ಚಿತ್ರದುರ್ಗ
ಹೊಳಲ್ಕೆರೆ ನ್ಯೂಸ್
ಮಗಳು ನಾಪತ್ತೆ ಕೇಸ್ ದಾಖಲಿಸದ ಹೊಳಲ್ಕೆರೆ ಪೋಲಿಸರ ನಿರ್ಲಕ್ಷ್ಯಕ್ಕೆ ಬೇಸತ್ತು ತಂದೆ ವಿಷ ಸೇವಿಸಿ ಸಾವು ಪ್ರಕರಣ :

ಪೋಲೀಸರ ವಿರುದ್ಧ ಗಿಲಿಕೇನಹಳ್ಳಿ ಗ್ರಾಮಸ್ಥರು ಮತ್ತು ಸಾರ್ವಜನಿಕರ ಆಕ್ರೋಶ; ಠಾಣೆಗೆ ಮುತ್ತಿಗೆ ಯತ್ನ :

ಮಾಜಿ ಸಚಿವ ಹೆಚ್.ಆಂಜನೇಯ ಅವರ ಮಧ್ಯಸ್ಥಿಕೆಯಿಂದ ತಿಳಿಯಾದ ಬಿಗುವಿನ ವಾತಾವರಣ.

ಹೊಳಲ್ಕೆರೆ : ಜುಲೈ – 22

ತಾಲ್ಲೂಕಿನ ಗಿಲಿಕೇನಹಳ್ಳಿ ಗ್ರಾಮದ ಅಜ್ಜಯ್ಯ ಎಂಬುವರ ಮಗಳು ಗುಂಡೇರಿ ಕಾವಲು ಗ್ರಾಮದ ಯುವಕನೊಂದಿಗೆ ಅಂತರ್ಜಾತಿ ವಿವಾಹ ಆದ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವತಿಯ ತಂದೆ ಹೊಳಲ್ಕೆರೆ ಪೋಲಿಸ್ ಠಾಣೆಯಲ್ಲಿ ಮಗಳು ನಾಪತ್ತೆ ಮತ್ತು ಪೋಕ್ಸೋ ಕಾಯ್ದೆ ಅಡಿ ದೂರು ದಾಖಲಿಸಿಕೊಳ್ಳುವಂತೆ ಎಷ್ಟೇ ಮನವಿ ಮಾಡಿದರೂ ಪ್ರಕರಣ ದಾಖಲಿಸಿಕೊಳ್ಳದ ಪೋಲಿಸರ ನಿರ್ಲಕ್ಷ್ಯದ ವಿರುದ್ಧ ಬೇಸತ್ತು ಸೋಮವಾರ ಹೊಳಲ್ಕೆರೆ ಪೋಲಿಸ್ ಠಾಣೆಯ ಮುಂದೆಯೇ ಹುಡುಗಿಯ ತಂದೆ ವಿಷ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾರೆ.

ತಕ್ಷಣ ಅವರನ್ನು ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದರೂ ಫಲಕಾರಿಯಾಗದೆ ಅಜ್ಯಯ್ಯ ಅವರು ಸಾವನ್ನಪ್ಪಿದ್ದಾರೆ.

ಇದರಿಂದ ಆಕ್ರೋಶಗೊಂಡ ಮೃತರ ಸಂಬಂಧಿಕರು ಮತ್ತು ಗ್ರಾಮಸ್ಥರು ಹೊಳಲ್ಕೆರೆ ಮುಖ್ಯ ವೃತ್ತದಲ್ಲಿ ಶವ ಇಟ್ಟು, ರಸ್ತೆ ತಡೆ ಮಾಡಿ ಪೋಲೀಸ್ ರ ವಿರುದ್ಧ ಪ್ರತಿಭಟನೆ ಕೈಗೊಂಡರು.

