ದಾವಣಗೆರೆ ಜಿಲ್ಲಾ ಸುದ್ದಿ
ನ್ಯಾಒಳಮೀಸಲಾತಿ ಜಾರಿಗೆ ಸಿಕ್ಕಿದೆ ಚಾಲನೆ
ಜಾತಿಗಣತಿ ವರದಿ ವಿರೋಧಕ್ಕೆ ಬೇಡ ಮನ್ನಣೆ
ಮಾಜಿ ಸಚಿವ ಎಚ್.ಆಂಜನೇಯ ಹೇಳಿಕೆ
ದಾವಣಗೆರೆ, ನ.15:
ಅಸ್ಪೃಶ್ಯತೆ ನೋವು, ಸೌಲಭ್ಯಗಳ ಮರಿಚೀಕೆ, ಕೈಗೆಟುಕದ ಮೀಸಲಾತಿ ಹೀಗೆ ಅನೇಕ ಸಮಸ್ಯೆಗಳ ಸುಳಿಗೆ ಸಿಲುಕಿದ್ದ ಮಾದಿಗ ಮತ್ತು ಸಹೋದರ ಜಾತಿಗಳಿಗೆ ಒಳಮೀಸಲಾತಿ ವರವಾಗಿ ಪರಿಣಮಿಸಲಿದೆ ಎಂದು ಮಾಜಿ ಸಚಿವ ಎಚ್.ಆಂಜನೇಯ ಹೇಳಿದರು.
ನಗರದಲ್ಲಿ ಶುಕ್ರವಾರ ಜಿಲ್ಲಾ ವರದಿಗಾರರ ಕೂಟದಲ್ಲಿ ಆಯೋಜಿಸಲಾಗಿದ್ದ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು, ಮೂರು ದಶಕಗಳ ಹೋರಾಟದ ಫಲ ಹಾಗೂ ಎಲ್ಲ ಪಕ್ಷಗಳ ಸರ್ಕಾರಗಳ ಸಹಕಾರ-ಬದ್ಧತೆ ಕಾರಣಕ್ಕೆ ಪರಿಶಿಷ್ಟ ಜಾತಿ ಗುಂಪಿನಲ್ಲಿ ಒಳಮೀಸಲಾತಿ ಜಾರಿಗೊಳಿಸುವ ಸಂದರ್ಭ ಎದುರಾಗಿದೆ. ಅದರಲ್ಲೂ ಒಳಮೀಸಲಾತಿ ಜಾರಿಗೊಳಿಸುವ ಅಧಿಕಾರ ರಾಜ್ಯ ಸರ್ಕಾರಗಳಿಗೆ ಇದೆ ಎಂಬ ಸುಪ್ರೀಂ ಕೋರ್ಟ್ ತೀರ್ಪು ಮಾದಿಗ ಸಮುದಾಯದ ಸಮಗ್ರ ಪ್ರಗತಿಗೆ ರಹದಾರಿ ಆಗಿದೆ ಎಂದರು.
ಈಗ ಕೋರ್ಟ್ ತೀರ್ಪು ಬಳಿಕ ರಾಜ್ಯ ಸರ್ಕಾರದ ಅಂಗಳಕ್ಕೆ ಸಾಮಾಜಿಕ ನ್ಯಾಯ ಕಲ್ಪಿಸುವ ಅಧಿಕಾರದ ಚೆಂಡು ಬಂದಿದೆ.ಅದರಲ್ಲೂ ಅಹಿಂದ ನಾಯಕ, ಸಾಮಾಜಿಕ ನ್ಯಾಯದ ಹರಿಕಾರವೆಂಬ ಹೆಗ್ಗಳಿಕೆ ಹೊಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ವಿಷಯದಲ್ಲಿ ದಿಟ್ಟ ನಿರ್ಧಾರ ಕೈಗೊಂಡು ಒಳಮೀಸಲಾತಿ ಜಾರಿಗೊಳಿಸಿ, ದಲಿತರ ಕಣ್ಮಣಿ ಆಗುವ ಅವಕಾಶ ನೀಡಿದೆ ಎಂದು ತಿಳಿಸಿದರು.
