ಶುಕ್ರದೆಸೆ ಸುದ್ದಿ :ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುವುದಾಗಿ ಹೇಳಿದ ಸವದಿ
ಬೆಳಗಾವಿ : ಅಥಣಿ ಕ್ಷೇತ್ರದ ಬಿಜೆಪಿ ಟಿಕೆಟ್ ಕೈ ತಪ್ಪಿದ್ದರಿಂದ ಬೇಸರಗೊಂಡ ವಿಧಾನ ಪರಿಷತ್ ಸದಸ್ಯ ಲಕ್ಷ್ಮಣ ಸವದಿ, ಬಿಜೆಪಿ ಪ್ರಾಥಮಿಕ ಸದಸ್ಯತ್ವ ಹಾಗೂ ವಿಧಾನ ಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಹೇಳಿದ್ದಾರೆ.
ಪಟ್ಟಣದಲ್ಲಿ ಬುಧವಾರ ಮಧ್ಯಮದವರೊಂದಿಗೆ ಮಾತನಾಡಿದ ಅವರು, ಕೊನೆಕ್ಷಣದವರೆಗೂ ನಿನ್ನೊಂದಿಗೆ ಇದ್ದೇವೆ ಎಂದು ಬಿಜೆಪಿ ಕೆಲ ನಾಯಕರು ಹೇಳಿದ್ದರು. ನಾನು ಅವರನ್ನು ನಂಬಿದ್ದೆ. ಈಗ ನಂಬಿಕೆ ಸುಳ್ಳಾಗಿದೆ. ಬೆನ್ನಿಗೆ ಚೂರಿ ಹಾಕಿದವರ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ ಎಂದರು.
ಬಿಜೆಪಿಯನ್ನು ನನ್ನ ತಾಯಿ ಸ್ಥಾನದಲ್ಲಿ ಇಟ್ಟಿದ್ದೆ. ತಾಯಿ ಯಾವತ್ತೂ ವಿಷ ಕೊಡುವುದಿಲ್ಲ ಎಂದು ನಂಬಿದ್ದೆ. ಆದರೆ, ಈಗಿನ ರಾಜಕಾರಣದಲ್ಲಿ ತಾಯಿ ಕೂಡ ಭ್ರಷ್ಟಳಾಗಿದ್ದಾಳೆ ಅನ್ನಿಸುತ್ತಿದೆ. ಅಂದಿನ ಬಿಜೆಪಿ, ಇಂದಿನ ಬಿಜೆಪಿಯಲ್ಲಿ ಬಹಳ ವ್ಯತ್ಯಾಸವಿದೆ ಎಂದೂ ಹರಿಹಾಯ್ದರು.
ಗುರುವಾರ ಸಂಜೆಗೆ ಮುರುಘೇಂದ್ರ ಶಿವಯೋಗಿಗಳ ಮಠದಲ್ಲಿ ಸಭೆ ಕರೆದಿದ್ದೇನೆ. ನನ್ನ ಜನರಿಂದ ಮಾರ್ಗದರ್ಶನ ಪಡೆದು ಮುಂದಿನ ಹೆಜ್ಜೆ ಇಡುತ್ತೇನೆ. ಈವರೆಗೂ ನನ್ನ ಕ್ಷೇತ್ರದ ಜನರೇ ನನ್ನ ಹೈಕಮಾಂಡ್. ಈ ಹೈಕಮಾಂಡ್ ಏನು ತೀರ್ಮಾನ ಕೊಡುತ್ತದೆಯೋ ಅದರ ಮೇಲೆ ನನ್ನ ಭವಿಷ್ಯ ನಿಂತಿದೆ. ಅಲ್ಲಿಯವರೆಗೂ ಯಾವುದೇ ತೀರ್ಮಾನ ಮಾಡಿಲ್ಲ ಎಂದು ಸವದಿ ಹೇಳಿದರು.
ಪ್ರಾಥಮಿಕ, ಬಿಜೆಪಿ, ರಾಜೀನಾಮೆ, ಸದಸ್ಯತ್ವ, ಸವದಿ