ತವರು ನೆಲ ವರುಣಾ ಕ್ಷೇತ್ರವನ್ನೇ ಫೈನಲ್ ಮಾಡಿಕೊಂಡ ಸಿದ್ದರಾಮಯ್ಯ
ಕೋಲಾರಕ್ಕೆ ಡಿಕೆಶಿ ಆಪ್ತ ಕೊತ್ತೂರು ಮಂಜುನಾಥ್ ಹೆಸರು ಘೋಷಣೆ
ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಅಂತಿಮವಾಗಿ ಒಂದೇ ಕ್ಷೇತ್ರದಿಂದ ಸ್ಪರ್ಧೆ ಮಾಡಲಿದ್ದಾರೆ.
ವರುಣಾ ಕ್ಷೇತ್ರದ ಜೊತೆಗೆ ಕೋಲಾರದಿಂದ ಸ್ಪರ್ಧಿಸುವ ಯೋಚನೆಯಲ್ಲಿದ್ದ ಸಿದ್ದರಾಮಯ್ಯ ಈಗ ಕೋಲಾರ ಕೈಬಿಟ್ಟು, ತವರು ನೆಲ ವರುಣಾ ಕ್ಷೇತ್ರವನ್ನು ಫೈನಲ್ ಮಾಡಿದ್ದಾರೆ.
ಕಾಂಗ್ರೆಸ್ ಶನಿವಾರ ಬಿಡುಗಡೆ ಮಾಡಿದ ಅಂತಿಮ ಪಟ್ಟಿಯಲ್ಲಿ ಕೋಲಾರ ಕ್ಷೇತ್ರದಿಂದ ಡಿ ಕೆ ಶಿವಕುಮಾರ್ ಆಪ್ತ ಕೊತ್ತೂರು ಮಂಜುನಾಥ್ ಹೆಸರು ಘೋಷಿಸಲಾಗಿದೆ.
ಸಿದ್ದರಾಮಯ್ಯ ಅವರ ಆಪ್ತರೊಬ್ಬರು ಮಾತನಾಡಿ “ಸಿದ್ದರಾಮಯ್ಯ ಅವರು ವರುಣಾ ಕ್ಷೇತ್ರದಲ್ಲಿ ಯಾವುದೇ ಗೊಂದಲ ಇಲ್ಲದೇ ಸ್ಪಷ್ಟ ಬಹುಮತದೊಂದಿಗೆ ಗೆಲುವು ಸಾಧಿಸಲಿದ್ದಾರೆ. ಎರಡನೇ ಕ್ಷೇತ್ರಕ್ಕೆ ಸಿದ್ದರಾಮಯ್ಯ ನಿಂತರೆ ವರುಣಾ ಮತದಾರರಿಗೂ ತಪ್ಪು ಸಂದೇಶ ರವಾನೆಯಾಗುತ್ತದೆ. ಈ ಎಲ್ಲ ಕಾರಣಕ್ಕೆ ಕೋಲಾರ ಕ್ಷೇತ್ರವನ್ನು ಸಿದ್ದರಾಮಯ್ಯ ಅವರು ಕೈಬಿಟ್ಟಿದ್ದಾರೆ” ಎಂದು ತಿಳಿಸಿದರು.
ಈಗಾಗಲೇ ತಮ್ಮ ಆಪ್ತರಾದ ಕೆ ಜೆ ಜಾರ್ಜ್, ಬೈರತಿ ಸುರೇಶ್ ಸೇರಿದಂತೆ ಹಿತೈಷಿಗಳ ಜೊತೆ ಸಿದ್ದಾಮಯ್ಯ ಚರ್ಚಿಸಿದ್ದು, “ವರುಣಾ ಕ್ಷೇತ್ರ ಸುರಕ್ಷಿತವಾಗಿದೆ. ಕೋಲಾರದಿಂದ ಸ್ಪರ್ಧಿಸುವ ಅಗತ್ಯವಿಲ್ಲ ಎಂದು ಸಲಹೆ ನೀಡಿದ್ದಾರೆ” ಎಂದು ಖಚಿತ ಮೂಲಗಳು ಸ್ಪಷ್ಟಪಡಿಸಿವೆ.