ರಾಜ್ಯದ ಸಾಮಾಜಿಕ ಕಳಕಳಿಯ ನ್ಯಾಯಪರ ಮಾಧ್ಯಮ ಆಂದೋಲನವನ್ನು ಪ್ರಾರಂಭಿಸಿರುವ ಎಂ ಟು ಎಂ ಮೀಡಿಯಾ ನೆಟ್ವರ್ಕ್ ನ ಈದಿನ.ಕಾಂ ಸುದ್ದಿವಾಹಿನಿ ಮೂರನೇ ವಸಂತಕ್ಕೆ ಕಾಲಿಟ್ಟಿದ್ದು ಈ ನೆಲೆಯಲ್ಲಿ ರಾಜ್ಯದಲ್ಲಿ ಸಹಕಾರ ನೀಡಿದ ತನ್ನ ಓದುಗರಿಗೆ ಕೃತಜ್ಞತೆ ಸಲ್ಲಿಸುವ ಸಲುವಾಗಿ ‘ಈದಿನ ಓದುಗರ ಸಮಾವೇಶ’ವನ್ನು ಆಯೋಜಿಸಿದೆ.
ಸತ್ಯ ನ್ಯಾಯ ಮತ್ತು ಪ್ರೀತಿಯನ್ನು ಮಾಧ್ಯಮದ ಧ್ಯೇಯವಾಗಿಟ್ಟುಕೊಂಡು, ಸಾಮಾಜಿಕ ನ್ಯಾಯದ ನ್ಯಾಯಪರ ಸುದ್ದಿಗಳನ್ನು ಹಂಚುವ ಈದಿನ.ಕಾಂ ಗೆ ಎರಡು ವರ್ಷ ತುಂಬಿದ ಸವಿನೆನಪಿನಲ್ಲಿ ಬೆಂಗಳೂರಿನ ಸರ್ ಪುಟ್ಟಣ್ಣ ಚಟ್ಟಿ ಪುರಭವನದಲ್ಲಿ ದಿ. 30 ನವಂಬರ್ 2024 ರಂದು ಶನಿವಾರ ಬೆಳಿಗ್ಗೆ 11ಕ್ಕೆ ಓದುಗರ ಸಮಾವೇಶವನ್ನು ಆಯೋಜಿಸಲಾಗಿದೆ.
ಕಾರ್ಯಕ್ರಮದಲ್ಲಿ ರಾಜ್ಯದ ಮುಖ್ಯಮಂತ್ರಿಗಳಾದ ಸನ್ಮಾನ್ಯ ಸಿದ್ದರಾಮಯ್ಯನವರು ಭಾಗವಹಿಸಲಿದ್ದು, ಈದಿನ.ಕಾಂ ಸಂಸ್ಥೆ ಕನ್ನಡದ 50 ಇತಿಹಾಸದ ಹಿನ್ನೋಟ ಮತ್ತು ಮುನ್ನೋಟದ ಬಗೆಗಿನ ವಿಶೇಷ ಸಂಚಿಕೆಯನ್ನು ಹೊರತರಲಿದ್ದು, ಸಿದ್ದರಾಮಯ್ಯನವರು ಬಿಡುಗಡೆ ಮಾಡಲಿದ್ದಾರೆ.
ಕಾರ್ಯಕ್ರಮದಲ್ಲಿ ರಾಷ್ಟ್ರದ ಮಾಧ್ಯಮ ವಿಭಾಗದಲ್ಲಿ ಅಪೂರ್ವ ಸಾಧನೆ ಮಾಡಿದ ಸಾಧಕರು ಭಾಗವಹಿಸಲಿದ್ದಾರೆ. ನವದೆಹಲಿ ದಿ ವೈರ್ ಮಾಧ್ಯಮದ ಸಂಪಾದಕಿ ಸೀಮಾ ಚಿಸ್ತಿ, ವಿಶೇಷವಾಗಿ ಮಹಿಳೆಯರಿಂದಲೇ ನೆಡೆಸುತ್ತಿರುವ ‘ಖಬರ್ ಲೆಹಾರಿಯಾ’ ಪತ್ರಿಕೆಯ ನಿರ್ದೇಶಕಿ ಪ್ರಿಯಾ ತುವೆಸ್ಸರಿ ಭಾಗವಹಿಸಲಿದ್ದಾರೆ. ಅಕ್ಕಮಹಾದೇವಿ ವಿಶ್ವ ವಿದ್ಯಾಲಯದ ವಿಶ್ರಾಂತ ಕುಲಪತಿಗಳಾದ ಸಬೀಹಾ ಭೂಮಿಗೌಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಅಜೀಂ ಪ್ರೇಮ್ ಜಿ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಪ್ರೊ. ಎ ನಾರಾಯಣ್ “ಕರ್ನಾಟಕ 50, ನಡೆದ ಹೆಜ್ಜೆ- ಮುಂದಿನ ದಿಕ್ಕು” ವಿಷಯದ ಬಗೆಗೆ ವಿಶೇಷ ಉಪನ್ಯಾಸ ನೀಡಲಿದ್ದಾರೆ.
ಮಾಸ್ ಮೀಡಿಯಾ ಫೌಂಡೇಶನ್ ನ ಅಧ್ಯಕ್ಷರು, ದಸಂಸದ ಗುರುಪ್ರಸಾದ್ ಕೆರಗೋಡು, ಈದಿನ.ಕಾಂ ಕನ್ಸಲ್ಟಿಂಗ್ ಎಡಿಟರ್ ಡಿ. ಉಮಾಪತಿ, ಸಂಪಾದಕರಾದ ಬಸವರಾಜ ಮೇಗಲಕೇರಿ ಸೇರಿದಂತೆ ನಾಡಿನ ಪ್ರಖ್ಯಾತ ಸಾಹಿತಿಗಳು, ಚಿಂತಕರು, ದಲಿತ ಸಂಘರ್ಷ ಸಮಿತಿ, ರೈತ ಸಂಘ, ಕಾರ್ಮಿಕ ಸಂಘಟನೆ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು, ಕಾರ್ಯಕರ್ತರು ಪ್ರಮುಖವಾಗಿ ಈದಿನ ಡಾಟ್ ಕಾಮ್ ಓದುಗರು ಭಾಗವಹಿಸಲಿದ್ದಾರೆ. ನೀವು ಬನ್ನಿ ಭಾಗವಹಿಸಿ, ಈದಿನ.ಕಾಂ ನ ಮಾಧ್ಯಮ ಆಂದೋಲನದಲ್ಲಿ ಪಾಲ್ಗೊಳ್ಳಿ ಎಂದು ಸಂಸ್ಥೆ ಕರೆ ನೀಡಿದೆ.