ಸುದ್ದಿ ಜಗಳೂರು

ಶೀಘ್ರದಲ್ಲಿ ಸಿರಿಗೆರೆ ಶ್ರೀಗಳಿಂದ ಕೆರೆಗಳ ವೀಕ್ಷಣೆ :ಶಾಸಕ ಬಿ.ದೇವೇಂದ್ರಪ್ಪ

ಜಗಳೂರು ಸುದ್ದಿ:’57ಕೆರೆ ತುಂಬಿಸುವ ಯೋಜನೆಯಡಿ ಪೈಪ್ ಲೈನ್ ಕಾಮಗಾರಿ ಪೂರ್ಣಗೊಂಡಿದ್ದು. ಈಗಾಗಾಲೇ 31ಕೆರೆಗಳಿಗೆ ತುಂಗೆ ಭದ್ರೆ ಹರಿದಿದ್ದಾಳೆ.ಇನ್ನು ಒಂದುವಾರದಲ್ಲಿ ತಾಲೂಕಿನ 40ಕೆರೆಗಳಿಗೆ ನೀರು ಹರಿದುಬಂದ ನಂತರ ಸಿರಿಗೆರೆ ಶ್ರೀಗಳು ಕೆರೆಗಳ ವೀಕ್ಷಣೆ ಹಾಗೂ ಬಾಗೀನ ಕಾರ್ಯಕ್ರಮದಲ್ಲಿ ಭಾಗವಹಿಸಿ ಆಶೀರ್ವಾಚನ‌ ನೀಡಲಿದ್ದಾರೆ’ ಎಂದು ಶಾಸಕ ಬಿ.ದೇವೇಂದ್ರಪ್ಪ ತಿಳಿಸಿದರು.

ಪಟ್ಟಣದ ತರಳಬಾಳು ಸಮುದಾಯ ಭವನದಲ್ಲಿ ಸಿರಿಗೆರೆ ಶ್ರೀಗಳು ಕೆರೆವೀಕ್ಷಣೆ ಕಾರ್ಯಕ್ರಮಕ್ಕೆ ಆಗಮಿಸುವ ಹಿನ್ನೆಲೆ ಕರೆದಿದ್ದ ಪೂರ್ವಭಾವಿ ಸಭೆಯಲ್ಲಿ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.

’57ಕೆರೆ ತುಂಬಿಸುವ ಯೋಜನೆಯಡಿ ಮತ್ತು ವರುಣನ ಕೃಪೆಯಿಂದ ತಾಲೂಕಿನ ಕೆರೆಗಳು ಮೈದುಂಬಿ ಹರಿಯುತ್ತಿವೆ.ಸಿರಿಗೆರೆ ಶ್ರೀಗಳು ಕೆರೆ ವೀಕ್ಷಣೆಗೆ ಆಗಮಿಸಲು ಸಮ್ಮತಿನೀಡಿದ್ದಾರೆ.ಮಾಜಿ ಶಾಸಕರು ಹಾಗೂ ಮುಖಂಡರನ್ನೊಳಗೊಂಡ 10 ಜನ ಸಿದ್ದತಾ ಸಮಿತಿ ರಚಿಸಿ ಕೆರೆ ವೀಕ್ಷಣೆ ಕಾರ್ಯಕ್ರಮದ ರೂಪರೇಶ ತಯಾರಿಸೋಣ.ಮುಕ್ತಾಯ ಸಮಾರಂಭವನ್ನು ಬಯಲುರಂಗಮಂದಿರದಲ್ಲಿ ಅದ್ದೂರಿಯಾಗಿ ಆಯೋಜಿಸೋಣ.ಭಕ್ತಸಮೂಹ ಪಕ್ಷಾತೀತವಾಗಿ ಅಧಿಕ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು’ ಎಂದು ಮನವಿಮಾಡಿದರು.

ಗುತ್ತಿಗೆದಾರರು ಕುಂಟುನೆಪಯೊಡ್ಡದೆ ನೀರು ಹರಿಸಿ:’ಹಗಲು ವೇಳೆ ಕೆರೆಗಳಿಗೆ ನೀರು ಹರಿಸಿ ರಾತ್ರಿವೇಳೆ ರೈತರು ವಾಲ್ ತಿರುಗಿಸುವ ಕುಂಟುನೆಪಯೊಡ್ಡಿ ನೀರು ಹರಿಸುವುದನ್ನು ತಡೆಹಿಡಿಯಬೇಡಿ.ಇದುವರೆಗೂ ಎಇಇ ಶ್ರೀಧರ್,ಕೆಳದರ್ಜೆಗುತ್ತಿಗೆದಾರರಾದ ಭೀಮಣ್ಣ,ಆನಂದಪ್ಪ,ಅವರ ಶ್ರಮ ಅಪಾರವಿದೆ.ರೈತರ ವಿಶ್ವಾಸ ಗಳಿಸಬೇಕು.ಮುಖ್ಯಗುತ್ತಿಗೆದಾರ ಶಂಕರ್ ಅವರ ಕಾರ್ಯವೈಖರಿ ಬೇಸರ ತಂದಿದೆ’ಎಂದು ಸೂಚಿಸಿದರು.

