ನಿರಾಶ್ರಿತರಿಗೆ ಶಾಶ್ವತ ಸೂರಿನ ಪರಿಹಾರ:ಶೀಘ್ರದಲ್ಲಿಯೇ ಹಿಂಗಾರು ಬೆಳೆ ಪರಿಹಾರ:ಕೃಷ್ಣಬೈರೇಗೌಡ ಭರವಸೆ
ಜಗಳೂರು ಸುದ್ದಿ:’
ಹಿರೇಮಲ್ಲನಹೊಳೆ ಕೆರೆ ಅಂಗಳ ಮತ್ತು ಹಿಂಗಾರು ಮಳೆ ಹಾನಿಗೊಳಗಾದ ನಿರಾಶ್ರಿತರಿಗೆ ತಲಾ ₹1ಲಕ್ಷ ಪರಿಹಾರ ಹಾಗೂ ಸರ್ಕಾರಿ ಜಮೀನಿನಲ್ಲಿ ನಿವೇಶನ,ಸೂರು ಕಲ್ಪಿಸಿ ಶಾಶ್ವತ ಪರಿಹಾರ ಕಲ್ಪಿಸುವಂತೆ’ಜಿಲ್ಲಾಧಿಕಾರಿಗಳಿಗೆ ರಾಜ್ಯ ಕಂದಾಯ ಸಚಿವ ಕೃಷ್ಣಬೈರೇಗೌಡ ಸೂಚಿಸಿದರು.
ತಾಲೂಕಿನ ಹಿರೇಮಲ್ಲನಹೊಳೆ ಗ್ರಾಮದ ಕೆರೆ ಅಂಗಳದಲ್ಲಿ ನೀರು ನುಗ್ಗಿರುವ ಮತ್ತು ಭಾರಿ ಮಳೆಗೆ ಕುಸಿತಗೊಂಡ ಮನೆಗಳನ್ನು ಹಾಗೂ ಜಲಾವೃತಗೊಂಡ ಜಮೀನಿನಲ್ಲಿನ ಬೆಳೆಗಳನ್ನು ವೀಕ್ಷಿಸಿ ನಂತರ ಅವರು ಮಾತನಾಡಿದರು.
‘ರಾಜ್ಯದಲ್ಲಿ 166ಮಿಮೀ ಹಿಂಗಾರು ಮಳೆಯಾಗಿದ್ದು ವಾಡಿಕೆಗಿಂತ ಶೇ.61 ರಷ್ಟು ಅಧಿಕ ಪ್ರಮಾಣ ಮಳೆಯಾಗಿದೆ.ಬಯಲು ಸೀಮೆ ಅದರಲ್ಲೂ ದಾವಣಗೆರೆ ಜಿಲ್ಲೆಯಾದ್ಯಂತ ಅಧಿಕ ಮಳೆ ಅಪರೂಪದ ಮಳೆಯಾಗಿದೆ.ಇದರಿಂದ ರಾಜ್ಯದಲ್ಲಿ ನೀರಿನಲ್ಲಿ 4ಜನ ಕೊಚ್ಚಿಹೋಗಿ,ಮಿಂಚಿಗೆ ಆಹುತಿಯಾಗಿ 9ಜನ ಸಾವನ್ನಪ್ಪಿದ್ದು.6ಕಡೆ ಮನೆ ಕುಸಿತ ಸೇರಿದಂತೆ 21 ಜನ ಪ್ರಾಣ ಕಳೆದುಕೊಂಡಿದ್ದಾರೆ.120 ಮನೆಗಳು ಹಾನಿಗೊಳಗಾಗಿವೆ.₹666 ಕೋಟಿ ಅನುದಾನ ಹಿಂಗಾರು ಹಾನಿ ಪರಿಹಾರಕ್ಕೆ ಮೀಸಲಿರಿಸಲಾಗಿದೆ ಆಯಾ ಜಿಲ್ಲಾಧಿಕಾರಿಗಳು ಸಕಾಲದಲ್ಲಿ ಪರಿಹಾರ ನೀಡುತ್ತಾರೆ’ಎಂದು ಮಾಹಿತಿ ನೀಡಿದರು.