ಸಿದ್ದರಾಮಯ್ಯ ಈ ವಿಷಯದಲ್ಲಿ ಯಾರ ಒತ್ತಡಕ್ಕೂ ಮಣಿಯದೆ ಒಳಮೀಸಲಾತಿ ಜಾರಿಗೊಳಿಸುವ ನಿರ್ಣಯ ಕೈಗೊಂಡಿದ್ದು, ಅದರ ಮೊದಲ ಹೆಜ್ಜೆಯಾಗಿ ದತ್ತಾಂಶ (ಎಂಪಿರಿಕಲ್ ಡಾಟ) ಸಂಗ್ರಹಕ್ಕೆ ಆಯೋಗ ರಚಿಸಿ, ಅಧ್ಯಕ್ಷರನ್ನಾಗಿ ನ್ಯಾ.ನಾಗಮೋಹನ್ ದಾಸ್ ಅವರನ್ನು ನೇಮಕ ಮಾಡಿರುವುದು ಪರಿಶಿಷ್ಟ ಸಮುದಾಯದಲ್ಲಿ ಆಶಾಕಿರಣ ಮೂಡಿಸಿದೆ ಎಂದು ಹೇಳಿದರು.
ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಹೆಚ್ಚಳ ಮಾಡಬೇಕೆಂಬ ಹೋರಾಟದ ಪರಿಣಾಮ ಈ ಹಿಂದೆ ರಚನೆಗೊಂಡಿದ್ದ ನಾಗಮೋಹನ್ ದಾಸ್ ನೇತೃತ್ವದ ಆಯೋಗ ಎಸ್ಸಿಗೆ 15ರಿಂದ 17, ಎಸ್ಟಿಗೆ 3ರಿಂದ ಶೇ.7 ಒಟ್ಟು 18ರಿಂದ ಶೇ.24ಕ್ಕೆ ಎಸ್ಸಿ-ಎಸ್ಟಿ ಮೀಸಲಾತಿ ಪ್ರಮಾಣ ಏರಿಕೆಗೊಂಡಿತು. ಆದ್ದರಿಂದ ಸಾಮಾಜಿಕ, ಜಾತಿ ವ್ಯವಸ್ಥೆ, ಹಿಂದುಳಿದ ವರ್ಗದ ಜನರ ಕುರಿತು ಹೆಚ್ಚು ಕಾಳಜಿ ಹೊಂದಿರುವ ನಾಗಮೋಹನ್ ದಾಸ್ ನೇಮಕ ಅತ್ಯಂತ ಉತ್ತಮ ನಿರ್ಧಾರವಾಗಿದೆ ಎಂದರು.
ರಾಜ್ಯದ ಎಲ್ಲೆಡೆಯೂ ಮಾದಿಗ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿದ್ದು, ಕೆಲವು ಜಿಲ್ಲೆಗಳಲ್ಲಿ ಮಾದಿಗ ಹಾಗೂ ಛಲವಾದಿ ಸಮುದಾಯದವರು ಆದಿಕರ್ನಾಟಕ ಎಂದು ಗುರುತಿಸಿಕೊಂಡಿದ್ದು, ಗೊಂದಲ ಉಂಟು ಮಾಡಿದೆ. ಆದ್ದರಿಂದ ನಾಗಮೋಹನ್‍ದಾಸ್ ಅವರು ಈ ವಿಷಯದಲ್ಲಿ ಆಳವಾದ ಅಧ್ಯಯನ ನಡೆಸಿ, ಮಾದಿಗ ಮತ್ತು ಅದರ ಉಪ ಜಾತಿಗಳನ್ನು ಗುರುತಿಸುವ ಕೆಲಸ ಮಾಡುವ ಮೂಲಕ ನೊಂದ ಜನರಿಗೆ ನ್ಯಾಯ ಒದಗಿಸುವ ವಿಶ್ವಾಸ ಇದೆ ಎಂದು ಹೇಳಿದರು.
