಿ ಮೀಸಲು ಕ್ಷೇತ್ರವಾದ ನಂತರ ಅಭಿವೃದ್ದಿಯತ್ತ ದಾಪುಗಾಲು ಇಟ್ಟಿದೆ.ಇದಕ್ಕೂ ಪೂರ್ವದಲ್ಲಿ ಅಷ್ಟೊಂದು ಅನುದಾನ ಬರುತ್ತಿರಲಿಲ್ಲ’ಎಂದು ಹೇಳಿದರು.
ಸಂದರ್ಭದಲ್ಲಿ ಮಾಜಿ ಶಾಸಕ ಎಸ್.ವಿ.ರಾಮಚಂದ್ರ, ಕೆಪಿಸಿಸಿ ಎಸ್ ಟಿ ಘಟಕದ ರಾಜ್ಯಮುಖಂಡ ಕೆ.ಪಿ.ಪಾಲಯ್ಯ,ಜೆಡಿಎಸ್ ಮುಖಂಡ ಕಲ್ಲೇರುದ್ರೇಶ್,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಷಂಷೀರ್ ಅಹಮ್ಮದ್,ಗ್ರಾ.ಪಂ ಅಧ್ಯಕ್ಷೆ ವಿಎಸ್ ಎಸ್ ಎನ್ ಅಧ್ಯಕ್ಷ ಬಿಸ್ತುವಳ್ಳಿ ಬಾಬು,ಮುಖಂಡರಾದ ಗಡಿಮಾಕುಂಟೆ ಸಿದ್ದೇಶ್,ಯು.ಜಿ.ಶಿವಕುಮಾರ್,ತಿಪ್ಪೇಸ್ವಾಮಿಗೌಡ,ಪ್ರಕಾಶ್ ರೆಡ್ಡಿ,ಪಲ್ಲಾಗಟ್ಟೆ ಶೇಖರಪ್ಪ,ಬಿ.ಮಹೇಶ್ವರಪ್ಪ,ಎಸ್.ಕೆ.ರಾಮರೆಡ್ಡಿ,ಎಂ.ಎಸ್ ಪಾಟೀಲ್,ಗುರುಸಿದ್ದನಗೌಡ,ಕೆಚ್ಚೇನಹಳ್ಳಿಹರೀಶ್, ಹರೀಶ್,ಜಿ.ಬಸಪ್ಪ,ಸೇರಿದಂತೆ ಇದ್ದರು.