ಪೋಲೀಸರ ನಿರ್ಲಕ್ಷ್ಯವೇ ಅಜ್ಯಯ್ಯ ಅವರ ಸಾವಿಗೆ ಕಾರಣವೆಂದು ಪೋಲಿಸ್ ಠಾಣೆಗೆ ಮುತ್ತಿಗೆ ಹಾಕಲು ಯತ್ನಿಸಿದಾಗ ಪೋಲೀಸರು ಲಾಠಿಚಾರ್ಜ್ ಮಾಡಿದ್ದು ಇದರಿಂದ ಹಲವರು ಗಾಯಾಳುಗಳಾಗಿ ಹೊಳಲ್ಕೆರೆ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಹೊಳಲ್ಕೆರೆ ಇತಿಹಾಸದಲ್ಲಿ ಎಂದೂ ನಡೆದಿರದ ಘಟನೆಯೊಂದಕ್ಕೆ ಸಾಕ್ಷಿಯಾದ ಹೊಳಲ್ಕೆರೆಯಲ್ಲಿ ನಿಜಕ್ಕೂ ಸೋಮವಾರ ಬಿಗುವಿನ ವಾತಾವರಣ ಉಂಟಾಗಿದ್ದು, ಶವ ಇದ್ದ ವಾಹನವನ್ನು ಸುತ್ತ ಸಂಪೂರ್ಣ ಪೋಲಿಸರು ಸುತ್ತುವರಿದು ತಳ್ಳಿಕೊಂಡು ಹೋಗುವ ದೃಶ್ಯ, ಲಾಠಿ ಚಾರ್ಜ್ ದೃಶ್ಯಗಳು ಕರಾವಳಿಯಲ್ಲಿ ನಡೆಯುವಂತಹ ಗಲಭೆಗಳನ್ನು ನೆನಪಿಸುವಂತಿದ್ದವು.

ಸುದ್ಧಿ ತಿಳಿದು ತಕ್ಷಣವೇ ಸ್ಥಳಕ್ಕಾಗಮಿಸಿದ ಮಾಜಿ ಸಚಿವ ಹೆಚ್.ಆಂಜನೇಯ ಅವರು ಮೃತರ ಸಂಬಂಧಿಕರು, ಗ್ರಾಮಸ್ಥರೊಂದಿಗೆ ಮಾತನಾಡಿ, ಸಾಂತ್ವನ ಹೇಳಿ, ಅಜ್ಜಯ್ಯ ಅವರ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿ,‌ ಚಿತ್ರದುರ್ಗ ಪೋಲೀಸ್ ವರಿಷ್ಠಾಧಿಕಾರಿ, ಮತ್ತು ಹೊಳಲ್ಕೆರೆ ಸರ್ಕಲ್ ಪೋಲೀಸ್ ಇನ್ಸ್’ಕ್ಟರ್, ತಹಸೀಲ್ದಾರ್ ಅವರೊಂದಿಗೆ ಮಾತನಾಡಿ ಪರಿಸ್ಥಿತಿಯನ್ನು ತಿಳಿಗೊಳಿಸುವಲ್ಲಿ ಯಶಸ್ವಿ.

ದೂರು ಸ್ವೀಕರಿಸಲು ಪೋಲಿಸರ ನಿರ್ಲಕ್ಷ್ಯ, ಅಜ್ಯಯ್ಯ ಅವರ ಸಾವು ಮತ್ತು ಅಮಾನುಷ ಲಾಠಿಚಾರ್ಜ್ ವಿರುದ್ಧ ಆಕ್ರೋಶಗೊಂಡಿದ್ದ ಗ್ರಾಮಸ್ಥರು ಠಾಣೆಗೆ ಮುತ್ತಿಗೆ ಹಾಕಲು ಯತ್ನಿಸಿ, ಕಾನೂನು ಸುವ್ಯವಸ್ಥೆ ನಿಯಂತ್ರಣ ತಪ್ಪುವ ಸಂದರ್ಭದಲ್ಲಿ ಮಾಜಿ ಸಚಿವ ಹೆಚ್ ಆಂಜನೇಯ ಅವರು ಆಗಮಿಸುತ್ತಿದ್ದಂತೆ ಮೃತರ ಸಂಬಂಧಿಕರು ಮತ್ತು ಗ್ರಾಮಸ್ಥರು ಪೋಲಿಸರ ಮೇಲೆ ದೂರುಗಳ ಸುರಿಮಳೆಗೈದರು.

