ಶಿಕ್ಷಕರು ಜೀವಂತ ಸುಂದರ ಮೂರ್ತಿಗಳನ್ನಾಗಿಸುವ ಶಿಲ್ಪಿಗಳು:ಶಾಸಕ.ಬಿ.ದೇವೇಂದ್ರಪ್ಪ ಬಣ್ಣನೆ.
ಜಗಳೂರು ಸುದ್ದಿ:’ಶಿಕ್ಷಕರು ಜೀವಂತ ವ್ಯಕ್ತಿಗಳನ್ನು ಸುಂದರ ಮೂರ್ತಿಯನ್ನಾಗಿಸುವ ಶಿಲ್ಪಿಗಳು’ ಎಂದು ಶಾಸಕ ಬಿ.ದೇವೇಂದ್ರಪ್ಪ ಬಣ್ಣಿಸಿದರು.
ಪಟ್ಟಣದ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರ 136 ನೇ ಜನ್ಮದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆ ಹಾಗೂ ನಿವೃತ್ತ ಶಿಕ್ಷಕರಿಗೆ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಮುಗ್ಧ ಮನಸ್ಸಿನ ಖಾಲಿಕೊಡದಂತಿರುವ ಮಕ್ಕಳಲ್ಲಿ ಶಿಕ್ಷಕರು ಉತ್ತಮ ಅಂಶಗಳನ್ನು ಭರಿಸಬೇಕು.ಗತಿಗೆಟ್ಟವರನ್ನು ಸರಿಪಡಿಸಬಹುದು ಮತಿಗೆಟ್ಟವರ ಪಾಲಿಗೆ ಶಿಕ್ಷಕರೇ ನೇರ ಜವಾಬ್ದಾರಿಯಾಗುತ್ತಾರೆ.ಒಬ್ಬ ವ್ಯಕ್ತಿಯ ಸೃಷ್ಠಿ,ಸ್ಥಿತಿ,ಲಯ ಶಿಕ್ಷಕರ ಕೈಯಲ್ಲಿದೆ’ ಎಂದು ಹೇಳಿದರು.
‘ಸಮಾಜದಲ್ಲಿ ವ್ಯಕ್ತಿಯು ಒಳಿತು,ಪ್ರಮಾದಗಳಲ್ಲಿ ತೊಡಗಿದಾಗ ಹೊಗಳಿಕೆ,ತೆಗಳಿಕೆಗೆ ಶಿಕ್ಷಕರೇ ಹೊಣೆಯಾಗುತ್ತಾರೆ.ಭವಿಷ್ಯದಲ್ಲಿ ದೇಶದ ನಿರ್ಮಾತೃಗಳನ್ನು ಸೃಷ್ಠಿಸುವ ಶಿಕ್ಷಕ ವರ್ಗ ಸನ್ಮಾರ್ಗದಲ್ಲಿ ನಡೆಯಬೇಕಿದೆ.ಶಿಕ್ಷಕರು ನಿರಂತರಕಲಿಕೆಯ ವಿದ್ಯಾರ್ಥಿಯಾಗಿರಬೇಕು.ಪಠ್ಯ ಮತ್ತು ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ದೈಹಿಕ ಹಾಗೂ ಮಾನಸಿಕವಾಗಿ ಸಕ್ರಿಯವಾಗಿ ತೊಡಗಿಕೊಳ್ಳಬೇಕು’ಎಂದು ಸಲಹೆ ನೀಡಿದರು.
ಎಸ್ ಎಸ್ ಎಲ್ ಸಿ ಫಲಿತಾಂಶಕ್ಕೆ ಆದ್ಯತೆನೀಡಿ:’ಶಿಕ್ಷಕರು ಕಳೆದ ವರ್ಷದ ಎಸ್ ಎಸ್ ಎಲ್ ಸಿ ಫಲಿತಾಂಶ ಕುಸಿತವನ್ನು ಮನಗಂಡು ಈ ಬಾರಿ ಉತ್ತಮ ಫಲಿತಾಂಶದತ್ತ ಗಮನಹರಿಸಬೇಕಿದೆ.ಇದೊಂದು ಸವಾಲಾಗಿದೆ’ಎಂದರು.
ಕೆಪಿಸಿಸಿ ಎಸ್ ಟಿ ಘಟಕದ ರಾಜ್ಯ ಮುಖಂಡ ಕೆ.ಪಿ.ಪಾಲಯ್ಯ ಮಾತನಾಡಿ,’ಬರ ಮತ್ತು ಬಡತಾಲೂಕಿನಲ್ಲಿ ಯಾವುದೇ ಆದಾಯದ ಮೂಲಗಳಿಲ್ಲ.ಶಿಕ್ಷಣವೇ ಭದ್ರ ಬುನಾದಿಯಾಗಿದ್ದು.ಕೌಶಲ್ಯಾಧಾರಿತ,ಉದ್ಯೋಗ,ಜೀವನ ರೂಪಿಸಿಕೊಳ್ಳುವ ಮೌಲ್ಯಾಧಾರಿತ ಶಿಕ್ಷಣಕ್ಕೆ ಶಿಕ್ಷಕರು ಮುಂದಾಗಬೇಕು’ಎಂದು ಹೇಳಿದರು.
ತಹಶೀಲ್ದಾರ್ ಸಯ್ಯದ್ ಕಲೀಂ ಉಲ್ಲಾ ಮಾತನಾಡಿ,’ಸಮಾಜದಲ್ಲಿ ಅಕ್ಷರ ಬೀಜ ಬಿತ್ತುವ ಮೂಲಕ ಶೈಕ್ಷಣಿಕ ಕೃಷಿ ಚಟುವಟಿಕೆಯಲ್ಲಿ ಸಕ್ರಿಯರಾದ ಉಜ್ವಲ ಭವಿಷ್ಯ ರೂಪಿಸುವ ಶಿಕ್ಷಕ ವೃತ್ತಿ ಪವಿತ್ರವಾದದ್ದು.ಇಂದಿನ ಮಕ್ಕಳು ಭವಿಷ್ಯದ ದೇಶದ ನಿರ್ಮಾತೃಗಳು’ ಎಂದರು.