ಕೇಂದ್ರ ಸರ್ಕಾರದಿಂದ ಅಧಿಕ ಹಿಂಗಾರು ಪರಿಹಾರ ಅನುದಾನದ ನಿರೀಕ್ಷೆ:
‘ಹಿಂಗಾರು ಹಾನಿಗೆ ರಾಜ್ಯದಲ್ಲಿ ಒಟ್ಟು 56,993ಹೆಕ್ಟರ್ ಪ್ರದೇಶ ಬೆಳೆಹಾನಿ ಅಂದಾಜಿಸಲಾಗಿದೆ.ಸರ್ವೆ ಕಾರ್ಯ ಪ್ರಕ್ರಿಯೆಯಲ್ಲಿದೆ.ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ವಾರದೊಳಗೆ ಕೃಷಿ,ಕಂದಾಯ,ತೋಟಗಾರಿಕೆ ಇಲಾಖೆಗಳ ಸಚಿವರ,ಅಧಿಕಾರಿಗಳ ಜಂಟಿ ಸಭೆ ಕರೆದು 15 ದಿನಗಳೊಳಗೆ ಹಿಂಗಾರು ಬೆಳೆಪರಿಹಾರ ಒದಗಿಸಲಾಗುವುದು.ಹಿಂಗಾರು ಬೆಳೆಪರಿಹಾರಕ್ಕೆ ಅನುದಾನ ಸಾಲುತ್ತಿಲ್ಲ.ಆದ್ದರಿಂದ ಪರಿಷ್ಕೃತಕ್ಕೆ ವ್ಯಾಪಕ ಒತ್ತಡವಿದ್ದು ಕೇಂದ್ರ ಸರ್ಕಾರಕ್ಕೆ ಕಳೆದ 8 ತಿಂಗಳಿನಿಂದ ಮನವಿಮಾಡಲಾಗುತ್ತಿದೆ.ಅನುದಾನ ಬಿಡುಗಡೆಯ ನಿರೀಕ್ಷೆಯಲ್ಲಿದ್ದೇವೆ’.ಎಂದು ತಿಳಿಸಿದರು.
‘ರಾಜ್ಯದಲ್ಲಿ ನಮ್ಮ ನೂತನ ಸರ್ಕಾರದ ಆಡಳಿತಾವಧಿಯಲ್ಲಿ ತಾಂಡಾ,ಹಟ್ಟಿಗಳನ್ನೊಳಗೊಂಡಂತೆ ಒಟ್ಟು 1500 ಹೊಸಕಂದಾಯ ಗ್ರಾಮಗಳನ್ನಾಗಿಸಲಾಗಿದೆ.ತಾಲೂಕಿನಲ್ಲಿ ವಿಂಡ್ ಫ್ಯಾನ್ ಸೋಲಾರ್ ಕಂಪನಿಗಳಿಂದ ಸರ್ಕಾರಿ ಗೊಮಾಳ ಜಮೀನುಗಳ ಆಕ್ರಮಣದ ದೂರುಕೇಳಿಬಂದಿದ್ದು.ಸಮಿತಿ ರಚಿಸಿ ಕಾನೂನು ಕ್ರಮಕೈಗೊಳ್ಳಲು ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ’. ಎಂದರು.