2011ರಲ್ಲಿ ಕೇಂದ್ರ ಸರ್ಕಾರ ನಡೆಸಿದ ಜನಗಣತಿ ಅಂಕಿ ಅಂಶ ಹಾಗೂ ಎಲ್.ಜಿ.ಹಾವನೂರು, ನ್ಯಾ.ಸದಾಶಿವ, ಕಾಂತರಾಜ್ ಆಯೋಗದ ವರದಿಗಳನ್ನು ಅಧ್ಯಯನ ನಡೆಸಿದರೆ ದತ್ತಾಂಶ ಮಾಹಿತಿ ದೊರೆಯಲಿದೆ. ಜತೆಗೆ ಒಳಮೀಸಲಾತಿ ಜಾರಿಗೆ ಇರುವ ಸಣ್ಣಪುಟ್ಟ ಅಡ್ಡಿಗಳನ್ನು ತಕ್ಷಣ ನಿವಾರಿಸಬಹುದು ಎಂದರು.
ಬ್ರಿಟಿಷರ ಕಾಲದಲ್ಲಿ ಆಗಿದ್ದ ಹಾಗೂ 100 ವರ್ಷದ ನಂತರ ಸ್ವತಂತ್ರ ಭಾರತದಲ್ಲಿಯೇ ಮೊದಲ ಬಾರಿಗೆ ಸಿದ್ದರಾಮಯ್ಯ ಸರ್ಕಾರ, ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ನಡೆಸುವ ನಿರ್ಧಾರ ಅಂದು ಸಮಾಜ ಕಲ್ಯಾಣ ಸಚಿವನಾಗಿದ್ದ ಸಂದರ್ಭ ನಾನು ಹೆಚ್ಚು ಕಾಳಜಿಯಿಂದ ವರದಿ ತಯಾರಿಸಲಾಗಿತ್ತು. ಇದು ದೇಶದಲ್ಲಿಯೇ ಐತಿಹಾಸಿಕ ನಿರ್ಧಾರವಾಗಿದೆ ಎಂದರು.
ಈ ನಿಟ್ಟಿನಲ್ಲಿ ಕಾಂತರಾಜ್ ಆಯೋಗ ನಡೆಸಿದ ಸಮೀಕ್ಷೆಯಲ್ಲಿ 1 ಲಕ್ಷದ 50 ಸಾವಿರ ಶಿಕ್ಷಕರು ಪಾಲ್ಗೊಂಡಿದ್ದು, ತಹಸೀಲ್ದಾರ್, ಜಿಲ್ಲಾಧಿಕಾರಿಗಳು, ಅನೇಕ ಐಎಎಸ್ ಅಧಿಕಾರಿಗಳು ಮೇಲುಸ್ತುವಾರಿ ವಹಿಸಿದ್ದಾರೆ. ಇದಕ್ಕಾಗಿ ರಾಜ್ಯ ಸರ್ಕಾರ ಅಂದಾಜು 180 ಕೋಟಿ ರೂ. ವೆಚ್ಚ ಮಾಡಿ ಅತ್ಯಂತ ವೈಜ್ಞಾನಿಕವಾಗಿ ವರದಿ ಸಿದ್ದಪಡಿಸಿದೆ. ಪ್ರತಿ ಮನೆ ಮನೆಗೆ ಭೇಟಿ ನೀಡಿ ಸಂಪೂರ್ಣ ಮಾಹಿತಿ ಸಂಗ್ರಹಿಸಿದೆ.
ಈ ವರದಿ ಎಲ್ಲ ವರ್ಗದಲ್ಲಿನ ನೊಂದ ಜನರಿಗೆ ಸರ್ಕಾರದ ಸೌಲಭ್ಯವನ್ನು ತಲುಪಿಸಲು ಬುನಾದಿ ಆಗಲಿದೆ. ಅದರಲ್ಲೂ ಅನೇಕ ಯೋಜನೆಗಳನ್ನು ಸರ್ಕಾರ ರೂಪಿಸಲು ಸಹಕಾರಿ ಆಗಲಿದೆ. ಮೀಸಲಾತಿ, ಸೌಲಭ್ಯ ಹಂಚಿಕೆ ವೇಳೆ ಯಾವ ಆಧಾರದ ಮೇಲೆ ಇದನ್ನು ಜಾರಿಗೊಳಿಸಿದ್ದೀರಾ, ನಿಮ್ಮಲ್ಲಿ ಏನಾದ್ರೂ ಅಂಕಿ-ಅಂಶಗಳು ಇವೆಯೇ ಎಂದು ಪದೇ ಪದೆ ಕೋರ್ಟ್ ಪ್ರಶ್ನೇಗೆ ಕಾಂತರಾಜ್ ಆಯೋಗದ ವರದಿ ಉತ್ತರವಾಗಲಿದೆ ಎಂದರು.