‘ಸಿಹಿ ಹಂಚಿ ಪಟಾಕಿ ಸಿಡಿಸಿ ಸಂಭ್ರಮಿಸಲಾಗಿದ್ದ ಭದ್ರಾಮೇಲ್ದಂಡೆ ಯೋಜನೆ ಕೇಂದ್ರ ಜಲನಿಗಮದಡಿ ರಾಷ್ಟ್ರೀಯ ಯೋಜನೆಗೆ ಸೇರ್ಪಡೆಗೊಂಡಿಲ್ಲ.ಕೇವಲ ರಾಜ್ಯ ಸರ್ಕಾರದ ಅನುದಾನದಡಿಯಲ್ಲಿ ₹200ಕೋಟಿ ವೆಚ್ಚದ ಕಾಮಗಾರಿ ಪ್ರಗತಿಯಲ್ಲಿದ್ದು. ₹130 ಕೋಟಿ ಹಣ ಬಿಡುಗಡೆಗೊಂಡಿದೆ.ಯೋಜನೆ ಸಾಕಾರಕ್ಕೆ ಸರ್ಕಾರದ ಮಟ್ಟದಲ್ಲಿ ಚರ್ಚಿಸಲಾಗಿದೆ’ಎಂದು ಭರವಸೆ ನೀಡಿದರು.

‘ತಾಲೂಕಿನ ಮಾಗಡಿ ಬಳಿ 20ಎಕರೆ ವ್ಯಾಪ್ತಿಯಲ್ಲಿ ಕೇಂದ್ರಿಯ ಏಕಲವ್ಯ ವಸತಿ ಶಾಲೆ ನಿರ್ಮಾಣಕ್ಕೆ ₹25ಕೋಟಿ ಅನುದಾನ ಬಿಡುಗಡೆಗೊಂಡಿದ್ದು.10ಎಕರೆ ಮಂಜೂರಾಗಿದೆ.ಉಳಿದ 10ಎಕರೆ ಜಾಗ ಕುರಿತು ಪ್ರಸ್ತಾವನೆ ಹಂತದಲ್ಲಿದೆ ಇಂದು ಜಿಲ್ಲಾಧಿಕಾರಿಗಳು ಜಗಳೂರಿಗೆ ಆಗಮಿಸಲಿದ್ದು ಚರ್ಚಿಸಿ ಅಗತ್ಯ ಕ್ರಮಕೈಗೊಳ್ಳಲಾಗುವುದು’ ಎಂದರು

ಮಾಜಿ ಶಾಸಕ ಎಚ್.ಪಿ.ರಾಜೇಶ್ ಮಾತನಾಡಿ,’ತರಳಬಾಳು ಹುಣ್ಣಿಮೆ ಕಾರ್ಯಕ್ರಮದಲ್ಲಿ ಭರಮಸಾಗರ ಹಾಗೂ ಜಗಳೂರು ಕೆರೆತುಂಬಿಸುವ ಯೋಜನೆಯ ಅವಳಿ ಕೂಸುಗಳು ಜನಿಸಿದ್ದು.ಮೂರು ಜನ ಮುಖ್ಯಮಂತ್ರಿ,ಮೂರುಜನ ಶಾಸಕರ ಕಾಳಜಿಯಿಂದ ಯೋಜನೆ ಸಾಕಾರಗೊಂಡು ತಾಲೂಕಿನ ಕೆರೆಗಳಿಗೆ ನೀರು ಹರಿದಿವೆ.ರಂಗಯ್ಯನದುರ್ಗ ಅರಣ್ಯ ಪ್ರದೇಶದ ಮಾಗಡಿ,ಅಗಸನಹಳ್ಳಿ,ಗುರುಸಿದ್ದಾಪುರ ಕೆರೆಗಳಿಗೆ ಇಲಾಖೆಯ ಕಾನೂನು ತೊಡಕಿನಿಂದ‌ ಮತ್ತು ತೊರೆಸಾಲು ಭಾಗದ ಕೆರೆಗಳಿಗೆ ರಾಷ್ಟ್ರೀಯ ಹೆದ್ದಾರಿ ಹಾದುಹೋಗಿರುವುದರಿಂದ ಪೈಪ್ ಲೈನ್ ಕಾಮಗಾರಿ ವಿಳಂಬವಾಗಿದ್ದು.ತ್ವರಿತಗತಿಯಲ್ಲಿ ಕಾಮಗಾರಿ ಪೂರ್ಣಗೊಳಿಸಲು ಶಾಸಕರು ಗಮನಹರಿಸಿದ್ದಾರೆ’ಎಂದು ತಿಳಿಸಿದರು.