ವಿಂಡ್ ಫ್ಯಾನ್ ಬಗ್ಗೆ ಇಂಧನ ಸಚಿವರನ್ನು ಕೇಳಿ:ವಿಂಡ್ ಫ್ಯಾನ್ ಹಾವಳಿ ಕುರಿತು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು ರಾಜ್ಯದಲ್ಲಿ ರೈತರಿಂದ ವ್ಯಾಪಕ ವಿದ್ಯುತ್ ಬೇಡಿಕೆಯಿದೆ.ಉತ್ಪಾದನೆಗೆ ಸೊಲಾರ್ ಕಂಪನಿಗಳು,ಪವನ ವಿದ್ಯುತ್ ಸ್ಥಾವರಗಳು ಸ್ಥಾಪಿತಗೊಳ್ಳುತ್ತಿವೆ ಇದರ ಬಗ್ಗೆ ಇಂಧನ ಸಚಿವರಿಗೆ ಪ್ರಶ್ನಿಸಿ ಎಂದು ಹೇಳಿ ನುಣುಚಿಕೊಂಡರು.ಆದರೆ ಭೂ ಪರಿವರ್ತನೆ ಗೊಳ್ಳುವುದು ಕಂದಾಯ ಇಲಾಖೆಯಿಂದ ಎಂಬುದನ್ನು ತಳ್ಳಿಹಾಕಿದ ಜಾಣನಡೆ ಸ್ಥಳೀಯ ರೈತ ಮುಖಂಡರುಗಳ ಹಾಗೂ ರೈತರ ಆಕ್ರೋಶಕ್ಕೆ ಕಾರಣವಾಯಿತು’.
‘ರಾಜ್ಯ ಕಂದಾಯ ಸಚಿವರಿಗೆ ಕೆಲದಿನಗಳ ಹಿಂದೆ ತಾಲೂಕಿನಲ್ಲಿ ಕೆರೆಕೋಡಿಬಿದ್ದಿರುವ ಹಾಗೂ ಅತಿವೃಷ್ಟಿಯಿಂದ ಮನೆಹಾನಿ,ಬೆಳೆಹಾನಿ ಕುರಿತು ಮಾಹಿತಿ ನೀಡಲಾದ ಹಿನ್ನೆಲೆ ಸ್ಪಂದಿಸಿ ಇಂದು ಕ್ಷೇತ್ರಕ್ಕೆ ಆಗಮಿಸಿರುವುದು ಪರಿಹಾರದ ಭರವಸೆ ಈಡೇರಿದೆ.ಕ್ಷೇತ್ರದಲ್ಲಿ ರೈತರ,ಸಾರ್ವಜನಿಕರ ಪರವಾಗಿದ್ದು ಸಮಗ್ರ ಅಭಿವೃದ್ದಿಗೆ ಒತ್ತುನೀಡುವೆ.’
—– ಶಾಸಕ.ಬಿ.ದೇವೇಂದ್ರಪ್ಪ, ಜಗಳೂರು
ಸಂದರ್ಭದಲ್ಲಿ ಜಿಲ್ಲಾಧಿಕಾರಿ ಡಾ.ಗಂಗಾಧರಸ್ವಾಮಿ,ಎಡಿಸಿ ಲೋಕೇಶ್,ಕೃಷಿ ಇಲಾಖೆ ಜಂಟಿ ನಿರ್ದೇಶಕ ಶ್ರೀನಿವಾಸ್ ಚಿಂತಾಲ್,ತೋಟಗಾರಿಕೆ ಇಲಾಖೆ ಉಪನಿರ್ದೇಶಕ ರಾಘವೇಂದ್ರ ಪ್ರಸಾದ್, ತಹಶೀಲ್ದಾರ್ ಸಯ್ಯದ್ ಕಲೀಂ ಉಲ್ಲಾ,ತಾಲೂಕು ಕೃಷಿ ಇಲಾಖೆ ಎಡಿ ಶ್ವೇತಾ,ತೋಟಗಾರಿಕೆ ಇಲಾಖೆ ಎಡಿ ಪ್ರಭುಶಂಕರ್,ವಿವಿಧ ಇಲಾಖೆಗಳ ಎಇಇಗಳಾದ ಸಾಧಿಕ್ ಉಲ್ಲಾ,ಶಿವಕುಮಾರ್,ಸುಧಾಮಣಿ,ಸೇರಿದಂತೆರಾಜ್ಯಮಟ್ಟದ ಅಧಿಕಾರಿಗಳು,ಮುಖಂಡರುಗಳು ಇದ್ದರು.