ಕಾಂತರಾಜ್ ಆಯೋಗ ಅತ್ಯಂತ ವೈಜ್ಞಾನಿಕವಾಗಿ ತಯಾರಿಸಿರುವ ವರದಿ ಕುರಿತು ಯಾವುದೇ ರೀತಿ ಟೀಕೆ, ಆರೋಪ, ಬೆದರಿಕೆ, ವಿರೋಧ ವ್ಯಕ್ತವಾದರೂ ಸಿದ್ದರಾಮಯ್ಯ ಜಗ್ಗಬಾರದು. ವರದಿಯನ್ನು ಸಚಿವ ಸಂಪುಟದಲ್ಲಿ ಮಂಡಿಸಿ, ಚರ್ಚಿಸಿ ವರದಿಯನ್ನು ಬಹಿರಂಗಪಡಿಮಂಡಿಸಬೇಕು. ಬಳಿಕ ಸಣ್ಣಪುಟ್ಟ ಲೋಪಗಳಿದ್ದರೆ ಸರಿಪಡಿಸಬಹುದು. ಈ ಮೂಲಕ ಸಾಮಾಜಿಕ ನ್ಯಾಯ ಕಲ್ಪಿಸಬೇಕು ಎಂದು ಆಗ್ರಹಿಸಿದರು.
ನೂರಾರು ವರ್ಷಗಳಿಂದಲೂ ಸಾಮಾಜಿಕ ನ್ಯಾಯ ಕಲ್ಪಿಸುವ ಸಂದರ್ಭ ಆಡಳಿತದ ವಿರುದ್ಧ ಕೆಲವರು ತಿರುಗಿಬಿದ್ದಿದ್ದಾರೆ. ಸಾಹು ಮಹಾರಾಜ್, ನಾಲ್ವಡಿ ಕೃಷ್ಣರಾಜ ಒಡೆಯರ್, ವಿ.ಪಿ.ಸಿಂಗ್, ದೇವರಾಜ ಅರಸು ಸೇರಿ ಅನೇಕರ ಕಾಲದಲ್ಲಿ ನೊಂದ ಜನರಿಗೆ ಮೀಸಲಾತಿ ಕೊಡಲು ಅಡ್ಡಿಗಳು ಎದುರಾಗಿವೆ. ಆದರೂ ಅವರು ಯಾವುದೇ ಒತ್ತಡ, ಪ್ರತಿಭಟನೆಗಳಿಗೆ ಬೆದರದೆ ಹಕ್ಕು ಕಲ್ಪಿಸಿದ್ದಾರೆ ಎಂದರು.
ಅದೇ ಹಾದಿಯಲ್ಲಿ ಸಾಮಾಜಿಕ ನ್ಯಾಯದ ಹರಿಕಾರ ಸಿದ್ದರಾಮಯ್ಯ ಸಾಗುತ್ತಾರೆಂಬ ವಿಶ್ವಾಸ ಇದೆ. ಈಗಾಗಲೇ ಹಲವರು ಬಾರಿ ಅವರು ತಮ್ಮ ಮಾತು, ನಡೆ ಮೂಲಕ ದೃಢಪಡಿಸಿದ್ದು, ನಾನೇ ಒಳಮೀಸಲಾತಿ ಜಾರಿಗೊಳಿಸುವುದು ಹಾಗೂ ಯಾವುದೇ ಟೀಕೆ ಬಂದರೂ ಜಾತಿಗಣತಿ ವರದಿ ಜಾರಿ ಸಿದ್ಧವೆಂಬ ಹೇಳಿಕೆ ಎಲ್ಲ ವರ್ಗದ ಜನರಲ್ಲಿ ಅದಮ್ಯ ವಿಶ್ವಾಸ ಮೂಡಿಸಿದೆ. ಜತೆಗೆ ಒಳಮೀಸಲಾತಿ ಜಾರಿಗೆ ನ್ಯಾ.ನಾಗಮೋಹನ್ ದಾಸ್ ಅವರನ್ನು ನೇಮಕ ಮಾಡಿರುವುದು ಅತ್ಯಂತ ಗಟ್ಟಿ ನಿರ್ಧಾರವಾಗಿದೆ ಎಂದÀರು.