:
ಬಿಇಓ ಹಾಲಮೂರ್ತಿ ಮಾತನಾಡಿ,’ಪ್ರಸಕ್ತಸಾಲಿನಲ್ಲಿ ಶಿಕ್ಷಕರಿಗೆ 7ನೇ ವೇತನ ಜಾರಿಗೊಂಡ ಹಿನ್ನೆಲೆ ಈ ಬಾರಿ ಅತ್ಯಂತ ಸಂಭ್ರಮ ಸಡಗರದಿಂದ ಆಚರಿಸಲಾಗುತ್ತಿದೆ.ಗುರುಗಳು ಗುರುತ್ವಾಕರ್ಷಣೆಬಲವಿದ್ದಂತೆ.ವಿದ್ಯಾರ್ಥಿಗಳಲ್ಲಿ ಕಲಿಕಾ ಆಕರ್ಷಣೆಗೊಳಿಸುವ ಮೂಲಕ ತಾಲೂಕಿನಲ್ಲಿ ಶೈಕ್ಷಣಿಕ ರಥ ಸುಗಮವಾಗಿ ಸಾಗಲು ಕೈಜೋಡಿಸುತ್ತಿರುವ ಶಿಕ್ಷಕ ವೃಂದಕ್ಕೆ ಶುಭಾಷಯಗಳು’.
ಉಪನ್ಯಾಸಕಿ ಸುಮತಿ ಜಯ್ಯಪ್ಪ ಉಪನ್ಯಾಸ ನೀಡಿದ ಅವರು,’ಉನ್ನತ ವ್ಯಾಸಂಗದೊಂದಿಗೆ ಉನ್ನತ ಹುದ್ದೆಗಳ ಕನಸು ಕಂಡಿರುವವರಿಗೆ ಎಲ್ಲಾ ಹುದ್ದೆಗಳಿಂದ ವಂಚಿತರಾದವರಿಗೆ ಲಭಿಸುವುದು ಶಿಕ್ಷಕ ವೃತ್ತಿ.ಪ್ರಾಚೀನಕಾಲದಿಂದಲೂ ಶಿಕ್ಷಕ ವೃತ್ತಿಗೆ ಸೂಕ್ತ ಸ್ಥಾನಮಾನ ಗೌರವವಿದೆ.ಶಿಕ್ಷಕರು ಸ್ಥಾನಮಾನ ಉಳಿಸಿಕೊಳ್ಳಬೇಕಿದೆ.ತಂತ್ರಜ್ಞಾನ ಆಧಾರಿತ ಶಿಕ್ಷಣಕ್ಕೆ ಶಿಕ್ಷಕರು ಹೊಂದಾಣಿಕೆಯಾಗಬೇಕು’ ಎಂದು ಕಿವಿಮಾತು ಹೇಳಿದರು.
ಇದೇ ವೇಳೆ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕಗಳಿಸಿದ ಪ್ರತಿಭಾವಂತರಿಗೆ ಪ್ರತಿಭಾಪುರಸ್ಕರಿಸಲಾಯಿತು.57 ಜನ ನಿವೃತ್ತ ಶಿಕ್ಷಕರಿಗೆ ಹಾಗೂ ಜಿಲ್ಲಾಮಟ್ಟದ ಅತ್ಯುತ್ತಮ ಶಿಕ್ಷಕರ ಪ್ರಶಸ್ತಿಗೆ ಭಾಜನರಾದ 4 ಜನರಿಗೆ ಸನ್ಮಾನಿಸಲಾಯಿತು.
ಸಂದರ್ಭದಲ್ಲಿ ತಾ.ಪಂ.ಇಓ ಕೆಂಚಪ್ಪ,ಪ.ಪಂ ಮುಖ್ಯಾಧಿಕಾರಿ ಲೋಕ್ಯಾನಾಯ್ಕ,ನೌಕರರ ಸಂಘದ ತಾಲೂಕು ಅಧ್ಯಕ್ಷ ಸಿ.ಬಿ.ನಾಗರಾಜ್,ಬಿಆರ್ ಸಿ ಡಿಡಿ.ಹಾಲಪ್ಪ,ಪಿಎಲ್ ಡಿ ಬ್ಯಾಂಕ್ ಅಧ್ಯಕ್ಷೆ ವೀಣಾಗೋಗುದ್ದು ರಾಜ್,ಸಮಾಜ ಕಲ್ಯಾಣ ಇಲಾಖೆ ನಿವೃತ್ತ ಸಹಾಯಕ ನಿರ್ದೇಶಕ ಬಿ. ಮಹೇಶ್ವರಪ್ಪ,ಉಪನ್ಯಾಸಕ ಎಎಲ್ ತಿಪ್ಪೇಸ್ವಾಮಿ,ಸತೀಶ್,ಅಂಜಿನಿನಾಯ್ಕ,ಪ.ಪಂ ಸದಸ್ಯರಾದ ಲಲಿತಶಿವಣ್ಣ,ಲುಕ್ಮಾನ್ ಖಾನ್,ಮುಖಂಡರಾದ ಪಲ್ಲಾಗಟ್ಟೆ ಶೇಖರಪ್ಪ,ಗೌಸ್ ಪೀರ್,ಸೇರಿದಂತೆ ಉಪಸ್ಥಿತರಿದ್ದರು.
