ಪ್ರೊ.ಹೆಚ್.ಲಿಂಗಪ್ಪ ಮೂಲತಃ ಮೈಸೂರು ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿಯಲ್ಲಿ ಅರ್ಥಶಾಸ್ತ್ರ ವಿಷಯವನ್ನು ವ್ಯಾಸಂಗ ಮಾಡಿದವರು. ಹುಟ್ಟಿನಿಂದಲೇ ಕಡು ಬಡತನದಲ್ಲಿ ನೊಂದು ಬೆಂದು ವ್ಯಾಸಂಗ ಮಾಡಿದವರು. ಸರ್ಕಾರಿ ಅರ್ಥಶಾಸ್ತ್ರ ಉಪನ್ಯಾಸಕ ಹುದ್ದೆಗೆ ನೇಮಕ ಆಗಿ, ವಿವಿಧ ಸ್ಥಳಗಳಲ್ಲಿ ಸೇವೆಯನ್ನು ನಿರ್ವಂಚನೆಯಿಂದ ನೀಡಿದ ಲಿಂಗಪ್ಪ ಅನೇಕ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿ ಮತ್ತು ಗುರುವಾಗಿ ಬೆಳೆಸಿದ ಕೀರ್ತಿ ದೊಡ್ಡದು.

ತನ್ನ ಬೋಧಿಸಿದ ಅನುಭವ ಮೂಲಕ ಸಾಮಾಜಿಕ ಸಮಸ್ಯೆಗಳನ್ನೂ ಅವಲೋಕನ ಮಾಡಿ ಜನರಿಗೆ ಬೇಕಾದ ಸಾಹಿತ್ಯದ ಅಕ್ಷರ ಮಾಲೆಯನ್ನು ನೀಡಲು ತಮ್ಮ ನಿವೃತ್ತಿಯ ಬಹಳಷ್ಟು ಸಮಯವನ್ನು ವಿನಿಯೋಗಿಸಿ 30ಕ್ಕೂ ಹೆಚ್ಚಿನ ಕೃತಿಗಳನ್ನು ರಚಿಸಿದ್ದಾರೆ.ಅದರಲ್ಲೂ ಬುದ್ಧ ಬಸವ ಅಂಬೇಡ್ಕರ್ ಸಮನ್ವಯದ ಸಾಹಿತ್ಯ ಜೋಡಣೆ ಮಾಡಿ, ಶೋಷಿತ ವರ್ಗಗಳ ಬಸವಣ್ಣನವರ ಸಮಕಾಲೀನ ಶರಣರ ದರ್ಶನ ನೀಡಿದ್ದಾರೆ. ಅವರು ಶೋಷಿತರ ವಿಮೋಚನೆಯ ದಾರಿಗೆ ಬೇಕಾಗುವ ಜ್ಞಾನ ದೀವಿಗೆಯನ್ನು ನೀಡುತ್ತಾ ಬಂದಿದ್ದಾರೆ. ನನಗೆ ಲಿಂಗಪ್ಪ ಅವರು ಸಾಹಿತ್ಯ ಮೂಲಕ ಪರಿಚಿತರು. ನಿಧಾನವಾಗಿ ಅವರು ನೇರ ಸಂಪರ್ಕಕ್ಕೆ ಬಂದಮೇಲೆ ಹಿರಿಯ ಸಹೋದರರಾಗಿ ಪರಿಚಿತರಾದರು. ಸದಾ ಸಾಮಾಜಿಕ ಬದಲಾವಣೆಯ ಆಶಯಗಳೊಂದಿಗೆ ಮಾತನಾಡುವ ಲಿಂಗಪ್ಪ ನೋವುಂಡ ಆನೆಯಂತೆ ತನ್ನ ನೋವಿಗೆ ಅಕ್ಷರಗಳೇ ಔಷಧವೆಂತೆ ಉಸಿರಾಡುವ ಸಾತ್ವಿಕ ಸಿಟ್ಟಿನ ಸ್ವಭಾವದ ವ್ಯಕ್ತಿತ್ವ ಅವರದ್ದು. ಸದಾ ತನ್ನ ಸಾಹಿತ್ಯದ ಮೂಲಕ ಜನರ ಜೊತೆ ನಿಲ್ಲುವುದು ಅವರ ಮಾದರಿ ಗುಣವಾಗಿದೆ.ಇತ್ತೀಚೆಗೆ ಪ್ರೊ. ಹೆಚ್.ಲಿಂಗಪ್ಪ ಅವರನ್ನು ದೂರದರ್ಶನ ಚಂದನ ಪ್ರಸ್ತುತಿಯ ಮಾಲಿಕೆಯಲ್ಲಿ ನೀಡಿದ ಸಂದರ್ಶನ ಅವರ ಜೀವನ ದರ್ಶನ ಎಂದರೆ ತಪ್ಪಾಗಲಾರದು. ಈ ಸಂದರ್ಶನದುದ್ದಕೂ ತಾವು ನೋವುಂಡ ದಾರಿಯಲ್ಲಿ ನಿಂತು ತಮ್ಮ ಔದ್ಯೋಗಿಕ ಮತ್ತು ಸಾಹಿತ್ಯಕ ಋಜುತ್ವವನ್ನು ಸಾದರ ಪಡಿಸಿದ ಸಾಧಕರು.
ದಾಸನೂರು ಕೂಸಣ್ಣ,ಸಾಹಿತಿಗಳು

Leave a Reply

Your email address will not be published. Required fields are marked *

You missed

error: Content is protected !!