ವಿರೋಧ ಮಾಡುವವರು ಕಾರಣ ಕೊಡಬೇಕು
ಅನಗತ್ಯವಾಗಿ ಟೀಕೆ, ಆರೋಪ ಮಾಡುವುದು ಸರಿಯಲ್ಲ. ಸರ್ಕಾರದ ಅಡಿಯಲ್ಲಿ ಲಕ್ಷಕ್ಕೂ ಹೆಚ್ಚು ಸರ್ಕಾರಿ ನೌಕರರು, ಶಿಕ್ಷಕರು, ಜಿಲ್ಲಾಧಿಕಾರಿಗಳು, ತಹಸೀಲ್ದಾರ್‍ಗಳು ಸೇರಿ ಅನೇಕರು ಕಾರ್ಯನಿರ್ವಹಿಸಿದ್ದಾರೆ. ಅವರ ಶ್ರಮವನ್ನು ಗೌರವಿಸಬೇಕು ಎಂದು ಎಚ್.ಆಂಜನೇಯ ಒತ್ತಾಯಿಸಿದರು.
ವರದಿ ಬಹಿರಂಗಗೊಂಡ ಬಳಿಕ ವಿರೋಧ ಮಾಡುವವರು ತಪ್ಪುಗಳನ್ನು ಗುರುತಿಸಿ ಹೇಳಲಿ. ಇಂತಹ ಪ್ರದೇಶದಲ್ಲಿ ಸರ್ವೇ ಆಗಿಲ್ಲ ಎಂದು ಹೇಳಲಿ. ಆಗ ಅದು ಸತ್ಯವೇ ಅಗಿದ್ದರೇ ಆ ಪ್ರದೇಶದಲ್ಲಿ ಮರು ಸಮೀಕ್ಷೆ ನಡೆಸಲು ಸರ್ಕಾರಕ್ಕೆ ಒತ್ತಡ ಹಾಕೋಣಾ. ಈ ಸಂಬಂಧ ನಾವೆಲ್ಲರೂ ಬೆಂಬಲವಾಗಿ ನಿಲ್ಲುತ್ತೇವೆ ಎಂದರು.
ವರದಿ ಬಹಿರಂಗಕ್ಕೆ ಮುನ್ನವೇ ಅನಗತ್ಯವಾಗಿ ವಿರೋಧ ಮಾಡಿದರೇ ನಾವು ಸಹಿಸುವುದಿಲ್ಲ. ಅತ್ಯಂತ ವೈಜ್ಞಾನಿಕವಾಗಿ ತಯಾರಿಸಿರುವ ವರದಿ ಸ್ವೀಕಾರ, ಮಂಡನೆ, ಬಹಿರಂಗೊಳಿಸುವುದು ತುರ್ತು ಅಗತ್ಯವಿದೆ. ಅದರಲ್ಲೂ ಈ ವಿಷಯದಲ್ಲಿ ಕೋರ್ಟ್ ಕೇಳುತ್ತಿದ್ದ ಅನೇಕ ಪ್ರಶ್ನೇಗಳಿಗೆ ಉತ್ತರ ಕಂಡುಕೊಳ್ಳಬಹುದಾಗಿದೆ ಎಂದು ಅಭಿಪ್ರಾಯಪಟ್ಟರು.
ಪತ್ರಿಕಾಗೋಷ್ಠಿಯಲ್ಲಿ ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ, ಮಹಾನಗರಪಾಲಿಕೆ ಮಾಜಿ ಸದಸ್ಯ ಎಸ್.ಮಲ್ಲಿಕಾರ್ಜುನ್, ದಲಿತ ಮುಖಂಡ ಹೀರಣ್ಣಯ್ಯ, ಅಂಜಿನಪ್ಪ ಮತ್ತಿತರರಿದ್ದರು.