Shukradeshe news -Kannada News ಸಂವಿಧಾನ ಉಳಿಸಲು ಪಣ ತೊಡೋಣ : ಜಿಗ್ನೇಶ್ ಮೇವಾನಿ
ದಾವಣಗೆರೆ ಸುದ್ದಿ

ಸಂವಿಧಾನ ಉಳಿಸಲು ಪಣ ತೊಡೋಣ : ಜಿಗ್ನೇಶ್ ಮೇವಾನಿ

ದಾವಣಗೆರೆ (Davanagere): ಬಾಬಾಸಾಹೇಬರ ಸಮಾನತೆಯ, ಸಾಮಾಜಿಕ ನ್ಯಾಯದ ಆಶಯದ ಸಂವಿಧಾನದ ಮೇಲೆ ದಾಳಿ ಮಾಡಿ ಮುಗಿಸಲು ಕೆಲವರು ತೀರ್ಮಾನ ಮಾಡಿದ್ದಾರೆ, ಅದರ ವಿರುದ್ಧ ಸಂವಿಧಾನವನ್ನು ಉಳಿಸುವ ತೀರ್ಮಾನ ಮಾಡೋಣ ಎಂದು ಗುಜರಾತ್ ನ ಯುವ ಹೋರಾಡಗಾರ ಜಿಗ್ನೇಶ್ ಮೇವಾನಿ ಕರೆ ನೀಡಿದರು

.
ಈ ಭಾರತ ಭೂಮಿ ಮೋದಿ, ಆರೆಸ್ಸೆಸ್, ಮೋಹನ್ ಭಾಗವತ್ ಅವರ ದೇಶವಲ್ಲ, ಇದು ಬಸವಣ್ಣ , ಬಾಬಾಸಾಹೇಬರ,. ರವಿದಾಸ್, ಪೆರಿಯಾರ್ ಅವರ ದೇಶ, ಇಲ್ಲಿ ಭಗತ್ ಸಿಂಗ್, ಸುಖದೇವ್, ರಾಜಗುರು, ನಾರಾಯಣಗುರು ಅವರುಗಳ ನೆಲ . ಈ ದೇಶ ಉಳಿಸಲು ಯಾರೆಲ್ಲ ತ್ಯಾಗ ಮಾಡಿದರು, ತಪಸ್ಸು ಮಾಡಿದರೋ ಯಾವ ದೇಶದಲ್ಲಿ 23 ವರ್ಷದಲ್ಲಿ ಭಗತ್ ಸಿಂಗ್ ಪ್ರಾಣ ನೀಡಿದರೋ ಅಂತಹ ದೇಶವನ್ನು ಈಗ ಕೆಲವು ದಿನಗಳಿಂದ ಆಳುತ್ತಿರುವ ಇವರ ವಶಕ್ಕೆ ಒಪ್ಪಿಸಲು ಸಾಧ್ಯವಿಲ್ಲ ಎಂದರು.


