ಮಾ.15 ರಿಂದ ದೊಣೆಹಳ್ಳಿ ಶರಣಬಸವೇಶ್ವರ ಮಠದಲ್ಲಿ ದಾಸೋಹ ಸಂಸ್ಕೃತಿ ಉತ್ಸವ ಜರುಗಲಿದೆ ಎಂದು ದೊಣೆಹಳ್ಳಿ ಗುರುಮೂರ್ತಿ
ಜಗಳೂರು,ಮಾ.11:ದೊಣೆಹಳ್ಳಿ ಶ್ರೀ ಶರಣಬಸವೇಶ್ವರ ದಾಸೋಹ ಮಠದಲ್ಲಿ ಮಾ.15 ರಿಂದ 7 ದಿನಗಳಕಾಲ ‘ದಾಸೋಹ ಸಂಸ್ಕೃತಿ ಉತ್ಸವ’ ಕಾರ್ಯಕ್ರಮ ಸಮಾಜಮುಖಿ ಆಶಯಗಳೊಂದಿಗೆ ಅರ್ಥಪೂರ್ಣವಾಗಿ ಜರುಗಲಿದೆ ಎಂದು ದಾಸೋಹ ಮಠ ನಿರ್ಮಾಣ ಅಭಿವೃದ್ದಿ ಸಮಿತಿ ಸಂಘಟನಾ ಸಂಚಾಲಕ ಹಿರಿಯ ಪತ್ರಕರ್ತ ದೊಣೆಹಳ್ಳಿ ಗುರುಮೂರ್ತಿ ತಿಳಿಸಿದರು.
ಮಂಗಳವಾರ ಪಟ್ಟಣದ ಪತ್ರಿಕಾಭವನದಲ್ಲಿ ದೊಣೆಹಳ್ಳಿ ಶರಣಬಸವೇಶ್ವರ ದಾಸೋಹ ಮಠ ನಿರ್ಮಾಣ ಅಭಿವೃದ್ದಿ ಸಮಿತಿ ವತಿಯಿಂದ ನಡೆದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು.
ಮಾ.15 ರಂದು ಜಗಳೂರು ನೆರೆಯ ತಾಲ್ಲೂಕುಗಳಾದ ಕೂಡ್ಲಿಗಿ,ಮೊಳಕಾಲ್ಮೂರು,ಚಳ್ಳಕೆರೆ,ತಾಲ್ಲೂಕುಗಳ ಸಮಗ್ರ ನೀರಾವರಿ ಐಕ್ಯಹೊರಾಟ ಕುರಿತು ಚರ್ಚಿಸಲು ರೈತ ಸಮಾವೇಶದೊಂದಿಗೆ ಉತ್ಸವದ ಉದ್ಘಾಟನೆಗೊಳ್ಳಲಿದೆ.ಸಮಾವೇಶದಲ್ಲಿ ವಿವಿಧ ಬಸವಾದಿ ಶರಣರ ತತ್ವದಡಿಯ ಮಠಾಧೀಶರ ಸಾನಿಧ್ಯದಲ್ಲಿ ಸಂಸದರಾದ ಗೋವಿಂದಕಾರಜೋಳ,ಡಾ.ಪ್ರಭಾಮಲ್ಲಿಕಾರ್ಜುನ್,ಈ ತುಕಾರಾಂ ,ಶಾಸಕರಾದ ಎನ್.ವೈ.ಗೋಪಾಲಕೃಷ್ಣ,ಡಾ.ಎನ್ ಟಿ ಶ್ರೀನಿವಾಸ್,ಟಿ.ರಘುಮೂರ್ತಿ,ಮಾಜಿ ಶಾಸಕರಾದ ಎಚ್.ಪಿ.ರಾಜೇಶ್,ಎಸ್.ವಿ.ರಾಮಚಂದ್ರ ಸೇರಿದಂತೆ ಪ್ರಗತಿಪರ ಚಿಂತಕರು ಭಾಗವಹಿಸಲಿದ್ದಾರೆ.