ಅಜ್ಜಯ್ಯ ಅವರ ಸಾವಿಗೆ ಮತ್ತು ಲಾಠಿಚಾರ್ಜ್ ಮೂಲಕ ಅಮಾನುಷ ಹಲ್ಲೆಗೆ ಕಾರಣರಾದ ಪೋಲೀಸರನ್ನು ತಕ್ಷಣವೇ ಸಸ್ಪೆಂಡ್ ಮಾಡಿಸಬೇಕು ಎಂದು ಧಿಕ್ಕಾರ ಕೂಗಿದರು.

ಗ್ರಾಮಸ್ಥರ ನೋವನ್ನು ಸಮಾಧಾನದಿಂದ ಆಲಿಸಿದ ಮಾಜಿ ಸಚಿವ ಹೆಚ್.ಆಂಜನೇಯ ಅವರು ಘಟನೆಯ ಸಂಪೂರ್ಣ ತನಿಖೆ ಮಾಡಿಸಿ, ನಿರ್ಲಕ್ಷ್ಯ ತೋರಿದ ಪೋಲಿಸರ ವಿರುದ್ಧ ಕಠಿಣ ಕ್ರಮ ಜರುಗಿಸಿ, ಮೃತರ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ ಒದಗಿಸಿಕೊಡಲಾಗುವುದು ಎಂದು ಭರವಸೆ ನೀಡಿದ ನಂತರ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿತು.

ಲಾಠಿಚಾರ್ಜ್’ನಿಂದ ಹಲ್ಲೆಗೊಳಗಾಗಿ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದ ಗಾಯಾಳುಗಳನ್ನು ಭೇಟಿ ಮಾಡಿ, ಮಾತನಾಡಿಸಿ, ಸಾಂತ್ವನ ಹೇಳಿದ ಮಾಜಿ ಸಚಿವರು ವೈದ್ಯರೊಂದಿಗೆ ಮಾತನಾಡಿ ಸೂಕ್ತ ಮತ್ತು ಉತ್ತಮ ಚಿಕಿತ್ಸೆ ನೀಡುವಂತೆ ಸೂಚಿಸಿದರು.

ಘಟನೆಯನ್ನು ಸೂಕ್ಷ್ಮವಾಗಿ ಗಮನಿಸಿದರೆ ಮಾಜಿ ಸಚಿವ ಹೆಚ್.ಆಂಜನೇಯ ಅವರು ನಿನ್ನೆ ಸ್ಥಳಕ್ಕಾಗಮಿಸಿ, ಮೃತರ ಸಂಬಂಧಿಕರಿಗೆ ಸಾಂತ್ವನ ಹೇಳಿ, ಗ್ರಾಮಸ್ಥರೊಂದಿಗೆ ಆಪ್ತವಾಗಿ ಮಾತನಾಡಿ, ಮೃತರಿಗೆ ಪರಿಹಾರ ಒದಗಿಸಿ ಮತ್ತು ತಪ್ಪಿತಸ್ಥರಿಗೆ ಕಠಿಣ ಕ್ರಮದ ಭರವಸೆ ನೀಡದೇ ಹೋಗಿದ್ದರೆ ಪ್ರಾಯಶಃ ಹೊಳಲ್ಕೆರೆಯಲ್ಲಿ ಕಾನೂನು ಸುವ್ಯವಸ್ಥೆ ಮತ್ತಷ್ಟು ಕೈಮೀರುವ ಸಾಧ್ಯತೆ ಇತ್ತು ಎಂದು ಸಾರ್ವಜನಿಕರು ಅಲ್ಲಲ್ಲಿ ಮಾತನಾಡುತ್ತಿದ್ದ ದೃಶ್ಯಗಳು ಕಂಡುಬಂದವು.

Leave a Reply

Your email address will not be published. Required fields are marked *

You missed

error: Content is protected !!