ಇಲ್ಲಿ 50 ವರ್ಷಗಳಿಂದ ರೈತರು ಕಾರ್ಮಿಕರಿಗಾಗಿ ಹೋರಾಟ ನಡೆಸುತ್ತಿರುವ ಜನರಿದ್ದಾರೆ, ಈಗ ಅದನ್ನು ಮುಂದಕ್ಕೆ ಒಯ್ಯುವ ಹೊಣೆ ನಮ್ಮ ಯುವತಲೆಮಾರಿನ ಹೆಗಲ ಮೇಲಿದೆ ಎಂದ ಅವರು, ಗುಜರಾತ್ ಗಲಭೆ ನಡೆಸಿ ಅಲ್ಪಸಂಖ್ಯಾತರ ಮಾರಣ ಹೋಮ ಸರ್ಕಾರದ ಮೂಗಿನ ಕೆಳಗೆ ನಡೆದು, ಇಡೀ ಪ್ರಪಂಚದ ಪ್ರಜ್ಞಾವಂತರು ಮೋದಿಯನ್ನು ಟೀಕಿಸಿದಾಗ, ಮೋದಿ ಸಲಹೆಗಾರರು ‘ವೈಬ್ರಂಟ್ ಗುಜರಾತ್ ಸಮ್ಮಿಟ್’ ಸಂಘಟಿಸಿ ಎಲ್ಲ ಬಂಡವಾಳಿಗರನ್ನು ಕರೆದು ಅವರಿಗೆ ನಿಮಗೆ ಭೂಮಿ, ಕರೆಂಟ್, ಬಂಡವಾಳ ಎಲ್ಲವನ್ನೂ ಒದಗಿಸುತ್ತೇವೆ ಎಂದು ಹೇಳಿದರು, ಇದನ್ನೇ ಅವರು ತಂತ್ರವಾಗಿಸಿಕೊಂಡು ಇಂದು ತಮ್ಮ ಎಲ್ಲ ಸಂಪನ್ಮೂಲಗಳನ್ನು ಈ ಬಂಡವಾಳಿಗರಿಂದ ಪಡೆದುಕೊಂಡು ಅವರ ಜೇಬು ತುಂಬಿಸುವ ಎಲ್ಲ ಕೆಲಸ ಅವರು ಮಾಡುತ್ತಿದ್ದಾರೆ ಎಂದು ದೂರಿದರು.
ಇಡೀ ದೇಶದ ಬಂಡವಾಳಿಗರಿಂದು ಅದಾನಿ ಅಂಬಾನಿಗಳಂತೆ ಮೋದಿ ಪಡೆಯ ಜೊತೆಗೆ ನಿಂತಿದ್ದಾರೆ, ಶ್ರಮಜೀವಿಗಳು, ಬಡವರು,ದಲಿತರು ಇವರ ದಾಳಿಗಳ ಗುರಿಯಾಗುತ್ತಿದ್ದಾರೆ.

ಮುಂದಿರುವ ದಾರಿ ಒಂದೇ, ನಾವೆಲ್ಲ ನಮ್ಮ ನಮ್ಮ ಊರುಗಳಲ್ಲಿ, ಕೇರಿಗಳಲ್ಲಿ, ಜಿಲ್ಲೆಗಳಲ್ಲಿ ಆರೆಸ್ಸೆಸ್ ಶಾಖಗಳ ವಿರುದ್ಧ ಸಂವಿಧಾನದ ಪಡೆಗಳನ್ನು ಕಟ್ಟೋಣ, ಸಂವಿಧಾನದ ಆಶಯಗಳನ್ನು ನಿಜವಾಗಿ ಜನರಿಗೆ ಮುಟ್ಟಿಸುವ ಕೆಲಸ ಮಾಡೋಣ ಎಂದು ಕರೆ ನೀಡಿದರು.
. ನಾವು ಚುನಾವಣೆಯಲ್ಲಿ ಆರೆಸ್ಸೆಸ್ ಬಿಜೆಪಿಯನ್ನು ಸೋಲಿಸಬೇಕು, ಜತೆಗೆ ನಮ್ಮ ಹಕ್ಕುಗಳಿಗಾಗಿ ಹೋರಾಟ ನಡೆಸಬೇಕು. ನಾನು ಮತ್ತೆ ಮತ್ತೆ ಕರ್ನಾಟಕಕ್ಕೆ ಬರುವೆ. ಎಂದಿಗೂ ನಿಮ್ಮ ಜತೆಗಿರುವೆ ಎಂದರು.
ಸಂಸದ ಸಸಿಕಾಂತ ಸೆಂದಿಲ್ ಮಾತನಾಡಿ, ಸಂವಿಧಾನ ಇಲ್ಲದೆ ನಮಗೆ ಘನತೆಯ ಜೀವನ ಸಾಧ್ಯವಿಲ್ಲ, ಸಮಾನತೆಯನ್ನು ನಮಗೆ ಕೊಡುವುದು ಸಂವಿಧಾನ, ಆರೆಸ್ಸೆಸ್ ಯಾಕೆ ಅದನ್ನು ವಿರೋಧಿಸುತ್ತದೆಂದರೆ, ನನ್ನ ಹೊಲದಲ್ಲಿ ಕೆಲಸ ಮಾಡುತ್ತಿದ್ದ ಹುಡುಗ ಇಂದು ನನ್ನ ಎದುರಿಗೆ ಐಎಎಸ್ ಅಧಿಕಾರಿಯಾಗುತ್ತಾನೆ ಎಂಬುದು ಅವರ ಆಕ್ರೋಶಕ್ಕೆ ಕಾರಣ. ಇದನ್ನು ಯಾರದ್ದೋ ಕೆಲಸ, ದೇಶದ ಕೆಲಸ ಅಂದುಕೊಳ್ಳಬೇಡಿ, ಇದು ನಿಮ್ಮ ಮನೆಯ ಕೆಲಸ, ನಮ್ಮ ಮಕ್ಕಳಿಗಾಗಿ ನಾವು ಮಾಡಬೇಕಾದ ಕೆಲಸ ಅಂದಕೊಳ್ಳಿ ಇದರಲ್ಲಿ ನಾವು ತೊಡಗಿಸಿಕೊಳ್ಳದಿದ್ದರೆ ನಮ್ಮ ಮಕ್ಕಳಿಗೆ ಅನ್ಯಾಯ ಮಾಡಿದಂತೆ ಎಂದರು.