ಮಾ.16 ರಂದು ಭಾನುವಾರ ಚಿತ್ರದುರ್ಗ ಮುರುಘಾಮಠದ ಮಾದಾರ ಚೆನ್ನಯ್ಯ ಅವರ ದಿವ್ಯ ನೇತೃತ್ವದಲ್ಲಿ ಮಹಿಳಾ ಸಬಲೀಕರಣ ಸಮಾವೇಶ ನಡೆಯಲಿದ್ದು ಚಿತ್ರದುರ್ಗದ ಮಾಜಿ ಶಾಸಕ ಎಸ್.ಕೆ.ಬಸವರಾಜನ್ ಅಧ್ಯಕ್ಷತೆ ವಹಿಸಲಿದ್ದಾರೆ ಹಾಗೂ ಉಚಿತ ಸಾಮೂಹಿಕ ವಿವಾಹಗಳು ಮತ್ತು ರಾಜ್ಯಮಟ್ಟದ ವಧುವರರ ಸಮಾವೇಶ ಜರುಗಲಿವೆ.ಇದೇ ವೇಳೆ ಸಾಹಿತಿ ಡಾ.ಸಂಗೇನಹಳ್ಳಿ ಅಶೋಕ ಕುಮಾರ್ ಅವರ ನನ್ನ ದೇವರು ಮತ್ತು ಇತರೇ ಕವಿತೆಗಳು ಪುಸ್ತಕ ಲೋಕಾರ್ಪಣೆಗೊಳ್ಳಲಿದೆ.ವಿಜಯನಗರ ಜಿಲ್ಲಾಧಿಕಾರಿ ದಿವಾಕರ್ ಅವರು ಪುಸ್ತಕ ಬಿಡುಗಡೆಗೊಳಿಸಲಿದ್ದಾರೆ ಗಣ್ಯರು ಹಾಗೂ ಸ್ವಾಮೀಜಿಗಳು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಮಾ.17 ರಂದು ಶರಣ ಸಂಗಮ,ಉಚಿತ ಆರೋಗ್ಯ ತಪಾಸಣಾ ಸಮಾವೇಶ,ಮಾ.22,23 ರಂದು ಆಯೋಜಿಸಿರುವ ಉಚಿತ ಕೃತಕ ಪೂರ್ಣದಂತ ಪಂಕ್ತಿ ಜೋಡಣಾ ಶಿಬಿರದಲ್ಲಿ ಬೆಂಗಳೂರಿನ ಸರ್ಕಾರಿ ದಂತ ಮಹಾವಿದ್ಯಾಲಯದ 150 ಕ್ಕೂ ಅಧಿಕ ವೈದ್ಯರ ತಂಡ ಆಗಮಿಸಲಿದೆ.ಮಾ.23 ರಂದು ಮಧ್ಯಾಹ್ನ ದಂತ ಪಂಕ್ತಿ ವಿತರಣಾ ಸಮಾರಂಭದಲ್ಲಿ ಮುರುಘಾರಾಜೇಂದ್ರ ಬೃಹನ್ಮಠದ ಉಸ್ತುವಾರಿ ಸದಸ್ಯ ಡಾ.ಬಸವಕುಮಾರ್ ಸ್ವಾಮೀಜಿ,ಮುಖ್ಯ ಅತಿಥಿಗಳಾಗಿ ದಾಮ ಐಮಡಿ ಶರಣಾರ್ಯರು ಸೇರಿದಂತೆ ಗಣ್ಯರು ಹಾಗೂ ಅಧ್ಯಕ್ಷತೆಯನ್ನು ಶಾಸಕ ಬಿ.ದೇವೇಂದ್ರಪ್ಪ ವಹಿಸಲಿದ್ದಾರೆ.ದಾಸೋಹ ಸಂಸ್ಕೃತಿ ಉತ್ಸವ ಕಾರ್ಯಕ್ರಮದಲ್ಲಿ ತಾಲೂಕಿನ ಜನಪರ,ಪ್ರಗತಿಪರ ಹೊರಾಟಗಾರರು,ಸಮಾಜಮುಖಿ ಸಂಘಟನೆ ಮುಖಂಡರುಗಳು ಅಧಿಕ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಲು ಕರೆ ನೀಡಿದರು.
ವೀರಶೈವ ಸಮಾಜದ ಮುಖಂಡ ಶಿವನಗೌಡ ಮಾತನಾಡಿ,ದಾಸೋಹ ಸಂಸ್ಕೃತಿ ಕಾರ್ಯಕ್ರಮಕ್ಕೆ ವ್ಯಾಪಕಬೆಂಬಲವಿದೆ. ದೊಣೆಹಳ್ಳಿ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿದ್ದು ಶಿಕ್ಷಣ ಸಂಸ್ಥೆತೆರೆದು ದಾಸೋಹ,ವಸತಿನಿಲಯ ಆರಂಭಿಸಬೇಕಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಸಂದರ್ಭದಲ್ಲಿ ಮಾಜಿ ಚೇರ್ಮನ್ ಬಸವರಾಜಪ್ಪ,ಸಾಹಿತಿ ಸಂಗೇನಹಳ್ಳಿ ಅಶೋಕ ಕುಮಾರ್,ಕೃಷಿಪತ್ತಿನ ಸಹಕಾರ ಪತ್ತಿನ ಬ್ಯಾಂಕ್ ನಿರ್ದೇಶಕರಾದ ಮಂಜುನಾಥ್,ಏಳಂಜಿ ಶರಣಪ್ಪ,ವಿಎಸ್ ಎಸ್ ಎನ್ ಅಧ್ಯಕ್ಷ ಕೆ.ಗುರುಮೂರ್ತಿ ,ಸಂತೋಷ ಕುಮಾರ್,ವಿಜಯ್ ಕುಮಾರ್,ಕಾನಾಮಡುಗು ಪ್ರಾಂಶುಪಾಲ ನಾಗಲಿಂಗಪ್ಪ ,ಭರಮಸಮುದ್ರ ಕುಮಾರ್,ಸೇರಿದಂತೆ ಉಪಸ್ಥಿತರಿದ್ದರು.