ನೀರಾವರಿ ಇಲಾಖೆ ಎಇಇ ಶ್ರೀಧರ್ ಮಾತನಾಡಿ,’2022 ನೇ ಇಸ್ವಿಯಲ್ಲಿ ತುಪ್ಪದಹಳ್ಳಿ ಕೆರೆಗೆ,2023 ರಲ್ಲಿ 11 ಕೆರೆಗಳಿಗೆ,2024 ರಲ್ಲಿ ಒಟ್ಟಾರೆಯಾಗಿ 31‌ಕೆರೆಗಳಿಗೆ ನೀರು‌ಹರಿಸಲಾಗಿದೆ.ವಾರದೊಳಗೆ 7ಕೆರೆಗಳಿಗೆ ನೀರು ಹರಿಸಲಾಗುವುದು.ಒಟ್ಟು 8‌ಮೋಟಾರ್ ಗಳಲ್ಲಿ 4 ಮೋಟಾರ್ ಗಳು ಮಾತ್ರ ಕಾರ್ಯನಿರ್ವಹಿಸುತ್ತಿದ್ದು.ಪೈಪ್ ಲೈನ್ ಕಾಮಗಾರಿ ಪೂರ್ಣಗೊಂಡನಂತರ ಹಂತಹಂತವಾಗಿ ಹೆಚ್ಚುವರಿ ಮೋಟರ್ ಗೆ ಚಾಲನೆ ನೀಡಲಾಗುವುದು.ರೈತರು ಪೈಪ್ ಲೈನ್ ಕಾಮಗಾರಿಗೆ ಸಹಕರಿಸಬೇಕು.ಭದ್ರಾಅಚ್ಚುಕಟ್ಟು ಒಳಹರಿವು ಹೆಚ್ಚಾಗಿದ್ದು ಇನ್ನೂ 2ರಿಂದ 3‌ತಿಂಗಳು ನೀರಿನ ಕೊರತೆ ಉಂಟಾಗುವುದಿಲ್ಲ’ಎಂದು ಮಾಹಿತಿ‌ನೀಡಿದರು.

ಸಂದರ್ಭದಲ್ಲಿ ಕೆಪಿಸಿಸಿ ಎಸ್ ಟಿ ಘಟಕದ ರಾಜ್ಯ ಮುಖಂಡ ಕೆ.ಪಿ.ಪಾಲಯ್ಯ,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಷಂಷೀರ್ ಅಹಮ್ಮದ್,ಜೆಡಿಎಸ್ ಮುಖಂಡ ಕಲ್ಲೇರುದ್ರೇಶ್,ಮುಖಂಡರಾದ ವಕೀಲ ಕೆ.ಎಂ.ಬಸವರಾಜಪ್ಪ,ಶಿವಣ್ಣಗೌಡ, ಎಂ.ಎಸ್.ಪಾಟೀಲ್,ಓಂಕಾರಪ್ಪ,ಸಿರಿಗೆರೆ ನಾಗರಾಜ್,ಶಶಿಪಾಟೀಲ್,ಲೋಕೇಶ್,ಪರಮೇಶ್ವರಪ್ಪ,ಸುರೇಶ್ ಗೌಡ್ರು,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಷಂಷೀರ್ ಅಹಮ್ಮದ್.ಕಾಂಗ್ರೆಸ್ ಎಸ್ ಸಿ ಘಟಕದ ಅದ್ಯಕ್ಷ ಬಿ ಮಹೇಶ್,ಪಲ್ಲಾಗಟ್ಟೆ ಶೇಖರಪ್ಪ,ಚಂದ್ರನಾಯ್ಕ,ಸೇರಿದಂತೆ ಇದ್ದರು.

Leave a Reply

Your email address will not be published. Required fields are marked *

You missed

error: Content is protected !!