ಇತಿಹಾಸ ದೇಶದ ಸರ್ವಾಂಗೀಣ ಅಭಿವೃದ್ಧಿಗೆ ದಾರಿ ತೋರುತ್ತದೆ.
(ವಿಶ್ವ ಇತಿಹಾಸ ದಿನ ಕಾರ್ಯಕ್ರಮದಲ್ಲಿ ಶ್ರೀ ಮುನಿಯಾ ನಾಯ್ಕ್ ಅಭಿಪ್ರಾಯ)
ಜಗಳೂರು ಪಟ್ಟಣದ ಶ್ರೀಮತಿ ಮಾಲತಿ ಪದವಿ ಪೂರ್ವ ಕಾಲೇಜಿನಲ್ಲಿ ವಿಶ್ವ ಇತಿಹಾಸ ದಿನದ 2ನೇ ವರ್ಷದ ಆಚರಣೆಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀ ಸೇವಾಲಾಲ್ ವಿದ್ಯಾಸಂಸ್ಥೆಯ ಗೌರವ ಕಾರ್ಯದರ್ಶಿಗಳಾದ ಶ್ರೀಯುತ ಮುನಿಯಾ ನಾಯ್ಕ್ ರವರು ನೆರವೇರಿಸಿ ತಮ್ಮ ಉದ್ಘಾಟನಾ ಭಾಷಣದಲ್ಲಿ ಇತಿಹಾಸ ಮಾನವನ ಬದುಕಿನಲ್ಲಿ ಮಹತ್ವದ ಕ್ಷಣಗಳ ಸೃಷ್ಟಿಗೆ ಸಹಕಾರಿಯಾಗಿದೆ. ಇತಿಹಾಸ ನಮ್ಮ ದೇಶದ ಪರಂಪರೆ, ಸಂಸ್ಕೃತಿಯನ್ನು ತಿಳಿಸುವ ಮೂಲಕ ದೇಶದ ಸರ್ವಾಂಗೀಣ ಅಭಿವೃದ್ಧಿಗೆ ದಾರಿ ತೋರಿಸುತ್ತದೆ ಎಂದರು.
ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕ ನುಡಿಯನ್ನಾಡಿದ ಇತಿಹಾಸ ಉಪನ್ಯಾಸಕರಾದ ಜ್ಯೋತಿಕುಮಾರ್ ನಾಯ್ಕ್ ರವರು ಇತಿಹಾಸ ಎಲ್ಲಾ ಸಾಮಾಜಿಕ ವಿಜ್ಞಾನಗಳ ಬೇರಿನಂತೆ ಕಾರ್ಯನಿರ್ವಹಿಸುತ್ತದೆ, ಇತಿಹಾಸವನ್ನು ಮರೆತರೆ ಮುಂದಿನ ದಿನಗಳಲ್ಲಿ ಮಾನವ ಪ್ರಗತಿ ಅಸಾಧ್ಯ ಎಂದರು ಅಲ್ಲದೇ ನಮ್ಮ ಕಾಲೇಜಿನಲ್ಲಿ ಹಮ್ಮಿಕೊಂಡ ಈ ವಿಶ್ವ ಇತಿಹಾಸ ದಿನ ಕಾರ್ಯಕ್ರಮ ರಾಜ್ಯದಲ್ಲಿಯೇ ಮೊದಲು ಎಂದರೆ ತಪ್ಪಾಗಲಾರದು ಈ ಮೂಲಕ ಇತಿಹಾಸ ಸೃಷ್ಠಿ ಮಾಡಿದ್ದೇವೆ ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಚಿತ್ರದುರ್ಗ ಪಾಳೇಗಾರರ ಕಾಲದ ಪ್ರಮುಖ ಸ್ಮಾರಕಗಳು ಎಂಬ ವಿಷಯದ ಕುರಿತು ಕಾಟಲಿಂಗಪ್ಪನವರು ಸಂಕ್ಷಿಪ್ತವಾಗಿ ಉಪನ್ಯಾಸ ನೀಡಿ ವಿದ್ಯಾರ್ಥಿಗಳಿಗೆ ಪಾಳೇಗಾರರ ಕಾಲದ ಕೊಡುಗೆಗಳನ್ನು ಸ್ಮರಿಸಿದರು. ಬ್ರಹ್ಮಕುಮಾರಿ ಈಶ್ವರಿ ವಿದ್ಯಾಲಯದ ಜಗಳೂರು ಶಾಖೆಯ ಸಂಚಾಲಕರಾದ ಬ್ರಹ್ಮಕುಮಾರಿ ರಾಜಯೋಗಿನಿ ಭಾರತಿ ಅಕ್ಕನವರು ಪಾಲ್ಗೊಂಡು ವಿದ್ಯಾರ್ಥಿಗಳಿಗೆ ಮಾನವೀಯ ಮೌಲ್ಯಗಳು ಹಾಗೂ ಆದರ್ಶ ವಿದ್ಯಾರ್ಥಿಗಳಿಗೆ ಇರಬೇಕಾದ ಜ್ಞಾನ ಕೌಶಲ್ಯಗಳನ್ನು ತಿಳಿಹೇಳಿದರು.
ವಿಶ್ವ ಇತಿಹಾಸ ದಿನದ ಪ್ರಯುಕ್ತ 2024-25ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ-1ರಲ್ಲಿ ಇತಿಹಾಸ ವಿಷಯದಲ್ಲಿ ಹೆಚ್ಚು ಅಂಕ ಗಳಿಸಿದ ಮಾಲತಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಾದ ಗುರುಸ್ವಾಮಿ ಎಂ, ಅಂಬಿಕಾ, ಮಮತಾ ಜಿ, ವಿಶಾಲಾಕ್ಷಿ ಕೆ ಇವರುಗಳಿಗೆ ಸನ್ಮಾನಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಶಿವಕುಮಾರ್ ನಾಯ್ಕ್ ರವರು ವಹಿಸಿದ್ದರು. ಕಾಲೇಜಿನ ಉಪನ್ಯಾಸಕರಾದ ಸರ್ವಣ್ಣ, ಜಗದೀಶ್, ಮನು ಪ್ರಸಾದ್, ಶೃತಿ ಟಿ, ಹಾಗೂ ಪ್ರತಿಭಾ ಪುರಸ್ಕೃತ ವಿದ್ಯಾರ್ಥಿಗಳ ಪೋಷಕರು ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಬೋಧಕೇತರ ಸಿಬ್ಬಂಧಿಗಳು ಉಪಸ್ಥಿತರಿದ್ದರು.