ಎಲ್ಲ ಜಾತಿ ಧರ್ಮಗಳ ದುಡಿಯುವ ಜನರೇನಿದ್ದೇವೆ ಈ ದೇಶದಲ್ಲಿ ನಾವೇ ಬಹುಸಂಖ್ಯಾತರು, ಯಾರಾದರೂ ಇಂತಹ ದೇಶವನ್ನು ವಿರೋಧಿಸುವವರಿದ್ದರೆ ಅವರು ಆರೆಸ್ಸೆಸ್, ಬಾಬಾಸಾಹೇಬರು ಸಂವಿಧಾನ ಬರೆಯುವಾಗ ಅವರು ಸಮಾನತೆಯ ಬಗ್ಗೆ, ನ್ಯಾಯದ ಬಗ್ಗೆ ಎಲ್ಲಿಂದ ಬರೆದಿದ್ದಾರೆ, ಜನರ ಬದುಕಿನ ವಿಧಾನಗಳಿಂದ ಬರೆದಿದ್ದಾರೆ ಹಾಗಾಗಿ ಇದನ್ನು ಉಳಿಸುವುದು ನಮ್ಮ ಕರ್ತವ್ಯ ಎಂದು ಹೇಳಿದರು.
ದೇವರು ಇದ್ದಾರೋ ಇಲ್ಲವೋ ಗೊತ್ತಿಲ್ಲ, ಆದರೆ ಇದ್ದರೆ ಒಂದಲ್ಲ ಒಂದು ರೂಪದಲ್ಲಿ ಅವರು ಬರುತ್ತಾರೆ, ನಮ್ಮ ಪಾಲಿಗೆ ಸಂವಿಧಾನದ ರೂಪದಲ್ಲಿ ಬಂದಿದ್ದಾರೆ, ಅದನ್ನು ಕಾಪಾಡಿಕೊಳ್ಳೋಣ. ಇಂತಹ ಸಂಘರ್ಷದಲ್ಲಿ ನಮಗೆ ಕೋಪ ಬೇಕೋ ಧೈರ್ಯ ಬೇಕೋ ಅಂತ ಹೇಳಿದರೆ, ನಮಗೆ ಧೈರ್ಯ ಬೇಕು. ಒಗ್ಗಟ್ಟು ಬೇಕು ಎಂದು ತಿಳಿಸಿದರು.
ಸಂವಿಧಾನವನ್ನು ಉಳಿಸಿಕೊಳ್ಳುವುದು ನಮಗೆ ಆಯ್ಕೆಯ ಪ್ರಶ್ನೆಯಲ್ಲ, ನಮ್ಮ ಹೊಣೆಗಾರಿಕೆ ಎಂಬುದನ್ನು ಸಾರಿ ಹೇಳೋಣ, ಒಗ್ಗಟ್ಟಾಗಿ ಹೋರಾಡೋಣ ಎಂದು ಕರೆ ನೀಡಿದರು.

Leave a Reply

Your email address will not be published. Required fields are marked *

You missed

error: Content is protected !!