ರೈತರಿಗೆ ಬಿತ್ತನೆ ಬೀಜ ವಿತರಣೆಯಲ್ಲಿ ವಿಳಂಬ ಮಾಡಿದಲ್ಲಿ ಅಗತ್ಯ ಕ್ರಮ:ಶಾಸಕ.ಬಿ.ದೇವೇಂದ್ರಪ್ಪ ತಾಕೀತು.
ಜಗಳೂರು ಸುದ್ದಿ,
ಜಗಳೂರು,ಮೇ.27:ರೈತರಿಗೆ ಸಕಾಲಕ್ಕೆ ಬಿತ್ತನೆ ಬೀಜ ವಿತರಣೆಯಲ್ಲಿ ಅಧಿಕಾರಿಗಳು ನಿರ್ಲಕ್ಷ್ಯವಹಿಸಿ ವಿಳಂಬಮಾಡಿದಲ್ಲಿ ಅಗತ್ಯ ಕ್ರಮಕೈಗೊಳ್ಳಲಾಗುವುದು ಎಂದು ಶಾಸಕ ಬಿ.ದೇವೇಂದ್ರಪ್ಪ ತಾಕೀತು ಮಾಡಿದರು.
ಮಂಗಳವಾರ ಪಟ್ಟಣದ ಎಪಿಎಂಸಿ ಆವರಣದಲ್ಲಿ ಕೃಷಿ ಇಲಾಖೆ,ರೈತ ಸಂಪರ್ಕ ಕೇಂದ್ರದವತಿಯಿಂದ ಬಿತ್ತನೆ ಬೀಜ ವಿತರಣೆಗೆ ಚಾಲನೆನೀಡಿ ಅವರು ಮಾತನಾಡಿದರು.
ನಂಜುಂಡಪ್ಪ ವರದಿಯನ್ವಯ ಅತ್ಯಂತ ಹಿಂದುಳಿದ ತಾಲೂಕಿನಲ್ಲಿ ಮುಂಗಾರು ಹಿಂಗಾರು ಹಂಗಾಮಿನಲ್ಲಿ ಕಳೆದ ವರ್ಷಗಳಿಂದ ಅತಿವೃಷ್ಟಿ,ಅನಾವೃಷ್ಟಿಗೆ ಬೆಳೆಗಳು ತುತ್ತಾಗಿ ರೈತರು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ.ಪ್ರಸಕ್ತವಾಗಿ ಮುಂಗಾರು ಹಂಗಾಮು ವಾಡಿಕೆಗಿಂತ ಶೀಘ್ರವೇ ಆರಂಭವಾಗಿದ್ದು.ವರುಣನ ಕೃಪೆಯಿಂದ ಬಿತ್ತನೆ ಕಾರ್ಯಗಳು ಚಟುವಟಿಕೆಗಳು ಚುರುಕುಗೊಂಡಿವೆ.ರೈತರಿಗೆ ಸರ್ಕಾರದಿಂದ ಸಾಮಾನ್ಯ ವರ್ಗಕ್ಕೆ ಶೇ. 50,ಪರಿಶಿಷ್ಟ ಸಮುದಾಯದ ರೈತರಿಗೆ ಶೇ. 75 ರಷ್ಟು ಸಿಗುವ ರಿಯಾಯತಿ ದರದ ಬಿತ್ತನೆ ಬೀಜಗಳನ್ನು ವಿತರಿಸಲು ತಂಡೋಪಾದಿಯಲ್ಲಿ ಕೃಷಿ ಇಲಾಖೆ ಅಧಿಕಾರಿಗಳು ಶಿಷ್ಟಾಚಾರ ತೊರೆದು ಸಜ್ಜಾಗಬೇಕು.ರೈತರಿಗೆ ಯಾವುದೇ ತೊಂದರೆಯಾದಲ್ಲಿ ನಾನು ಸಹಿಸುವುದಿಲ್ಲ ಎಂದು ಎಚ್ಚರಿಸಿದರು.
ಸಿರಿಗೆರೆ ಶ್ರೀಗಳ ಆಶೀರ್ವಾದ,ವರುಣನ ಕೃಪೆಯಿಂದ ತಾಲೂಕಿನಾದ್ಯಂತ ಶೇ.80 ರಷ್ಟು ಕೆರೆಗಳು ಭರ್ತಿಯಾಗಿದ್ದು,ಬೋರ್ ವೆಲ್ ಗಳಲ್ಲಿ ಅಂತರ್ಜಲ ಹೆಚ್ಚಳವಾಗಿ ನೀರಾವರಿಯಲ್ಲಿ ರೈತರು ತೊಡಗಿರುವುದು ಸಂತಸದ ಸಂಗತಿ,ಇಲ್ಲದಿದ್ದರೆ ನನ್ನನ್ನು ಮುಗಿಬೀಳುತ್ತಿದ್ದರು.ಮುಂಗಾರು,ಹಿಂಗಾರು ಯಾವುದೇ ಸಂದರ್ಭದಲ್ಲಿಯೂ ಸರ್ಕಾರದ ಯೋಜನೆಗಳು ಸಮರ್ಪಕ ಜಾರಿಯಾಗಬೇಕು.ಅತಿ ಬೇಡಿಕೆಯುಳ್ಳ ಮೆಕ್ಕೆಜೋಳ,ರಾಗಿ ಸೇರಿದಂತೆ ಇತರೆ ಬೆಳೆಗಳಿಗೆ ಅಗತ್ಯವಿರುವಷ್ಟು ಬಿತ್ತನೆ ಬೀಜ ಪೂರೈಕೆಗೆ ಶೇಖರಣೆಮಾಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಕೃಷಿ ಇಲಾಖೆ ಸಹಾಯನಿರ್ದೇಶಕಿ ಶ್ವೇತಾ ಮಾತನಾಡಿ,ರೈತರ ಬೇಡಿಕೆಗೆ ತಕ್ಕಂತೆ ಮೆಕ್ಕೆಜೋಳ,ರಾಗಿ,ಶೇಂಗಾ,ತೊಗರಿ,ಸೂರ್ಯಕಾಂತಿ ಬಿತ್ತನೆ ಬೀಜ ಸ್ಥಳೀಯ ಎಫ್ ಪಿಓ,ರೈತ ಸಂಪರ್ಕ ಕೇಂದ್ರಗಳಲ್ಲಿ ಲಭ್ಯವಿದ್ದು.ಅಗತ್ಯ ದಾಖಲೆಗಳನ್ನು ಪೂರೈಕೆಮಾಡುವ ಮೂಲಕ ಎಫ್ ಐಡಿ ಯೊಂದಿಗೆ ಅರ್ಜಿ ಸಲ್ಲಿಸಿದರೆ ಬಿತ್ತನೆ ಬೀಜ ಪೂರೈಕೆಮಾಡಲಾಗುವುದು ಎಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ರೈತ ಸಂಪರ್ಕಕೇಂದ್ರದ ದೇವರಾಜ್,ಕೃಷಿ ಅಧಿಕಾರಿ ಜೀವಿತಾ,ಮುಖಂಡರಾದ ಸಣ್ಣಸೂರಜ್ಜ,ಪಲ್ಲಾಗಟ್ಟೆ ಶೇಖರಪ್ಪ.ನಿವೃತ್ತ ಅಧಿಕಾರಿ ಬಿ.ಮಹೇಶ್ವರಪ್ಪ,ಗಿಡ್ಡನಕಟ್ಟೆ ಕಾಂತರಾಜ್,ಸೇರಿದಂತೆ ಮತ್ತಿತರರು ಇದ್ದರು.

